ನವದೆಹಲಿ: ಭಾರತವನ್ನು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಎಂದು ಸುಮ್ಮನೆ ಕರೆಯುವುದಿಲ್ಲ. ವೈವಿಧ್ಯಮಯ ಭಾಷೆ, ವೈವಿಧ್ಯಮಯ ಸಂಪ್ರದಾಯ, ವಿಭಿನ್ನವಾದ ಆಹಾರ ಸಂಸ್ಕೃತಿಯು ವಿದೇಶಿಯರು ಕೂಡ ಭಾರತವನ್ನು ಇಷ್ಟಪಡುವಂತೆ ಮಾಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಬಾಳೆ ಎಲೆ ಊಟ ಮಾಡಿದ್ದು, ವಣಕ್ಕಮ್ ತಮಿಳುನಾಡು ಎಂದು ಖುಷಿಪಟ್ಟಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
ಕೆಲವು ದಿನಗಳ ಹಿಂದಷ್ಟೇ ಮುಂಬೈನಲ್ಲಿ ವಡಾ ಪಾವ್ ಸವಿದಿದ್ದ ಎರಿಕ್ ಗಾರ್ಸೆಟ್ಟಿ ಅವರೀಗ ನವದೆಹಲಿಯಲ್ಲಿರುವ ತಮಿಳುನಾಡು ಭವನದಲ್ಲಿ ಬಾಳೆ ಎಲೆಯಲ್ಲಿ ದಕ್ಷಿಣ ಭಾರತದ ಥಾಲಿ ಸವಿದಿದ್ದಾರೆ. ಇದಾದ ಬಳಿಕ ಅವರು ನಮಸ್ಕಾರ ತಮಿಳುನಾಡು (ವಣಕ್ಕಂ ತಮಿಳುನಾಡು) ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಎರಿಕ್ ಗಾರ್ಸೆಟ್ಟಿ ಅವರು ತಮಿಳುನಾಡು ಭವನದಲ್ಲಿ ಬಾಳೆ ಎಲೆ ಊಟ ಮಾಡಿದ ವಿಡಿಯೊಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.
“ಬಾಳೆ ಎಲೆಯಲ್ಲಿ ದಕ್ಷಿಣ ಭಾರತದ ಥಾಲಿ ಸವಿದೆ. ದಕ್ಷಿಣ ಭಾರತದ ರುಚಿಕರವಾದ ಆಹಾರವನ್ನು ಸವಿಯುವುದೇ ಅದ್ಭುತ ಅನುಭವ. ಚೆನ್ನೈ ನನ್ನ ಹೃದಯ ಗೆದ್ದಿದೆ. ಚೆನ್ನೈ ನಗರವನ್ನು ನೋಡಲು ನಾನು ಉತ್ಸುಕನಾಗಿದ್ದೇನೆ” ಎಂದಿದ್ದಾರೆ. ಹಾಗೆಯೇ, “ಚಮಚವನ್ನು ಬಳಸದೆ ಬಾಳೆ ಎಲೆಯ ಮೇಲೆ ಊಟ ಮಾಡುವುದೇ ಅದ್ಭುತ. ಇದೊಂದು ಮರೆಯಲಾಗದ ಅನುಭವ” ಎಂದು ಹೇಳಿದ್ದಾರೆ.
ಇದನ್ನೂ ಓದಿ: Video Viral: ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ! ಹೀಗೆ ವಿಡಿಯೋ ಪೋಸ್ಟ್ ಮಾಡಿ ಅಂದ್ರು ಮೋದಿ
ಎರಿಕ್ ಗಾರ್ಸೆಟ್ಟಿ ಅವರು ಭಾರತದ, ಅದರಲ್ಲೂ ದಕ್ಷಿಣ ಭಾರತದ ಊಟಕ್ಕೆ ಮಾರುಹೋಗಿದ್ದಾರೆ. ಹಾಗಾಗಿ, ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ವಡಾ ಪಾವ್ ಸವಿದಿದ್ದರು. ಏಕನಾಥ್ ಶಿಂಧೆ ಅವರೇ ಎರಿಕ್ ಅವರಿಗೆ ವಡಾ ಪಾವ್ ಸರ್ವ್ ಮಾಡಿದ್ದರು. ಈಗ ಬಾಳೆ ಎಲೆ ಸವಿದಿರುವ ಎರಿಕ್, ಶೀಘ್ರದಲ್ಲೇ ತಮಿಳುನಾಡಿಗೆ ತೆರಳಲಿದ್ದಾರೆ ಎಂಬ ಸುಳಿವನ್ನು ಅವರೇ ನೀಡಿದ್ದಾರೆ.
ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ