Site icon Vistara News

ವಿಸ್ತಾರ ಸಂಪಾದಕೀಯ: ಡೀಪ್‌ ಫೇಕ್‌ ವಿಡಿಯೋ ಹಾವಳಿ, ಕಠಿಣ ಕ್ರಮ ಅಗತ್ಯ

Deep Fake

Vistara Editorial: Deep fake video is a scourge, strict action is necessary

ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್‌ ಫೇಕ್‌ ಮೂಲಕ ಅನ್ಯರ ಮೈಗೆ ಜೋಡಿಸಿದ ವಿಡಿಯೋ ಒಂದು ವೈರಲ್‌ ಆಗಿದೆ. ಇನ್ನೊಬ್ಬ ನಟಿ ಝರಾ ಪಟೇಲ್‌ ಎಂಬುವರ ದೇಹಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಜೋಡಿಸಿ ಅದನ್ನು ವೈರಲ್‌ ಮಾಡಲಾಗಿದೆ. ಇದನ್ನು ಝರಾ ಅವರೇ ಮಾಡಿದರೋ ಅನ್ಯರೋ ಎಂಬುದು ಸ್ಪಷ್ಟವಿಲ್ಲ. ಈ ಕೃತ್ಯವನ್ನು ಬಾಲಿವುಡ್‌ನ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವರು ಖಂಡಿಸಿದ್ದಾರೆ. ಇದೊಂದು ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದಾದ ಅಪರಾಧ ಎಂದಿದ್ದಾರೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಕೂಡ, ಇಂಥ ಹಂಚುವಿಕೆಗಳು ಅನಾಹುತಕಾರಿ ಎಂದಿದ್ದಾರೆ. ಸ್ವತಃ ರಶ್ಮಿಕಾ ಮಂದಣ್ಣ ಅವರು ಇದರಿಂದ ಆಘಾತಗೊಂಡಿದ್ದು, “ನನಗೆ ತುಂಬಾ ನೋವಾಗಿದೆ. ಈ ರೀತಿಯ ಅಪ್ರಾಮಾಣಿಕವಾಗಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಎಲ್ಲರಿಗೂ ಹಾನಿಯಾಗಲಿದೆʼʼ ಎಂದಿದ್ದಾರೆ.

AI ಡೀಪ್‌ ಫೇಕ್‌ ಒಂದು ತಂತ್ರಜ್ಞಾನ. ಚಿತ್ರಗಳು ಅಥವಾ ವೀಡಿಯೊಗಳನ್ನು ಬೇಕಾದಂತೆ ಬಳಸಿಕೊಂಡು, ನಿಜವೆನಿಸುವಂತೆ ಕಾಣುವ ನಕಲಿ ಸೃಷ್ಟಿಗಳನ್ನು ಇದರಲ್ಲಿ ಮಾಡಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸುತ್ತದೆ. ಕೃತಕ ಬುದ್ಧಿಮತ್ತೆ (AI), ಫೋಟೋಶಾಪ್, ಯಂತ್ರ ಕಲಿಕೆ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿರುವ ಇತರ ಪರಿಕರಗಳನ್ನು ಬಳಸಿಕೊಂಡು ಈ ನಕಲಿ ವೀಡಿಯೊಗಳನ್ನು ವ್ಯಾಪಕವಾಗಿ ತಯಾರಿಸಲಾಗುತ್ತಿದೆ. ಇತ್ತೀಚಿನವರೆಗೂ ಇದರ ಅಪಾಯಗಳು ಗೊತ್ತಾಗಿರಲಿಲ್ಲ. AI ರಚಿತವಾದ ನಕಲಿ ಸಂಗತಿಗಳು ನೈಜವಾದವುಗಳಂತೆ ಕಾಣುವುದೇ ಇಂದು ಅದರ ಅಪಾಯದ ಮೂಲವಾಗಿದೆ. ಡೀಪ್‌ ಫೇಕ್‌ಗಳು ಇಂದು ಅಸಲಿಯಂತೆ ಕಾಣುವ ನಕಲಿ ವೀಡಿಯೊಗಳನ್ನು ಸೃಷ್ಟಿಸಿ ವಿಐಪಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಲು ಉಪಯೋಗವಾಗತೊಡಗಿವೆ. ತಾನು ಮಾಡದೇ ಇದ್ದುದನ್ನು ಮಾಡಿದಂತೆ ಚಿತ್ರಿಸುವ ವಿಡಿಯೋಗಳು ಯಾರಿಗೇ ಆದರೂ ಆತಂಕಕಾರಿಯೇ ಆಗಿವೆ.

ಡೀಪ್‌ ಫೇಕ್‌ಗಳನ್ನು ಹೆಚ್ಚಾಗಿ ಅಶ್ಲೀಲ ವಿಷಯವನ್ನು ಉತ್ಪಾದಿಸಲು ಬಳಸಲಾಗುತ್ತದೆ. ಮಹಿಳೆಯರನ್ನು ಡಿಜಿಟಲ್ ಆಗಿ ವಿವಸ್ತ್ರಗೊಳಿಸಿ ಕಾಣಿಸುವ ಫೋಟೋ ಅಪ್ಲಿಕೇಶನ್‌ಗಳು ಯುರೋಪ್ ಮತ್ತು ಯುಎಸ್ ಸೇರಿದಂತೆ ಪ್ರಪಂಚದಾದ್ಯಂತ “ಸೆಕ್ಸ್‌ಟಾರ್ಶನ್” ರಾಕೆಟ್‌ಗಳನ್ನು ಉತ್ತೇಜಿಸಿವೆ. ಈ ಅಪ್ಲಿಕೇಶನ್‌ಗಳ ಮೂಲಕ ಬಳಕೆದಾರರು ಇತರರನ್ನು ಡಿಜಿಟಲ್‌ ಆಗಿ ನಗ್ನಗೊಳಿಸುವುದು, ಅಥವಾ ಲೈಂಗಿಕವಾಗಿ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನುಸುವುದು ಸಾಧ್ಯವಿದೆ. ಮಹಿಳೆಯರೇ ಈ ಆಧುನಿಕ ಕುಖ್ಯಾತ AI ಪರಿಕರಗಳು ಮತ್ತು ಅಪ್ಲಿಕೇಶನ್‌ಗಳ ಗುರಿಯಾಗಿದ್ದಾರೆ. ಇದು ಉಚಿತವಾಗಿ ವ್ಯಾಪಕವಾಗಿ ಲಭ್ಯವಿರುವುದು ಮತ್ತು ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲದಿರುವುದು ಈ ಅನಾಹುತಕ್ಕೆ ಇನ್ನೊಂದು ಆಯಾಮವನ್ನು ಸೇರಿಸಿದೆ. ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಮತ್ತು ಹಾಲಿವುಡ್‌ ನಟಿ ಎಮ್ಮಾ ವ್ಯಾಟ್ಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಡೀಪ್‌ ಫೇಕ್ ಪೋರ್ನ್‌ಗೆ ತುತ್ತಾಗಿದ್ದಾರೆ. ಡಚ್ ಎಐ ಕಂಪನಿ ಸೆನ್ಸಿಟಿಯ ಅಧ್ಯಯನದ ಪ್ರಕಾರ, ಆನ್‌ಲೈನ್‌ನಲ್ಲಿ ಸುಮಾರು 96 ಪ್ರತಿಶತದಷ್ಟು ಡೀಪ್‌ ಫೇಕ್ ವೀಡಿಯೊಗಳು ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸುತ್ತವೆ.

ಇದು ಎಂದಿಗಾದರೂ ಅಪಾಯವಲ್ಲವೆ? ಹೌದು. ಇದನ್ನು ನಿಯಂತ್ರಿಸಲು ಕಾನೂನುಗಳನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದುದು ಹಾಗೂ ಇರುವ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕಾದುದು ಅಗತ್ಯ. ಮುಗ್ಧ ಹೆಣ್ಣುಮಕ್ಕಳು ಈ ಪೀಡೆಗೆ ಬಲಿಯಾಗುವ ಮುನ್ನವೇ ನಮ್ಮ ಕಾನೂನು ಜಾರಿ ಸಂಸ್ಥೆಗಳು, ನೀತಿ ನಿರೂಪಕರು ಎಚ್ಚೆತ್ತುಕೊಳ್ಳಬೇಕು. ಡೀಪ್‌ ಫೇಕ್ ಸೈಬರ್‌ಕ್ರೈಮ್‌ನೊಂದಿಗೆ ವಿಶೇಷವಾಗಿ ವ್ಯವಹರಿಸಲು ಸ್ಪಷ್ಟವಾದ ಕಾನೂನು ಇಲ್ಲ. ಪ್ರಸ್ತುತ ನಮ್ಮಲ್ಲಿ ಐಟಿ ಕಾಯಿದೆ ಹಾಗೂ ಅಪರಾಧ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳು ಈ ಪಿಡುಗನ್ನು ನಿರ್ವಹಿಸುವ ಕೆಲಸವನ್ನು ಮಾಡುತ್ತಿವೆ.

ಇದನ್ನೂ ಓದಿ: Rashmika Mandanna: ಶಾಲೆಯಲ್ಲಿದ್ದಾಗ ಹೀಗಾಗಿದ್ದರೆ ಏನಾಗ್ತಿತ್ತೋ? ನಕಲಿ ವಿಡಿಯೊಗೆ ರಶ್ಮಿಕಾ ರಿಯಾಕ್ಷನ್‌!

ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆ- 2000ರ ಸೆಕ್ಷನ್ 66D ಸಂವಹನ ಸಾಧನದ ದುರುಪಯೋಗ, ಮೋಸ ಅಥವಾ ಸೋಗಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸುತ್ತದೆ. ಸೆಕ್ಷನ್ 66E ಇಂಟರ್ನೆಟ್‌ನಲ್ಲಿ ವ್ಯಕ್ತಿಯ ಗೌಪ್ಯತೆಯನ್ನು ಉಲ್ಲಂಘಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ. 2 ಲಕ್ಷದವರೆಗೆ ದಂಡ ವಿಧಿಸುತ್ತದೆ. ಹಕ್ಕುಸ್ವಾಮ್ಯ ಕಾಯಿದೆ- 1957 ಪ್ರಕಾರ ಇನ್ನೊಬ್ಬ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ಬಳಸಿದರೆ ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆಯಾಗುತ್ತದೆ. ಐಟಿ ನಿಯಮಗಳು- 2023ರ ಪ್ರಕಾರ ಇಂಟರ್ನೆಟ್ ಸೈಟ್‌ಗಳು ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ತಪ್ಪು ಮಾಹಿತಿ ಪೋಸ್ಟ್ ಮಾಡದಂತೆ ಖಚಿತಪಡಿಸಿಕೊಳ್ಳುವುದು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಕಾನೂನು ಬಾಧ್ಯತೆ. ಸಂಬಂಧಪಟ್ಟವರು ರಿಪೋರ್ಟ್‌ ಮಾಡಿದರೆ ಅದನ್ನು 36 ಗಂಟೆಗಳಲ್ಲಿ ತೆಗೆದುಹಾಕಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬಹುದು. ಈ ನಿಯಮವನ್ನು ಸೋಶಿಯಲ್‌ ಮೀಡಿಯಾಗಳು ಕಟ್ಟನಿಟ್ಟಾಗಿ ಪಾಲಿಸುತ್ತಿಲ್ಲ. ಪಾಲಿಸುವಂತೆ ಮಾಡುವುದು ಸರ್ಕಾರಕ್ಕೆ ಬಾಧ್ಯತೆ. ಇದರ ಜತೆಗೆ ಬಳಕೆದಾರರು ಕೂಡ ತಮ್ಮ ಖಾಸಗಿ ವಿಡಿಯೋಗಳನ್ನು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಮುಕ್ತವಾಗಿ ಪೋಸ್ಟ್‌ ಮಾಡುವುದನ್ನು ಬಿಡುವುದು ಉತ್ತಮ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version