Site icon Vistara News

ವಿಸ್ತಾರ ಸಂಪಾದಕೀಯ: ಜಗದಗಲಕ್ಕೂ ಹಬ್ಬಿತು ನಮ್ಮ ಹೆಮ್ಮೆಯ ಇಸ್ರೊ ಸಾಧನೆಯ ಕೀರ್ತಿ

ISRO

ಕೆಲವು ದಿನಗಳ ಹಿಂದಷ್ಟೇ ಚಂದ್ರಯಾನ-3 ಮಿಷನ್‌‌ಗೆ ಯಶಸ್ವಿಯಾಗಿ ಚಾಲನೆ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO)ಯು ಜುಲೈ 30, ಭಾನುವಾರ ಬೆಳಗ್ಗೆ ಸಿಂಗಾಪುರದ ಏಳು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿತು. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಡಿಎಸ್‌-ಎಸ್‌ಎಆರ್‌ ಉಪಗ್ರಹ ಸೇರಿ ಏಳು ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-56 ರಾಕೆಟ್‌ ಯಶಸ್ವಿಯಾಗಿ ನಭಕ್ಕೆ ಹಾರಿತು. ಉಡಾವಣೆಗೊಂಡ 20 ನಿಮಿಷಗಳಲ್ಲಿಯೇ ಎಲ್ಲ ಉಪಗ್ರಹಗಳು ಸರಿಯಾದ ಕಕ್ಷೆ ಸೇರಿವೆ. ಡಿಎಸ್-ಎಸ್ಎಆರ್ ಉಪಗ್ರಹದ ಪ್ರಾಥಮಿಕ ಪೇಲೋಡ್ 360 ಕೆಜಿ ಇದ್ದು, ಈ ಉಪಗ್ರಹವನ್ನು ಸಿಂಗಾಪುರ ಸರ್ಕಾರವನ್ನು ಪ್ರತಿನಿಧಿಸುವ ಡಿಎಸ್‌ಟಿಎ ಮತ್ತು ಎಸ್ ಇಟಿ ಎಂಜಿನಿಯರಿಂಗ್ ನಡುವಿನ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ವಾಣಿಜ್ಯತ್ಮಾಕ ಬಾಹ್ಯಾಕಾಶ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದೆ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ(Vistara Editorial).

ಚಂದ್ರಯಾನ-3 ಮಿಷನ್ ಬೆನ್ನಲ್ಲೇ ಗಗನಯಾನದ ಸಿದ್ಧತೆಗಳನ್ನು ನಡೆಸುತ್ತಿರುವ ಇಸ್ರೋ, ಈಗ ಕೇವಲ ಭಾರತದ ಉಪಗ್ರಹಗಳನ್ನು ಮಾತ್ರವೇ ಕಕ್ಷೆಗಳಿಗೆ ಸೇರಿಸುತ್ತಿಲ್ಲ. ಹಲವು ರಾಷ್ಟ್ರಗಳ ಉಪಗ್ರಹಗಳನ್ನು ತನ್ನ ರಾಕೆಟ್‌ಗಳ ಮೂಲಕ ಬಾಹ್ಯಾಕಾಶದ ನಿಶ್ಚಿತ ಗಮ್ಯ ಸ್ಥಾನಗಳಿಗೆ ತಲುಪಿಸುವ ಕಾರ್ಯವನ್ನು ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಮಾಡುತ್ತ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಗೆ ಉತ್ತರ ನೀಡಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ”ಇಸ್ರೋ ಇತ್ತೀಚಿನ ಐದು ವರ್ಷಗಳಲ್ಲಿ 19 ರಾಷ್ಟ್ರಗಳ 177ಕ್ಕೂ ಅಧಿಕ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ,” ಎಂದು ತಿಳಿಸಿದ್ದರು. ಕೇವಲ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳು ಮಾತ್ರವಲ್ಲದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಇಸ್ರೋ ಸೇವೆಯನ್ನು ಎರವಲು ಪಡೆದುಕೊಂಡಿದೆ. ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಕೊಲಂಬಿಯಾ, ಫಿನ್ಲೆಂಡ್, ಫ್ರಾನ್ಸ್, ಇಸ್ರೇಲ್, ಇಟಲಿ, ಜಪಾನ್, ಲಕ್ಸೆಂಬರ್ಗ್, ಮಲೇಷ್ಯಾ, ನೆದರ್ಲೆಂಡ್, ಸಿಂಗಾಪುರ್, ಸ್ಪೇನ್, ಸ್ವಿಜರ್ಲೆಂಡ್, ಇಂಗ್ಲೆಂಡ್ ಮತ್ತು ಅಮೆರಿಕ ರಾಷ್ಟ್ರಗಳ ಹಲವು ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಚಂದ್ರಯಾನ, ಮಂಗಳಯಾನಗಳ ಮೂಲಕ ಬಾಹ್ಯಾಕಾಶದಲ್ಲಿ ತಾನೂ ಜಾಗತಿಕ ಪ್ರತಿಸ್ಪರ್ಧಿ ಎಂಬುದನ್ನು ಈಗಾಗಲೇ ಭಾರತವು ಸಾಬೀತು ಮಾಡಿದೆ. ಅಷ್ಟೇ ಮಾತ್ರವಲ್ಲದೇ, ಎಷ್ಟೇ ಅಡೆತಡೆಗಳು, ಬೇರೆ ಬೇರೆ ರಾಷ್ಟ್ರಗಳ ತಾಂತ್ರಿಕ ಅಸಹಕಾರಗಳ ಮಧ್ಯೆಯೂ ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಇಲ್ಲಿಯತನಕ ಅಗಾಧವಾಗಿಯೇ ಬೆಳೆದಿದೆ. ದೇಶದ ಸಂಶೋಧನೆ, ವೈಜ್ಞಾನಿಕ ಆಸಕ್ತಿಯ ಹಾಗೂ ಪ್ರತಿ ಸರ್ಕಾರವು ನೀಡಿದ ನಿರಂತರ ಬೆಂಬಲದಿಂದ ಇದೆಲ್ಲವೂ ಸಾಧ್ಯವಾಗಿದೆ.

ಸಂಶೋಧನೆ, ಪ್ರಯೋಗಗಳಿಗಾಗಿಯಷ್ಟೇ ಇಸ್ರೊ ಈಗ ಉಪಗ್ರಹಗಳನ್ನು ಉಡ್ಡಯನ ಮಾಡುವುದಿಲ್ಲ. ಬದಲಿಗೆ, ವಾಣಿಜ್ಯಾತ್ಮಕವಾಗಿಯೂ ಅದು ತನ್ನ ವಿಶಿಷ್ಟ ಲಾಂಚಿಂಗ್ ವೆಹಿಕಲ್‌(ರಾಕೆಟ್)ಗಳನ್ನು ಬಳಸುತ್ತಿದೆ. ಈ ಮೂಲಕ ಕಮರ್ಷಿಯಲ್ ಆಗಿಯೂ ಲಾಭವನ್ನು ತಂದುಕೊಡುತ್ತಿದೆ. ಅಮೆರಿಕ, ಫ್ರಾನ್ಸ್, ರಷ್ಯಾ ಮತ್ತು ಚೀನಾದಂಥ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಕಡಿಮೆ ದುಡ್ಡಿನಲ್ಲಿ ಯಶಸ್ವಿಯಾಗುತ್ತಿವೆ. ಖಾಸಗಿ ಕಂಪನಿಗಳ ಉಪಗ್ರಹಗಳನ್ನು ಉಡ್ಡಯನ ಮಾಡಿ, ಇಸ್ರೋ ಸೈ ಎನಿಸಿಕೊಂಡಿದೆ. ಅದೇ ಕಾರಣಕ್ಕೆ ಬಹಳಷ್ಟು ರಾಷ್ಟ್ರಗಳು ಈಗ ಭಾರತವನ್ನು ಆಶ್ರಯಿಸುತ್ತಿವೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯೇ ಸರಿ. ಈ ಮಧ್ಯೆ, ತನ್ನ ಸ್ಮಾರ್ಟ್‌ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಅನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವುದಾಗಿ ಇಸ್ರೋ ಹೇಳಿದೆ. 500 ಕೆಜಿ ತೂಕದ ಉಪಗ್ರಹಗಳನ್ನು ಕೆಳ ಹಂತದ ಕಕ್ಷೆಗೆ ಸೇರಿಸುವ ಸಾಮರ್ಥವನ್ನು ಹೊಂದಿರುವ ಈ ರಾಕೆಟ್‌‌ಗಳ ಖಾಸಗಿ ಬಳಕೆಯಿಂದ ಖಾಸಗಿ ವಲಯಕ್ಕೂ ಸಾಕಷ್ಟು ಉಪಯೋಗವಾಗಲಿದೆ. ಈ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು ತೆರೆದುಕೊಳ್ಳಲು ಇಸ್ರೋದ ಈ ನಿರ್ಧಾರವು ಕಾರಣವಾಗಲಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೆಂಗಳೂರು- ಮೈಸೂರು ಹೆದ್ದಾರಿ ಇನ್ನಷ್ಟು ಸುರಕ್ಷಿತವಾಗಲಿ

ಭಾರತದ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೊ ಮುಂದೆ ಗಗನಯಾನ ಜತೆಗೆ ಇನ್ನೂ ಹಲವಾರು ಯೋಜನೆಗಳಿವೆ. ಈ ಪೈಕಿ, ಆದಿತ್ಯ-ಎಲ್ 1, ಎಕ್ಸ್‌ರೇ ಪೋಲಾರಿಮಿಟರ್ ಸ್ಯಾಟ್‌ಲೈಟ್, ನಿಸಾರ್, ಶುಕ್ರಯಾನ-1, ಮಂಗಳಯಾನ-2, ಲೂನಾರ್ ಪೋಲಾರ್ ಎಕ್ಸ್‌ಪ್ಲೋರೇಷನ್ ಮಿಷನ್, ಆ್ಯಸ್ಟ್ರೋಸ್ಯಾಟ್-2 ಪ್ರಮುಖವಾಗಿವೆ. ಈ ಪಟ್ಟಿ ನೋಡಿದರೆ, ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಷ್ಟೆಲ್ಲ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ತನ್ನ ಮುಂದೆ ಹರವಿಟ್ಟುಕೊಂಡಿದೆ ಎಂಬುದು ವೇದ್ಯವಾಗುತ್ತದೆ. ಈ ಹಿಂದಿನ ಎಲ್ಲ ದಾಖಲೆಗಳನ್ನು ಗಮನಿಸಿದರೆ, ಇಸ್ರೋದ ಭವಿಷ್ಯದ ಮಿಷನ್‌ಗಳು ಖಂಡಿತವಾಗಿಯೂ ಯಶಸ್ವಿಯಾಗುತ್ತವೆ.

ಇನ್ನಷ್ಟು ಸಂಪಾದಕೀಯಗಳನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version