Site icon Vistara News

ವಿಸ್ತಾರ ಸಂಪಾದಕೀಯ: ಮಹಿಳೆಯರ ನಗ್ನ ಮೆರವಣಿಗೆ ಅಮಾನುಷ, ಮಣಿಪುರದ ಅರಾಜಕತೆ ಮುಗಿಯಲಿ

Vistara Editorial and woman naked parade is inhumane, let the anarchy end in Manipur

ಲಭೆಗ್ರಸ್ತ ಮಣಿಪುರ ರಾಜ್ಯದಲ್ಲಿ ನಡೆದ ಅಮಾನುಷವಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ದೇಶಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿದೆ. ಬುಡಕಟ್ಟು ಕುಕೀ ಸಮುದಾಯದ ಇಬ್ಬರು ಮಹಿಳೆಯರನ್ನು ಮೈತೈ ಕಿಡಿಗೇಡಿಗಳ ಗುಂಪು ಅಸಹ್ಯಕರವಾದ ರೀತಿಯಲ್ಲಿ ಬೆತ್ತಲೆಗೊಳಿಸಿ, ಬೀದಿಯಲ್ಲಿ ಮೆರವಣಿಗೆ ಮಾಡಿದೆ. ಸಾಮೂಹಿಕ ಅತ್ಯಾಚಾರವನ್ನೂ ನಡೆಸಲಾಗಿದೆ. ಮೇ 4ರಂದು ಮೊದಲ ಬಾರಿಗೆ ಬುಡಕಟ್ಟು ಸಮುದಾಯಗಳ ನಡುವೆ ಗಲಭೆ ಹುಟ್ಟಿಕೊಂಡಾಗ ನಡೆದ ಈ ಘಟನೆ ಇದೀಗ ಬಹಿರಂಗವಾಗಿದೆ. ಅಂತರ್ಜಾಲದ ಲಭ್ಯತೆ ಇಲ್ಲದುದರಿಂದ, ಬಹಿರಂಗಗೊಳಿಸುವ ಧೈರ್ಯವಿಲ್ಲದೆ ಈ ಪ್ರಕರಣ ಒಳಗೇ ಇತ್ತು. ಇದೀಗ ಹೊರಗೆ ಬಂದಿವೆ. ಇಂಥ ಇನ್ನೆಷ್ಟು ಪೈಶಾಚಿಕವಾದ ಪ್ರಕರಣಗಳು ನಡೆದಿವೆಯೋ? ಈ ಬರ್ಬರ ಕೃತ್ಯವನ್ನು ಖಂಡಿಸುವುದಕ್ಕೆ ಪದಗಳೇ ಸಾಲವು. ಈ ದುಷ್ಕೃತ್ಯದಲ್ಲಿ ಪಾಲ್ಗೊಂಡ ಎಲ್ಲ ಪಾತಕಿಗಳಿಗೂ ಕಠಿಣ ಶಿಕ್ಷೆಯಾಗಬೇಕು(Vistara Editorial).

ಮಣಿಪುರ ಗಲಭೆಯ ವೇಳೆ ಮನೆ- ಅಂಗಡಿ ಮುಂಗಟ್ಟುಗಳನ್ನು ಸುಡಲಾಗಿದೆ; ಮನುಷ್ಯರನ್ನು ಕ್ರೂರವಾಗಿ ಕೊಲೆ ಮಾಡಲಾಗಿದೆ; ಈಗ ಹೆಣ್ಣುಮಕ್ಕಳ ಮೇಲೆ ಈ ಬಗೆಯ ವಿಕೃತಿ ಮೆರೆಯಲಾಗಿದೆ ಎಂಬುದು ಕೂಡ ಬಹಿರಂಗವಾಗಿದೆ. ಸತತ ಎರಡು ತಿಂಗಳುಗಳಿಂದ ಜನಾಂಗೀಯ ಸಂಘರ್ಷಕ್ಕೆ ಸಾಕ್ಷಿಯಾಗಿರುವ ಮಣಿಪುರದಲ್ಲಿ ಸತತ ಪ್ರಯತ್ನಗಳ ಬಳಿಕ ಸುದೀರ್ಘ ಕಾಲ ನಡೆದ ಹಿಂಸಾಚಾರ ತಣ್ಣಗಾಗಿತ್ತು. ಇದೀಗ ಈ ಭೀಕರ ಘಟನೆಯ ವಿಡಿಯೋ ಬಹಿರಂಗೊಂಡಿರುವುದು ಬುಡಕಟ್ಟು ಸಮುದಾಯಗಳನ್ನು ಮತ್ತಷ್ಟು ಕೆರಳಿಸಿದೆ. ಗಲಭೆಯಲ್ಲಿ ಇದುವರೆಗೂ 142 ಜನರು ಸಾವಿಗೀಡಾಗಿದ್ದಾರೆ. 5,995 ಎಫ್‌ಐಆರ್‌ ದಾಖಲಾಗಿವೆ; 6745 ಜನರನ್ನು ಬಂಧಿಸಲಾಗಿದೆ. ಪ್ರಸ್ತುತ ಬೆತ್ತಲೆ ಮೆರವಣಿಗೆಯ ಪ್ರಕರಣದಲ್ಲಿ ದೊಡ್ಡದೊಂದು ಗುಂಪೇ ಭಾಗಿಯಾಗಿರುವುದು ಕಂಡುಬರುತ್ತಿದೆ. ಇದೀಗ ಹೇಳಿಕೆ ನೀಡಿರುವ ಸಂತ್ರಸ್ತೆ, ಹಲ್ಲೆಕೋರರ ಗುಂಪಿಗೆ ತಮ್ಮನ್ನು ಪೊಲೀಸರೇ ಒಪ್ಪಿಸಿಕೊಟ್ಟು ಬಿಟ್ಟಿದ್ದರು ಎಂದು ಹೇಳಿದ್ದಾರೆ. ಅಂದರೆ ಈ ಗಲಭೆಯಲ್ಲಿ ಪೊಲೀಸರೂ ಬಲಿಷ್ಠ ಗುಂಪುಗಳ ಕೈಗೊಂಬೆಗಳಂತೆ ವರ್ತಿಸಿದ್ದಾರೆ ಎಂಬುದು ಖಚಿತ. ಈ ಬಗ್ಗೆಯೂ ತನಿಖೆಯಾಗಿ ಪೊಲೀಸ್‌ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕಿದೆ.

ಎರಡು ತಿಂಗಳ ಹಿಂದೆ ಮೈತೈ ಮತ್ತು ಕುಕೀ- ನಾಗಾ ಬುಡಕಟ್ಟು ಸಮುದಾಯಗಳ ನಡುವೆ ಈ ಸಂಘರ್ಷ ಭುಗಿಲೆದ್ದಿದೆ. ಇದರ ಕಾರಣಗಳು ದಶಕಗಳಿಂದಲೂ ಹೊಗೆಯಾಡುತ್ತಿದ್ದವು. ಮೈತೈ ಜನಾಂಗದವರು ಇಲ್ಲಿ ಬಲಿಷ್ಠರಾಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಇವರ ಪರ ನಿಂತಿದೆ. ಮೈತೈಗಳು ರಾಜ್ಯದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟು ಹಾಗೂ ಬುಡಕಟ್ಟು ಸಮುದಾಯದವರು ಶೇ.40ರಷ್ಟು ಇದ್ದಾರೆ. ಆದರೆ ಬುಡಕಟ್ಟು ಸಮುದಾಯದವರು 90 ಪ್ರತಿಶತದಷ್ಟು ಭೂಪ್ರದೇಶದಲ್ಲಿ ಹರಡಿದ್ದಾರೆ. ರಾಜ್ಯದ ಕೇವಲ 10 ಪ್ರತಿಶತದಷ್ಟು ಜಾಗದಲ್ಲಿ ಮಾತ್ರ ಮೈತೈಗಳಿದ್ದರೂ ರಾಜಕೀಯವಾಗಿ ಬಲಿಷ್ಠರಾಗಿದ್ದಾರೆ. ಶಾಸನಸಭೆಗಳಲ್ಲಿ ಇವರ ಪ್ರಾತಿನಿಧ್ಯ ಹೆಚ್ಚಿದೆ. ಬುಡಕಟ್ಟು ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗುಡ್ಡಗಾಡು ಪ್ರದೇಶಗಳಿಂದ ಅಕ್ರಮ ತೆರವು ಕಾರಣ ನೀಡಿ ಕುಕೀಗಳನ್ನು ಒಕ್ಕಲೆಬ್ಬಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಹಲವು ಕಡೆ ಅರಣ್ಯ ಭೂಮಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ತಮ್ಮನ್ನು ತೆರವು ಮಾಡಲಾಗುತ್ತಿದೆ ಎಂಬುದು ಕುಕಿಗಳ ಹಾಗೂ ನಾಗಾಗಳ ಸಿಟ್ಟು. ಅತ್ತ ಎಸ್‌ಟಿ ಸ್ಥಾನಮಾನಕ್ಕಾಗಿ ಮೈತೈ ಬುಡಕಟ್ಟು ಸಲ್ಲಿಸಿರುವ ಬೇಡಿಕೆಗೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸಿ ಕೇಂದ್ರಕ್ಕೆ ಶಿಫಾರಸು ಕಳುಹಿಸಿದೆ. ಮೈತೈಗಳಿಗೆ ಎಸ್‌ಟಿ ಸ್ಥಾನಮಾನ ನೀಡಿದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಎಂಬುದು ಬುಡಕಟ್ಟು ಸಮುದಾಯಗಳ ಆತಂಕವಾಗಿದೆ. ಕುಕೀಗಳು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ವಲಸೆ ಬಂದಿದ್ದಾರೆ ಎಂಬುದು ಮೈತೈಗಳ ಆರೋಪ. ಹೀಗೆ ಎರಡೂ ಜನಾಂಗಗಳ ನಡುವೆ ತಿಕ್ಕಾಟ ಸೃಷ್ಟಿಯಾಗಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೆಂಗಳೂರಿನಲ್ಲಿ ಉಗ್ರರ ಜಾಡು ಆತಂಕಕಾರಿ

ಇಂಥ ಹೊಗೆಯಾಡುವ ಬೆಂಕಿಯನ್ನು ಶಮನ ಮಾಡಲು ಬೀರೇನ್‌ ಸಿಂಗ್‌ ಸರ್ಕಾರ ವಿಫಲವಾಗಿದೆ. ಅದಕ್ಕೆ ತುಪ್ಪ ಎರೆಯುವ ಕಾರ್ಯವನ್ನು ಮಾಡಿದೆ. ಸತತವಾಗಿ ನಡೆಯುತ್ತಿರುವ ಗಲಭೆಗಳಲ್ಲಿ ಪೊಲೀಸರ‌ ಪಾತ್ರವೂ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮಾತನಾಡಿದ್ದಾರೆ. ಇಡೀ ಸರ್ಕಾರಿ ಯಂತ್ರ ಸಂತ್ರಸ್ತರ ಪರವಾಗಿ ನಿಲ್ಲುವಂತಾಗಬೇಕಿದೆ. ಅಮಾಯಕ ಮಹಿಳೆಯರನ್ನು ಬೀದಿಯಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡುವ, ಹಾಡಹಗಲೇ ರೇಪ್‌ ಮಾಡುವ ಈ ಧೈರ್ಯ ಈ ಗಲಭೆಕೋರರಿಗೆ ಹೇಗೆ ಬಂತು? ಯಾರ ಕೃಪಾಶ್ರಯದ ಬಲದಿಂದ ಈ ದುಷ್ಕರ್ಮಿಗಳು ಸೊಕ್ಕಿದ್ದಾರೆ? ಇಂಥ ಕೃತ್ಯಗಳಿಂದ ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತ ತಲೆತಗ್ಗಿಸಬೇಕಾಗುತ್ತದೆ. ಮಾನವ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಮಾತನಾಡುವ ನೈತಿಕತೆಯನ್ನು ನಾವು ಕಳೆದುಕೊಳ್ಳುತ್ತೇವೆ. ಯಾವುದೇ ಯುದ್ಧಗ್ರಸ್ತ, ಗಲಭೆಗ್ರಸ್ತ ಪ್ರದೇಶದಲ್ಲಿ ದುಷ್ಕರ್ಮಿಗಳಿಗೆ ಬಹು ಸುಲಭವಾಗಿ ಸೇಡು ತೋರಿಸಲು ಸಿಗುವವರೆಂದರೆ ಮಹಿಳೆಯರು. ಇದೊಂದು ವ್ಯವಸ್ಥಿತ ಅಪರಾಧ. ಇದನ್ನು ಅಷ್ಟೇ ಕಠಿಣವಾಗಿ ಶಿಕ್ಷಿಸದೇ ಹೋದರೆ ಮಣಿಪುರ ಮತ್ತೊಂದು ಅರಾಜಕ ರಾಜ್ಯವಾಗಿ, ಅತ್ಯಂತ ಕೆಟ್ಟ ಮಾದರಿಯಾಗಲಿದೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version