Site icon Vistara News

ವಿಸ್ತಾರ ಸಂಪಾದಕೀಯ: ಚಂದ್ರಯಾನ-3 ಯಶಸ್ವಿಯಾಗಲಿ

Chandrayaan 3 Mission

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ಕ್ಕೆ (Chandryaan 3) ಕ್ಷಣಗಣನೆ ಆರಂಭವಾಗಿದೆ. ಆಂಧ್ರದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಇದು ಶುಕ್ರವಾರ ಮಧ್ಯಾಹ್ನ ಉಡಾವಣೆಯಾಗಲಿದೆ. ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಿ ಆನಂದಿಸಲು ಭಾರತೀಯರು ಕಾತರರಾಗಿದ್ದಾರೆ. ಚಂದ್ರಯಾನ-2 ಸಾಕಷ್ಟು ಯಶಸ್ವಿಯಾಗಿದ್ದರೂ ಕೊನೆಯ ಹಂತದಲ್ಲಿ ತುದಿ ಮುಟ್ಟಿರಲಿಲ್ಲ. ಚಂದ್ರಯಾನ-3 ಈ ಕಹಿ ನೆನಪನ್ನು ಅಳಿಸಿಹಾಕಿ ಹೊಸ ಇತಿಹಾಸ ಬರೆಯಲಿ(Vistara Editorial).

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇಸ್ರೋ ಮೊದಲ ಚಂದ್ರ ಕಾರ್ಯಾಚರಣೆ ಚಂದ್ರಯಾನ- 1ನ್ನು 2008ರ ಅಕ್ಟೋಬರ್‌ನಲ್ಲಿ ಹಾರಿಬಿಟ್ಟಿತ್ತು. ನವೆಂಬರ್ 8ರಂದು ಚಂದ್ರಯಾನ-1 ಗಗನನೌಕೆ ಚಂದ್ರನ ಕಕ್ಷೆಯನ್ನು ತಲುಪಿತು. ಆಗ ಇದರ ವೆಚ್ಚ 386 ಕೋಟಿ ರೂ. ಇದು 312 ದಿನ ಕಾಲ ಕಾರ್ಯನಿರ್ವಹಿಸಿತು. 3,400ಕ್ಕೂ ಹೆಚ್ಚು ಬಾರಿ ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿತು. 2009ರ ಆಗಸ್ಟ್ 28ರಂದು ಚಂದ್ರಯಾನ-1 ಮಾಹಿತಿ ಡೇಟಾ ಕಳುಹಿಸುವುದನ್ನು ನಿಲ್ಲಿಸಿತು. ಈ ಮೂನ್‌ ಮಿಷನ್‌ ಸೃಷ್ಟಿಸಿದ ಇತಿಹಾಸ ಎಂದರೆ, ಚಂದ್ರನಲ್ಲಿ ನೀರಿನ ಅಂಶಗಳಿವೆ ಎಂಬುದನ್ನು ಮೊತ್ತ ಮೊದಲ ಬಾರಿಗೆ ಪತ್ತೆ ಮಾಡಿದ್ದು. ಚಂದ್ರಯಾನ-1 ತನ್ನೊಂದಿಗೆ ಒಯ್ದ, ನಾಸಾ ಒದಗಿಸಿದ ಮೂನ್ ಮಿನರಲಾಜಿಕಲ್ ಮ್ಯಾಪರ್ ಎಂಬ ವೈಜ್ಞಾನಿಕ ಉಪಕರಣದ ಮೂಲಕ ಪಡೆದ ಡೇಟಾಗಳಿಂದ ಚಂದ್ರನಲ್ಲಿನ ನೀರಿನ ಅಂಶ ಗೊತ್ತು ಹಚ್ಚಲು ಸಾಧ್ಯವಾಯಿತು.

ಈ ಬಾರಿಯ ವಿಶೇಷ ಎಂದರೆ ಚಂದ್ರಯಾನ- 3 ನೌಕೆಯಲ್ಲಿರುವ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲೆ ಇಳಿಯಲಿರುವುದು. ಚಂದ್ರಯಾನ-2ರ ಗುರಿಯೂ ಇದೇ ಆಗಿತ್ತು. 2019ರ ಜುಲೈ 22ರಂದು ಚಂದ್ರಯಾನ-2 ನಭಕ್ಕೆ ಹಾರಿತು. ಆದರೆ ಚಂದ್ರನಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವ ಪ್ರಯತ್ನ ವಿಫಲವಾಗಿ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಅಪ್ಪಳಿಸಿತು. ಚಂದ್ರಯಾನ-2ರ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ನಿರಾಸೆಯಾದದ್ದು ನಿಜ. ಆದರೆ ಚಂದ್ರಯಾನ-2 ಪೂರ್ತಿ ವಿಫಲವೇನೂ ಆಗಿರಲಿಲ್ಲ. ಚಂದ್ರನ ಕಕ್ಷೆಯಲ್ಲಿದ್ದ ಆರ್ಬಿಟರ್‌ ತನಗೆ ನೀಡಲಾದ ಕೆಲಸಗಳನ್ನು ಮಾಡಿದೆ. ಆರ್ಬಿಟರ್‌ನಲ್ಲಿದ್ದ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ‘ಕ್ಲಾಸ್’ ಮೊದಲ ಬಾರಿಗೆ ಚಂದ್ರನ ಮೇಲೆ ಹೇರಳವಾಗಿರುವ ಸೋಡಿಯಂ ಅನ್ನು ಗುರುತಿಸಿದೆ. ಇದೂ ಮಹತ್ವದ್ದೇ.

ಸದ್ಯ ಚಂದ್ರಯಾನ-3 ಅನ್ನು ವಿನ್ಯಾಸ ಮಾಡುವಾಗ, ಚಂದ್ರಯಾನ-2ರಲ್ಲಿ ವೈಫಲ್ಯಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ತಿದ್ದಿಕೊಳ್ಳಲಾಗಿದೆ. ಇದರಲ್ಲಿ ಆರ್ಬಿಟರ್‌ ಇಲ್ಲ. ಗಗನನೌಕೆಯಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಇದ್ದು 15 ದಿನಗಳ ಕಾಲ ಚಂದ್ರನನ್ನು ಸುತ್ತುವರಿದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ರೋವರ್ ಚಂದ್ರನ ಮೇಲ್ಮೈಯಲ್ಲಿ ಓಡಾಡಿ ಡೇಟಾವನ್ನು ಸಂಗ್ರಹಿಸಲಿದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಘನಪದಾರ್ಥ, ಭೂಕಂಪನ, ಹೊರ ಆವರಣದ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದಲ್ಲಿರುವ ಮೂಲಧಾತು ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಯಲಿದೆ. ಇವೆಲ್ಲವೂ ಭವಿಷ್ಯದಲ್ಲಿ ಇನ್ನಷ್ಟು ಬಾಹ್ಯಾಕಾಶ ಪ್ರಯೋಗಗಳನ್ನು ನಡೆಸಲು ವಿಜ್ಞಾನಿಗಳಿಗೆ ನೆರವಾಗಲಿದ್ದು, ಇಸ್ರೋಗೆ ಪೂರಕವಾಗಲಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಟೊಮೆಟೊ ಬೆಲೆ ಗಗನಕ್ಕೆ; ಇದು ದಾಸ್ತಾನು ಅವ್ಯವಸ್ಥೆಯ ಫಲ

ಚಂದ್ರಯಾನ-3ಕ್ಕೆ ತಗಲುವ ಅಂದಾಜು ವೆಚ್ಚ ಸುಮಾರು 615 ಕೋಟಿ ರೂ. ಇದು ವ್ಯರ್ಥವಲ್ಲ. ಇಂದು ಬಾಹ್ಯಾಕಾಶ ಎಂಬುದು ವಿಜ್ಞಾನ ಪ್ರಯೋಗಗಳ ತಾಣ ಮಾತ್ರವೇ ಅಲ್ಲ; ಅದು ಮುಂದಿನ ಯುಗದ ತಂತ್ರಜ್ಞಾನದ ಹೊಸ್ತಿಲು ಕೂಡ ಹೌದು. ಇಲ್ಲಿನ ದೊಡ್ಡ ದೇಶಗಳು ಈ ನೆಲದ ಮೇಲೆ ಹೇಗೋ ಹಾಗೆಯೇ ಬಾಹ್ಯಾಕಾಶದ ಮೇಲೂ ಸಾಕಷ್ಟು ಸ್ವಾಮ್ಯ ಸಾಧಿಸಲು ಪ್ರಯತ್ನ ನಡೆಸಿವೆ. ಇಂದು ಅನ್ಯದೇಶಗಳ ಮೇಲಿನ ಗೂಢಚಾರಿಕೆಯಿಂದ ಹಿಡಿದು ಹವಾಮಾನ ಮಾಹಿತಿಯವರೆಗೆ, ಶಿಕ್ಷಣದಿಂದ ಆರೋಗ್ಯ ಸೇವೆಯವರೆಗೆ ಎಲ್ಲವೂ ಉಪಗ್ರಹ ನಿಯಂತ್ರಿತವಾಗಿವೆ. ಚಂದ್ರನ ಮೇಲಿನ ಮನುಷ್ಯನ ದಿಗ್ವಿಜಯ ಮನುಕುಲದ ದೈತ್ಯ ಹೆಜ್ಜೆಗಳ ಮುಂದುವರಿದ ಭಾಗವಾಗಿದೆ. 1959ರಲ್ಲಿ ರಷ್ಯಾ ಮೊದಲ ಬಾರಿಗೆ ಚಂದ್ರನಲ್ಲಿ ನೌಕೆಯನ್ನು ಇಳಿಸಿತು; ಅಮೆರಿಕ 1969ರಲ್ಲಿ ಮೊದಲ ಸಲ ಮನುಷ್ಯರನ್ನು ಚಂದ್ರನಲ್ಲಿಗೆ ಕಳಿಸಿತು. ಹೀಗೆ ಭಾರತವೂ ಸೇರಿ 11 ದೇಶಗಳು ಇಲ್ಲಿಗೆ ಉಪಗ್ರಹಗಳನ್ನು ಕಳಿಸಿವೆ. ಆದರೂ ಚಂದ್ರನಲ್ಲಿ ಸಂಶೋಧನೆ ನಡೆಸುವ ಅಂಶಗಳು ಇನ್ನೂ ಇವೆ. ಈ ನಿಟ್ಟಿನಲ್ಲಿ ಚಂದ್ರಯಾನ- 3 ಭಾರತಕ್ಕೆ ಮಹತ್ವದ ಹೆಜ್ಜೆಯಾಗಿದೆ. ಭಾರತದ ಈ ಹೆಜ್ಜೆ ಐತಿಹಾಸಿಕ ದಿಗ್ವಿಜಯ ಸಾಧಿಸಲಿ ಎಂದು ಭಾರತದ ಜನತೆ ಬಯಸುತ್ತದೆ.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version