ಮುಂಬೈ: ವಿಮಾನ ಪ್ರಯಾಣ ಮಾಡುವವರು ತಮ್ಮ ವಿಮಾನದ ಟರ್ಮಿನಲ್ ಸಂಖ್ಯೆ ತಿಳಿದುಕೊಳ್ಳುವುದು ಅತಿಮುಖ್ಯ. ಆದರೆ ಅದನ್ನೇ ತಿಳಿದುಕೊಳ್ಳದ ವ್ಯಕ್ತಿಯೊಬ್ಬರು ತಪ್ಪಾದ ಟರ್ಮಿನಲ್ ತಲುಪಿ, ಇದಕ್ಕೂ ಪ್ರಧಾನಿ ಮೋದಿ ಕಾರಣ ಎಂದು ದೂಷಿಸಿದ್ದಾರೆ! ಅವರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಇದನ್ನೂ ಓದಿ: Viral Video: ನಡೆಯೋದನ್ನು ಕಲಿಯೋ ಎಂದರೆ ಡ್ಯಾನ್ಸ್ ಮಾಡಿ ತೋರಿಸಿದ ಪುಟಾಣಿ; ಈ ಮುದ್ದಾದ ವಿಡಿಯೋಗೆ ಮನಸೋಲದವರಿಲ್ಲ
ಉಜ್ವಲ್ ತ್ರಿವೇದಿ ಅವರು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಆಕಾಶ ಏರ್‌ಲೈನ್ ವಿಮಾನದಲ್ಲಿ ಹೊರಟಿದ್ದರು. ತಾವು ವಿಮಾನದ ಟಿಕೆಟ್ ಬುಕ್ ಮಾಡಿದಾಗ ಟಿಕೆಟ್‌ನಲ್ಲಿ, ವಿಮಾನವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ತೋರಿಸಿತ್ತು. ಆದರೆ ಬುಧವಾರ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದಾಗ ವಿಮಾನವು ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಬರುತ್ತದೆ ಎಂದು ತಿಳಿಸಲಾಯಿತು ಎನ್ನುವುದು ತ್ರಿವೇದಿ ಅವರ ದೂರು.
ಈ ವಿಚಾರದಲ್ಲಿ ಉಜ್ವಲ್ ಅವರು ವಿಡಿಯೊ ಮಾಡಿದ್ದು, “ಈ ಸಮಸ್ಯೆಗಳನ್ನು ಯಾರು ಪರಿಹರಿಸುತ್ತಾರೆ? ನಮ್ಮ ಪ್ರಧಾನಿ ಸಣ್ಣ ಸಣ್ಣ ವಿಷಯಗಳ ಕ್ರೆಡಿಟ್ ತೆಗೆದುಕೊಳ್ಳಲು ಬರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಹೇಗೆ ಕಿರುಕುಳ ನೀಡಲಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕು. ನಾನು ಆಕಾಶ ಏರ್ ಹೆಲ್ಪ್‌ಡೆಸ್ಕ್‌ಗೆ ಹೋದೆ. ಅಲ್ಲಿ ಟರ್ಮಿನಲ್ ಅನ್ನು ಏಕೆ ಬರೆಯಲಾಗಿಲ್ಲ ಎಂಬುದನ್ನು ವಿವರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಟಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಹೇಳಿದ ಮೇಲೆ ಒಬ್ಬ ವ್ಯಕ್ತಿಯು ದೇಶೀಯ ವಿಮಾನ ನಿಲ್ದಾಣಕ್ಕೆ ಏಕಾಗಿ ಹೋಗುತ್ತಾನೆ? ಬೆಳಗ್ಗೆ ವಿಮಾನವನ್ನು ಹತ್ತಲೆಂದು ಧಾವಿಸಿ ತಪ್ಪು ಟರ್ಮಿನಲ್ ತಲುಪುತ್ತಾನೆ ಅಂತಾದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿ.” ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ಜಿ20 ಬಗ್ಗೆಯೂ ಅವರು ಮಾತನಾಡಿದ್ದಾರೆ.
ಉಜ್ವಲ್ ಅವರು ಟಿಕೆಟ್ ಅನ್ನೂ ವಿಡಿಯೊದಲ್ಲಿ ತೋರಿಸಿದ್ದು, ನೆಟ್ಟಿಗರು ಆ ಟಿಕೆಟ್‌ನಲ್ಲಿದ್ದ ವಿಮಾನದ ನಂಬರ್ ಅನ್ನು ಗೂಗಲ್‌ನಲ್ಲಿ ಹುಡುಕಿ ಟರ್ಮಿನಲ್ ಮಾಹಿತಿ ತೆಗೆದಿದ್ದಾರೆ. ಉಜ್ವಲ್ ಅವರ ಇ-ಟಿಕೆಟ್ ಹಾಗೂ ಬೋರ್ಡಿಂಗ್ ಪಾಸ್‌ನಲ್ಲಿ ಟಿ1 ಟರ್ಮಿನಲ್ ಎಂದೇ ಬರೆದಿದೆ. ಅದನ್ನು ಸರಿಯಾಗಿ ನೋಡದೆಯೇ ವಿಮಾನ ನಿಲ್ದಾಣಕ್ಕೆ ಹೋಗಿದ್ದೀರಿ ಎಂದು ಜನರು ಉಜ್ವಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಕೆಲ ಸಮಯದ ನಂತರ ಉಜ್ವಲ್ ಅವರು ಮತ್ತೊಂದು ವಿಡಿಯೊ ಹಾಕಿದ್ದು, ಆಕಾಶ ಏರ್‌ಲೈನ್ ಹಾಗೂ ಅವರು ಟಿಕೆಟ್ ಬುಕ್ ಮಾಡಿದ್ದ GoIbibo ವೆಬ್ ಸೈಟ್ ತಮ್ಮ ಕ್ಷಮೆ ಯಾಚಿಸಿವೆ ಎಂದು ತಿಳಿಸಿದ್ದಾರೆ.