Site icon Vistara News

Viral video: ಮೋದಿಯಿಂದ ಫ್ರೀ ಸಿಲಿಂಡರ್‌ ಸಿಗ್ತು ಎಂದ ತರಕಾರಿ ಮಾರಾಟಗಾರ ರಾಮೇಶ್ವರ್;‌ ರಾಹುಲ್‌ ಗಾಂಧಿಗೆ ಫಜೀತಿ!

rahul gandhi with rameshwar

ಹೊಸದಿಲ್ಲಿ: ತರಕಾರಿ ಬೆಲೆಗಳು ಗಗನಕ್ಕೇರಿರುವುದರಿಂದ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡು, ಆ ವಿಡಿಯೋದ ಮೂಲಕ ವೈರಲ್‌ (Viral video) ಆಗಿದ್ದ ತರಕಾರಿ ಮಾರಾಟಗಾರ ರಾಮೇಶ್ವರ್‌ ಇದೀಗ ಮತ್ತೊಂದು ವಿಡಿಯೋ ಮೂಲಕ ಇನ್ನೊಮ್ಮೆ ವೈರಲ್‌ (viral news) ಆಗಿದ್ದಾರೆ. ಈ ಬಾರಿ ಅವರು ʼʼಮೋದಿ ಯೋಜನೆಯಲ್ಲಿ ನನಗೆ ಫ್ರೀ ಗ್ಯಾಸ್‌ ಸಿಲಿಂಡರ್‌ ಸಿಕ್ಕಿದೆʼʼ ಎಂದು ಹೇಳಿದ್ದಾರೆ. ಇವರ ಹಳೆಯ ವಿಡಿಯೊ ಇಟ್ಟುಕೊಂಡು ರಾಹುಲ್‌ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಈ ತರಕಾರಿ ಮಾರಾಟಗಾರನ ಹೊಸ ವಿಡಿಯೊ ರಾಹುಲ್‌ ಗಾಂಧಿ ಅವರಿಗೆ ಫಜೀತಿಯನ್ನುಂಟು ಮಾಡಿದೆ.

ಬಿಜೆಪಿ ಮುಖಂಡ ಅಮಿತ್ ಮಾಳವೀಯ (Amit malaviya) ಅವರು ರಾಮೇಶ್ವರ್‌ ಅವರ ಹೊಸ ಸಂದರ್ಶನದ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. “ರಾಮೇಶ್ವರ್ ಜಿ ಅವರು ಉಜ್ವಲ ಯೋಜನೆಯಡಿ (Ujwala scheme) ಮೋದಿ ಸರ್ಕಾರದಿಂದ ಉಚಿತ ಗ್ಯಾಸ್ ಸಿಲಿಂಡರ್ ಪಡೆದರು. ಆದರೆ ರಾಹುಲ್ ಗಾಂಧಿ (Rahul Gandhi) ಮಾತ್ರ ತಮ್ಮ ರಾಜಕೀಯ ಲಾಭಕ್ಕಾಗಿ ಅವರ ಬಡತನವನ್ನು ಬಳಸಿಕೊಂಡರು,” ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.

ಗಗನಕ್ಕೇರಿರುವ ತರಕಾರಿ ಬೆಲೆಯಿಂದ ತಮಗಾದ ಸಂಕಷ್ಟದ ಬಗ್ಗೆ ತರಕಾರಿ ಮಾರಾಟಗಾರ ರಾಮೇಶ್ವರ್ ಕ್ಯಾಮೆರಾ ಮುಂದೆ ತೋಡಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ಮುಖಂಡರು ವಿಡಿಯೋ ಹಂಚಿಕೊಂಡಿದ್ದರು. ರಾಹುಲ್ ಗಾಂಧಿ ಅವರು ಆಜಾದ್‌ಪುರ ಮಂಡಿಗೆ ಭೇಟಿ ನೀಡಿ, ರಾಮೇಶ್ವರ್ ಅವರನ್ನು ದೆಹಲಿಯ ಅವರ ನಿವಾಸಕ್ಕೆ ಕರೆಸಿಕೊಂಡು ಭೇಟಿ ಮಾಡಿ ಅವರೊಂದಿಗೆ ಭೋಜನ ಮಾಡಿದ್ದರು.

“ರಾಮೇಶ್ವರ್ ಜಿ ಅವರು ಉತ್ಸಾಹಭರಿತ ವ್ಯಕ್ತಿ! ಅವರಲ್ಲಿ ಕೋಟ್ಯಂತರ ಭಾರತೀಯರ ಸಹಜ ಸ್ವಭಾವವನ್ನು ನೋಡಬಹುದು. ಪ್ರತಿಕೂಲ ಪರಿಸ್ಥಿತಿಯಲ್ಲೂ ನಗುಮುಖದಿಂದ ಮುನ್ನಡೆಯುವವರು ನಿಜವಾದ ‘ಭಾರತ ಭಾಗ್ಯ ವಿಧಾತ” ಎಂದು ರಾಮೇಶ್ವರ್ ಅವರನ್ನು ಭೇಟಿ ಮಾಡಿದ ನಂತರ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ರಾಮೇಶ್ವರ್ ಅವರ ದುಃಸ್ಥಿತಿಯ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿತ್ತು.

ಇದೀಗ ರಾಮೇಶ್ವರ್‌ ಅವರ ಮತ್ತೊಂದು ಸಂದರ್ಶನ ಹೊರಬಿದ್ದಿದೆ. ಬಿಬಿಸಿ ಸಂದರ್ಶನದಲ್ಲಿ ರಾಮೇಶ್ವರ್ ಅವರನ್ನು ರಾಹುಲ್ ಗಾಂಧಿ ರಾಜಕೀಯ ಸಾಧನವಾಗಿ ಬಳಸಿಕೊಂಡಿದ್ದಾರೆ ಎಂದು ನೀವು ಭಾವಿಸುತ್ತೀರಾ ಎಂದು ಕೇಳಲಾಯಿತು. “ಇಲ್ಲ, ಅವರು (ರಾಹುಲ್ ಗಾಂಧಿ) ಹಾಗೆ ಎಂದೂ ಮಾಡಲಾರರು” ಎಂದು ರಾಮೇಶ್ವರ್ ಹೇಳಿದರು. ರಾಮೇಶ್ವರ್ ಅವರಿಗೆ ಕೇಂದ್ರದ ಮೋದಿ ಸರ್ಕಾರದಿಂದ ಅಥವಾ ರಾಜ್ಯದ ಕೇಜ್ರಿವಾಲ್‌ ಸರ್ಕಾರದ ಯಾವುದೇ ಯೋಜನೆಗಳ ಲಾಭ ಸಿಕ್ಕಿದೆಯೇ ಎಂದು ಕೇಳಲಾಯಿತು. ಇದಕ್ಕೆ ರಾಮೇಶ್ವರ್ ಅವರು ತಾವು ಮೋದಿ ಸರ್ಕಾರದಿಂದ ಉಚಿತ ಸಿಲಿಂಡರ್ ಪಡೆದಿದ್ದು, ತಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಓದುತ್ತಿದ್ದಾರೆ ಎಂದಿದ್ದಾರೆ. ಆದರೆ ಬಾಡಿಗೆದಾರನಾಗಿ ತಾವು ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿಸುತ್ತಿದ್ದೇನೆʼʼ ಎಂದಿದ್ದಾರೆ. ಹಾಗಾಗಿ ಅವರ ಮಾತು ದಿಲ್ಲಿಯಲ್ಲಿ ಉಚಿತ ನೀರು, ವಿದ್ಯುತ್‌ ನೀಡುತ್ತಿದ್ದೇನೆ ಎಂಬ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೂ ಇರಸುಮುರಸು ಉಂಟು ಮಾಡುವಂತಾಗಿದೆ.

ʼʼಮೋದಿಯವರನ್ನು ಭೇಟಿಯಾಗಲು ನನಗೇನೂ ಅಭ್ಯಂತರವಿಲ್ಲ. ಅವರ ಯೋಜನೆಗಳಿಂದ ಅನೇಕರಿಗೆ ಲಾಭವಾಗಿದೆ; ಹಲವರಿಗೆ ಆಗಿಲ್ಲʼʼ ಎಂದೂ ರಾಮೇಶ್ವರ್‌ ಹೇಳಿದ್ದಾರೆ.

ಇದನ್ನೂ ಓದಿ: Rajinikanth: ಹಿಮಾಲಯದ ಗುಹೆಯಲ್ಲಿ ಧ್ಯಾನಮಗ್ನ ರಜನಿ; ವಿಡಿಯೋ ವೈರಲ್‌

Exit mobile version