Site icon Vistara News

ವಿಸ್ತಾರ ಸಂಪಾದಕೀಯ: ರಕ್ಷಣಾ ರಫ್ತು ದಾಖಲೆ ದೇಶದ ಅಗ್ಗಳಿಕೆ

Vistara editorial

ದೇಶದ ರಕ್ಷಣಾ ರಫ್ತು ಇದೇ ಮೊದಲ ಬಾರಿಗೆ ರೂ.21,000 ಕೋಟಿ ಗಡಿ ದಾಟಿದೆ. 2023-24 ರ ಹಣಕಾಸು ವರ್ಷದಲ್ಲಿ (ಎಫ್‌ ವೈ) ರಕ್ಷಣಾ ರಫ್ತು (Defence export) ದಾಖಲೆಯ ರೂ.21,083 ಕೋಟಿಗಳನ್ನು (ಸರಿಸುಮಾರು. US$ 2.63 ಶತಕೋಟಿ) ತಲುಪಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಅಂಕಿ ಅಂಶವು ರೂ.15,920 ಕೋಟಿ ಇತ್ತು. 32.5% ರಷ್ಟು ಬೆಳವಣಿಗೆಯಾಗಿದೆ. ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿಅಂಶಗಳು(Vistara editorial) ಸೂಚಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಾರ, 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂ. ದಾಟಿಸುವ ಗುರಿ ಹೊಂದಲಾಗಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಮೈಲುಗಲ್ಲು.

ದೇಶವು ಪ್ರಸ್ತುತ 85 ದೇಶಗಳಿಗೆ ಮಿಲಿಟರಿ ಸಾಮಗ್ರಿಗಳು ರಫ್ತು ಮಾಡುತ್ತಿದೆ. ಸರಿ ಸುಮಾರು 100 ಸಂಸ್ಥೆಗಳು ರಫ್ತುಗಳಲ್ಲಿ ತೊಡಗಿಸಿಕೊಂಡಿವೆ. ಇದು ಕ್ಷಿಪಣಿಗಳು, ಫಿರಂಗಿ ಬಂದೂಕುಗಳು, ರಾಕೆಟ್‌ ಗಳು, ಶಸ್ತ್ರಸಜ್ಜಿತ ವಾಹನಗಳು, ವೈಯಕ್ತಿಕ ರಕ್ಷಣಾ ಸಾಧನಗಳು, ವಿವಿಧ ರಾಡಾರ್‌ ಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಯುದ್ಧಸಾಮಗ್ರಿಗಳನ್ನು ಒಳಗೊಂಡಿದೆ.

ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ರಫ್ತುಗಳು ಭಾರತದ ಜಿಡಿಪಿ ಬೆಳವಣಿಗೆ, ವಿದೇಶಾಂಗ ನೀತಿಯ ವರ್ಧನೆ ಇತ್ಯಾದಿಗಳಲ್ಲಿ ಗರಿಷ್ಠತೆ ಸಾಧಿಸಲು ಕಾರಣವಾಗುತ್ತಿರುವ ಬೆಳವಣಿಗೆಗಳು. ಈ ಹಿಂದೆ ಪ್ರತಿಯೊಂದು ಶಸ್ತ್ರಕ್ಕೂ ಭಾರತ ವಿದೇಶಗಳನ್ನು ಅವಲಂಬಿಸಿತ್ತು. ಆದರೆ ಈಗ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧ ನೌಕೆಗಳನ್ನೂ ಭಾರತದಲ್ಲೇ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಹೊರತುಪಡಿಸಿ ಇತರ ನೆರೆಯ ದೇಶಗಳಿಗೆ ಭಾರತ ಯಥೇಚ್ಛವಾಗಿ ಶಸ್ತ್ರಾಸ್ತ್ರ ರಫ್ತು ಮಾಡುತ್ತಿದೆ. ಮಿಲಿಟರಿ ಸಾಧನಗಳಿಗಾಗಿ ಭಾರತ ಪ್ರತಿವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಿನ ಶಸ್ತ್ರಾಸ್ತ್ರ ರಫ್ತು ದಾಖಲೆ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.

ಈಗಾಗಲೇ ಭಾರತ ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌ ಕ್ಷಿಪಣಿಗಳನ್ನು, ಮಾರಿಷಸ್‌ಗೆ ಹಗುರ ಯುದ್ಧ ವಿಮಾನಗಳನ್ನು, ವಿಯೆಟ್ನಾಂಗೆ ಅತಿವೇಗದ ರಕ್ಷಣಾ ಬೋಟ್‌ಗಳನ್ನು, ಆರ್ಮೇನಿಯಾಕ್ಕೆ ಆಯುಧಶೋಧಕ ರೇಡಾರ್‌ಗಳನ್ನು, ಇಟಲಿ, ಮಾಲ್ದೀವ್ಸ್‌, ಶ್ರೀಲಂಕಾ, ಮಲೇಷಿಯಾ ಮುಂತಾದ ಹಲವು ದೇಶಗಳಿಗೆ ಪಿನಾಕ ರಾಕೆಟ್‌ ಲಾಂಚರ್‌ಗಳನ್ನು ಹಾಗೂ ಇತರ ಹಲವು ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ.

ರಕ್ಷಣಾ ಸಾಮಗ್ರಿಗಳ ರಫ್ತು ಜತಜತೆಗೇ ನೋಡಬೇಕಾದ ಇನ್ನೊಂದು ಸಂಗತಿ ಎಂದರೆ, ಇಸ್ರೋ ಸಂಸ್ಥೆಯು ಉಡಾಯಿಸುತ್ತಿರುವ ಉಪಗ್ರಹಗಳು. ಸ್ಥಳೀಯ ತಂತ್ರಜ್ಞಾನದ ಉಪಗ್ರಹ ವಾಹಕಗಳನ್ನು (ಎಸ್‌ಎಲ್‌ವಿ) ನಾವು ತಯಾರಿಸಿದ್ದು, ಅವುಗಳ ಮೂಲಕ ಅಕ್ಕಪಕ್ಕದ ದೇಶಗಳ ಉಪಗ್ರಹಗಳನ್ನೂ ಕಕ್ಷೆಗೆ ಉಡಾಯಿಸುವ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ನಮ್ಮ ದೇಶದ ಇಂಥ ಸಾಧನೆಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಎಚ್‌ಎಎಲ್‌, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಹತ್ವದ ಕೊಡುಗೆ ನೀಡುತ್ತಿವೆ. ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಡ್ರೋನ್‌ಗಳು ನಮ್ಮ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಅತ್ಯುತ್ತಮ ಜತೆಗಾರರಾಗಿವೆ.

ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಉದಾಹರಣೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್‌ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ. 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತದೆ. ಇಲ್ಲಿ ಉತ್ಪಾದನೆಗೊಳ್ಳಲಿರುವ ಹಗುರ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್) ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಇನ್ನೊಂದು ಉದಾಹರಣೆ ಎಂದರೆ ಇತ್ತೀಚೆಗೆ ಪ್ರಯೋಗಾರ್ಥ ಉಡಾಯಿಸಲಾದ, ಅಣ್ವಸ್ತ್ರ ಸಿಡಿತಲೆಯನ್ನು 5000 ಕಿಲೋಮೀಟರ್‌ ದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಭಿವೃದ್ಧಿ. ಈ ಕ್ಷಿಪಣಿ ಚೀನಾದ ಉತ್ತರ ತುದಿಯಿಂದ ಹಿಡಿದು ಯುರೋಪಿನ ಬಹುತೇಕ ಭಾಗಗಳಿಗೂ ಗುರಿ ಇಟ್ಟು ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಭಾರತದ ರಕ್ಷಣಾ ದೃಷ್ಟಿಯಿಂದ ಮಹತ್ವದ್ದು.

ಇದನ್ನೂ ಓದಿ | ವಿಸ್ತಾರ Explainer: ಕಚ್ಚಲು ಶುರು ಮಾಡಿದ ಕಚ್ಚತೀವು ವಿಚಾರ; ಏನಿದು ತಗಾದೆ? ಶ್ರೀಲಂಕೆಗೆ ಇಂದಿರಾ ಗಾಂಧಿ ಬಿಟ್ಟುಕೊಟ್ಟದ್ದೇಕೆ?

ಇದೆಲ್ಲದರ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನ ಫಲ ಕೊಡಲಾರಂಭಿಸಿದೆ ಎನ್ನಬಹುದು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ರಫ್ತು ಹೆಚ್ಚಿದಷ್ಟು ನಮ್ಮ ಗಣ್ಯತೆ, ಜಿಡಿಪಿ, ವಿದೇಶಾಂಗ ಸಾಮರ್ಥ್ಯವೂ ಅಧಿಕವಾಗುತ್ತದೆ.

Exit mobile version