Site icon Vistara News

Viral video: ಫುಡ್‌ ಡೆಲಿವರಿಗೆ ಕುದುರೆ ಏರಿ ಬಂದ ಜೊಮ್ಯಾಟೊ ಪೋರ!

zomato boy on horse

ಹೈದರಾಬಾದ್‌: ಟ್ರಾಫಿಕ್‌ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರಿನಲ್ಲಿ ಸುಲಭವಾಗಿ ಫುಡ್‌ ಡೆಲಿವರಿ (Food delivery) ಮಾಡಲು ಬಯಸುವವರಿಗೆ ಇಲ್ಲೊಂದು ಒಳ್ಳೇ ಐಡಿಯಾ ಇದೆ. ಝೊಮಾಟೊ ಡೆಲಿವರಿ ಬಾಯ್‌ ಒಬ್ಬ ಕುದುರೆಯನ್ನೇರಿ ಧಾವಿಸುತ್ತಿರುವ ವಿಡಿಯೋ ವೈರಲ್‌ (Viral video) ಆಗಿದೆ. ಇದು ನಡೆದದ್ದು ಹೈದರಾಬಾದ್‌ನಲ್ಲಿ.

ವಿವಾದಾತ್ಮಕ ಹಿಟ್ ಆಂಡ್ ರನ್ ಕಾನೂನನ್ನು ವಿರೋಧಿಸಿ ಟ್ರಕ್ ಚಾಲಕರು ನಡೆಸಿದ ಪ್ರತಿಭಟನೆಯ ನಡುವೆ ಹೈದರಾಬಾದ್‌ನ ಪೆಟ್ರೋಲ್ ಪಂಪ್‌ಗಳಲ್ಲಿ ಉದ್ದನೆಯ ಸರತಿ ಸಾಲುಗಳು ನಿನ್ನೆ ಕಂಡುಬಂತು. ಪೆಟ್ರೋಲ್‌ ಅಲಭ್ಯತೆಯ ಹೊತ್ತಿನಲ್ಲಿ ಝೊಮಾಟೊ ಡೆಲಿವರಿ ಬಾಯ್‌ ಒಬ್ಬ ನಗರದ ಬೀದಿಗಳಲ್ಲಿ ಕುದುರೆಯೇರಿ ನಾಗಾಲೋಟ ಮಾಡುತ್ತಿದ್ದಾನೆ. ಈತನ ವೀಡಿಯೊ ವೈರಲ್‌ ಆಗಿದೆ. ಇಂಪೀರಿಯಲ್ ಹೋಟೆಲ್‌ನ ಪಕ್ಕದಲ್ಲಿರುವ ಚಂಚಲಗುಡಕ್ಕೆ ಜೊಮಾಟೊ ಡೆಲಿವರಿ ಏಜೆಂಟ್ ಕುದುರೆಯ ಮೇಲೆ ಆಗಮಿಸುತ್ತಿರುವುದನ್ನು ಈ ಸಣ್ಣ ಕ್ಲಿಪ್ ತೋರಿಸಿದೆ.

ಟ್ರಕ್ಕರ್‌ಗಳ ಪ್ರತಿಭಟನೆಯ ಫಲವಾಗಿ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚಿದ ಪರಿಣಾಮ ಮತ್ತು ದೀರ್ಘ ಸರತಿ ಸಾಲುಗಳ ಕಾರಣ ಈ ಡೆಲಿವರಿ ಬಾಯ್‌ ಕುದುರೆಯನ್ನೇ ಆಶ್ರಯಿಸಬೇಕಾಯಿತು. ವೀಡಿಯೊದಲ್ಲಿ, ವಿತರಣಾ ಏಜೆಂಟ್, ಪಂಪ್‌ಗಳಲ್ಲಿ ಪೆಟ್ರೋಲ್ ಖಾಲಿಯಾದ ನಂತರ ಆಹಾರವನ್ನು ತಲುಪಿಸಲು ಕುದುರೆಯ ಮೇಲೆ ಬರಲು ನಿರ್ಧರಿಸಿದೆ ಎಂದು ದಾರಿಹೋಕರೊಂದಿಗೆ ಮಾತನಾಡುವುದನ್ನು ಕೇಳಬಹುದು.

ಏನಾಯಿತು ಎಂದು ಕೇಳಿದಾಗ, “ಪೆಟ್ರೋಲ್ ನಹೀ ಮಿಲಾ ಭಾಯ್. ತೀನ್ ಘಂಟೆ ಲೈನ್ ಮೆ ಖಡಾರಹಾ. ಝೋಮಾಟೋ ಸೇ ನಿಕಲ್ ಗಯಾ.. ಪೆಟ್ರೋಲ್ ನಹೀ ಮಿಲಾ. (ಪೆಟ್ರೋಲ್ ಇರಲಿಲ್ಲ. ನಾನು ಮೂರು ಗಂಟೆ ಕಾಲ ಸರದಿಯಲ್ಲಿ ಕಾಯುತ್ತಿದ್ದೆ. ನಾನು ಆರ್ಡರ್ ತೆಗೆದುಕೊಂಡು ಹೋದರೂ ಪೆಟ್ರೋಲ್ ಪಡೆಯಲು ಸಾಧ್ಯವಾಗಲಿಲ್ಲ) ಎಂದಿದ್ದಾನೆ ಈ ಏಜೆಂಟ್.‌

ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಹೆಚ್ಚಿನ ಸಂಖ್ಯೆಯ ವಾಹನ ಚಾಲಕರು ಮಂಗಳವಾರ ಹೈದರಾಬಾದ್‌ನ ಪ್ರಮುಖ ರಸ್ತೆಗಳಲ್ಲಿ ಜಮಾಯಿಸಿದ್ದರಿಂದ ಹಲವಾರು ಸ್ಥಳಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. “ಇಂಧನ ಲಭ್ಯತೆ ಇದೆ. ಟ್ರಕ್ ಡ್ರೈವರ್‌ಗಳ ಮುಷ್ಕರದಿಂದಾಗಿ ಪೆಟ್ರೋಲ್ ಲಭ್ಯವಿಲ್ಲ ಎಂದು ಜನರು ಆತಂಕಕ್ಕೊಳಗಾಗಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪೆಟ್ರೋಲ್ ಪಂಪ್‌ಗಳಿಗೆ ಹೋಗುತ್ತಿದ್ದಾರೆ.‌ ಹೀಗಾಗಿ ಸರತಿ ಸಾಲು ಬೆಳೆದಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಟ್ರಕ್ ಚಾಲಕರ ಪ್ರತಿಭಟನೆಯಿಂದ ನಗರದ ಪೆಟ್ರೋಲ್ ಪಂಪ್‌ಗಳಿಗೆ ಇಂಧನ ಪೂರೈಕೆ ಆಗಲಿಲ್ಲ. ನಗರದ ಕೆಲವು ಪೆಟ್ರೋಲ್ ಪಂಪ್‌ಗಳಲ್ಲಿ ಬ್ಯಾರಿಕೇಡ್‌ಗಳು ಕಂಡುಬಂದವು. ಕೆಲವು ವಾಹನ ಚಾಲಕರು ತಮ್ಮ ವಾಹನಗಳಿಗೆ ಇಂಧನ ತುಂಬಲು ಸಾಧ್ಯವಾಗುತ್ತಿಲ್ಲ ಎಂದು ದೂರಿಕೊಂಡರು.

ಇದನ್ನೂ ಓದಿ: Viral video: ಟೋಕಿಯೋ ನಿಲ್ದಾಣದಲ್ಲಿ ಎರಡು ವಿಮಾನ ಡಿಕ್ಕಿ, ಹೊತ್ತಿ ಉರಿದ ವಿಮಾನ, ವಿಡಿಯೋ ಇಲ್ಲಿದೆ

Exit mobile version