Site icon Vistara News

ವಿಸ್ತಾರ ಸಂಪಾದಕೀಯ: ಸಂಸದನ ಮನೆಯಲ್ಲಿ ಕೋಟಿ ಕೋಟಿ ಕಂತೆ; ಭ್ರಷ್ಟಾಚಾರಕ್ಕೆ ಕೊನೆ ಎಲ್ಲಿ?

Vistara Editorial, Can corruption end in this country?

ಡಿಶಾ ಮತ್ತು ಜಾರ್ಖಂಡ್‌ನಲ್ಲಿ (Odisha and Jharkhand) ಕಾರ್ಯಾಚರಣೆ ನಡೆಸುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಕಂಪನಿಯ (Boudh Distilleries Private Limited) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ(IT Raids). ಈ ವೇಳೆ 350 ಕೋಟಿ ರೂ.ಗಿಂತ ಅಧಿಕ ಮೌಲ್ಯದ ನಗದು ಜಪ್ತಿ ಮಾಡಲಾಗಿದೆ! ಈ ನಗದು ಎಣಿಕೆಗೆ ಹೆಚ್ಚುವರಿ ಯಂತ್ರಗಳು, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಐಟಿ ದಾಳಿಗೊಳಗಾಗಿರುವ ಕಂಪನಿಯು ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ್ದಾಗಿದೆ. ಇದರೊಂದಿಗೆ ಈ ತೆರಿಗೆ ವಂಚನೆಯ ಪ್ರಕರಣವು ಭ್ರಷ್ಟಾಚಾರದ ಬೇರೆ ಬೇರೆ ನಂಟನ್ನು ಹೊಂದಿರುವ ಸಾಧ್ಯತೆಗಳಿವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಭ್ರಷ್ಟಾಚಾರ ಮತ್ತು ತೆರಿಗೆ ವಂಚನೆಯನ್ನು ಸದೆ ಬಡಿಯಲು ವಜ್ರಾಯುಧವನ್ನೇ ಪ್ರಯೋಗಿಸುತ್ತಿದೆ. ಅದರ ಪರಿಣಾಮವೇ 350 ಕೋಟಿ ರೂ.ನಷ್ಟು ಬೃಹತ್ ಪ್ರಕರಣಗಳು ಬಯಲಿಗೆ ಬರುತ್ತಿವೆ. ಈ ವಿಷಯದಲ್ಲಿ ಸಂಬಂಧಿಸಿದ ಸರ್ಕಾರಿ ಸಂಸ್ಥೆಗಳ ಕಾರ್ಯವನ್ನು ಮೆಚ್ಚಲೇಬೇಕು(Vistara Editorial).

ಭ್ರಷ್ಟಾಚಾರ, ತೆರಿಗೆ ವಂಚನೆ, ಲಂಚಗುಳಿತನವು ನಮ್ಮ ದೇಶಕ್ಕೆ ಅಂಟಿದ ಶಾಪಗಳಾಗಿವೆ. ದೇಶದ ಶ್ರೇಯೋಭಿವೃದ್ದಿಗೆ ತೊಡರುಗಾಲಾಗಿವೆ. ಪರಿಣಾಮ ಭಾರತವು ಈಗಲೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿಯೇ ಉಳಿದಿದೆ. ತೆರಿಗೆ ಇಲಾಖೆಯ ದಾಳಿಯಲ್ಲಿ ಬಯಲಾಗಿರುವ ಜಾರ್ಖಂಡ್‌ನ ಈ ಪ್ರಕರಣವನ್ನು ಒಂದು ಪ್ರತ್ಯೇಕ ಪ್ರಕರಣವಾಗಿ ನೋಡುವಂತಿಲ್ಲ. ಇಂಥ ಅನೇಕ ತೆರಿಗೆ ವಂಚನೆಗಳು ನಡೆಯುತ್ತಿವೆ; ಬ್ರಹ್ಮಾಂಡ ಭ್ರಷ್ಟಾಚಾರವಿದೆ. ಇದಕ್ಕೆಲ್ಲ ಆಡಳಿತದಲ್ಲಿರುವವರು, ರಾಜಕಾರಣಿಗಳ ಬೆಂಬಲ ಇದ್ದೇ ಇರುತ್ತದೆ. ಅವರ ಆಶ್ರಯದಲ್ಲೇ ಇದೆಲ್ಲವೂ ಸಾಧ್ಯವಾಗುತ್ತಿದೆ. ಹಾಗಾಗಿ, ಈ ಪ್ರಕರಣವನ್ನು ಕೇವಲ ತೆರಿಗೆ ವಂಚನೆ ಎಂದು ನೋಡದೇ, ಇನ್ನಷ್ಟು ಆಳಕ್ಕಿಳಿದು ತನಿಖೆ ನಡೆಸಬೇಕು. ಯಾಕೆಂದರೆ, ಮೇಲ್ನೋಟಕ್ಕೆ ಇದು ಕೇವಲ ಕಂಪನಿಯು ತೆರಿಗೆಯನ್ನು ವಂಚಿಸಲು ಮಾಡಿರುವ ದಗಾಕೋರತನ ಎಂದೆನಿಸುವುದಿಲ್ಲ. ಕಂಪನಿ ಕೂಡ ಹಾಲಿ ಸಂಸದರಿಗೆ ಸೇರಿದ್ದರಿಂದ ಅನುಮಾನಗಳು ಹೆಚ್ಚಲು ಕಾರಣವಾಗಿದೆ. ಹಾಗಾಗಿ, ಈ ಪ್ರಕರಣವನ್ನು ಎಲ್ಲ ಆಯಾಮದಿಂದಲೂ ಪರಿಶೀಲಿಸಬೇಕು.

ಭ್ರಷ್ಟಾಚಾರ ಸಮಸ್ಯೆಯನ್ನು ಹೋಗಲಾಡಿಸಬೇಕಾದ ಶಾಸಕಾಂಗ ಮತ್ತು ಕಾರ್ಯಾಂಗಗಳೆರಡರಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಈ ವಿಷಯದಲ್ಲಿ ಅವುಗಳಿಂದ ಹೆಚ್ಚಿನದ್ದನ್ನು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅದೊಂದು ರೀತಿ, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’. ಇಷ್ಟಾಗಿಯೂ ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನಗಳು ನಡದೇ ಇಲ್ಲ ಎಂದು ಹೇಳುವಂತಿಲ್ಲ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಇದಕ್ಕಾಗಿ ಸಂವಿಧಾನ ಬದ್ಧ ತನಿಖಾ ಸಂಸ್ಥೆಗಳನ್ನು ರಚಿಸಲಾಗಿದೆ. ಆದರೂ, ನಾವು ಈ ಯಾಕೆ ಸಮಸ್ಯೆಯನ್ನು ಬಗೆಹರಿಸಲಾಗುತ್ತಿಲ್ಲ, ಯಾಕೆ ಭ್ರಷ್ಟಾಚಾರ ಕೊನೆಗಾಣುತ್ತಿಲ್ಲ, ಈ ಕುರಿತು ವಿಮರ್ಶೆ ಮಾಡಿಕೊಳ್ಳುವ ಕಾಲ ಈಗ ಎದುರಾಗಿದೆ.

ಭ್ರಷ್ಟಾಚಾರದ ಅಪಾಯ ಹಾಗೂ ಅದನ್ನು ನಿರ್ಮೂಲನೆ ಮಾಡುವ ಸಂಬಂಧ ನ್ಯಾಯಾಲಯಗಳ ಪಾತ್ರವು ಪ್ರಮುಖವಾಗಿದೆ. ಸುಪ್ರೀಂ ಕೋರ್ಟ್‌, ಹಲವು ಹೈಕೋರ್ಟ್‌ಗಳು ಭ್ರಷ್ಟಾಚಾರ ಸಮಸ್ಯೆಗೆ ಸಂಬಂಧಿಸಿದಂತೆ ಕಠಿಣ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಬಂದಿವೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ಸಲಹೆಗಳನ್ನು ನೀಡಿವೆ. ಸಂವಿಧಾನ ಬದ್ಧ ಸೃಷ್ಟಿಯಾಗಿರುವ ಲೋಕಾಯಕ್ತ, ಸಿವಿಸಿ, ಎಸಿಬಿ ಸೇರಿ ಹಲವು ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿವೆ. ಆದರೂ, ದೇಶದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯ. ಜತೆಗೆ, ಭ್ರಷ್ಟಾಚಾರವು ಸಾಂಸ್ಥಿಕ ರೂಪವನ್ನು ಪಡೆದುಕೊಂಡಿರುವುದೂ ಈ ವೈಫಲ್ಯಕ್ಕೆ ಕಾರಣವಾಗಿರಬಹುದು. ನ್ಯಾಯಾಲಯ, ಲೋಕಾಯುಕ್ತ, ಲೋಕಪಾಲ್‌, ಇ.ಡಿ, ಐ ಟಿ ಇಲಾಖೆಯಂಥ ಸಂಸ್ಥೆಗಳು ಬಲಗೊಂಡರೆ ಮತ್ತು ಇವು ತಮ್ಮ ಸಂಪೂರ್ಣ ಶಕ್ತಿ ಬಳಸಿದರೆ ಮಾತ್ರ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಸಾಧ್ಯ. ಈಗಿರುವ ವ್ಯವಸ್ಥೆಯನ್ನು ಬಲಪಡಿಸಿ, ಸಂಸ್ಥೆಗಳಿಗೆ ಪೂರ್ಣ ಅಧಿಕಾರ ನೀಡಿದರೆ ಭ್ರಷ್ಟಾಚಾರ, ತೆರಿಗೆ ವಂಚನೆಯತ್ತ ಆರ್ಥಿಕ ಅಪರಾಧಗಳನ್ನು ಬೇರು ಸಹಿತ ಕಿತ್ತು ಹಾಕಲು ಸಾಧ್ಯವಾಗಲಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

Exit mobile version