ಪಾಕಿಸ್ತಾನದಲ್ಲಿ ಇತ್ತೀಚೆಗೆ `ಅಪರಿಚಿತರ’ ಗುಂಡಿನ ದಾಳಿಗೆ ಹತ್ಯೆಗೀಡಾಗುತ್ತಿರುವ ಉಗ್ರರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಲಷ್ಕರೆ ತಯ್ಬಾ ಕಮಾಂಡರ್ (Lashkar Commander) ಅಕ್ರಮ್ ಘಾಜಿಯನ್ನು (Akram Ghazi) ಗುಂಡಿಕ್ಕಿ ಹತ್ಯೆ ಮಾಡಲಾದ ಬೆನ್ನಲ್ಲೇ ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಮತ್ತೊಬ್ಬ ಉಗ್ರ, ಸಂಘಟನೆಯ ಸಂಸ್ಥಾಪಕ ಮೌಲಾನ ಮಸೂದ್ ಅಜರ್ನ ಆಪ್ತನಾಗಿದ್ದ ಮೌಲಾನಾ ರಹೀಮ್ ಉಲ್ಲಾ ತಾರಿಖ್ನನ್ನು ಕರಾಚಿಯ ಒರಾಂಗಿ ಪಟ್ಟಣದಲ್ಲಿ ಹತ್ಯೆ ಮಾಡಲಾಗಿದೆ. ಬೈಕ್ನಲ್ಲಿ ಬಂದ ಅಪರಿಚಿತ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ, ಕೆನಡಾ ಸೇರಿ ಹಲವೆಡೆ 16 ಉಗ್ರರು ‘ಅಪರಿಚಿತರ’ ಗುಂಡಿಗೆ ಬಲಿಯಾಗಿದ್ದಾರೆ. ಈ ಹತ್ಯೆಗಳೆಲ್ಲ ಆಕಸ್ಮಿಕಗಳೇ ಅಥವಾ ಯೋಜಿತ ಹತ್ಯೆಗಳೇ ಎಂಬ ಕುತೂಹಲ ಭಾರತದ ಪ್ರಜೆಯಲ್ಲಿ ಮೂಡುವುದು ಸಹಜ(Vistara Editorial).
ಇವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾದವರು ಅಥವಾ ಸಂಚಿನಲ್ಲಿ ಪಾಲ್ಗೊಂಡವರು. ಎಂದಾದರೂ ಇವರು ಭಾರತದ ತನಿಖಾ ಸಂಸ್ಥೆಗಳಿಗೆ ಬೇಕಾದವರೇ ಆಗಿದ್ದರು. ಸಿಕ್ಕಿಬಿದ್ದಿದ್ದರೆ ನ್ಯಾಯಯುತ ರೀತಿಯಲ್ಲಿ ಕೋರ್ಟ್ ಮುಂದೆ ವಿಚಾರಣೆಗೆ ಒಳಗಾಗಿ ಗಲ್ಲು ಶಿಕ್ಷೆ ಅಥವಾ ಜೈಲುಪಾಲಾಗಬೇಕಿದ್ದವರು. ಆದರೆ ಭಾರತದ ನ್ಯಾಯಾಂಗ ಪ್ರಕ್ರಿಯೆಯ ವಿಳಂಬ ಗತಿಯನ್ನು ಅರಿತವರು ಈಗ ಆದುದೇ ಸರಿಯಾದುದು ಎನ್ನಬಹುದು. ಯಾಕೆಂದರೆ ಮುಂಬಯಿ ಉಗ್ರ ದಾಳಿಯಲ್ಲಿ ಹತ್ತಾರು ಮಂದಿಯನ್ನು ಹಾಡಹಗಲೇ ಕೊಂದು ಸಿಕ್ಕಿಬಿದ್ದ ಭಯೋತ್ಪಾದಕ ಅಜ್ಮಲ್ ಕಸಬ್ನನ್ನೇ ಹಲವು ವರ್ಷ ಬಿರಿಯಾನಿ ನೀಡಿ ಸುಖವಾಗಿ ನೋಡಿಕೊಂಡವರು ನಾವು! ಇಲ್ಲಿ ಸಿಕ್ಕಿಬಿದ್ದ ಉಗ್ರರಿಗೂ ಶಿಕ್ಷೆಯಾಗುತ್ತದೆ ಎನ್ನುವಂತಿಲ್ಲ. ಹೀಗಾಗಿ ಒಬ್ಬೊಬ್ಬ ಉಗ್ರ ಹತನಾದಾಗಲೂ ಭಾರತೀಯರ ಪಾಲಿಗೆ ಶುಭ ಸುದ್ದಿಯೇ.
ಇದರೊಂದಿಗೆ, ಇವುಗಳನ್ನು ಮಾಡುತ್ತಿರುವವರು ಯಾರು ಎಂಬ ಕುತೂಹಲವೂ ಮೂಡುತ್ತದೆ. ಬೆಂಗಳೂರಿನ ಬೀದಿಗಳಲ್ಲಿ ರೌಡಿಶೀಟರ್ಗಳು ತಮ್ಮತಮ್ಮಲ್ಲೇ ಹೊಡೆದಾಡಿ ಮರ್ಡರ್ ಆಗುವಂತೆ ಈ ಉಗ್ರರೂ ಕೊಲೆ ಆಗುತ್ತಿದ್ದಾರೆಯೇ? ಉಗ್ರರ ತಂಡಗಳ ನಡುವಿನ ದ್ವೇಷ ಇದಕ್ಕೆ ಕಾರಣವಾಗುತ್ತಿದೆಯೇ? ಅಥವಾ ಭಾರತದ ʼರಾʼದಂಥ ಬೇಹುಗಾರಿಕೆ ಸಂಸ್ಥೆಗಳಿಂದ ನಿಯೋಜಿತರಾದ ಏಜೆಂಟರು ಅಲ್ಲಿ ಇವರ ಹತ್ಯೆ ಮಾಡುತ್ತಿದ್ದಾರೆಯೇ? ಈ ಉಗ್ರರನ್ನು ಹಿಡಿದು ಭಾರತಕ್ಕೆ ತರಲು ಸಾಧ್ಯವಿಲ್ಲ ಎಂದು ಅರ್ಥ ಮಾಡಿಕೊಂಡಿರುವ ನಮ್ಮ ಗುಪ್ತಚರ ಸಂಸ್ಥೆಗಳು ಇಂಥ ವೈರಿ ನಿಗ್ರಹ ಕಾರ್ಯಕ್ಕೆ ಮುಂದಾಗಿವೆಯೇ ಎಂದೂ ಅನಿಸುತ್ತದೆ. ಏನೇ ಆದರೂ ಈ ಬೆಳವಣಿಗೆ ಭಾರತೀಯರ ಪಾಲಿಗೆ ಖುಷಿ ಕೊಡುವ ಸಂಗತಿ.
ಇನ್ನೊಂದು ಕಾರಣವನ್ನೂ ಹೇಳಲಾಗುತ್ತಿದೆ. ಪಾಕಿಸ್ತಾನ ಸರ್ಕಾರ ಐಎಸ್ಐ ಮೂಲಕ ಉಗ್ರರಿಗೆ ಹಲವು ರೀತಿಯಲ್ಲಿ ನೆರವು ನೀಡುತ್ತಿದ್ದರೂ ಇತ್ತೀಚೆಗೆ ಉಗ್ರರಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ಸರಬರಾಜು ಆಗುತ್ತಿಲ್ಲ. ಪಾಕಿಸ್ತಾನವೇ ಆರ್ಥಿಕವಾಗಿ ದಿವಾಳಿಯಾಗಿದ್ದು, ಜಾಗತಿಕ ಸಂಸ್ಥೆಗಳ ಎದುರು ಭಿಕ್ಷಾಪಾತ್ರೆ ಹಿಡಿದು ನಿಂತಿದೆ. ಅಮೆರಿಕ ಕೂಡ ಮೊದಲಿನ ಹಾಗೆ ಹಣದ ನೆರವು ನೀಡುತ್ತಿಲ್ಲ. ಇದರಿಂದಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಇದು ಪಾಕಿಸ್ತಾನದಲ್ಲಿ ಉಗ್ರರ ಮಧ್ಯೆಯೇ ಒಳಜಗಳಕ್ಕೆ ಕಾರಣವಾಗಿದೆ. ಹಾಗಾಗಿಯೇ ಉಗ್ರರು ಹತ್ಯೆಯಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದಲ್ಲಿ ಲಷ್ಕರೆ ಜಬ್ಬರ್ ಉಗ್ರ ಸಂಘಟನೆ ಸಂಸ್ಥಾಪಕ ಮಸೂದ್ ಅಜರ್ ಆಪ್ತ ದಾವೂದ್ ಮಲಿಕ್ನನ್ನು ಹತ್ಯೆ ಮಾಡಲಾಗಿತ್ತು. ದಾವೂದ್ ಮಲಿಕ್ ಹಾಗೂ ಆತನ ತಂಡವು ಅಕ್ಟೋಬರ್ 20ರಂದು ಅಪರಿಚಿತನೊಬ್ಬನ ಮೇಲೆ ದಾಳಿ ನಡೆಸಿತ್ತು. ದಾಳಿ ಬಳಿಕ ದಾವೂದ್ ಮಲಿಕ್ ಹಾಗೂ ತಂಡ ಅಲ್ಲಿಂದ ಕಾಲ್ಕಿತ್ತಿದ್ದರೂ, ಮರುದಿನವೇ ಮಲಿಕ್ನನ್ನು ಹತ್ಯೆ ಮಾಡಲಾಗಿದೆ.
ಇವೆಲ್ಲಾ ಏನೇ ಇದ್ದರೂ, ಭಯೋತ್ಪಾದಕರ ನಿವಾರಣೆ ಆಗುತ್ತಿರುವುದು ಸಂತೋಷದ ವಿಚಾರವೇ ಆಗಿದೆ. ಅಮಾಯಕರ ರಕ್ತ ಹರಿಸುವ, ಭಯೋತ್ಪಾದನೆ ಮಾಡುವ ದುಷ್ಟರು ಈ ರೀತಿಯಲ್ಲಿ ಹತ್ಯೆಯಾದರೆ ಮರುಗುವವರು ಯಾರೂ ಇರುವುದಿಲ್ಲ. ಭಯೋತ್ಪಾದನೆಯಲ್ಲಿ ತೊಡಗಿದವರು ಕೊನೆಗೂ ಕಾಣುವ ಅಂತ್ಯ ಇದೇ. ಇದನ್ನು ಮತಾಂಧತೆಯಿಂದ ಪ್ರೇರೇಪಿತವಾಗಿ ಆಯುಧಗಳನ್ನು ಕೈಗೆತ್ತಿಕೊಳ್ಳುವವರು ಆದಷ್ಟು ಬೇಗನೆ ಅರಿತರೆ ಒಳ್ಳೆಯದು. ಅವರು ಕಾಶ್ಮೀರಿ ಜಿಹಾದಿಗಳೇ ಇರಬಹುದು, ಖಲಿಸ್ತಾನಿ ಉಗ್ರರೇ ಇರಬಹುದು, ತಾಲಿಬಾನಿಗಳು- ಹಮಾಸ್ನವರು ಕೂಡ ಆಗಿರಬಹುದು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಂಪಿ ದೇಗುಲದ ಕಂಬ ವಿರೂಪಗೊಳಿಸಿದವರಿಗೆ ಶಿಕ್ಷೆಯಾಗಲಿ