ಜನವರಿ 22, ಸೋಮವಾರ ಮಧ್ಯಾಹ್ನ 12.05ರಿಂದ 12.55ರವರೆಗೆ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ (Ram Lalla) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮುಖ್ಯ ಯಜಮಾನರಾಗಿ ಈ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಅಮೃತಗಳಿಗೆಗಾಗಿ ಭಾರತೀಯರು 500 ವರ್ಷಗಳಿಂದ ಕಾಯುತ್ತಿದ್ದರು ಮತ್ತು ಅದೀಗ ಸಾಕಾರಗೊಳ್ಳುತ್ತಿದೆ. ರಾಮ ಕೇವಲ ದೇವರಲ್ಲ; ಭಾರತೀಯರ ಅಸ್ಮಿತೆ. ಹಾಗಾಗಿ, ಸೋಮವಾರ ನಡೆಯುವ ರಾಮ ಮಂದಿರ ಉದ್ಘಾಟನೆಯು ಭಾರತದ ಹೊಸ ಇತಿಹಾಸವಾಗಿ ದಾಖಲಾಗಲಿದೆ(Vistara Editorial).
ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಹಿಂದೆ ಅಖಂಡ ಹೋರಾಟವಿದೆ; ಹಲವರ ಪ್ರಾಣತ್ಯಾಗವಿದೆ. ಹಾಗಾಗಿ, ಶ್ರೀ ರಾಮ ಮಂದಿರದ ಬಗ್ಗೆ ಭಾರತದ ಹಿಂದೂಗಳಲ್ಲಿ ಒಂದು ಅಭೂತಪೂರ್ವ ಎನ್ನಿಸುವಂಥ ಹುಮ್ಮಸ್ಸಿನ ವಾತಾವರಣ ಕಂಡುಬರುತ್ತಿದೆ. ಅಯೋಧ್ಯೆ ಎಂದೆಂದಿಗೂ ಹಿಂದೂಗಳ ಪಾಲಿಗೆ ಯುಗಪುರುಷ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನಪನ್ನು ತರುವ ಪವಿತ್ರ ತಾಣ. ಆಸ್ತಿಕರು ಬದುಕಿನಲ್ಲೊಮ್ಮೆ ಭೇಟಿ ಕೊಡಬೇಕು ಎಂದುಕೊಳ್ಳುವ ಶ್ರದ್ಧಾಕೇಂದ್ರ. ಈ ರಾಮ ಮಂದಿರ ಕೇವಲ ಧಾರ್ಮಿಕ ಕೇಂದ್ರವಾಗಿ ಮಾತ್ರ ಗುರುತಿಸಿಕೊಳ್ಳದೇ, ಸಾಮಾಜಿಕ ಮತ್ತು ಆರ್ಥಿಕವಾಗಿ ಆ ಪ್ರದೇಶದ ಮೇಲೆ ಪರಿಣಾಮ ಬೀರಬಲ್ಲದು.
ಶ್ರೀರಾಮ ಆದರ್ಶ ಜೀವನಕ್ಕೆ ಉದಾಹರಣೆ; ರಾಷ್ಟ್ರೀಯ ಐಕ್ಯತೆಯ ಸಂಕೇತ. ರಾಮ ಮಂದಿರ ನಿರ್ಮಾಣದ ಹೋರಾಟವು ಹಿಂದೂ-ಮುಸ್ಲಿಮ್ ಸಮುದಾಯಗಳ ನಡುವಿನ ಸಂಘರ್ಷವಾಗಿ ಮಾರ್ಪಟ್ಟಿದ್ದು ನಿಜ. ಆದರೆ ಇದು ಎಂದೋ ಮುಗಿದ ಹೋದ ಕಲಹ ಎಂದುಕೊಳ್ಳೋಣ. ಮತ್ತೆ ಅದೇ ಸಂಘರ್ಷದ ದಾರಿಯಲ್ಲಿ ಕ್ರಮಿಸಬೇಕಿಲ್ಲ. ”ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವಿಲ್ಲ” ಎಂದು ಈ ಹಿಂದೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು ಅತ್ಯಂತ ಸೂಕ್ತವಾಗಿದೆ. ಈ ದೇಶದ ಮುಸ್ಲಿಮರೂ ನಾನಾ ರೀತಿಯಲ್ಲಿ ಮಂದಿರ ನಿರ್ಮಾಣಕ್ಕೆ ತನು ಮನ ಧನ ಸಹಾಯ ಮಾಡಿದ್ದಾರೆ. ಈ ವಿಷಯದಲ್ಲಿ ರಾಜಕೀಯಕ್ಕೆ ಇನ್ನು ಅವಕಾಶವನ್ನು ಕೊಡುವುದು ಬೇಡ. ಐಕ್ಯತೆಯ ಸಂಕೇತವಾಗಿರುವ ರಾಮಚಂದ್ರನ ದೇಗುಲವು ಭಾವೈಕ್ಯತೆಯ ಭಾವಮಂದಿರವೂ ಆಗಲಿ.
ಅಯೋಧ್ಯೆಯ ರಾಮ ಮಂದಿರದಲ್ಲಿ ಕರ್ನಾಟಕದ ಹಲವಾರು ಸಂಗತಿಗಳು ಗಮನಾರ್ಹವಾಗಿ ಮಿಳಿತಗೊಂಡಿವೆ. ಮೊದಲನೆಯದಾಗಿ, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ ಬಾಲ ರಾಮನ ವಿಗ್ರಹವೇ ಪ್ರಾಣ ಪ್ರತಿಷ್ಠಾಪನೆಗೆ ಆಯ್ಕೆಯಾಗಿದೆ. ಈ ವಿಗ್ರಹವನ್ನು ಕೆತ್ತಿರುವ ಕಲ್ಲು ಕೂಡ ಕರ್ನಾಟಕದ್ದೇ. ವಿಗ್ರಹಕ್ಕೆ ಚಾಮರಾಜನಗರ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬುಜ್ಜೆಗೌಡನಪುರ ಗ್ರಾಮದ ಕೃಷ್ಣ ಶಿಲೆ ಬಳಕೆ ಮಾಡಲಾಗಿದೆ. ಕೃಷ್ಣ ಶಿಲೆ ಅತ್ಯಂತ ಶಕ್ತಿಶಾಲಿಯಾಗಿದ್ದು ಆಸಿಡ್ ಹಾಕಿದರೂ ಏನೂ ಆಗುವುದಿಲ್ಲ. ಇದಕ್ಕೆ ಬೆಂಕಿ ತಗುಲಿದರೂ ಏನೂ ಆಗುವುದಿಲ್ಲ. ಮಳೆ, ಗಾಳಿ, ಬಿಸಿಲನ್ನೂ ತಡೆದುಕೊಳ್ಳುವ ಶಕ್ತಿಯ ವಿಶಿಷ್ಟ ಕಲ್ಲು ಇದು. ಇದು ಕೂಡ ನಾಡಿನ ಹೆಮ್ಮೆ.
ಇನ್ನು ಗಮನಾರ್ಹವಾಗಿ, ನಾಡಿನ ಮೂರು ಪ್ರಮುಖ ವ್ಯಕ್ತಿಗಳು ಮಂದಿರ ನಿರ್ಮಾಣದ ವಿವಿಧ ಮೇಲ್ವಿಚಾರಣೆ ವಹಿಸಿದ್ದಾರೆ. ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ನ ಪ್ರಮುಖ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರೆ. ಮಂದಿರ ನಿರ್ಮಾಣದ ಅಡಿಪಾಯದ ಕಟ್ಟುವಿಕೆಯ ಹಂತದಿಂದಲೂ ಅವರು ಜೊತೆಗಿದ್ದು ಮಾರ್ಗದರ್ಶನ ಮಾಡುತ್ತಿದ್ದಾರೆ. ಟ್ರಸ್ಟ್ನಲ್ಲಿರುವ ಸಂತರಲ್ಲಿ ದಕ್ಷಿಣ ಭಾರತದಿಂದ ಬಂದಿರುವ ಏಕೈಕ ಶ್ರೀಗಳು ಇವರು. 1985ರಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಧರ್ಮ ಸಂಸತ್ನಲ್ಲಿಯೇ ʼಮಂದಿರವಲ್ಲೇ ಕಟ್ಟುವೆವುʼ ಎಂಬ ನಿರ್ಣಯ ಅಂಗೀಕೃತವಾಗಿತ್ತು.
ಬೆಂಗಳೂರಿನ ಬಳಿಯ ದೇವನಹಳ್ಳಿಯ ಸಮೀಪದ ಸಾದಹಳ್ಳಿಯ ಅಮೃತಶಿಲೆಯನ್ನು ಭಾರಿ ಪ್ರಮಾಣದಲ್ಲಿ ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗಿದೆ. ಸುಮಾರು 700- 800 ಟನ್ಗಳಷ್ಟು ಸಾದಹಳ್ಳಿ ಅಮೃತಶಿಲೆಯನ್ನು ಅಯೋಧ್ಯೆಗೆ ಸಾಗಿಸಲಾಗಿದೆ. ಹೀಗಾಗಿ ಕರ್ನಾಟಕದ ಭಕ್ತಾದಿಗಳು ಅಯೋಧ್ಯೆಯ ಮಂದಿರದಲ್ಲಿ ಕಾಲಿಡುವಾಗ ರಾಮಭಕ್ತಿಯೊಂದಿಗೆ ʼನಾ ಮೆಟ್ಟುವ ನೆಲ ಅದೆ ಕರ್ನಾಟಕʼ ಎಂಬ ಭಾವವನ್ನೂ ಸೇರಿಸಿಕೊಳ್ಳಬಹುದು. ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾದ ಗೋಪಾಲ ನಾಗರಕಟ್ಟೆಯವರು ಕನ್ನಡಿಗರಾಗಿದ್ದು, ರಾಮಮಂದಿರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹಂಪಿಯ ಅಂಜನಾದ್ರಿಯ ಬೆಟ್ಟದ ಕಲ್ಲುಗಳನ್ನೂ ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಇದು ಪೌರಾಣಿಕ, ಐತಿಹಾಸಿಕ ಮಹತ್ವವುಳ್ಳ ಸಂಗತಿಯೇ ಸರಿ. ಹೀಗಾಗಿ ಇದೊಂದು ದೈವಿಕ ಬಾಂಧವ್ಯವೂ ಆಗಿದೆ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಮ್ಯಾನ್ಮಾರ್ ಗಡಿ ಬಂದ್ ದೇಶದ ಭದ್ರತೆಯ ದೃಷ್ಟಿಯಿಂದ ಉತ್ತಮ ನಡೆ