ವಾಣಿಜ್ಯ ನಗರಿ ಮುಂಬೈಯಲ್ಲಿ ದೇಶದ ಅತಿ ಉದ್ದದ ಸಮುದ್ರ ಸೇತುವೆ, `ಅಟಲ್ ಸೇತು’ (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ ಅನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಶುಕ್ರವಾರ ಮಧ್ಯಾಹ್ನ ಲೋಕಾರ್ಪಣೆ ಮಾಡಿದರು. 21.8 ಕಿ.ಮೀ ಉದ್ದದ ಈ ಅಟಲ್ ಸೇತು ದಕ್ಷಿಣ ಮುಂಬೈಯಿಂದ (South Mumbai) ನವೀ ಮುಂಬೈ (Navi Mumbai) ಅನ್ನು ಸಂಪರ್ಕಿಸುತ್ತದೆ. ಪ್ರತಿದಿನ ಸುಮಾರು 70,000 ವಾಹನಗಳು ಈ ಮಾರ್ಗದಲ್ಲಿ ಓಡಾಡಲಿವೆ. ಈ ಸೇತುವೆ ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸೇತುವೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಬರೋಬ್ಬರಿ 21,200 ಕೋಟಿ ರೂಪಾಯಿ. ಇದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗದ ಸಂಪರ್ಕವನ್ನು ಒದಗಿಸುತ್ತದೆ. ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಇರುವ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ದೇಶದ ಅತೀ ಉದ್ದದ ಮತ್ತು ಜಗತ್ತಿನ 12ನೇ ಅತೀ ಉದ್ದದ ಸಮುದ್ರ ಸೇತುವೆ ಎನಿಸಿಕೊಂಡಿದೆ. ನವೀ ಮುಂಬೈಯ ಉಲ್ವೆ ಮತ್ತು ದಕ್ಷಿಣ ಮುಂಬೈ ನಡುವಿನ ಎರಡು ಗಂಟೆಗಳ ಪ್ರಯಾಣದ ಸಮಯವನ್ನು ಕೇವಲ 15-20 ನಿಮಿಷಗಳಿಗೆ ಇಳಿಸಲಿದೆ(Vistara Editorial).
ಮೂಲಸೌಕರ್ಯ, ಅದರಲ್ಲೂ ರಸ್ತೆ ಸಂಪರ್ಕ ಭಾರತದ ಅಭಿವೃದ್ಧಿಗೆ ಅನಿವಾರ್ಯ ಎಂಬುದನ್ನು ಮೋದಿ ಸರ್ಕಾರ ಬಲು ಬೇಗನೆ ಕಂಡುಕೊಂಡಿದೆ. ಅದನ್ನು ಜಾರಿಗೆ ತರಲು ನಾನಾ ಯೋಜನೆಗಳನ್ನು ಹೊಸದಾಗಿ ಹಮ್ಮಿಕೊಂಡಿದೆ; ಹಳೆಯ ಯೋಜನೆಗಳಿಗೆ ಮರುಜೀವ ನೀಡಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ತ್ವರಿತಗತಿಯ ಮೂಲಸೌಕರ್ಯ ಅಭಿವೃದ್ಧಿಯನ್ನು ಕಂಡಿದೆ ಎಂದರೆ ತಪ್ಪಲ್ಲ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಸುಮಾರು 99% ವ್ಯಾಪ್ತಿಗೆ ಗ್ರಾಮೀಣ ರಸ್ತೆ ಸಂಪರ್ಕವನ್ನು ಹೆಚ್ಚಿಸುವುದರೊಂದಿಗೆ 53000 ಕಿಮೀಗಳಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು ಸೇರಿಸಲಾಗಿದೆ. ಹೆದ್ದಾರಿ ನಿರ್ಮಾಣದ ವೇಗ ದಿನಕ್ಕೆ 37 ಕಿಮೀ ತಲುಪಿದೆ. ಭಾರತೀಯ ರೈಲ್ವೇಯು ಲೈನ್ ಡಬ್ಲಿಂಗ್ ಮತ್ತು ವಿದ್ಯುದೀಕರಣದ ಮೂಲಕ ಬೃಹತ್ ಸಾಮರ್ಥ್ಯದ ವಿಸ್ತರಣೆಗೆ ಸಾಕ್ಷಿಯಾಗಿದೆ. ಭಾರತದ ಮೊದಲ ದೇಸಿ ಸೆಮಿ ಹೈಸ್ಪೀಡ್ ರೈಲುಗಳಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು ʼಮೇಕ್ ಇನ್ ಇಂಡಿಯಾ’ ಯಶಸ್ಸಿನ ಕಥೆ. 15 ವಂದೇ ಭಾರತ್ ರೈಲುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. 400 ವಂದೇ ಭಾರತ್ ರೈಲುಗಳು ಮುಂದಿನ ಮೂರು ವರ್ಷಗಳಲ್ಲಿ ಬರಲಿವೆ.
ಕಳೆದ ಒಂಬತ್ತು ವರ್ಷಗಳಲ್ಲಿ ಮೆಟ್ರೋ ರೈಲು ಯೋಜನೆಗಳು 20 ನಗರಗಳನ್ನು ತಲುಪಿವೆ. ವಿಮಾನಯಾನ ವಿಭಾಗದಲ್ಲಿ ಉಡಾನ್ ಯೋಜನೆಯ ಮೂಲಕ ಅದನ್ನು ಕೈಗೆಟುಕುವಂತೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ 9 ವರ್ಷಗಳಲ್ಲಿ 74 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇನ್ನೂ 111 ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳೆಂದು ಘೋಷಿಸಲಾಗಿದೆ. ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾದ ಅಟಲ್ ಸುರಂಗವನ್ನು ಪೂರ್ಣಗೊಳಿಸಿ ಅದು ಈಗ ಸಮರ್ಕಪವಾಗಿ ಕಾರ್ಯಾಚರಿಸುತ್ತಿದೆ. ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ನದಿಯ ಸೇತುವೆ ಪೂರ್ಣವಾಗುವ ಹಂತದಲ್ಲಿದೆ. ಬೃಹತ್ ಸರಯು ನಹರ್ ನೀರಾವರಿ ಕಾಲುವೆಗಳಂತಹ ಅನೇಕ ದೀರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತಿದೆ. ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹತ್ತಾರು ಎಕ್ಸ್‌ಪ್ರೆಸ್‌ವೇಗಳು ಹೆದ್ದಾರಿ ಪ್ರಯಾಣವನ್ನು ಇನ್ನಷ್ಟು ತ್ವರಿತ, ಅರ್ಥಪೂರ್ಣಗೊಳಿಸಿವೆ.
ಇತ್ತೀಚೆಗೆ ಲಕ್ಷದ್ವೀಪದಲ್ಲಿ 1156 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಮೋದಿಯವರು ಅಡಿಗಲ್ಲು ಹಾಕಿದ್ದನ್ನು ಇಲ್ಲಿ ನೆನೆದುಕೊಳ್ಳಬಹುದು. ಮುಂಬಯಿಯಲ್ಲೇ ನವೀ ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂಥ ಹಲವು ಬೃಹತ್ ಪ್ರಾಜೆಕ್ಟ್‌ಗಳು ಬರಲಿವೆ. 14,000 ಕೋಟಿ ರೂ. ವೆಚ್ಚದ, 5000 ಕಿಮೀ ದೂರವ್ಯಾಪ್ತಿಯ, ಗುಜರಾತ್‌ನಿಂದ ಮಿಜೋರಾಂ ಅನ್ನೂ ಮಹಾರಾಷ್ಟ್ರದಿಂದ ಪಶ್ಚಿಮ ಬಂಗಾಳವನ್ನೂ ಸಂಪರ್ಕಿಸುವ ʼಭಾರತ್ ಮಾಲಾʼ ಯೋಜನೆ ಕೂಡ ಕಾರ್ಯಗತ ಹಂತದಲ್ಲಿದೆ. ಇವೆಲ್ಲವೂ, ಮೋದಿ ಸರ್ಕಾರ ರಸ್ತೆ ಮೂಲಸೌಕರ್ಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಒತ್ತಿ ಹೇಳುತ್ತದೆ. ನಿತಿನ್ ಗಡ್ಕರಿಯವರು ರಸ್ತೆ ಸಾರಿಗೆ ಸಚಿವರಾದ ಬಳಿಕ, ದೇಶದಲ್ಲಿ ಹೆದ್ದಾರಿ ಕಾರ್ಯಗಳು ಅಭೂತಪೂರ್ವ ಎನಿಸುವಷ್ಟು ಸೊಗಸಾಗಿ ನಡೆದಿವೆ. ಇವು ನಗರಗಳನ್ನು ಸೇರಿಸುವುದರೊಂದಿಗೆ ಸಂಪರ್ಕವನ್ನು ಸುಗಮಗೊಳಿಸಿದ್ದು, ಆರ್ಥಿಕತೆಯನ್ನು ಇನ್ನಷ್ಟು ಮೇಲಕ್ಕೆತ್ತಿವೆ; ಉದ್ಯೋಗಗಳನ್ನೂ ಸೃಷ್ಟಿಸುತ್ತಿದೆ. ಕೇಂದ್ರ ಸರ್ಕಾರ ಹೀಗೆಯೇ ರಸ್ತೆ ಸಾರಿಗೆ ಸೌಕರ್ಯಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಪೂರ್ಣ ಹಾಗೂ ಸುರಕ್ಷಿತವಾಗಿಸಲಿ. ಇದು ಇತರ ರಾಜ್ಯಗಳಿಗೂ ಮಾದರಿಯಾಗಲಿ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಿಟ್ ಆ್ಯಂಡ್ ರನ್ ಕಾಯಿದೆಯ ಬಗ್ಗೆ ಚಾಲಕರಿಗೆ ಭಯವೇಕೆ?