ತಿರುವನಂತಪುರಂ: ದೇಶದ ರೈತರು ಎಂದರೆ ಬಡವರು ಎಂಬಂತೆಯೇ ಬಿಂಬಿಸಲಾಗಿದೆ. ರಾಜಕೀಯ ಮೇಲಾಟ, ಅವೈಜ್ಞಾನಿಕ ಕೃಷಿ, ಹವಾಮಾನದೊಂದಿಗೆ ನಡೆಯುವ ‘ಜೂಜಾಟ’ ಸೇರಿ ಹಲವು ಕಾರಣಗಳಿಂದಾಗಿ ಹೆಚ್ಚಿನ ರೈತರು ಬಡವರಾಗಿಯೇ ಉಳಿದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ, ರಾಜಕಾರಣಿಗಳು ರೈತರ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂಬ ಸಣಕಲು ಹೇಳಿಕೆಯನ್ನೇ ನಂಬುವ ಸ್ಥಿತಿ ರೈತರಿಗಿದೆ. ಆದರೆ, ಇಂತಹ ಎಲ್ಲ ಮಾತುಗಳಿಗೆ ವಿರುದ್ಧ ಎಂಬಂತೆ, ಕೇರಳದಲ್ಲಿ ರೈತರೊಬ್ಬರು ಐಷಾರಾಮಿ ಆಡಿ ಕಾರಿನಲ್ಲಿ (Farmer In Audi) ಮಾರುಕಟ್ಟೆಗೆ ತೆರಳಿ, ತರಕಾರಿ ಮಾರುವಷ್ಟು ಶ್ರೀಮಂತರಾಗಿದ್ದಾರೆ.
ಹೌದು, ಕೇರಳದ ಸುಜಿತ್ ಅವರು ಆಡಿ ಎ 4 (ಇದರ ಬೆಲೆ 43 ಲಕ್ಷ ರೂ.ನಿಂದ 51 ಲಕ್ಷ ರೂ.) ಕಾರಿನಲ್ಲಿ ಬಂದು ತರಕಾರಿ ಮಾರಾಟ ಮಾಡಿ, ದುಡ್ಡು ಎಣಿಸಿಕೊಂಡು, ಮತ್ತೆ ಆಡಿ ಕಾರಿನಲ್ಲಿಯೇ ಮನೆಗೆ ಹೋಗುವ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಸುಜಿತ್ ಅವರೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಶೇರ್ ಮಾಡಿದ್ದು, ಈ ವಿಡಿಯೊವನ್ನು ಸುಮಾರು 80 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಸುಜಿತ್ ಅವರ ಏಳಿಗೆಯನ್ನು, ಆಡಿ ಕಾರು ಖರೀದಿಸುವಷ್ಟು ಶ್ರೀಮಂತರಾದರೂ ತರಕಾರಿ ಮಾರುವ ಸರಳತೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಫೂರ್ತಿ ತುಂಬುವ ವಿಡಿಯೊ
ಜಮೀನಿನಲ್ಲಿ ಬಸಲೆ (ಕೆಂಪು ಪಾಲಕ) ಸೊಪ್ಪು ಕೀಳುವ ಸುಜಿತ್ ಅವರು ಟಂ ಟಂನಲ್ಲಿ ಅದನ್ನು ತುಂಬಿಸುತ್ತಾರೆ. ಇದಾದ ಬಳಿಕ ಆಡಿ ಕಾರಿನಲ್ಲಿ ಮಾರುಕಟ್ಟೆ ಆಗಮಿಸಿ, ಲುಂಗಿ ಬಿಚ್ಚಿಟ್ಟು, ಶಾರ್ಟ್ಸ್ ಮೇಲೆಯೇ ಸೊಪ್ಪು ಮಾರಾಟ ಮಾಡುತ್ತಾರೆ. ಇದಾದ ಬಳಿಕ ದುಡಿಮೆ ಮುಗಿಸುವ ಅವರು ಮತ್ತೆ ಲುಂಗಿ ಧರಿಸಿ, ಸ್ಟೈಲ್‌ನಲ್ಲಿ ಕಾರು ಹತ್ತಿ ಮಾರುಕಟ್ಟೆಯಿಂದ ಹೊರಡುತ್ತಾರೆ. ಇದಿಷ್ಟೂ ಅವರು ಹಂಚಿಕೊಂಡ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಹುತಾತ್ಮ ತಂದೆಗೆ ಸೇನೆ ಬಟ್ಟೆ ಧರಿಸಿ ಸೆಲ್ಯೂಟ್ ಹೊಡೆದ 6 ವರ್ಷದ ಮಗ; ಕರುಳು ಕಿವುಚುವ ವಿಡಿಯೊ ವೈರಲ್
ವಿಡಿಯೊವನ್ನು ನೋಡಿದ ಬಳಿಕ ಸಾವಿರಾರು ಜನ ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ತಾಜಾ ತರಕಾರಿ ಬೆಳೆಯಿರಿ ಹಾಗೂ ಮಾರಾಟ ಮಾಡಿ. ದೇಶದ ಪ್ರತಿಯೊಬ್ಬ ರೈತನೂ ಹೀಗೆಯೇ ಏಳಿಗೆ ಹೊಂದಲಿ” ಎಂಬುದಾಗಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಎಲ್ಲರೂ ಕೃಷಿಯೆಡೆಗೆ ಮುಖ ಮಾಡಲು ಇದು ಅತ್ಯಂತ ಸ್ಫೂರ್ತಿದಾಯ ವಿಡಿಯೊ” ಎಂದಿದ್ದಾರೆ. “ನೀವು ಏನು ಮಾಡುತ್ತೀರೋ, ಅದನ್ನು ಪ್ರೀತಿಯಿಂದ ಮಾಡಿ. ಖಂಡಿತವಾಗಿಯೂ ಪ್ರತಿಫಲ ಸಿಗುತ್ತದೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯುವ ರೈತನ ಶ್ರಮವನ್ನು ಕೊಂಡಾಡಿದ್ದಾರೆ. ಏನೇ ಹೇಳಿ, ಒಬ್ಬ ರೈತ, ಆಡಿ ಕಾರಿನಲ್ಲಿ ಬಂದು, ತರಕಾರಿ ಮಾರಿ, ಮತ್ತದೇ ಆಡಿ ಕಾರಿನಲ್ಲಿ ಹೋಗುವ ದೃಶ್ಯವನ್ನು ನೋಡುವುದೇ ಖುಷಿ ಎನಿಸುತ್ತದೆ. ಎಲ್ಲ ರೈತರು ಹೀಗೆಯೇ ಆಗಲಿ, ದೇಶ ಸಮೃದ್ಧಿಯಾಗಿರಲಿ.