ಮಣಿಪುರ ಹಿಂಸಾಚಾರ, ಅಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಹಾಗೂ ಸಾಮೂಹಿಕ ಅತ್ಯಾಚಾರ, ಮಾನವ ಹಕ್ಕು ಉಲ್ಲಂಘನೆಗಳು ಇತ್ಯಾದಿಗಳಿಗೆ ಸಂಬಂಧಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಆಪಾದಿಸಿ ಪ್ರತಿಪಕ್ಷಗಳು ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ. ಅವಿಶ್ವಾಸ ನಿರ್ಣಯ ಮಂಡನೆಯನ್ನು ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಾಧ್ಯವಾಗದ ಕೇಂದ್ರ ಸರ್ಕಾರದ ಬಗ್ಗೆ ತಮಗೆ ವಿಶ್ವಾಸವಿಲ್ಲ, ಆದ್ದರಿಂದ ಇದು ಅಧಿಕಾರದಲ್ಲಿರಲು ಅರ್ಹವಲ್ಲ ಎಂಬುದು ಪ್ರತಿಪಕ್ಷಗಳ ವಾದ. ಲೋಕಸಭೆಯ ಒಟ್ಟು ಸದಸ್ಯ ಬಲವಾದ 543ರಲ್ಲಿ ಬಿಜೆಪಿಯೊಂದೇ 301 ಸದಸ್ಯ ಬಲ ಹೊಂದಿದೆ. ಮಿತ್ರ ಪಕ್ಷಗಳು ಸೇರಿದರೆ ಈ ಬಲ ಈ ಸಂಖ್ಯೆ 331 ಆಗುತ್ತದೆ. ಹಾಗಾಗಿ ಅವಿಶ್ವಾಸ ಗೊತ್ತುವಳಿಯಿಂದ ಬಿಜೆಪಿ ಸರ್ಕಾರಕ್ಕೆ ಸೋಲಾಗುವುದಿಲ್ಲ. ಆದರೆ ಈ ಕುರಿತ ಚರ್ಚೆಗೆ ವಿಸ್ತೃತ ವೇದಿಕೆ ಒದಗಿಸಿದಂತಾಗುತ್ತದೆ. ಕೇಂದ್ರ ಸರ್ಕಾರ ಕೂಡ ಪ್ರತಿಪಕ್ಷಗಳ ಆರೋಪಗಳಿಗೆ ಸೂಕ್ತ ಉತ್ತರ ಕೊಡಲು ಸಾಧ್ಯವಾಗುತ್ತದೆ(Vistara Editorial).
ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ನಿರಂತರವಾಗಿ ಪೈಶಾಚಿಕ ರೀತಿಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಇದನ್ನು ಹತ್ತಿಕ್ಕಲು ಅಲ್ಲಿಯ ಸರ್ಕಾರ ವಿಫಲವಾಗಿದೆ ಎನ್ನುವುದಂತೂ ಸ್ಪಷ್ಟ. ಹಿಂಸಾಚಾರ ಆರಂಭವಾದ ಒಂದು ತಿಂಗಳ ನಂತರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಈ ಬಗ್ಗೆ ಕಾರ್ಯಪ್ರವೃತ್ತರಾದರು. ಅಲ್ಲಿನ ಮುಖ್ಯಮಂತ್ರಿ ಬೀರೇನ್ ಸಿಂಗ್ ಅವರನ್ನು ಈ ಬಗ್ಗೆ ವಿವರ ಕೇಳಿದರು. ಅಲ್ಲಿಯವರೆಗೂ ಮಣಿಪುರದಲ್ಲಿ ಏನು ನಡೆಯುತ್ತಿದೆ ಎಂಬುದು ಕೂಡ ಹೊರಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗಿರಲಿಲ್ಲ. ಮಣಿಪುರದ ಕ್ಷೋಭೆಗೆ ಸುಮಾರು ಮೂರು ದಶಕಗಳ ಹಿನ್ನೆಲೆಯಿದೆ. ಇದಕ್ಕೆ ಈಗಿನ ಬಿಜೆಪಿ ಸರ್ಕಾರವೊಂದೇ ಕಾರಣವಲ್ಲಈ ಹಿಂದಿನ ಸರ್ಕಾರಗಳೂ ಇದನ್ನು ಬೆಳೆಯಲು ಬಿಟ್ಟಿವೆ. ಪ್ರಸ್ತುತ ಬೀರೇನ್ ಸರ್ಕಾರದ ಅವಧಿಯಲ್ಲಿ ಅದು ರಕ್ತಪಾತಕ್ಕೆ ತಿರುಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿರುವ ಕುಕಿಗಳನ್ನು, ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಬಂದವರು ಎಂಬ ಕಾರಣ ನೀಡಿ ಒಕ್ಕಲೆಬ್ಬಿಸಲು ಯತ್ನಿಸಲಾಗುತ್ತಿದೆ. ಕುಕಿಗಳು ಅನುಭವಿಸುತ್ತಿರುವ ಪರಿಶಿಷ್ಟ ಬುಡಕಟ್ಟು ಸ್ಥಾನಮಾನವನ್ನು ಹೊಂದಿ ಅದರಿಂದ ಇನ್ನಷ್ಟು ರಾಜಕೀಯ ಲಾಭ ಹೊಂದಲು ಮೈತೈ ಸಮುದಾಯ ಯತ್ನಿಸುತ್ತಿದೆ. ಇದು ಕುಕಿಗಳಲ್ಲಿ ಇನ್ನಷ್ಟು ಅಸ್ಥಿರತೆ ಮೂಡಿಸಿದೆ. ಇನ್ನೊಂದೆಡೆ ಕುಕಿ ಮತ್ತು ನಾಗಾ ಸಮುದಾಯದವರು ಉಗ್ರ ಸಂಘಟನೆ ಕಟ್ಟಿಕೊಂಡು ಮೈತೈಗಳ ಮೇಲೆ ಭೀಕರ ದಾಳಿ ನಡೆಸುತ್ತ ಬಂದಿದ್ದಾರೆ. ಹೀಗೆ ಉಭಯ ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕ್ಷೋಭೆ ಇದೀಗ ಉಲ್ಬಣಿಸಿದೆ.
ಗಲಭೆಗಳಲ್ಲಿ 160ಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಉಭಯ ಸಮುದಾಯಗಳ ನಡುವೆ ಇನ್ನೆಂದೂ ವಿಶ್ವಾಸ ಮರುಕಳಿಸದಷ್ಟು ಪ್ರಮಾಣದಲ್ಲಿ ಭಾವನಾತ್ಮಕ ಹಾನಿಯಾಗಿದೆ. ಮಣಿಪುರದ ಸಂಕೀರ್ಣವಾದ ಈ ಸಾಮಾಜಿಕ ಹೆಣಿಗೆಯನ್ನು ಕಾಪಾಡಿಕೊಳ್ಳಲು ಅಲ್ಲಿನ ಸರ್ಕಾರ ಪ್ರಯತ್ನಿಸಬೇಕಿತ್ತು. ಆದರೆ ಅದು ವಿಫಲವಾಗಿದೆ. ಒಂದು ರಾಜ್ಯ ಗಲಭೆಗಳಲ್ಲಿ ತ್ರಸ್ತವಾದರೆ ಅದು ಆ ರಾಜ್ಯಕ್ಕೆ ಸೀಮಿತವಾಗುವುದಿಲ್ಲ. ಅದರ ಅಕ್ಕಪಕ್ಕದ ರಾಜ್ಯಗಳಿಗೂ ಶಂಕೆ, ಅನುಮಾನ, ಭೀತಿಗಳು ವ್ಯಾಪಿಸುತ್ತವೆ. ಇತರ ರಾಜ್ಯಗಳೂ ಕೇಳುವವರು ಇಲ್ಲದಂತೆ ವರ್ತಿಸಲು ರಹದಾರಿ ಹಾಕಿಕೊಟ್ಟಂತಾಗುತ್ತದೆ. ಅಲ್ಲಿನ ಸಮುದಾಯಗಳ ನಡುವಿನ ಸಂಘರ್ಷಗಳೂ ಮುನ್ನೆಲೆಗೆ ಬರಬಹುದು; ಅರಾಜಕತೆ ತಾಂಡವವಾಡಬಹುದು. ಆದ್ದರಿಂದ ಇಂಥ ಸನ್ನಿವೇಶಗಳಲ್ಲಿ ಕೇಂದ್ರ ಸರ್ಕಾರ ಖಡಕ್ ಆಗಿ ಕಾರ್ಯಾಚರಣೆ ನಡೆಸಬೇಕಾಗುತ್ತದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪ್ರಶಸ್ತಿ ವಾಪಸ್ ಮಾಡದಂತೆ ಸಮ್ಮತಿ ಪತ್ರ ಸೂಕ್ತ
ಇಷ್ಟು ದೊಡ್ಡ ಹತ್ಯಾಕಾಂಡದ ಬಗ್ಗೆ ಪ್ರಶ್ನಿಸುವ ಹಕ್ಕು ಪ್ರತಿಪಕ್ಷಗಳಿಗೆ ಇದ್ದೇ ಇದೆ. ಈ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸಂಸತ್ತೇ ಸೂಕ್ತವಾದ ವೇದಿಕೆ. ಇದು ಪ್ರಜಾಪ್ರಭುತ್ವದ ಹೆಗ್ಗಳಿಕೆಯೂ ಹೌದು. ಇದೀಗ ಸಂಸತ್ತಿನಲ್ಲಿ ಉತ್ತರ ನೀಡಬೇಕಾದ ಹೊಣೆ ಕೇಂದ್ರ ಸರ್ಕಾರದ್ದಾಗಿದೆ. ಇತ್ತೀಚೆಗೆ ಮಣಿಪುರದಲ್ಲಿ ನಡೆದ ಅಮಾನುಷ ಬೆತ್ತಲೆ ಮೆರವಣಿಗೆ ಪ್ರಕರಣದ ಬಗ್ಗೆ ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದ್ದಾರೆ. ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂಸಾಚಾರ ತಡೆಯಲು ಏನೇನು ಮಾಡಿವೆ ಎಂಬುದು ದೇಶಕ್ಕೆ ಗೊತ್ತಾಗಬೇಕು. ಸಂತ್ರಸ್ತರ ಜತೆಗೆ ಕಾನೂನು ಇದೆ ಎಂಬ ಭರವಸೆ ಮೂಡಬೇಕು. ಅವಿಶ್ವಾಸ ನಿರ್ಣಯದ ಅಡಿಯಲ್ಲಿ ಮಣಿಪುರ ಹಿಂಸಾಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿ. ಯಾರದು ತಪ್ಪು, ಯಾರದು ಸರಿ, ಮಣಿಪುರ ಹಿಂಸೆ ಈ ಪರಿ ಉಲ್ಬಣಿಸಲು ಕಾರಣವೇನು, ಇದಕ್ಕೆ ಪರಿಹಾರ ಏನು ಎಂಬ ಕಳವಳ ಮತ್ತು ಕುತೂಹಲ ದೇಶವಾಸಿಗಳಿಗೂ ಇದೆ. ಈ ಚರ್ಚೆ ಮಣಿಪುರದಲ್ಲಿ ಹೊಸ ಬದುಕಿನ ಭರವಸೆಗೆ ಕಾರಣವಾಗಲಿ.
ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.