ಫೆಬ್ರವರಿಯಲ್ಲಿ ಪ್ರವಾಸ (Odisha Tourist Places) ಮಾಡುವುದು ಎಂದರೆ ನಿಜಕ್ಕೂ ಸೌಭಾಗ್ಯ. ಪ್ರವಾಸವನ್ನು ಇಷ್ಟಪಡುವ ಮಂದಿಗೆ, ಮಕ್ಕಳು ಮರಿಗಳ ತಲೆಬಿಸಿ ಇಲ್ಲದ ಮಂದಿಗೆ, ಹೊಸತಾಗಿ ಮದುವೆಯಾದವರಿಗೆ ಫೆಬ್ರವರಿ ತಿಂಗಳೆಂದರೆ ಅದೊಂದು ಅದ್ಭುತ ಅವಕಾಶ. ಯಾಕೆಂದರೆ, ಹಿತವಾದ ಚಳಿ ಎಲ್ಲೆಲ್ಲೂ ಆವರಿಸಿರುವ ಕಾಲವಿದು. ಎತ್ತರದ ಪರ್ವತ ಪ್ರದೇಶಗಳಲ್ಲಿ ʻಚಳಿ ಚಳಿ ತಾಳೆನು ಈ ಚಳಿಯಾʼ ಎಂದು ಹಾಡಿಕೊಳ್ಳಬಹುದಾದಷ್ಟು ಚಳಿ. ಆದರೆ, ವಿಶೇಷವೆಂದರೆ, ಬಹುತೇಕ ಎಲ್ಲ ಜಾಗಗಳಲ್ಲೂ ಪ್ರವಾಸಿಗರು ಕಡಿಮೆಯಿರುವ ಕಾಲ. ಕುಟುಂಬಸ್ಥರು, ಮಕ್ಕಳಿರುವ ಹೆತ್ತವರು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಓಡಾಡುವುದು ಕಡಿಮೆ. ಹತ್ತಿರ ಬರುತ್ತಿರುವ ಪರೀಕ್ಷೆ ಇತ್ಯಾದಿಗಳೂ ಕಾರಣ. ಹೀಗಿದ್ದಾಗ ಪ್ರವಾಸೀ ತಾಣಗಳಲ್ಲಿ ಜನಜಂಗುಳಿ ಕಡಿಮೆ. ಜಂಜಡಗಳೇ ಇಲ್ಲದ ಪ್ರವಾಸಿಗಳಿಗೆ ಹಬ್ಬ.
ಎಲ್ಲಿಗೆ ಹೋಗಬಹುದು?
ಹಲವರಿಗೆ ಇಂಥ ಹಿತವಾದ ಚಳಿಯಲ್ಲಿ ಎಲ್ಲಿಗೆ ಹೋಗಬಹುದು ಎಂದು ಗೊಂದಲಗಳಾಗುವುದುಂಟು. ನಮ್ಮ ದೇಶದ ಶ್ರೀಮಂತ ಸಂಸ್ಕೃತಿ ಪರಂಪರೆಯ ಹಿನ್ನೆಲೆಯ, ವಾಸ್ತುಶಿಲ್ಪ ವೈಭವವನ್ನೂ ಹೊಂದಿದ, ಪ್ರಕೃತಿ ಸೌಂದರ್ಯವೂ ಇರುವ ಯಾವ ಜಾಗಕ್ಕೆ ಪ್ರವಾಸ ಮಾಡಬಹುದು ಎಂದು ಲೆಕ್ಕಾಚಾರ ಹಾಕುವ ಮಂದಿಗೆ ಸೂಕ್ತವಾದದ್ದು ಎಂದರೆ ಅದು ಒಡಿಶಾ.
ಒಡಿಶಾ ರಾಜ್ಯ ಅಚ್ಚರಿಗಳ ಗುಚ್ಛ. ಇಲ್ಲಿ ಪ್ರಕೃತಿ ಸೌಂದರ್ಯವೂ ಇದೆ. ಸಮೃದ್ಧ ಇತಿಹಾಸದ ಕುರುಹುಗಳೂ ಇವೆ. ನಮ್ಮ ಸಂಸ್ಕೃತಿ ಎಷ್ಟು ಶ್ರೀಮಂತ ಎಂದು ಕಣ್ತುಂಬಿಕೊಳ್ಳುವ ಮೂಲಕ ನಮ್ಮ ಬೇರುಗಳನ್ನು ಗಟ್ಟಿಗೊಳಿಸುವ ಅವಕಾಶವೂ ಇದೆ. ಇಲ್ಲಿ ಪಕ್ಷಿಪ್ರಿಯರಿಗೆ ಚಿಲ್ಕಾ ಸರೋವರವಿದ್ದರೆ, ಭಕ್ತಿಪ್ರಿಯರಿಗೆ ಪುರಿ ಜಗನ್ನಾಥನೇ ಇದ್ದಾನೆ. ಇನ್ನು ವಾಸ್ತುಶಿಲ್ಪ, ದೇವಾಲಯಗಳ ವೈಭವವವನ್ನು ನೋಡಲಿಚ್ಛಿಸಿದರೆ ಅದಕ್ಕೂ ಹತ್ತು ಹಲವು ದೇಗುಲಗಳಿವೆ. ಕೋನಾರ್ಕದಲ್ಲಿ ಜಗತ್ಪ್ರಸಿದ್ಧ ಸೂರ್ಯ ದೇವಾಲಯವೂ ಕೂಡಾ ಒಡಿಶಾದ ಹೆಮ್ಮೆ. ಬನ್ನಿ, ಈ ಫೆಬ್ರವರಿಯ ಹಿತವಾದ ಚಳಿಯಲ್ಲಿ ಒಡಿಶಾದ ಯಾವೆಲ್ಲ ಸ್ಥಳಗಳನ್ನು ನೋಡಿಬರಬಹುದು ಎಂಬುದನ್ನು ನೋಡೋಣ ಬನ್ನಿ.
ಚಿಲ್ಕಾ ಸರೋವರ
ಒಡಿಶಾದಲ್ಲಿರುವ ಚಿಲ್ಕಾ ಸರೋವರ ಪಕ್ಷಿಪ್ರೇಮಿಗಳ ಸ್ವರ್ಗ. ಅದರಲ್ಲೂ ಫೆಬ್ರವರಿಯ ಸಮಯದಲ್ಲಿ ಸಾಕಷ್ಟು ಪಕ್ಷಿಗಳು ಇಲ್ಲಿ ವಲಸೆ ಬರುತ್ತವೆ. ಮುಖ್ಯವಾಗಿ ಫ್ಲೆಮಿಂಗೋ, ಪೆಲಿಕನ್‌ಗಳು ಸೇರಿದಂತೆ ಬಗೆಬಗೆಯ ಪಕ್ಷಿಗಳು ಸಾವಿರಾರು ಕಿಮೀ ದೂರದಿಂದ ಹಾರಿ ಇಲ್ಲಿ ಬರುತ್ತವೆ. ಇಂಥ ಸಮಯದಲ್ಲಿ ಸರೋವರ ನೋಡುವುದೇ ಒಂದು ಸೊಗಸು. ಛಾಯಾಗ್ರಹಣ ಆಸಕ್ತರಿಗೂ ಇದು ಅತ್ಯುತ್ತಮ ತಾಣ.
ಪುರಿ ಸಮುದ್ರ ತೀರ
ಗೋಲ್ಡನ್ ಬೀಚ್ ಎಂಬ ಹೆಸರಿನಿಂದ ಪ್ರಸಿದ್ಧವಾದ ಪುರಿ ಸಮುದ್ರ ತೀರ ಭಾರತದ ಸ್ವಚ್ಛ ಸಮುದ್ರ ತೀರಗಳಲ್ಲೊಂದು. ನೀಲಿ ಸಮುದ್ರ ಹಾಗೂ ಹೊಂಬಣ್ಣದ ಮರಳು ಇಲ್ಲಿನ ವಿಶೇಷ. ಪುರಿ ಜಗನ್ನಾಥ ಮಂದಿರಕ್ಕೆ ಸಮೀಪದಲ್ಲೇ ಇರುವ ಇದು ಪ್ರವಾಸಿಗರ ಪ್ರಮುಖ ಆಕರ್ಷಣೆ.
ಭುವನೇಶ್ವರದ ದೇವಾಲಯಗಳು
ಲಿಂಗರಾಜ ದೇವಸ್ಥಾನ, ರಾಜರಾಣಿ ದೇವಾಲಯ, ಮುಕ್ತೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳು ಭುವನೇಶ್ವರದಲ್ಲಿ ನೋಡಲೇಬೇಕಾದವುಗಳು. ಸಿಟಿ ಆಫ್ ಟೆಂಪಲ್ಸ್ ಎಂಬ ಹೆಸರೇ ಇರುವ ಭುವನೇಶ್ವರದಲ್ಲಿ ಈ ಕೆಲವು ದೇವಾಲಯಗಳನ್ನು ಮಾತ್ರ ಅವುಗಳ ವಾಸ್ತುಶಿಲ್ಪಗಳಿಗಾದರೂ ನೋಡಲು ಮರೆಯಬಾರದು.
ಉದಯಗಿರಿ, ಖಂಡಗಿರಿ
ಉದಯಗಿರಿ ಹಾಗೂ ಖಂಡಗಿರಿ ಎಂಬ ಜೋಡಿ ಗುಹೆಗಳೂ ಕೂಡಾ ಒಡಿಶಾದ ಪ್ರಮುಖ ಪ್ರವಾಸೀ ತಾಣಗಳು. ಗುಹೆಗಳಲ್ಲಿನ ಕೆತ್ತನೆಗಳು, ಇತಿಹಾಸ ಆಸಕ್ತರ ಪಾಲಿಗೆ ಉತ್ತಮ ಅನುಭವ ನೀಡಬಲ್ಲದು.
ಕೋನಾರ್ಕದ ಸೂರ್ಯ ದೇವಾಲಯ
ಒಡಿಶಾಗೆ ಹೋದ ಮೇಲೆ ಕೋನಾರ್ಕಕ್ಕೆ ಹೋಗದಿದ್ದರೆ ಹೇಗೆ ಹೇಳಿ? ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ತಾಣ ಭಾರತದ ಹೆಮ್ಮೆಯ ಅಪರೂಪದ ದೇವಾಲಯಗಳಲ್ಲಿ ಒಂದು. ಸೂರ್ಯಾಸ್ತ ಹಾಗೂ ಸೂರ್ಯೋದಯದ ಸಮಯದಲ್ಲಿ ಈ ಸೂರ್ಯ ದೇವಾಲಯ ಹೊಂಬಣ್ಣದಲ್ಲಿ ಕಂಗೊಳಿಸುತ್ತದೆ.
ರಘುರಾಜಪುರ
ಚಿತ್ರಕಲೆ, ಸಂಸ್ಕೃತಿಯಲ್ಲಿ ಆಸಕ್ತರಿಗೆ ಇದೊಂದು ಮಿಸ್ ಮಾಡಬಾರದ ತಾಣ. ಈ ಹಳ್ಳಿಯಲ್ಲಿ ಪಾರಂಪರಿಕ ಕಲೆಗಳಿಗೆ ವಿಶೇಷ ಅವಕಾಶ ನೀಡಲಾಗಿದೆ. ಪ್ರತಿ ಮನೆಯ ಮಂದಿಯೂ ಪಟಚಿತ್ರ ಕಲೆಯಲ್ಲಿ ಪರಿಣಿತರು. ಇಡೀ ಹಳ್ಳಿಯೇ ಕಲಾಸೇವೆಯನ್ನೇ ಬದುಕಾಗಿಸಿದವರು.
ಇದನ್ನೂ ಓದಿ: Uttarakhand Tourism: ಉತ್ತರಾಖಂಡದ ಹಿಮಾಲಯದ ಸೌಂದರ್ಯವನ್ನು ಇನ್ನು ಏರ್ ಸಫಾರಿ ಮೂಲಕವೂ ಸವಿಯಬಹುದು!