ಕೋಲ್ಕೊತಾ: ಚುನಾವಣೆ ವೇಳೆ ಮತದಾರರ ಕಾಲಿಗೆ ಬಿದ್ದು, ಅಣ್ಣ-ಅಕ್ಕ ಎಂದು, ಅಂಗಲಾಚಿ ಮತ ಕೇಳುವ ರಾಜಕಾರಣಿಗಳು ಗೆದ್ದ ಮೇಲೆ ವರಸೆ ಬದಲಾಯಿಸುವುದು, ಮತಭಿಕ್ಷೆ ಹಾಕಿದ ಜನರ ಮೇಲೆಯೇ ದರ್ಪ ತೋರುವುದು ದೇಶದಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಂಸದರೊಬ್ಬರು ಟೋಲ್ ಗೇಟ್ ಬಳಿ ಕಾರು ನಿಲ್ಲಿಸಿದ ಎಂದು ಟೋಲ್ ಪ್ಲಾಜಾ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಟಿಎಂಸಿ ಸಂಸದ ಸುನೀಲ್ ಮಂಡಲ್ ಅವರು ಕಾರಿನಲ್ಲಿ ಚಲಿಸುವಾಗ ಬುರ್ದ್ವಾನ್ ಜಿಲ್ಲೆಯ ಪಲಸಿತ್ ಪ್ರದೇಶದ ಟೋಲ್ ಗೇಟ್ ಬಳಿ ಅವರ ಕಾರನ್ನು ಟೋಲ್ ಗೇಟ್ ಸಿಬ್ಬಂದಿಯು ತಡೆಯುತ್ತಾರೆ. ಟೋಲ್ ಗೇಟ್ ಸಿಬ್ಬಂದಿಯು ಕಾರಿನಲ್ಲಿ ಯಾರಿದ್ದಾರೆ ಎಂಬುದನ್ನು ಗಮನಿಸದೆ (ಗಮನಿಸಬೇಕು ಎಂದಿಲ್ಲ) ತಮ್ಮ ಕೆಲಸವನ್ನು ಮಾಡಿದ್ದಾರೆ. ಇದರಿಂದ ಕುಪಿತಗೊಂಡ ಸಂಸದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ನನ್ನ ಕಾರನ್ನೇ ನಿಲ್ಲಿಸುತ್ತೀಯಾ ಎಂಬ ರೀತಿಯಲ್ಲಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಸಂಸದ ಎರಗಿದ್ದಾರೆ. ಕೂಡಲೇ ಅಲ್ಲಿದ್ದವರು ಸಂಸದರನ್ನು ಸಮಾಧಾನಪಡಿಸಿ, ಮತ್ತೆ ಕಾರಿನಲ್ಲಿ ಕೂರಿಸಿದ್ದಾರೆ. ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಉಜ್ವಲ್ ಸಿಂಗ್ ಎಂಬುದಾಗಿ ಗುರುತಿಸಲಾಗಿದೆ. ಉಜ್ವಲ್ ಸಿಂಗ್ ಮೇಲೆ ಸಂಸದ ಹಲ್ಲೆ ಮಾಡಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈರಲ್ ಆಗುತ್ತಲೇ ಜನ ಸುನೀಲ್ ಮಂಡಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಹುಲಿಯ ಕಿವಿಗೆ ಮಸಾಜ್ ಮಾಡಿದರೆ ಏನಾಗುತ್ತೆ? ವೈರಲ್ ವಿಡಿಯೊ ಇಲ್ಲಿದೆ ನೋಡಿ
ಕ್ಷಮೆಯಾಚಿಸಿದ ಸಂಸದ
ಘಟನೆ ಬಳಿಕ ಉಜ್ವಲ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. “ಕಾರಿನಲ್ಲಿ ಇದ್ದವರು ಯಾರು ಎಂಬುದು ನನಗೆ ಗೊತ್ತಿರಲಿಲ್ಲ. ಕಾರಿನ ಮೇಲೆ ಸಂಸದ ಎಂದು ಬರೆದಿರುವ ಯಾವುದೇ ಸ್ಟಿಕ್ಕರ್ ಕೂಡ ಇರಲಿಲ್ಲ. ಹಾಗಾಗಿ, ನನಗೆ ಸೂಚಿಸಿದಂತೆ ಕೆಲಸ ಮಾಡಿದೆ. ಆದರೆ, ಅವರು ಇಳಿದು ನನಗೆ ಹೊಡೆದರು” ಎಂದು ತಿಳಿಸಿದ್ದಾರೆ. ಸಂಸದನ ಗೂಂಡಾಗಿರಿಯ ವಿಡಿಯೊ ವೈರಲ್ ಆಗುತ್ತಲೇ ಅವರು ಕ್ಷಮೆಯಾಚಿಸಿದ್ದಾರೆ. “ನಾನು ಟೋಲ್ ಸಿಬ್ಬಂದಿಯ ಕ್ಷಮೆ ಕೋರುತ್ತೇನೆ. ನಾನು ಯಾವುದೋ ತುರ್ತು ಕೆಲಸ ಮೇಲೆ ಹೋಗುತ್ತಿದ್ದೆ. ಇದರಿಂದ ಅಚಾತುರ್ಯ ನಡೆಯಿತು” ಎಂದು ಹೇಳಿದ್ದಾರೆ.