Site icon Vistara News

ವಿಸ್ತಾರ ಸಂಪಾದಕೀಯ: ಲಿವ್‌ ಇನ್‌ ಸಂಬಂಧಕ್ಕೆ ಉತ್ತರದಾಯಿತ್ವ ಕಲ್ಪಿಸುವ ಸಂಹಿತೆ

Live In relationship

Vistara Editorial: Code of Liability for Live in Relationship

ಉತ್ತರಾಖಂಡ ಸರ್ಕಾರ ಅಲ್ಲಿನ ವಿಧಾನಸಭೆಯಲ್ಲಿ ನೂತನ ಏಕರೂಪ ನಾಗರಿಕ ಸಂಹಿತೆ ವಿಧೇಯಕವನ್ನು ಮಂಡಿಸಿದೆ. ಸಚಿವ ಸಂಪುಟದಲ್ಲಿ ಅಂತಿಮಗೊಂಡ ಕರಡನ್ನು ಮಂಡಿಸಲಾಗಿದೆ. ಇದರಲ್ಲಿ ಬಹುಪತ್ನಿತ್ವ ಹಾಗೂ ಬಾಲ್ಯವಿವಾಹದ ಮೇಲೆ ಸಂಪೂರ್ಣ ನಿರ್ಬಂಧ; ಹಾಗೂ ಮುಖ್ಯವಾಗಿ ಲಿವ್‌ ಇನ್‌ ರಿಲೇಷನ್‌ಶಿಪ್‌ ಬಗ್ಗೆ ಕಠಿಣವಾದ ನಿಯಮಾವಳಿಯನ್ನು ರೂಪಿಸಲಾಗಿದೆ. ಈ ವಿಧೇಯಕ ಕಾಯಿದೆಯಾಗಿ ಬಂದಾಗ ಬೇಕಾಬಿಟ್ಟಿ ಲಿವ್-ಇನ್ ಸಂಬಂಧ (Live in relationship) ಕಷ್ಟವಾಗಲಿದೆ. ಲಿವ್‌ ಇನ್‌ನಲ್ಲಿರುವ ಜೋಡಿ ಅಥವಾ ಲಿವ್‌ ಇನ್‌ ಆಗ ಬಾಳಲು ಮುಂದಾಗುವವರು ಜಿಲ್ಲಾಡಳಿತದ ಮುಂದೆ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ ಅಂಥ ಜೋಡಿಯನ್ನು ಜೈಲಿಗೆ ಕಳಿಸಬಹುದು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಟ್ಟಿಗೆ ವಾಸಿಸಲು ಬಯಸಿದ್ದರೆ ಅದಕ್ಕೆ ಪೋಷಕರ ಒಪ್ಪಿಗೆಯೂ ಅಗತ್ಯವಿದೆ. ʼಸಾರ್ವಜನಿಕ ನೈತಿಕತೆಗೆ ವಿರುದ್ಧವಾದ ಪ್ರಕರಣಗಳಲ್ಲಿʼ ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲಾಗುವುದಿಲ್ಲ. ಜೋಡಿಯಲ್ಲಿ ಒಬ್ಬರು ಮೊದಲೇ ವಿವಾಹಿತರಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಅಪ್ರಾಪ್ತ ವಯಸ್ಕರಾಗಿದ್ದರೆ, ಅಥವಾ ಒಪ್ಪಿಗೆಯನ್ನು ʼಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆʼ ಇವೆಲ್ಲ ಶಿಕ್ಷಾರ್ಹ ಅಪರಾಧಗಳಾಗುತ್ತವೆ.

ಲಿವ್‌ ಇನ್‌ ಸಂಬಂಧ ಆಧುನಿಕ ಜಗತ್ತಿನ ವಿವಾದಿತ ರೂಢಿಗಳಲ್ಲಿ ಒಂದಾಗಿದೆ. ಇಂದು ಕಾನೂನಾತ್ಮಕವಾಗಿ ಯಾವುದೇ ಗಂಡು ಹಾಗೂ ಹೆಣ್ಣು 21 ವರ್ಷ ವಯಸ್ಸಾದರೆ ಸಾಕು, ಮದುವೆಯಾಗಬಹುದು. 18 ವರ್ಷವಾಗಿದ್ದರೆ ಪರಸ್ಪರ ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಬಹುದು. ಆದರೆ ಸಾಮಾಜಿಕ, ಸಾಂಸ್ಕೃತಿಕ ಕಟ್ಟುಪಾಡುಗಳು ಹಾಗೆ ಯಾವುದೇ ಒಂದು ಗಂಡು- ಹೆಣ್ಣು ಅವರಿಷ್ಟ ಬಂದಂತೆ ಮದುವೆಯಾಗಲು, ಲೈಂಗಿಕ ಸಂಬಂಧ ಹೊಂದಲು ಸಮ್ಮತಿಸುವುದಿಲ್ಲ. ಮದುವೆಯೊಂದಿಗೆ ಎರಡು ಕುಟುಂಬಗಳ ಭವಿಷ್ಯ ಸಾಮಾಜಿಕ ಸ್ಥಿತಿಗತಿ ಇತ್ಯಾದಿಗಳು ತಳುಕು ಹಾಕಿಕೊಂಡಿವೆ. ಭಾರತದಂಥ ಸಾಂಪ್ರದಾಯಿಕ ಸಮಾಜದಲ್ಲಿ ಇದು ಇನ್ನಷ್ಟು ಬಿಗಿಯಾಗಿದೆ. ಇಲ್ಲಿ ಗಂಡು ಹೆಣ್ಣು ಸಂಬಂಧವು ವೈಯಕ್ತಿಕ ಮಾತ್ರವಲ್ಲದೆ ಸಾಮುದಾಯಿಕ ಬದುಕಿನ ಪ್ರತಿಬಿಂಬವೂ ಆಗಿದೆ. ಹೀಗಾಗಿ ಸಾಂಸಾರಿಕ ಸಂಬಂಧಗಳು ಎಚ್ಚರಿಕೆಯಿಂದ ಪೋಷಿಸಲ್ಪಡುತ್ತವೆ.

ಲಿವ್-‌ ಇನ್‌ ಸಂಬಂಧ ಇತ್ತೀಚೆಗೆ ಹೆಚ್ಚಾಗುತ್ತಿದೆ. ಹೊಣೆಗಾರಿಕೆಯ ಹೊರೆ ಇಲ್ಲದಿರುವುದೇ ಈ ರೂಢಿಯ ಹೆಚ್ಚಳಕ್ಕೆ ಕಾರಣ. ಈಗ ಇರುವಂತೆ, ಪರಸ್ಪರ ಆಕರ್ಷಣೆ ಹೊಂದಿರುವ ಗಂಡು- ಹೆಣ್ಣು ಜೊತೆಯಾಗಿ ಒಂದೇ ಸೂರಿನಡಿ ಬಾಳಬಹುದಾಗಿದೆ. ಆದರೆ ಇವರು ಮದುವೆ ಎಂಬ ಆರ್ಷ ಪದ್ಧತಿಯಲ್ಲಿ ಒಂದಾಗಲು ಬಯಸುವುದಿಲ್ಲ. ಮದುವೆಯ ಮೂಲಕ ಬರಬಹುದಾದ ಎರಡು ಕುಟುಂಬಗಳ ಮಿಲನ, ಹೊಣೆಗಾರಿಕೆ ಹೆಚ್ಚಿನವರಿಗೆ ಬೇಕಿಲ್ಲ. ಮದುವೆಯಿಂದ ಉಂಟಾಗಬಹುದಾದ ಸಂತಾನ ಮುಂತಾದ ಭವಿಷ್ಯದ ʼಹೊರೆʼಗಳೂ ಇವರಿಗೆ ಬೇಕಿಲ್ಲ. ಪರಸ್ಪರರ ಮೇಲೆ ಆಕರ್ಷಣೆ ಕುಂದಿದಾಗ ಸುಲಭವಾಗಿ ಕಳಚಿಕೊಳ್ಳಬಹುದು ಎಂಬುದೇ ಈ ಲಿವ್‌ ಇನ್‌ಗಳು ಪ್ರಥಮ ಆಕರ್ಷಣೆಯಾಗಿದೆ. ʼಬೇರೆಯಾಗುವುದʼನ್ನೇ ಮುಖ್ಯವಾಗಿಟ್ಟುಕೊಂಡ ಈ ಸಂಬಂಧಗಳು ದೀರ್ಘ ಕಾಲ ಬಾಳುತ್ತವೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ದಾಂಪತ್ಯದಲ್ಲಿ ಹೀಗಲ್ಲ. ಅಲ್ಲಿ ಕುಟುಂಬ ವ್ಯವಸ್ಥೆಯು ದಾಂಪತ್ಯವನ್ನು ಪೋಷಿಸುತ್ತಿರುತ್ತದೆ. ಬೇರೆಯಾಗುವುದೂ ಸುಲಭವಲ್ಲ. ಮಕ್ಕಳನ್ನು ಹೆತ್ತು ಹೊತ್ತು ಬೆಳೆಸುವ ಬದ್ಧತೆಯನ್ನು ಇಬ್ಬರೂ ಹೊಂದಿರುತ್ತಾರೆ.

ಲಿವ್‌ ಇನ್‌ ಸಂಬಂಧಗಳಲ್ಲಿ ಅಪರಾಧಗಳೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ದೇಹಗಳ ಆಕರ್ಷಣೆ ಮಾತ್ರದಿಂದಲೇ ಹುಟ್ಟಿಕೊಂಡ ಸಂಬಂಧದಿಂದ ಜೊತೆಗೆ ಬಾಳುತ್ತಿದ್ದ ಇಬ್ಬರಲ್ಲಿ ಒಬ್ಬರು ಅದೇ ರೀತಿ ಬೇರೊಬ್ಬರೊಂದಿಗೆ ಬಾಳಬಯಸಿದರೆ ಬಹು ಸುಲಭವಾಗಿ ಕಳಚಿಕೊಳ್ಳಬಹುದು ಎಂಬುದೇ ಅಪರಾಧಕ್ಕೆ ಕಾರಣವಾಗಿಬಿಡುವ ಸಾಧ್ಯತೆ ಹೆಚ್ಚಿದೆ. ದಿಲ್ಲಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್‌ ಎಂಬಾಕೆಯ ಬರ್ಬರ ಕೊಲೆಯೇ ಇದಕ್ಕೆ ನಿದರ್ಶನ. ಬದ್ಧತೆಯೇ ಇಲ್ಲವಾದ, ಬಹು ಸುಲಭವಾಗಿ ಅಪರಾಧಕ್ಕೂ ತುತ್ತಾಗಬಹುದಾದ ಸಂಬಂಧದಲ್ಲಿ ಅರ್ಥವೆಲ್ಲಿದೆ? ಹೀಗಾಗಿ ಇಂಥ ಸಂಬಂಧಗಳ ಮೇಲೆ ಒಂದು ಕಾನೂನಾತ್ಮಕ ನಿಗಾ ಇಡುವುದು ಇಂದಿನ ಅಗತ್ಯವಾಗಿದೆ.

ಇದನ್ನೂ ಓದಿ: Uniform Civil Code: ಉತ್ತರಾಖಂಡ ವಿಧಾನಸಭೆಯಲ್ಲಿ ಇಂದು ಸಮಾನ ನಾಗರಿಕ ಸಂಹಿತೆ ವಿಧೇಯಕ ಮಂಡನೆ

ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಯ ಲಿವ್-ಇನ್ ನಿಯಮದ ಪ್ರಕಾರ, ಜಿಲ್ಲಾಧಿಕಾರಿ ಈ ಸಂಬಂಧದ ಸಿಂಧುತ್ವವನ್ನು ಸ್ಥಾಪಿಸಲು ವಿಚಾರಣೆ ನಡೆಸಬಹುದು. ನೋಂದಣಿಯನ್ನು ನಿರಾಕರಿಸಿದರೆ ರಿಜಿಸ್ಟ್ರಾರ್ ಅದಕ್ಕೆ ಕಾರಣಗಳನ್ನು ಲಿಖಿತವಾಗಿ ತಿಳಿಸಬೇಕು. ನೋಂದಾಯಿತ ಲಿವ್-ಇನ್ ಸಂಬಂಧಗಳ ʼಮುಕ್ತಾಯʼಕ್ಕೆ ಕೂಡ ಲಿಖಿತ ಹೇಳಿಕೆಯ ಅಗತ್ಯವಿರುತ್ತದೆ. ಸಂಬಂಧದ ಅಂತ್ಯಕ್ಕೆ ಕಾರಣಗಳು ʼತಪ್ಪುʼ ಅಥವಾ ʼಸಂಶಯಾಸ್ಪದʼ ಎಂದು ಕಂಡುಬಂದರೆ ಪೊಲೀಸ್ ತನಿಖೆಗೆ ನೀಡಬಹುದು. ಲಿವ್-ಇನ್ ಸಂಬಂಧ ನೋಂದಣಿಗೆ ವಿಫಲವಾದರೆ ಅಥವಾ ತಪ್ಪು ಮಾಹಿತಿ ಒದಗಿಸಿದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ, ₹25,000 ದಂಡ ಅಥವಾ ಎರಡನ್ನೂ ವಿಧಿಸಬಹುದು. ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳೂ ಕಾನೂನು ಮಾನ್ಯತೆಯನ್ನು ಪಡೆಯುತ್ತಾರೆ. ಅಂದರೆ, ಅವರು ʼದಂಪತಿಗಳ ಕಾನೂನುಬದ್ಧ ಮಗುʼವಾಗುತ್ತಾರೆ. ವಿವಾಹದಿಂದ, ಲಿವ್-ಇನ್ ಸಂಬಂಧಗಳಲ್ಲಿ ಅಥವಾ ಇನ್‌ಕ್ಯುಬೇಶನ್ ಮೂಲಕ ಜನಿಸಿದ ಎಲ್ಲಾ ಮಕ್ಕಳ ಹಕ್ಕುಗಳೂ ಒಂದೇ ಆಗಿರುತ್ತವೆ. ತನ್ನ ಲಿವ್-ಇನ್ ಸಂಗಾತಿಯಿಂದ ತೊರೆದುಹೋದ ಮಹಿಳೆಯು ಜೀವನ ನಿರ್ವಹಣೆಯನ್ನು ಕೂಡ ಪಡೆಯಬಹುದು ಎಂದು UCC ಕರಡು ಹೇಳುತ್ತದೆ. ಇವು ಸ್ವಾಗತಾರ್ಹ ಅಂಶಗಳಾಗಿವೆ. ಹೊಣೆಗಾರಿಕೆಯೇ ಇಲ್ಲದ ಸಂಬಂಧಕ್ಕೆ ಈ ನಿಯಮಗಳು ಒಂದಷ್ಟು ಉತ್ತರದಾಯಿತ್ವವನ್ನು ಸೃಷ್ಟಿಸುತ್ತವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version