ಲಖನೌ: ಆಧುನಿಕ ಕಾಲದಲ್ಲಿ ಯುವಕ-ಯುವತಿಯರು ಹಾಳಾಗಿ ಹೋಗಿದ್ದಾರೆ. ಅವರಿಗೆ ವಿನಯ ಇಲ್ಲ, ಸ್ವಾತಂತ್ರ್ಯದ ಹೆಸರಿನಲ್ಲಿ ಉದ್ಧಟತನ ಮಾಡುತ್ತಿದ್ದಾರೆ ಎಂಬಂತಹ ಮಾತುಗಳನ್ನು ಹಿರಿಯರ ಬಾಯಲ್ಲಿ ಕೇಳಿರಬಹುದು. ಒಂದಷ್ಟು ಪ್ರಕರಣಗಳಲ್ಲಿ ಅದು ನಿಜವೂ ಹೌದು. ಆದರೆ, ಈ ಮಾತಿಗೆ ವಿರೋಧ ಎಂಬಂತೆ, ಲಖನೌನಲ್ಲಿ ಖುಷಿ ಪಾಂಡೆ (Khushi Pandey) ಎಂಬ 23 ಯುವತಿಯು ಸಾರ್ವಜನಿಕರ ಸೈಕಲ್‌ಗಳಿಗೆ ಉಚಿತವಾಗಿ ‘ಬೈಸಿಕಲ್ ಲೈಟ್’ ಅಂಟಿಸುವ ಮೂಲಕ ಅವರ ಸುರಕ್ಷತೆಗೆ ಆದ್ಯತೆ ನೀಡಿದ್ದಾರೆ. ಆಧುನಿಕ ಪೀಳಿಗೆ ಕೂಡ ಸಮಾಜಸೇವೆ ಮಾಡುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹೌದು, ಲಖನೌ ನಿವಾಸಿಯಾದ ಖುಷಿ ಪಾಂಡೆ ಅವರು ರಸ್ತೆ ಮೇಲೆ ನಿಂತು, ಸೈಕಲ್ ಸವಾರರನ್ನು ನಿಲ್ಲಿಸಿ, ಅವರ ಬೈಸಿಕಲ್‌ಗಳಿಗೆ ಉಚಿತವಾಗಿ ಸೈಕಲ್ ಲೈಟ್ ಅಂಟಿಸುತ್ತಾರೆ. ಆ ಮೂಲಕ ಅವರು ಅಪಘಾತಕ್ಕೀಡಾಗಬಾರದು ಎಂಬ ಕಾಳಜಿ ಪ್ರದರ್ಶಿಸಿದ್ದಾರೆ. ಇವರ ಸಮಾಜ ಸೇವೆಯ ವಿಡಿಯೊಗಳು ಸಾಕಷ್ಟು ವೈರಲ್ ಆಗಿವೆ. ಆದರೆ, ಇಷ್ಟು ಸಣ್ಣ ವಯಸ್ಸಿಗೇ ಇಷ್ಟೊಂದು ಪ್ರಬುದ್ಧತೆ, ಸೇವಾ ಮನೋಭಾವ ಮೂಡಲು ಭಾವನಾತ್ಮಕ ಘಟನೆ ಕಾರಣವಾಗಿದೆ.
ಖುಷಿ ಪಾಂಡೆಯ ಸಮಾಜಸೇವೆ ವಿಡಿಯೊ
ಅಪಘಾತದಲ್ಲಿ ಅಗಲಿದ ಅಜ್ಜ
ಖುಷಿ ಪಾಂಡೆ ಅವರ ಅಜ್ಜ ಸೈಕಲ್ ಮೇಲೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟ ಕಾರಣದಿಂದಲೇ ಯುವತಿಯು ಜನರ ಸೈಕಲ್‌ಗಳಿಗೆ ಲೈಟ್ ಅಳವಡಿಸುತ್ತಿದ್ದಾರೆ. “ನನ್ನ ಅಜ್ಜ 2022ರಲ್ಲಿ ಸೈಕಲ್ ಮೇಲೆ ಬರುವಾಗ ಕಾರೊಂದು ಡಿಕ್ಕಿಯಾಗಿ ಅವರು ಅಗಲಿದರು. ಮಂಜು ಇದ್ದ ಕಾರಣ ಅಜ್ಜನ ಸೈಕಲ್ ಕಾರು ಚಾಲಕನಿಗೆ ಕಾಣಿಸಿಲ್ಲ. ಇಂತಹ ಸ್ಥಿತಿ ಬೇರೆಯವರಿಗೆ ಬರಬಾರದು ಎಂದು ಸೈಕಲ್‌ಗಳಿಗೆ ಲೈಟ್ ಅಂಟಿಸುತ್ತಿದ್ದೇನೆ” ಎಂದು ಖುಷಿ ಪಾಂಡೆ ತಿಳಿಸಿದ್ದಾರೆ.
ಹಲವು ರೀತಿಯಲ್ಲಿ ಸಮಾಜ ಸೇವೆ
ಖುಷಿ ಪಾಂಡೆ ಅವರು ಸದ್ಯ ಬಿಬಿಎ ಎಲ್‌ಎಲ್‌ಬಿ ಅಧ್ಯಯನ ಮಾಡುತ್ತಿದ್ದಾರೆ. ಪಾರ್ಟ್‌ಟೈಮ್ ಕೆಲಸ ಮಾಡಿ, ಬಿಡುವಿನ ವೇಳೆ ಸಮಾಜ ಸೇವೆ ಮಾಡುತ್ತಾರೆ. ಕೆಲವೊಂದು ಸಲ ಉಳ್ಳವರಿಂದ ಹಣ ಸಂಗ್ರಹಿಸಿ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತಾರೆ. ಸೈಕಲ್‌ಗಳಿಗೆ ಲೈಟ್ ಅಳವಡಿಸುವುದಷ್ಟೇ ಅಲ್ಲ, ವಿವಿಧ ರೀತಿಯಲ್ಲಿ ಖುಷಿ ಪಾಂಡೆ ಸಮಾಜಮುಖಿಯಾಗಿದ್ದಾರೆ.
ಇದನ್ನೂ ಓದಿ: Viral News: ಕುಟುಂಬದೊಂದಿಗೆ ಯುರೋಪ್ ಪ್ರವಾಸ ಮಾಡ್ತಿದ್ದೇನೆ; ನಾವೆಲ್ಲ ಸತ್ತರೆ ಆಸ್ತಿ ಸಮಾಜಕ್ಕೆಂದು ವಿಲ್!
ಸ್ಲಮ್‌ನಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ಮಾಡುತ್ತಾರೆ. ಅವರು ಕೂಡ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ದವಸ-ಧಾನ್ಯಗಳನ್ನು ವಿತರಿಸುತ್ತಾರೆ. ಬಡ ಮಕ್ಕಳಿಗೆ ಕೌಶಲ ತರಬೇತಿ ನೀಡುತ್ತಾರೆ. ಯಾರಾದರೂ ರಸ್ತೆ ಬದಿ ಚಳಿಯಲ್ಲಿ ಮಲಗಿದ್ದರೆ, ಅವರಿಗೆ ಹೊದಿಕೆ, ಸ್ವೆಟರ್ ನೀಡಿ ಸಹಾಯ ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.