ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ಅಭಿಯಾನದ ಸಂದರ್ಭದಲ್ಲಿ ಪಿಂಚಣಿದಾರರಿಂದ 1.15 ಕೋಟಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ಗಳನ್ನು (ಜೀವನ ಪ್ರಮಾಣ ಪತ್ರ) ನೀಡಲಾಗಿದೆ. ಪಿಂಚಣಿದಾರರ ಕಲ್ಯಾಣ ಇಲಾಖೆಯು ರಾಷ್ಟ್ರವ್ಯಾಪಿ ನಡೆಸಿದ ಎರಡನೇ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (DLCs) ಅಭಿಯಾನ ನವೆಂಬರ್ 1ರಿಂದ 30ರವರೆಗೆ ನಡೆದಿದೆ. ಪಿಂಚಣಿದಾರರ ಡಿಜಿಟಲ್ ಸಬಲೀಕರಣಕ್ಕಾಗಿ, ಅವರ ದಿನಚರಿಯ ಸುಧಾರಣೆಗಾಗಿ, ಅವರು ಜೀವನ ಪ್ರಮಾಣ ಪತ್ರಗಳಿಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಈ ಅಭಿಯಾನ ನಡೆಸಲಾಗಿದೆ. 100 ನಗರಗಳಲ್ಲಿ 597 ಸ್ಥಳಗಳಲ್ಲಿ ನಡೆದ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ 1.15 ಕೋಟಿ ಡಿಎಲ್ಸಿ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಿಂಚಣಿದಾರರು 38.47 ಲಕ್ಷ, ರಾಜ್ಯ ಸರ್ಕಾರದ ಪಿಂಚಣಿದಾರರು 16.15 ಲಕ್ಷ ಹಾಗೂ ಇಪಿಎಫ್ಒ ಪಿಂಚಣಿದಾರರು 50.91 ಲಕ್ಷ. 90ಕ್ಕೂ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಕೂಡ ಡಿಜಿಟಲ್ ಸೇವೆಗಳನ್ನು ಅಂಜಿಕೆಯಿಲ್ಲದೆ ಪಡೆಯುತ್ತಿರುವುದು ಕಂಡುಬರುತ್ತಿದೆ. ಇದು ಆಧುನಿಕತೆಯ ಅಳವಡಿಕೆಯ ಯಶಸ್ಸಿಗೆ ಉದಾಹರಣೆ(Vistara Editorial).
ಮಹತ್ವದ ಇನ್ನೊಂದು ಬೆಳವಣಿಗೆ ಎಂದರೆ ಹಿರಿಯ ನಾಗರಿಕರಿಗೆ ಮನೆ ಬಾಗಿಲಲ್ಲೇ ಲಭ್ಯವಾಗುತ್ತಿರುವ ಜೀವನ ಪ್ರಮಾಣ ಪತ್ರ. ಪಿಂಚಣಿದಾರರು (Pensioners) ಜೀವನ್ ಪ್ರಮಾಣ (Jeevan Pramaan) ಪತ್ರ ಸಲ್ಲಿಸಲು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ (Bank or Post Office) ತೆರಳಬೇಕಿಲ್ಲ. ಬದಲಾಗಿ ಮನೆಯಿಂದಲೇ ಸಲ್ಲಿಸುವ ಅವಕಾಶವನ್ನು ಈಗಾಗಲೇ ನೀಡಲಾಗಿದೆ. ಆದರೆ, ಇದು ಬಹಳಷ್ಟು ಮಂದಿಗೆ ಇನ್ನೂ ತಿಳಿದಿಲ್ಲ. ಈ ಸೇವೆಯನ್ನು ಒಟ್ಟು 12 ಸಾರ್ವಜನಿಕ ಬ್ಯಾಂಕ್ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಬ್ಯಾಂಕ್ಗಳ ಮೂಲಕ ಡೋರ್ಸ್ಟೆಪ್ ಬ್ಯಾಂಕಿಂಗ್ ಅಲೆಯನ್ಸ್ ಸೇವೆಯನ್ನು (Doorstep Banking Alliance Service) ಬಳಸಿಕೊಂಡು ಮನೆಯಲ್ಲಿಯೇ ಜೀವನ್ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಅಂಚೆ ಇಲಾಖೆ ಕೂಡ ಇದೇ ಮಾದರಿಯ ಸೇವೆಯನ್ನು ನೀಡುತ್ತಿದ್ದು, ಆ ಮೂಲಕವೂ ಸೇವೆಯನ್ನು ಪಡೆಯಬಹುದಾಗಿದೆ. ಪಿಂಚಣಿದಾರರು ಮೊಬೈಲ್ ಆ್ಯಪ್, ವೆಬ್ಸೈಟ್ ಅಥವಾ ಟೋಲ್-ಫ್ರೀ ಸಂಖ್ಯೆಯ ಮೂಲಕ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಳ್ಳಬಹುದು. ಒಮ್ಮೆ ಇಲ್ಲಿ ಬುಕ್ ಮಾಡಿದ ಬಳಿಕ ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಲಾಗುತ್ತದೆ. ಬ್ಯಾಂಕ್ನ ಏಜೆಂಟರು ಅಥವಾ ಪೋಸ್ಟ್ಮ್ಯಾನ್ ಪಿಂಚಣಿದಾರರ ಮನೆಗೆ ನಿಗದಿತ ವೇಳೆಗೆ ಹಾಜರಾಗುತ್ತಾರೆ. ಅವರು ಪಿಂಚಣಿದಾರರ ಎದುರಿನಲ್ಲಿಯೇ ಜೀವನ್ ಪ್ರಮಾಣ ಆ್ಯಪ್ ಬಳಸಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡುತ್ತಾರೆ.
ಇದೊಂದು ಅತ್ಯುತ್ತಮವಾದ ಸೇವೆ. ಈ ಮೊದಲು ಲೈಫ್ ಸರ್ಟಿಫಿಕೇಟ್ ಪಡೆಯಲು ಹಿರಿಯ ನಾಗರಿಕರು ಸರ್ಕಾರಿ ಕಚೇರಿಗಳಲ್ಲಿ ಕ್ಯೂ ನಿಲ್ಲಬೇಕಿತ್ತು. ಅವರಲ್ಲಿ ಅನಾರೋಗ್ಯಪೀಡಿತರ ಸಂಕಷ್ಟ ನೋಡಲು ಕಷ್ಟವಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರ ನಿವೃತ್ತ ಸ್ನೇಹಿಯಾದ ಈ ಅತ್ಯುತ್ತಮ ಉಪಕ್ರಮವನ್ನು ತೆಗೆದುಕೊಂಡಿದೆ. ವಯಸ್ಸಾದವರು ಕಚೇರಿಗಳಿಗೆ ಪ್ರಯಾಸ ಪಟ್ಟು ಹೋಗಿ ಜೀವಂತ ಪ್ರಮಾಣಪತ್ರ ಕೊಡುವ ತಾಪತ್ರಯ ತಪ್ಪಿದೆ. ಎಷ್ಟೇ ಹೇಳಿದರೂ ನಮ್ಮ ಸರ್ಕಾರಿ ಕಚೇರಿಗಳಾಗಲೀ, ಸಾರ್ವಜನಿಕ ಜಾಗಗಳಾಗಲೀ ʼವೃದ್ಧಸ್ನೇಹಿʼಗಳಲ್ಲ. ಯುವಜನರ ನಡುವೆ ಸಾಗಿ, ಗುದ್ದಾಡಿ, ಕೌಂಟರ್ಗಳಲ್ಲಿ ಕುಳಿತವರಿಂದ ಅಸಹನೆಯ ಮಾತು ಕೇಳಿಸಿಕೊಂಡು, ಫಾರಂ ತುಂಬಿಸಲು ತಿಳಿಯದೆ ಅವರಿವರ ಸಹಾಯ ಕೇಳುತ್ತ, ಕ್ಯೂನಲ್ಲಿ ಹಿಂದೆ ನಿಂತವರ ಗೊಣಗಾಟವನ್ನೂ ತಾಳಿಕೊಂಡು, ಕೆಲಸ ಮಾಡಿಸಿಕೊಳ್ಳುವುದನ್ನು ನೋಡಿದರೆ ಸಂಕಟವಾಗುತ್ತದೆ. ಒಂದು ಸಲ ಹೋದಾಗ ಕೆಲಸ ಆಗದಿದ್ದರೆ ಪದೇ ಪದೆ ಅಲೆದಾಡಬೇಕು. ಜೀವನಪೂರ್ತಿ ದುಡಿದು ತೆರಿಗೆ ಕಟ್ಟಿ, ದೇಶಸೇವೆ ಮಾಡಿದ ಈ ಹಿರಿಯ ನಾಗರಿಕರು ಮನೆಯಲ್ಲಿ ಸುಖವಾಗಿ ಇರಬೇಕಾದ ಕಾಲದಲ್ಲಿ ಅವರನ್ನು ಅಲೆದಾಡಿಸುವುದು ಕ್ರೌರ್ಯ. ಹೊಸ ಉಪಕ್ರಮದಿಂದ ಈ ಅಲೆದಾಟ ತಪ್ಪುವಂತಾಗಿದೆ. ಇಂಥ ಉಪಕ್ರಮಗಳು ಇನ್ನೂ ವ್ಯಾಪಕವಾಗಬೇಕು ಹಾಗೂ ಇನ್ನಷ್ಟು ಇಲಾಖೆಗಳಲ್ಲಿ ಇಂಥ ಹೊಸ ಕ್ರಮಗಳು ಬರಬೇಕು. ಡಿಜಿಟಲ್ ಇಂಡಿಯಾದ ಪೂರ್ಣ ಪ್ರಯೋಜನವನ್ನು ನಿವೃತ್ತರು ಪಡೆಯುವಂತಾಗಬೇಕು.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಿಡಿಪಿ ಬೆಳವಣಿಗೆ ಇನ್ನಷ್ಟು ಪ್ರಗತಿಗೆ ನಾಂದಿಯಾಗಲಿ