Site icon Vistara News

Viral Video: ರೈಲ್ವೆ ಕಿಚನ್‌ನಲ್ಲಿ ಇಲಿಗಳ ದರ್ಬಾರ್‌; ಎಂಜಲು ತಿನ್ನಬೇಕೆ ಎಂದು ಜನ ಗರಂ!

rat

rat

ನವ ದೆಹಲಿ: ಭಾರತೀಯ ರೈಲ್ವೆಯಲ್ಲಿ ಕಳಪೆ ಆಹಾರ ಒದಗಿಸಲಾಗುತ್ತಿದೆ ಎನ್ನುವ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಶುಚಿತ್ವದ ಕೊರತೆ, ಆಹಾರದಲ್ಲಿ ತ್ಯಾಜ್ಯ ವಸ್ತುಗಳ ಕಂಡುಬರುವುದು ಮುಂತಾದ ಸಮಸ್ಯೆಗಳನ್ನು ಆಗಾಗ ಪ್ರಯಾಣಿಕರು ಎದುರಿಸುತ್ತಿರುತ್ತಾರೆ. ಇದೀಗ ಮತ್ತೆ ಇಂತಹದ್ದೇ ಘಟನೆ ಮುನ್ನಲೆಗೆ ಬಂದಿದೆ. ರೈಲಿನೊಳಗೆ ಸಂಗ್ರಹಿಟ್ಟಿದ್ದ ಆಹಾರವನ್ನು ಇಲಿಗಳು ಸೇವಿಸುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ವಿಡಿಯೊವನ್ನು mangirish_tendulkar ಎನ್ನುವವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಕ್ಟೋಬರ್ 15ರಂದು 11099 ಎಲ್‌ಟಿಟಿ ಮಾವೋ ಎಕ್ಸ್‌ಪ್ರೆಸ್‌ ರೈಲಿನಲ್ಲಿ(11099 LTT MAO Express) ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ರೈಲಿನ ಕಿಚನ್‌ ಒಳಗೆ ಇಲಿಗಳು ಮುಕ್ತವಾಗಿ ತಿರುಗಾಡುವುದನ್ನು ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲೇನಿದೆ?

ಘಟನೆ ಬಗ್ಗೆ ಮನ್‌ಗಿರೀಶ್‌ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. “ಆಗಾಗ ರೈಲು ಮೂಲಕ ಪ್ರಯಾಣಿಸುವ ನನ್ನ ಮೇಲೆ ಈ ಘಟನೆ ಅಗಾಧ ಪರಿಣಾಮ ಬೀರಿದೆ. ಅಕ್ಟೋಬರ್ 15ರಂದು ಮಧ್ಯಾಹ್ನ 1.45ಕ್ಕೆ ಹೊರಡಬೇಕಿದ್ದ 11099 ಮಡ್ಗಾಂವ್ ಎಕ್ಸ್‌ಪ್ರೆಸ್‌ ಹೊರಟಿದ್ದು ಅಪರಾಹ್ನ 3.30ಕ್ಕೆ. ರೈಲ್ವೆಯ ಬಗ್ಗೆ ಯಾವತ್ತೂ ಆಸಕ್ತಿ ಹೊಂದಿರುವ ನಾನು ಎಂಜಿನ್‌ನನ್ನು ಚಿತ್ರೀಕರಿಸಲು ನಿರ್ಧರಿಸಿ ಅತ್ತ ಹೆಜ್ಜೆ ಹಾಕುತ್ತಿದ್ದೆ. ಆಗ ಕಿಚನ್‌ನಲ್ಲಿ ನಾನು ಕನಿಷ್ಠ 6-7 ಇಲಿಗಳನ್ನು ಗಮನಿಸಿದೆ. ಈ ಪೈಕಿ 4 ಮಾತ್ರ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತುʼʼ ಎಂದು ಬರೆದಿದ್ದಾರೆ.

ಇದರಿಂದ ಶಾಕ್‌ಗೊಳಗಾದ ತೆಂಡೂಲ್ಕರ್ ಈ ವಿಷಯವನ್ನು ರೈಲ್ವೆ ಸಂರಕ್ಷಣಾ ಪಡೆ(RPF)ಗೆ ವರದಿ ಮಾಡಲು ಪ್ರಯತ್ನಿಸಿದರು. ಆದರೆ ಅವರಿಂದ ಸಿಕ್ಕ ಪ್ರತಿಕ್ರಿಯೆ ನಿರಾಸದಾಯಕವಾಗಿತ್ತು. ಹಳಿಗಳ ಕೆಳಗೆ ನೂರಾರು ಇಲಿಗಳು ವಾಸಿಸುತ್ತಿವೆ ಎಂದು ಆರ್‌ಪಿಎಫ್‌ ಸಿಬ್ಬಂದಿ ಉತ್ತರಿಸಿದರು. ಇದರಿಂದ ಸಮಾಧಾನಗೊಳ್ಳದ ತೆಂಡೂಲ್ಕರ್‌ ಬಳಿಕ ಸಹಾಯಕ ಸ್ಟೇಷನ್ ಮಾಸ್ಟರ್ ಮೀನಾ ಅವರನ್ನು ಸಂಪರ್ಕಿಸಿದರು. ಅವರು ಪ್ಯಾಂಟ್ರಿ ವ್ಯವಸ್ಥಾಪಕರ ಬಳಿ ವಿವರ ಕೇಳಿದರು. ಆದರೆ ಅವರಿಂದಲೂ ಸಮರ್ಪಕ ಉತ್ತರ ಸಿಗಲಿಲ್ಲ. “ಪ್ಯಾಂಟ್ರಿಯಲ್ಲಿ ನಿಜವಾಗಿಯೂ ಹಲವು ಇಲಿಗಳಿವೆ. ಇದರ ಬಗ್ಗೆ ನಾವು ಏನು ಮಾಡಬಹುದು? ರೈಲ್ವೆ ನಿರಂತರವಾಗಿ ನಮಗೆ ಕಳಪೆ ಬೋಗಿಗಳನ್ನು ಮಾತ್ರ ಒದಗಿಸುತ್ತದೆʼʼ ಎಂದು ಪ್ಯಾಂಟ್ರಿ ವ್ಯವಸ್ಥಾಪಕ ಹೇಳಿದರು ಎಂದು ತೆಂಡೂಲ್ಕರ್‌ ಬರೆದಿದ್ದಾರೆ.

ʼʼಕೊನೆಗೆ ನಾನು ರೈಲ್ವೇ ಆ್ಯಪ್‌ನಲ್ಲಿ ದೂರು ನೀಡಿದೆ. ಅವರು ಕಠಿಣ ಕ್ರಮ ಕೈಗೊಳ್ಳುವ ವಿಶ್ವಾಸವಿದೆʼʼ ಎಂದು ತೆಂಡೂಲ್ಕರ್‌ ಹೇಳಿಕೊಂಡಿದ್ದಾರೆ. ತೆಂಡೂಲ್ಕರ್‌ ಅವರ ವಿಡಿಯೊವನ್ನು ಎಕ್ಸ್‌ನಲ್ಲೂ ಹಂಚಿಕೊಳ್ಳಲಾಗಿದೆ.

IRCTC ಹೇಳಿದ್ದೇನು?

ಸದ್ಯ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (Indian Railway Catering and Tourism Corporation-IRCTC) ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ. “ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಕಿಚನ್‌ನಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ. ಪರಿಣಾಮಕಾರಿ ಕೀಟ ನಾಶಕ ಬಳಕೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆʼʼ ಎಂದು ತಿಳಿಸಿದೆ.

ಇದನ್ನೂ ಓದಿ: Viral News: ಕಾರಿನಲ್ಲಿ ವೇಗವಾಗಿ ಸಾಗುವ ಮುನ್ನ ಗಮನಿಸಿ; ಈತನಿಗೆ ಬಿದ್ದ ಫೈನ್‌ ಬರೋಬ್ಬರಿ 11.65 ಕೋಟಿ ರೂ.!

Exit mobile version