Site icon Vistara News

ವಿಸ್ತಾರ ಸಂಪಾದಕೀಯ: ಏಕಕಾಲ ಚುನಾವಣೆ ಅಗತ್ಯ, ಆದರೆ ವಿಸ್ತೃತ ಚರ್ಚೆಯಾಗಲಿ

One Nation One Election

ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನವನ್ನು (Parliament special session) ಕೇಂದ್ರ ಸರ್ಕಾರವು ಕರೆದಿದೆ. ಆದರೆ, ಯಾವ ಕಾರಣಕ್ಕೆ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಅಧಿವೇಶನದ ಅಜೆಂಡಾ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ಈ ಅಧಿವೇಶನದಲ್ಲಿ ಚರ್ಚೆಗೆ ಒಳಗಾಗಲಿದೆ ಎಂದುಕೊಳ್ಳಲಾಗಿರುವ ಒಂದು ಪ್ರಮುಖ ವಿಚಾರ ಎಂದರೆ ಒಂದು ರಾಷ್ಟ್ರ- ಒಂದೇ ಚುನಾವಣೆ (One Nation One Election) ಚಿಂತನೆ. ಏಕರೂಪ ನಾಗರಿಕ ಸಂಹಿತೆ (Uniform Civil Code) ಮತ್ತು ಮಹಿಳಾ ಮೀಸಲು (Woman reservation Bill) ವಿಧೇಯಕಗಳನ್ನು ಕೇಂದ್ರ ಮಂಡಿಸಲಿದೆ ಎಂದೂ ಹೇಳಲಾಗಿದೆ(Vistara Editorial:).

ʼಒಂದು ರಾಷ್ಟ್ರ- ಒಂದೇ ಚುನಾವಣೆʼ ಪರಿಕಲ್ಪನೆ ತುಂಬಾ ಹಳೆಯದು. ಆದರೆ ಆಗಾಗ ಮೇಲೆದ್ದು ಬರುತ್ತಿರುತ್ತದೆ. ದೇಶದಲ್ಲಿ ನಡೆದ ಮೊದಲ ಮೂರು ಚುನಾವಣೆಗಳು ಈ ಪರಿಕಲ್ಪನೆಯಂತೆಯೇ ಇದ್ದವು. 1952, 57 ಮತ್ತು 62ರ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆದಿದ್ದವು. ಆ ಬಳಿಕ ನಿಧಾನವಾಗಿ ಹಲವು ವಿಧಾನಸಭೆಗಳ ಅವಧಿಪೂರ್ವ ವಿಸರ್ಜನೆ, ಲೋಕಸಭೆಯ ಅವಧಿಪೂರ್ವ ವಿಸರ್ಜನೆ ಇತ್ಯಾದಿಗಳಿಂದಾಗಿ ಏಕಕಾಲದ ಚುನಾವಣೆ ಪ್ರಕ್ರಿಯೆ ಮುಂದುವರಿಯದೇ ಹೋಯಿತು. ನಂತರ ಲೋಕಸಭೆ ಹಾಗೂ ವಿದಾನಸಭೆಗಳ ಅವಧಿಯೇ ಸಂಪೂರ್ಣ ಬೇರೆಬೇರೆಯಾಗಿ ಹೋದವು. ಆಗಾಗ ರಾಜಕೀಯ ತಜ್ಞರ ವಲಯದಲ್ಲಿ ಈ ವಿಚಾರದ ಸಾಧಕ-ಬಾಧಕಗಳು ಚರ್ಚೆಯಾಗುತ್ತಿದ್ದವು. 2014ರ ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ಈ ಪ್ರಸ್ತಾಪವನ್ನು ಮತ್ತೆ ಹರಿಬಿಟ್ಟಿತು. ಚುನಾವಣಾ ಪ್ರಣಾಳಿಕೆಯಲ್ಲೂ ಇದು ಉಲ್ಲೇಖಗೊಂಡಿತು. ಅಲ್ಲಿಂದೀಚೆಗೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರ ಸಾಧಕ ಬಾಧಕಗಳ ಕುರಿತು ಇಂದು ಚರ್ಚೆ ಆಗಲೇಬೇಕಾಗಿದೆ. 2015ರಲ್ಲಿ ಕಾನೂನು ಆಯೋಗವು ʼಒಂದು ರಾಷ್ಟ್ರ- ಒಂದು ಚುನಾವಣೆ’ ಕುರಿತು ವಿಸ್ತೃತ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಇದರಲ್ಲಿ ದೇಶದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭೆಗೆ ಚುನಾವಣೆ ನಡೆದರೆ ಕೋಟ್ಯಂತರ ರೂ. ಉಳಿಸಬಹುದು ಎಂದು ಸ್ಪಷ್ಟವಾಗಿ ಹೇಳಿತ್ತು. ಮತ್ತೆ ಮತ್ತೆ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದು ತಪ್ಪುವ ಕಾರಣ ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆಯಾಗುವುದಿಲ್ಲ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದು ಆಯೋಗ ಶಿಫಾರಸು ಮಾಡಿತ್ತು. ಪ್ರಸ್ತುತ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿವರ್ಷವೂ ಒಂದಲ್ಲ ಒಂದು ರಾಜ್ಯಕ್ಕೆ ಚುನಾವಣೆ ಇದ್ದೇ ಇರುತ್ತದೆ. ಇದರಿಂದ ಅತ್ತ ಕೇಂದ್ರದಲ್ಲಿ ಆಡಳಿತದಲ್ಲಿರುವವರೂ ತಮ್ಮ ಗಮನವನ್ನು ರಾಜ್ಯಗಳ ಚುನಾವಣೆ ಕಡೆ ನೆಟ್ಟಿರುತ್ತಾರೆ. ಪದೇಪದೆ ಚುನಾವಣೆಗಳಿಂದ ಸರಕಾರಕ್ಕೂ ಕೋಟ್ಯಂತರ ರೂ. ಖರ್ಚು. ರಾಜಕೀಯ ಪಕ್ಷಗಳೂ ನಿರಂತರ ಪ್ರಚಾರ, ಅದಕ್ಕೆ ಹೊಸೆಯುವ ಪ್ರಣಾಳಿಕೆಗಳು, ಮತದಾರರ ಓಲೈಕೆ, ಪ್ರಚಾರಕ್ಕೆ ಕೋಟಿಗಟ್ಟಲೆ ಹಣ ಹೀಗೆ ಸುರಿಯುತ್ತ ಇರುತ್ತವೆ. ಸರಕಾರಗಳು ಕೂಡ ಮತ ಬ್ಯಾಂಕ್‌ಗಳ ಓಲೈಕೆಗಾಗಿಯೇ ಕೆಲಸ ಮಾಡಬೇಕಾದ ಸನ್ನಿವೇಶವಿರುತ್ತದೆ. ತಿಂಗಳುಗಟ್ಟಲೆ ಮಾದರಿ ನೀತಿ ಸಂಹಿತೆ ಅನ್ವಯಿಸುವ ಕಾರಣ ಯಾವುದೇ ಹೊಸ ಯೋಜನೆಗಳನ್ನು ಘೋಷಿಸಲಾಗದ ಪರಿಸ್ಥಿತಿಯಿದ್ದು, ಅಭಿವೃದ್ಧಿ ಕಾರ್ಯಗಳಿಗೂ ಅಡಚಣೆಯುಂಟಾಗುತ್ತದೆ.

ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆ ನಡೆಸಿದರೆ ಮಾನವ ಶ್ರಮ, ಸಮಯ ಮತ್ತು ಭಾರಿ ಮೊತ್ತದ ಹಣ ಉಳಿತಾಯವಾಗುತ್ತದೆ. ಮೂಲಸೌಕರ್ಯ, ಸಿಬ್ಬಂದಿ, ರಕ್ಷಣಾ ವೆಚ್ಚ, ಮತ ಎಣಿಕೆ ಎಲ್ಲದರಲ್ಲೂ ದೇಶದ ಆರ್ಥಿಕತೆಗೆ ಹೆಚ್ಚಿನ ಹೊರೆಯಾಗುವುದಿಲ್ಲ. ಏಕಕಾಲಕ್ಕೆ ಚುನಾವಣೆ ನಡೆಯುವ ಸಂದರ್ಭದಲ್ಲಿ, ಪ್ರಾದೇಶಿಕವಾಗಿಯೂ ರಾಷ್ಟ್ರೀಯ ನೆಲೆಯಲ್ಲೂ ಮತದಾರನ ಒಲವನ್ನು ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ರಾಜಕೀಯ ಪಕ್ಷಗಳಿಗೆ ಏಕಕಾಲದಲ್ಲಿ ಬರುವುದರಿಂದ, ತಮ್ಮ ನಿಲುವು ಹಾಗೂ ಸಮೀಕರಣಗಳಲ್ಲಿ ಮೂಲಭೂತವಾಗಿ ಜನಸ್ನೇಹಿಯಾದ ಸ್ವರೂಪವನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಇದು ಅಷ್ಟೊಂದು ಸುಲಭ ಸಾಧ್ಯವೇ? ಹೀಗೆ ಮಾಡುವುದಾದರೆ, ಇತ್ತೀಚೆಗೆ ತಾನೆ ಚುನಾವಣೆ ನಡೆದು ಅಧಿಕಾರಕ್ಕೆ ಬಂದ ರಾಜ್ಯಗಳ (ಉದಾಹರಣೆಗೆ ಕರ್ನಾಟಕ) ಕತೆಯೇನು? ಮಧ್ಯಂತರ ಚುನಾವಣೆಗಳ ನಿರ್ಣಯ ಹೇಗೆ? ಈ ಭಾರೀ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಅದನ್ನು ನಡೆಸುವಷ್ಟು ಸಿಬ್ಬಂದಿ ಸಂಪನ್ಮೂಲ ಚುನಾವಣೆ ಆಯೋಗದ ಬಳಿ ಇದೆಯೇ? ಇದನ್ನು ಬಲಪಡಿಸುವುದು ಹೇಗೆ? ಇಂಥ ನೂರಾರು ಪ್ರಶ್ನೆಗಳು ಮೇಲೆದ್ದು ಬರುತ್ತವೆ. ಇವೆಲ್ಲದಕ್ಕೂ ಸಮರ್ಥವಾದ ಹಾಗೂ ನಿಖರವಾದ ಉತ್ತರವನ್ನು ಕಂಡುಕೊಳ್ಳದೆ ದುಡುಕಲು ಸಾಧ್ಯವಿಲ್ಲ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಾಯು ಮಾಲಿನ್ಯ ನಮ್ಮ ಆಯುಷ್ಯವವನ್ನೇ ತಗ್ಗಿಸುತ್ತಿದೆ, ಎಚ್ಚರವಿರಲಿ

ತಜ್ಞರು ಹೇಳುವ ಪ್ರಕಾರ ಏಕಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸಲು ಸಂವಿಧಾನ ತಿದ್ದುಪಡಿ ಹಾಗೂ ಜನಪ್ರತಿನಿಧಿಗಳ ಕಾಯಿದೆಗೆ ತಿದ್ದುಪಡಿ ಅಗತ್ಯ. ಕೆಲವು ರಾಜ್ಯಗಳ ವಿಧಾನಸಭೆಗಳನ್ನು ಅವಧಿಪೂರ್ವವಾಗಿ ವಿಸರ್ಜಿಸುವ, ಕೆಲವು ವಿಧಾನಸಭೆಗಳ ಅವಧಿಯನ್ನು ತಾತ್ಕಾಲಿಕವಾಗಿ ವಿಸ್ತರಿಸುವ, ಕೆಲವೆಡೆ ಮಧ್ಯಂತರ ಚುನಾವಣೆ ನಡೆಸುವ, ಕೆಲವೆಡೆ ರಾಷ್ಟ್ರಪತಿ ಆಡಳಿತ ಹೇರುವ ಅಗತ್ಯ ಏರ್ಪಡಬಹುದು. ಲಾಭಗಳನ್ನು ಗಮನಿಸಿದಂತೆ, ಸೃಷ್ಟಿಯಾಗಬಹುದಾದ ರಾಜಕೀಯ ಕೋಲಾಹಲಗಳನ್ನೂ ಗಮನಿಸಬೇಕು. ಇದನ್ನು ಮಾಡಲು ಮುಂದಾಗುವ ರಾಜಕೀಯ ಪಕ್ಷಕ್ಕೆ ಎಂಟೆದೆ ಇರಬೇಕಾದ್ದು ಅಗತ್ಯ. ಇಂಥದೊಂದು ದೊಡ್ಡ ನಿರ್ಣಯಕ್ಕೆ ಎಲ್ಲ ರಾಜಕೀಯ ಪಕ್ಷಗಳ, ಸಾಂವಿಧಾನಿಕ ಸಂಸ್ಥೆಗಳ, ಜನರ ಒಪ್ಪಿಗೆ ಅಗತ್ಯ. ಯಾಕೆಂದರೆ ಎಲ್ಲ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಸೇರಿಯೇ ಒಂದು ಪ್ರಜಾಪ್ರಭುತ್ವ ಪರಿಪೂರ್ಣ. ಆ ದೃಷ್ಟಿಯಿಂದ ಆಮೂಲಾಗ್ರ ಚರ್ಚೆ ನಡೆಯಬೇಕು. ಪಕ್ಷಗಳ ನಡುವೆ ಹಾಗೂ ದೇಶಾದ್ಯಂತ ತಜ್ಞರು- ಮತದಾರರ ನಡುವೆಯೂ ಚರ್ಚೆ ನಡೆಯಬೇಕು. ಏಕಕಾಲ ಚುನಾವಣೆಯ ಹಲವು ಆಯಾಮಗಳ ಚರ್ಚೆಯ ಬಳಿಕ ಇದನ್ನು ಅಳವಡಿಸಿಕೊಳ್ಳುವತ್ತ ಒಂದು ದಾರಿ ತೋರಬಹುದು.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version