ಹೈದರಾಬಾದ್: ಕೆಲವೊಮ್ಮೆ ಜನಪ್ರತಿನಿಧಿ(Politicians)ಗಳು ತಾವು ಜನಸೇವಕರು ಎಂಬುದನ್ನೇ ಮರೆತು ದರ್ಪದಿಂದ ವರ್ತಿಸುವ ಘಟನೆ ಆಗಾಗ ಕಣ್ಣ ಮುಂದೆ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಆಂಧ್ರ ಪ್ರದೇಶದಲ್ಲಿ(Andra Pradesh) ನಡೆದಿದ್ದು, ಮತದಾರನ ಮೇಲೆ ಶಾಸಕ(Andra Pradesh MLA)ನೋರ್ವ ದರ್ಪ ಮೆರೆದಿದ್ದು, ಕಪಾಳಮೋಕ್ಷ ಮಾಡಿದ್ದಾರೆ. ಕೋಪಗೊಂಡ ಮತದಾರ ತಿರುಗಿ ಶಾಸಕನಿಗೂ ಒಂದು ಕೊಟ್ಟಿದ್ದಾನೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.
ಏನಿದು ಘಟನೆ?
ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಮತಗಟ್ಟೆಯೊಂದರಲ್ಲಿ ಈ ಘಟನೆ ನಡೆದಿದೆ. ಮತ ಚಾಲಾಯಿಸಲೆಂದು ಸಾಲಿನಲ್ಲಿ ನಿಂತಿದ್ದ ಮತದಾರನಿಗೆ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ, ತೆನಾಲಿ ಕ್ಷೇತ್ರದ ಶಾಸಕ ಅನ್ನಬತುನಿ ಶಿವಕುಮಾರ್ ಎಂಬುವವರು ಕಪಾಳಮೋಕ್ಷ ಮಾಡಿದ್ದಾನೆ. ಶಾಸಕ ಶಿವಕುಮಾರ್ ಇಂದು ಮತದಾನಕ್ಕೆಂದು ಮತಗಟ್ಟೆಗೆ ಆಗಮಿಸಿದ್ದರು. ಈ ವೇಳೆ ನೂರಾರು ಜನ ಸಾಲಿನಲ್ಲಿ ನಿಂತಿದ್ದರೂ ಅದನು ಲೆಕ್ಕಿಸದೇ ಸಾಲು ತಪ್ಪಿಸಿ ನೇರವಾಗಿ ಮತಗಟ್ಟೆಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಇದನ್ನು ಕಂಡ ಮತದಾರನೊಬ್ಬ ಶಾಸಕರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಲಿನಲ್ಲೇ ನಿಂತು ಮತ ಚಲಾಯಿಸುವಂತೆ ಆತ ಒತ್ತಾಯಿಸಿದ್ದ. ಇದರಿಂದ ಆಕ್ರೋಶಗೊಂಡ ಶಾಸಕ ಶಿವಕುಮಾರ್ ನೋಡ ನೋಡುತ್ತಲೇ ಪ್ರಶ್ನಿಸಿದ ಮತದಾರನ ಕಪಾಳಕ್ಕೆ ಹೊಡೆದಿದ್ದಾರೆ.
Voter who objected to #Guntur District #TenaliMLA #Sivakumar jumping queue, was slapped by him & voter returned in kind; ugly show of political musclepower as the @ysrcp MLA candidate's henchmen joined attack on voter #BoothViolence #ElectionsWithNDTV #AndhraPradeshElections2024 pic.twitter.com/Z5wK0enrWK
— Uma Sudhir (@umasudhir) May 13, 2024
ಏಟು ಬೀಳುತ್ತಿದ್ದಂತೆ ಮತದಾರನೂ ತಿರುಗಿ ಶಾಸಕನ ಕಪಾಳಕ್ಕೆ ಹೊಡೆದಿದ್ದಾರೆ. ಇದರ ಬೆನ್ನಲ್ಲೇ ಶಿವಕುಮಾರ್ ಜೊತೆಗಿದ್ದ ಆತನ ಬೆಂಬಲಿಗರು ಹಿಂದೆ ಮುಂದೆ ನೋಡದೆ ಮತದಾರನ ಮೇಲೆ ಮುಗಿಬಿದ್ದು ಸಾಮೂಹಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮತದಾರನನ್ನು ಹೊರಗೆ ಎಳೆದೊಯ್ದಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಕೆಲಹೊತ್ತು ಭಾರೀ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇನ್ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟಿಡಿಪಿ ಪ್ರತಿಕ್ರಿಯಿಸಿದ್ದು, ವೈಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ ಎಂಬುದು ಸ್ಪಷ್ಟವಾಗಿದೆ. ಆ ಹತಾಶೆಯಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಲು ವೈಎಸ್‌ಆರ್ ಕಾಂಗ್ರೆಸ್ ನಿರಾಕರಿಸಿದೆ. ಘಟನೆಗೆ ಸಂಬಂಧಿಸಿದಂತೆ ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ನಡುವೆ ವಾಕ್ಸಮರ ಮುಂದುವರೆದಿದೆ.
ಇದನ್ನೂ ಓದಿ: Gold Heist Case: ಬಹುಕೋಟಿ ಚಿನ್ನ, ವಿದೇಶಿ ಕರೆನ್ಸಿ ದರೋಡೆ; ಭಾರತೀಯ ಮೂಲದ ವ್ಯಕ್ತಿ ಲಾಕ್!
ಇತ್ತೀಚೆಗೆ ಬಿಜೆಪಿ ಮುಖಂಡ, ನಟಿ ಅಮೂಲ್ಯ ಮಾವ ರಾಮಚಂದ್ರ ಅವರು ಕೂಡ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಬೆಂಬಲಿಗರಿಗೆ ಕಪಾಳಮೋಕ್ಷ ಮಾಡಿದ್ದರು.