ಪಟನಾ: ಸರ್ಕಾರಿ ಅಧಿಕಾರಿಗಳು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದಾಗ, ಬೇರೆ ಊರಿಗೆ ವರ್ಗಾವಣೆಯಾದಾಗ ಆಯಾ ಕಚೇರಿ, ಸಂಸ್ಥೆಗಳಲ್ಲಿ ಸಿಬ್ಬಂದಿಯು ಗೌರವಾರ್ಥವಾಗಿ ಬೀಳ್ಕೊಡುಗೆ ಸಮಾರಂಭ ಆಯೋಜಿಸುವುದು ರೂಢಿ. ಸಣ್ಣದೊಂದು ಕಾರ್ಯಕ್ರಮ ಆಯೋಜಿಸಿ, ಅಧಿಕಾರಿಯ ಸೇವೆ, ಉತ್ತಮ ಆಡಳಿತ, ಸೇವಾ ಮನೋಭಾವ, ಸ್ನೇಹಪರತೆ ಸೇರಿ ಹಲವು ಗುಣಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಉಡುಗೊರೆ ಕೊಟ್ಟು ಅವರನ್ನು ಬೀಳ್ಕೊಡುತ್ತಾರೆ. ಆದರೆ, ಬಿಹಾರದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ವರ್ಗಾವಣೆಯಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಾರ್ ಡಾನ್ಸರ್ ಒಬ್ಬರು ಸೊಂಟ ಬಳುಕಿಸುವ ಮೂಲಕ ಅವರನ್ನು ರಂಜಿಸಿ, ಬಳಿಕ ಬೀಳ್ಕೊಡಲಾಗಿದೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಹೌದು, ಬಿಹಾರದ ಖಗಾರಿಯಾ ಜಿಲ್ಲೆಯ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (BDO) ಸುನೀಲ್ ಕುಮಾರ್ ಎಂಬುವರ ಬೀಳ್ಕೊಡುಗೆ ಸಮಾರಂಭದಲ್ಲಿ ಬಾರ್ ಡಾನ್ಸರ್ ಒಬ್ಬರನ್ನು ಕರೆಸಿ, ಅವರಿಂದ ಡಾನ್ಸ್ ಮಾಡಿಸಲಾಗಿದೆ. ಕಚೇರಿಯಲ್ಲಿಯೇ ವೇದಿಕೆ ರಚಿಸಿ, ಸುತ್ತಲೂ ಅಧಿಕಾರಿಗಳು ಸೇರಿ ಹಲವರು ಕುಳಿತಿದ್ದಾರೆ. ಇದೇ ವೇಳೆ ವೇದಿಕೆ ಮೇಲೆ ಭೋಜ್‌ಪುರಿಯ ‘ತೋಡಾ ಪೀಚೆ’ ಎಂಬ ಹಾಡಿಗೆ ಬಾರ್ ಡಾನ್ಸರ್ ಸೊಂಟ ಬಳುಕಿದ್ದಾರೆ. ಅಷ್ಟೇ ಅಲ್ಲ, ಅಧಿಕಾರಿ ಬಳಿ ಬಂದು ಕುಣಿದು, ಅವರನ್ನು ರಂಜಿಸಿದ್ದಾರೆ. ಆಗ, ಅಧಿಕಾರಿಯು ಉಲ್ಲಸಿತಗೊಂಡು ಡಾನ್ಸರ್‌ಗೆ ಹಣ ನೀಡಿದ್ದಾರೆ.
ನಾಚ್ ಬಸಂತಿ ವಿಡಿಯೊ
खगड़ियां-BDO के विदाई समारोह में बार-बालाओं का डांस करवाया गया, DM ने दिए जांच के आदेश @DmKhagaria #BDO #Bihar pic.twitter.com/JeCYSLN4DW
— मो० बाबुल सिद्दीकी वार्ड सदस्य बिहार (@BabulKh62854234) July 17, 2023
ಸರ್ಕಾರಿ ಅಧಿಕಾರಿಯೊಬ್ಬರ ಬೀಳ್ಕೊಡುಗೆ ಕಾರ್ಯಕ್ರಮದ ಹೆಸರಿನಲ್ಲಿ ಇಂಥದ್ದೊಂದು ಪಾರ್ಟಿ ಆಯೋಜನೆ ಮಾಡಿ, ಡಾನ್ಸರ್‌ಗಳನ್ನು ಕರೆಸಿ ಮನರಂಜನೆ ಮಾಡಿದ ವಿಡಿಯೊ ವೈರಲ್ ಆಗುತ್ತಲೇ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜುಲೈ 12ರಂದು ಪಾರ್ಟಿ ಆಯೋಜಿಸಲಾಗಿದ್ದು, ಖಗಾರಿಯಾ ಜಿಲ್ಲಾಧಿಕಾರಿಯು ಪ್ರಕರಣವನ್ನು ತನಿಖೆಗೆ ಆದೇಶಿಸಿದ್ದಾರೆ.
ಇದನ್ನೂ ಓದಿ: Viral News: ಒಂದು ಕುಟುಂಬದಲ್ಲಿ 9 ಜನ, ಇವರೆಲ್ಲರ ಬರ್ತ್‌ಡೇ ಒಂದೇ ದಿನ; ಗಿನ್ನಿಸ್ ದಾಖಲೆಗೆ ಫ್ಯಾಮಿಲಿ ಭಾಜನ
ಮೂಲಗಳ ಪ್ರಕಾರ, ಬೀಳ್ಕೊಡುಗೆ ಸಮಾರಂಭ, ಡಾನ್ಸ್ ಪಾರ್ಟಿ ಆಯೋಜನೆಗೆ ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೂ ಅವರಿಂದ ಅನುಮತಿ ಪಡೆದಿಲ್ಲ ಎಂದು ತಿಳಿದುಬಂದಿದೆ. ಬೆಲ್ದೌರ್ ಘಟಕದ ವ್ಯಾಪ್ತಿಯಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, “ಎಣ್ಣೆ ವ್ಯವಸ್ಥೆ”ಯನ್ನೂ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಪಾರ್ಟಿಯಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಕೂಡ ಭಾಗವಹಿಸಿದ್ದರು ಎನ್ನಲಾಗಿದೆ.