Site icon Vistara News

ವಿಸ್ತಾರ ಸಂಪಾದಕೀಯ: ಹಿಂದು ಧಾರ್ಮಿಕ ಗ್ರಂಥ ಪ್ರಕಟಿಸುವ ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡಿದರೆ ಆಕ್ಷೇಪವೇಕೆ?

Gita Press office

ಹಿಂದು ಧಾರ್ಮಿಕ ಗ್ರಂಥಗಳ ವಿಶ್ವದ ಬೃಹತ್‌ ಪ್ರಕಾಶನ ಸಂಸ್ಥೆ ಗೀತಾ ಪ್ರೆಸ್‌ಗೆ (Gita press) ಕೇಂದ್ರ ಸರ್ಕಾರವು 2021ನೇ ಸಾಲಿನ ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿ (Gandhi Peace prize) ಘೋಷಿಸಿದೆ. ಇದೇ ವರ್ಷ ಗೀತಾ ಪ್ರೆಸ್‌ ಶತಮಾನೋತ್ಸವ ಆಚರಿಸುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿರುವುದು, ಸಂಸ್ಥೆಯ ಹೆಗ್ಗಳಿಕೆಗೆ ಮತ್ತೊಂದು ಗರಿ ಮೂಡಿದಂತಾಗಿದೆ. ಈ ಪ್ರತಿಷ್ಠಿತ ಹಾಗೂ ಐತಿಹಾಸಿಕ ಗೀತಾ ಪ್ರೆಸ್ ಉತ್ತರ ಪ್ರದೇಶದ ಗೋರಖ್‌ಪುರದಿಂದ ಕಾರ್ಯಾಚರಣೆ ನಡೆಸುತ್ತದೆ. ಆದರೆ, ಈ ಹೊತ್ತಿನಲ್ಲೂ ಕಾಂಗ್ರೆಸ್ ತಗಾದೆ ತೆಗೆದಿದೆ. ಕೇಂದ್ರ ಸರ್ಕಾರವು ಕೈಗೊಳ್ಳುವ ಪ್ರತಿಯೊಂದು ನಿರ್ಧಾರವನ್ನು ಟೀಕಿಸಲೇಬೇಕು ಎಂದು ಕಾಂಗ್ರೆಸ್ ನಿರ್ಧರಿಸಿರುವಂತೆ ಕಾಣುತ್ತಿದೆ. ಅರ್ಹ ಸಂಸ್ಥೆಗೆ ಪ್ರಶಸ್ತಿ ನೀಡಿದ್ದರೂ ಕಾಂಗ್ರೆಸ್ ಆಕ್ಷೇಪ ಎತ್ತಿರುವುದು ಸರಿಯಾದ ನಡೆಯಲ್ಲ.

ಗೀತಾ ಪ್ರೆಸ್‌ನ ಇತಿಹಾಸ ಮತ್ತು ಅದರ ಕಾರ್ಯಗಳನ್ನು ಸ್ಥೂಲವಾಗಿ ಗಮನಿಸಿದರೆ ಕಾಂಗ್ರೆಸ್ ವಿರೋಧವು ಎಷ್ಟು ಬಾಲಿಶ ಎಂಬುದು ಅರಿವಾಗುತ್ತದೆ. ಶತಮಾನ ಕಂಡಿರುವ ಈ ಗೀತಾ ಪ್ರೆಸ್ ಈವರೆಗೆ, ಸಂಸ್ಕೃತ, ಹಿಂದಿ, ಮರಾಠಿ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಗುಜರಾತಿ, ಬೆಂಗಾಲಿ, ಒಡಿಯಾ ಸೇರಿ ಸುಮಾರು 15 ಭಾರತೀಯ ಭಾಷೆಗಳಲ್ಲಿ 1850 ಪುಸ್ತಕಗಳನ್ನು ಪ್ರಕಟಿಸಿದೆ. ಈವರೆಗೆ ಸುಮಾರು 93 ಕೋಟಿಗೂ ಅಧಿಕ ಪ್ರತಿಗಳನ್ನು ಮಾರಾಟ ಮಾಡಿದೆ. ಬಹುಶಃ ಇಷ್ಟೊಂದು ಬೃಹತ್ ಮಟ್ಟದಲ್ಲಿ ಪ್ರಕಾಶನ ಕಾರ್ಯವನ್ನು ಕೈಗೊಳ್ಳುತ್ತಿರುವ ಬೇರೆ ಯಾವುದೇ ಪ್ರಕಾಶನ ಸಂಸ್ಥೆ ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯತೆ, ಭಾರತೀಯ ಸಂಸ್ಕೃತಿ, ಸನಾತನ ಧರ್ಮಗಳಿಗೆ ಸಂಬಂಧಿಸಿದ ಪಠ್ಯಗಳನ್ನು ಪ್ರಕಟಿಸಿ, ಅದನ್ನು ಹಂಚುವ ಕೆಲಸವನ್ನು ಮಾಡುತ್ತಿದೆ. ಆದರೆ ಯಾವುದೇ ವಿವಾದಾತ್ಮಕ ಕೃತಿಗಳನ್ನು ಪ್ರಕಟಿಸಿಲ್ಲ. ಇದು ಪ್ರಕಟಿಸಿರುವ ಬಹುತೇಕ ಪುಸ್ತಕಗಳು ಪ್ರೀತಿ, ಸೌಹಾರ್ದ, ಶಾಂತಿ ಮತ್ತು ಸಹಬಾಳ್ವೆಯನ್ನೇ ಪ್ರತಿಪಾದಿಸಿವೆ ಎಂಬುದನ್ನು ಗಮನಿಸಬೇಕು. ಭಗವದ್ಗೀತೆ, ಮಹಾಭಾರತ, ತುಳಸಿದಾಸರ ಶ್ರೀರಾಮಚರಿತ ಮಾನಸ, ವಾಲ್ಮೀಕಿ ರಾಮಾಯಣ, ಪುರಾಣಗಳು, ಉಪನಿಷತ್ತುಗಳು ಸೇರಿ ಈವರೆಗೆ ಕೋಟ್ಯಂತರ ಹಿಂದೂ ಗ್ರಂಥಗಳ ಪ್ರತಿಗಳನ್ನು ಪ್ರಕಟಿಸಿದೆ. ಕರ್ನಾಟಕ, ಚೆನ್ನೈ, ದೆಹಲಿ ಸೇರಿ ದೇಶದ ಪ್ರಮುಖ ರಾಜ್ಯಗಳಲ್ಲಿ ಗೀತಾ ಪ್ರೆಸ್‌ ಪುಸ್ತಕ ಮಳಿಗೆಗಳಿವೆ. ಕನ್ನಡದಲ್ಲೂ ಗೀತಾ ಪ್ರೆಸ್‌ ಪುಸ್ತಕ ಮಳಿಗೆಗಳಿವೆ.

1923ರಲ್ಲೇ ಸ್ಥಾಪಿತವಾಗಿರುವ ಗೀತಾ ಪ್ರೆಸ್‌ ಈವರೆಗೆ 3.5 ಕೋಟಿ ತುಳಿಸಿದಾಸ ರಚಿತ ರಾಮಚರಿತಮಾನಸ, 16 ಕೋಟಿ ಶ್ರೀಮದ್ ಭಗವದ್ ಗೀತಾ ಕೃತಿಯ ಪ್ರತಿಗಳನ್ನು ಮಾರಾಟ ಮಾಡಿದೆ. 1927ರಿಂದ ‘ಕಲ್ಯಾಣ್’ ಎಂಬ ಹಿಂದಿ ಭಾಷೆಯ ಮಾಸಿಕವನ್ನು ಕೂಡ ಪ್ರಕಟ ಮಾಡುತ್ತಿದೆ. ಸನಾತನ ಧರ್ಮದ ಒಳ್ಳೆಯ ಸಂದೇಶಗಳನ್ನು, ಒಳ್ಳೆಯ ವಿಚಾರಗಳನ್ನು ಈ ಮೂಲಕ ಪ್ರಸಾರ ಮಾಡುವ ಕೈಂಕರ್ಯವನ್ನು ಮಾಡುತ್ತಿದೆ. ಈ ಪತ್ರಿಕೆಗೆ ಭಾರತದ ಪ್ರಖ್ಯಾತ ಸನ್ಯಾಸಿಗಳು, ಶ್ರೀಗಳು, ವಿದ್ವಾಂಸರು ನಿರಂತರವಾಗಿ ಬರೆಯುತ್ತಾರೆ. ಅದೇ ರೀತಿ, ‘ಕಲ್ಯಾಣ್-ಕಲ್ಪತರು’ ಎಂಬ ಇಂಗ್ಲಿಷ್ ಮ್ಯಾಗಜಿನ್ ಕೂಡ ಪ್ರಕಟ ಮಾಡುತ್ತದೆ. ಗೀತಾ ಪ್ರೆಸ್ ತನ್ನ ಪ್ರಕಾಶನ ಕಾರ್ಯದಿಂದ ವಿಶಿಷ್ಟ ಸೇವೆಯನ್ನು ಮಾಡುತ್ತಿದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಗೀತಾ ಪ್ರೆಸ್, ಗಾಂಧಿ ಶಾಂತಿ ಪ್ರಶಸ್ತಿಗೆ ಅರ್ಹವಾಗಿದೆ. ಆದರೂ, ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಕೊಂಕು ತೆಗೆಯುತ್ತಿರುವುದನ್ನು ಒಪ್ಪಲಾಗದು.

ವಿಶ್ವದ ಬೃಹತ್ ಪ್ರಕಾಶನ ಸಂಸ್ಥೆಯಾದರೂ ಗೀತಾ ಪ್ರೆಸ್ ತನ್ನದೇ ಕೆಲವು ತತ್ವಗಳನ್ನು ಪಾಲಿಸಿಕೊಂಡು ಬಂದಿದೆ. ”ಗಾಂಧಿ ಶಾಂತಿ ಪ್ರಶಸ್ತಿ ಪತ್ರ ಸ್ವೀಕರಿಸಲಾಗುವುದು. ಪ್ರಶಸ್ತಿಯ ಜತೆಗೆ ಬರುವ ಒಂದು ಕೋಟಿ ರೂಪಾಯಿಯನ್ನು ಸ್ವೀಕರಿಸುವುದಿಲ್ಲ. ನಗದು ಸ್ವೀಕರಿಸುವುದು ನಮ್ಮ ತತ್ವಗಳಿಗೆ ವಿರುದ್ಧವಾಗಿರುವುದರಿಂದ ನಾವು ಯಾವುದೇ ಪ್ರಶಸ್ತಿ-ಹಣವನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದೆ. ಇದು ಪ್ರಕಾಶನ ಸಂಸ್ಥೆಯು ಪಾಲಿಸಿಕೊಂಡು ಬರುತ್ತಿರುವ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಭೀಕರ ಹಿಂಸಾಚಾರ; ಮಣಿಪುರದಲ್ಲಿ ಶಾಂತಿ ನೆಲೆಸಲಿ

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಟೀಕಿಸಲೇ ಬೇಕು ಎಂಬ ಕಾಂಗ್ರೆಸ್‌ ಧೋರಣೆ ಸರಿಯಲ್ಲ. “ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪ್ರಶಸ್ತಿ ಕೊಡುವುದೂ ಒಂದೇ, ನಾಥುರಾಮ್‌ ಗೋಡ್ಸೆ ಹಾಗೂ ವೀರ ಸಾವರ್ಕರ್‌ ಅವರಿಗೆ ಕೊಡುವುದೂ ಒಂದೇ” ಎಂದು ಕಾಂಗ್ರೆಸ್‌ ಟೀಕಿಸಿದೆ. ಈ ಪ್ರಕಾಶನ ಸಂಸ್ಥೆ ಹಿಂದೂ ಧಾರ್ಮಿಕ ಗ್ರಂಥಗಳನ್ನು ಪ್ರಕಾಶಿಸುತ್ತದೆ ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿಪಕ್ಷವಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದದ್ದು ಕಾಂಗ್ರೆಸ್‌ನ ಹೊಣೆಗಾರಿಕೆಯಾಗಿದೆ. ಸರ್ಕಾರ ಕೆಟ್ಟ ತೀರ್ಮಾನಗಳನ್ನು ಕೈಗೊಂಡಾಗ ಅಥವಾ ನಡೆದುಕೊಂಡಾಗ ಟೀಕಿಸಿದರೆ ಅದಕ್ಕೊಂದು ಮೌಲ್ಯ ಪ್ರಾಪ್ತಿಯಾಗುತ್ತದೆ. ವಿರೋಧಿಸಲೇಬೇಕು ಎಂಬ ಒಂದಂಶದ ಅಜೆಂಡಾವನ್ನು ಜಾರಿ ಮಾಡುವುದಾದರೆ ಜನರ ಕಣ್ಣಲ್ಲಿ ಮತ್ತಷ್ಟು ಕುಗ್ಗುವುದನ್ನು ತಪ್ಪಿಸಲಾಗುವುದಿಲ್ಲ. ಈ ಅಂಶವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version