Site icon Vistara News

ವಿಸ್ತಾರ ಸಂಪಾದಕೀಯ: ಮೇಕ್‌ ಇನ್‌ ಇಂಡಿಯಾ ಇನ್ನಷ್ಟು ಬೆಳಗಲಿ

Vistara Editorial and Make in India should get more prominence

ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ʼಮೇಕ್‌ ಇನ್ ಇಂಡಿಯಾ’‌ ಅಭಿಯಾನಕ್ಕೆ, ನೀತಿಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಷ್ಯಾದ ವ್ಲಾಡಿವೊಸ್ಟೊಕ್‌ನಲ್ಲಿ ನಡೆದ 8ನೇ ಈಸ್ಟರ್ನ್‌ ಎಕನಾಮಿಕ್‌ ಫೋರಂನಲ್ಲಿ (EEF) ಮಾತನಾಡಿದ ವ್ಲಾಡಿಮಿರ್‌ ಪುಟಿನ್‌, “ನಾವು ಭಾರತದ ಮೇಕ್‌ ಇನ್‌ ಇಂಡಿಯಾ ಅಭಿಯಾನ ನೋಡಿ ಕಲಿಯಬೇಕಿದೆ” ಎಂದು ಹೇಳಿದ್ದಾರೆ. 1990ರಲ್ಲಿ ರಷ್ಯಾದಲ್ಲಿ ದೇಶೀಯವಾಗಿ ಕಾರುಗಳ ಉತ್ಪಾದನೆಯಾಗುತ್ತಿರಲಿಲ್ಲ. ಆದರೆ, ಈಗ ರಷ್ಯಾದಲ್ಲಿಯೇ ಕಾರುಗಳ ಉತ್ಪಾದನೆಯಾಗುತ್ತಿದೆ. ಆದರೂ, ದೇಶೀಯವಾಗಿ ಕಾರು ಉತ್ಪಾದನೆಯಲ್ಲಿ ನಮ್ಮ ಸಹಭಾಗಿತ್ವ ದೇಶವಾದ ಭಾರತವನ್ನು ನೋಡಿ ಕಲಿಯಬೇಕು. ನರೇಂದ್ರ ಮೋದಿ ಅವರು ಮೇಕ್‌ ಇನ್‌ ಇಂಡಿಯಾ ಮೂಲಕ ದೇಶೀಯವಾಗಿಯೇ ಕಾರುಗಳ ಉತ್ಪಾದನೆಗೆ ಆದ್ಯತೆ ನೀಡಿರುವುದು ಸೂಕ್ತವಾಗಿದೆ ಎಂದಿದ್ದಾರೆ ಪುಟಿನ್‌. ಕೆಲ ತಿಂಗಳ ಹಿಂದೆಯೂ ಪುಟಿನ್‌ ಮೇಕ್‌ ಇನ್‌ ಇಂಡಿಯಾವನ್ನು ಮಾಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶ್ಲಾಘಿಸಿದ್ದರು(Vistara editorial).

ಒಂದು ದೇಶದ ನಾಯಕತ್ವವನ್ನು ಇನ್ನೊಂದು ದೇಶದ ನಾಯಕರು ಮುಕ್ತವಾಗಿ ಶ್ಲಾಘಿಸುವುದೇ ಕಡಿಮೆ. ಆದರೆ ರಷ್ಯಾ, ಅಮೆರಿಕ, ಬ್ರಿಟನ್‌ನಂಥ ದೇಶಗಳ ನಾಯಕರು ಭಾರತದ ನಾಯಕತ್ವ ಹಾಗೂ ನೀತಿಗಳನ್ನು‌ ತೆರೆದ ಮನಸ್ಸಿನಿಂದ ಶ್ಲಾಘಿಸುತ್ತಿರುವುದನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಈ ಎಲ್ಲ ದೇಶಗಳಿಗೆ ಭಾರತದ ಜತೆಗೆ ಆರ್ಥಿಕ, ವಾಣಿಜ್ಯ ಹಿತಾಸಕ್ತಿಗಳಿವೆ, ನಿಜ. ಆದರೆ ಭಾರತದ ಸಾರ್ವಭೌಮತ್ವದ ವಿಚಾರ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳದ ನಿಷ್ಠುರ ನಿಲುವನ್ನೂ ನಾವು ತಾಳಿದ್ದುಂಟು. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿದ ಬಳಿಕ ಜಗತ್ತಿನ ಹಲವು ರಾಷ್ಟ್ರಗಳು ರಷ್ಯಾ ಮೇಲೆ ಹತ್ತಾರು ನಿರ್ಬಂಧ ಹೇರಿದವು. ಹೀಗಿದ್ದರೂ, ಭಾರತ ಸರ್ಕಾರವು ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಂಡಿತು. ಭಾರತದ ತೀರ್ಮಾನದ ಕುರಿತು ಅಮೆರಿಕ, ಬ್ರಿಟನ್‌ ಆಕ್ಷೇಪ ವ್ಯಕ್ತಪಡಿಸಿದರೂ ದ್ವಿಪಕ್ಷೀಯ ಸಂಬಂಧದ ಮೇಲೆ ಅದು ಪರಿಣಾಮ ಬೀರಲಿಲ್ಲ. ಹಾಗಂತ, ಮೋದಿ ಅವರು ರಷ್ಯಾ ಆಕ್ರಮಣವನ್ನು ಸಮರ್ಥಿಸಿಕೊಳ್ಳಲಿಲ್ಲ. ಬದಲಾಗಿ, ಪುಟಿನ್‌ ಅವರಿಗೇ “ಇದು ಯುದ್ಧದ ಕಾಲವಲ್ಲ” ಎಂದು ಹೇಳಿ ಶಾಂತಿ-ಮಾತುಕತೆಯ ಪ್ರಸ್ತಾಪ ಮಾಡಿದ್ದರು. ಹಾಗೆಯೇ, ಭಾರತದಲ್ಲಿ ನಡೆದ ಜಿ 20 ಶೃಂಗಸಭೆಗೆ ವ್ಲಾಡಿಮಿರ್‌ ಪುಟಿನ್‌ ಆಗಮಿಸದೆ ದೂರ ಉಳಿದಿದ್ದು ಕೂಡ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಮೋದಿ ಹಾಗೂ ಮೇಕ್‌ ಇನ್‌ ಇಂಡಿಯಾ ಕುರಿತು ಪುಟಿನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೇಕ್ ಇನ್ ಇಂಡಿಯಾ ಎಂಬುದು ದೂರದರ್ಶಿತ್ವದ ಒಂದು ನೀತಿ. ʼಮೇಕ್‌ ಇನ್‌ ಇಂಡಿಯಾʼ ಹಾಗೂ ʼಆತ್ಮನಿರ್ಭರ ಭಾರತʼಗಳನ್ನು ಪ್ರಧಾನಿ ಮೋದಿ ಜತೆಯಾಗಿ ಉಲ್ಲೇಖಿಸುತ್ತಿರುತ್ತಾರೆ. ಇದು ಹಲವು ಉಪಕ್ರಮಗಳ ಮೊತ್ತ. ಇದರಿಂದಾಗಿ ದೇಶದ ಹಲವು ವಲಯಗಳಲ್ಲಿ ಸ್ವಂತ ಉದ್ಯಮದ ಚಟುವಟಿಕೆಗಳು ಬಿರುಸಾಗಿವೆ. ಇಸ್ರೋದಂಥ ಸಂಸ್ಥೆಗಳು ಚಂದ್ರಯಾನದಂಥ ಮಹತ್ವದ ಯೋಜನೆಗಳಿಗೆ ಮೇಕ್ ಇನ್ ಇಂಡಿಯಾವನ್ನು ಬಳಸಿಕೊಂಡರೆ, ಡಿಆರ್‌ಡಿಒದಂಥ ಸಂಸ್ಥೆಗಳು ರಕ್ಷಣಾ ವಲಯದಲ್ಲಿ ನಮ್ಮದೇ ಆದ ಆಯುಧೋಪಕರಣಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಂಡಿವೆ. ತುಮಕೂರಿನಲ್ಲಿ ಸ್ಥಾಪನೆಯಾಗಿರುವ ಹಗುರ ಯುದ್ಧ ವಿಮಾನ ತಯಾರಿಕಾ ಘಟಕ ಅದಕ್ಕೆ ಒಂದು ಉದಾಹರಣೆ. ಸ್ಕಿಲ್‌ ಇಂಡಿಯಾ, ಸ್ಟಾರ್ಟಪ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ, ಸ್ಮಾರ್ಟ್‌ ಸಿಟೀಸ್‌, ಅಮೃತ್‌, ಸ್ವಚ್ಛ ಭಾರತ ಅಭಿಯಾನ, ಸಾಗರ್‌ಮಾಲಾ, ಅಗ್ನಿ, ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟ ಮುಂತಾದವುಗಳು ಈ ಮೇಕ್‌ ಇನ್‌ ಇಂಡಿಯಾ ಒಳಗೊಂಡ ಯೋಜನೆಗಳು. ಇದುವರೆಗೂ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ಬೆಳವಣಿಗೆ ಸೇವಾ ವಲಯವನ್ನು ನೆಚ್ಚಿಕೊಂಡು ಇತ್ತು. ಅದನ್ನು ನಿರ್ಮಾಣ ವಲಯದತ್ತ ಶಿಫ್ಟ್‌ ಮಾಡಿದ್ದು ಮೇಕ್‌ ಇನ್‌ ಇಂಡಿಯಾ ಯೋಜನೆಯ ಸಾಧನೆ. ಸೇವಾ ವಲಯವು ದೇಶದ ಜಿಡಿಪಿಗೆ ಕೇವಲ 28% ಮಾತ್ರ ಕೊಡುಗೆ ನೀಡಿದೆ. ಅಂತಾರಾಷ್ಟ್ರೀಯ ಉದ್ಯಮಶೀಲತೆ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನ ದಶಕದ ಹಿಂದೆ ನೂರರ ನಂತರದ ಸ್ಥಾನದಲ್ಲಿತ್ತು. 2019ರಲ್ಲಿ ಅದು ಮೇಲಕ್ಕೆ ಜಿಗಿದು 77ಕ್ಕೆ ಬಂದಿದೆ. ಭಾರತ, ಜಗತ್ತಿನ ಸ್ಟಾರ್ಟಪ್‌ ಹಬ್‌ ಎನಿಸಿಕೊಂಡಿದೆ. ಇವೆಲ್ಲವೂ ಮೇಕ್‌ ಇನ್‌ ಇಂಡಿಯಾದ ಫಲ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಕಾವೇರಿ ನೀರು; ಜನ ರೊಚ್ಚಿಗೇಳುವ ಮುನ್ನ ಎಚ್ಚೆತ್ತುಕೊಳ್ಳಿ

ಮೇಕ್‌ ಇನ್‌ ಇಂಡಿಯಾ ಎಂಬುದು ಒಂದು ಮನೋಭಾವವಾಗಿ ಭಾರತದಲ್ಲಿ ಇನ್ನಷ್ಟು ಬೆಳೆಯಬೇಕಾಗಿದೆ. ಇದು ಹಲವು ವಲಯಗಳಲ್ಲಿ ಬಹುಮುಖಿಯಾಗಿ ಆಗಬೇಕಾದ ಬೆಳವಣಿಗೆ. ಪುಟಿನ್‌ ಅವರು ಗುರುತಿಸಲು ಸಾಧ್ಯವಾಗುವ ಮಟ್ಟಿಗೆ ಅದು ಯಶಸ್ವಿಯಾಗಿದೆ ಎಂದಿದ್ದರೆ, ನಾವು ನಮ್ಮ ಸಾಧನೆಯನ್ನು ಇನ್ನಷ್ಟು ಸಕಾರಾತ್ಮಕವಾಗಿ ನೋಡಬೇಕಾದ ಕಾಲ ಬಂದಿದೆ ಎಂದರ್ಥ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version