Site icon Vistara News

ವಿಸ್ತಾರ ಸಂಪಾದಕೀಯ: ಉಗ್ರರ ಹೇಡಿತನಕ್ಕೆ ಮತ್ತೆ ಯೋಧರ ಬಲಿ, ತಕ್ಕ ಉತ್ತರ ಕೊಡೋಣ

kashmir Indian Army

ಕಾಶ್ಮೀರದಲ್ಲಿ ಮತ್ತೆ ತಲೆಯೆತ್ತಲು ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳು ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟವಾಗಿದೆ. ಮೊನ್ನೆ ತಾನೇ ಕಾಶ್ಮೀರ ಕಣಿವೆಯಲ್ಲಿ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಕರ್ನಲ್ ಸೇರಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದ ಅಡಗುತಾಣದಲ್ಲಿ ಉಗ್ರರು (Terrorists) ಇರುವ ಬಗ್ಗೆ ಗುಪ್ತಚರ ಮಾಹಿತಿ ಪಡೆದು, ಯೋಧರು ಅವರ ಹುಡುಕಾಟದಲ್ಲಿ ತೊಡಗಿದ್ದರು. ಈ ವೇಳೆ, ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಕಾಳಗ ನಡೆದಿದೆ. ಹುತಾತ್ಮರಾದ ಮೂವರ ಪೈಕಿ ಒಬ್ಬರು ಕರ್ನಲ್, ಮತ್ತೊಬ್ಬರು ಮೇಜರ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆಯ ಡಿವೈಎಸ್‌ಪಿ. ಈ ನಡುವೆ ಅನಂತನಾಗ್‌ ಜಿಲ್ಲೆಯಲ್ಲಿ ಉಗ್ರರಿಗಾಗಿ ನಡೆಯುತ್ತಿರುವ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕೋಕರ್‌ನಾಗ್‌ ಪ್ರದೇಶದ ಅರಣ್ಯದಲ್ಲಿ ಯೋಧರು ಸತತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬೆನ್ನಲ್ಲೇ ಮತ್ತೊಬ್ಬ ಯೋಧ ನಾಪತ್ತೆಯಾಗಿದ್ದಾರೆ. ಮೃತ ಯೋಧರ ಅಂತ್ಯಸಂಸ್ಕಾರದ ದೃಶ್ಯಗಳು ದೇಶದ ಮನ ಕಲಕಿವೆ.

ಲಷ್ಕರೆ ತಯ್ಬಾ (Lashkar-e-Taiba) ಉಗ್ರ ಸಂಘಟನೆಯು ಭಾರತದಲ್ಲಿ ಮತ್ತೆ ಹೊಸದಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಯೋಜನೆ ರೂಪಿಸುತ್ತಿರುವುದು ಗೊತ್ತಾಗಿದೆ. ಪಾಕ್ ಗಡಿಯಿಂದ ಭಾರತದೊಳಕ್ಕೆ ಡ್ರೋನ್ ಮೂಲಕ ಉಗ್ರರನ್ನು ಇಳಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ಸಂಬಂಧ ಪರೀಕ್ಷೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಸುಮಾರು 70 ಕೆಜಿ ಪೇಲೋಡ್‌ ಸಾಮರ್ಥ್ಯದ ಡ್ರೋನ್‌ಗಳನ್ನು ಬಳಸಿಕೊಂಡು ಉಗ್ರರನ್ನು ಭಾರತ ಗಡಿಯಲ್ಲಿ ಇಳಿಸುವ ಇವರ ಯೋಜನೆ ಯಶಸ್ವಿಯಾದರೆ ಮತ್ತಷ್ಟು ಉಗ್ರ ಕೃತ್ಯಗಳು ನಡೆಯಬಹುದು. ಈ ಮೊದಲು ಪಾಕಿಸ್ತಾನ ಮೂಲದ ಉಗ್ರರು ಡ್ರೋನ್‌ ಮೂಲಕ ಗನ್, ಬಾಂಬ್ ಸೇರಿದಂತೆ ಶಸ್ತ್ರಾಸ್ತ್ರಗಳು ಹಾಗೂ ಮಾದಕ ವಸ್ತುಗಳನ್ನು ಭಾರತದ ಪ್ರದೇಶಕ್ಕೆ ಬೀಳಿಸುತ್ತಿದ್ದರು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ, ಉಗ್ರರನ್ನೇ ಡ್ರೋನ್ ಮೂಲಕ ಭಾರತದ ಪ್ರದೇಶದಲ್ಲಿ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗುಪ್ತಚರ ಮೂಲಗಳ ಪ್ರಕಾರ, ಕಳೆದ ತಿಂಗಳು ಇಂತಹ ಡ್ರೋನ್ ಬಳಸಿ ಭಯೋತ್ಪಾದಕನನ್ನು ಪಂಜಾಬ್‌ಗೆ ಪ್ರದೇಶದಲ್ಲಿ ಇಳಿಸಲಾಗಿದೆ.

ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಉಗ್ರರೂ ಅಪ್‌ಡೇಟ್‌ ಆಗುತ್ತಿದ್ದಾರೆ. ನಮ್ಮ ಸೈನ್ಯ ಸಾಕಷ್ಟು ಅಪ್‌ಡೇಟ್‌ ಆಗಿದೆ ಎಂದುಕೊಂಡಿದ್ದರೂ, ಉಗ್ರರು ಒಂದು ಹೆಜ್ಜೆ ಮುಂದಾಗಿಯೇ ಯೋಚಿಸುತ್ತಾರೆ ಎಂಬುದಕ್ಕೆ ಇದು ಸಾಕ್ಷಿ. ಡ್ರೋನ್‌ ಮೂಲಕ ಉಗ್ರರನ್ನು ಇಳಿಸುವ ಯೋಜನೆ ಮೊದಲಿಗೆ ಜೋಕ್‌ನಂತೆ ಕಾಣಿಸಬಹುದಾದರೂ, ಅಸಾಧ್ಯವೇನಲ್ಲ. ಒಸಾಮಾ ಬಿನ್‌ ಲಾಡೆನ್‌ ನ್ಯೂಯಾರ್ಕ್‌ನ ಅವಳಿ ಕಟ್ಟಡಗಳಿಗೆ ವಿಮಾನ ಗುದ್ದಿಸುವ ಮೊದಲು ಅಂಥದೊಂದು ಸಾಧ್ಯತೆಯನ್ನೂ ಯಾರೂ ಊಹಿಸಿರಲಿಲ್ಲ. ಹೀಗಾಗಿ ಉಗ್ರರ ನಡೆಗಳನ್ನು ಮುಂದಾಗಿಯೇ ಊಹಿಸಿ ಎಚ್ಚರ ವಹಿಸುವುದು ಅವಶ್ಯವಾಗಿದೆ. ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಗುಂಪುಗಳು ಮತ್ತು ಮಾದಕವಸ್ತು ಕಳ್ಳಸಾಗಣೆದಾರರು ಮುಖ್ಯವಾಗಿ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಭಾರತದ ಭೂಪ್ರದೇಶಕ್ಕೆ ಶಸ್ತ್ರಾಸ್ತ್ರಗಳು ಮತ್ತು ನಾರ್ಕೋ ಸರಕುಗಳನ್ನು ಸಾಗಿಸಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಗಡಿಗಳಲ್ಲಿ ಕಟ್ಟುನಿಟ್ಟಿನ ಪಹರೆಯ ಹೊರತಾಗಿಯೂ ಮಾದಕ ದ್ರವ್ಯ ಮಾರಾಟ ಜಾಲವು, ರಾಜಸ್ಥಾನ ಮತ್ತು ಗುಜರಾತ್‌ನ ಗಡಿಗಳಲ್ಲಿ ಮಾದಕ ವಸ್ತುಗಳನ್ನು ಡ್ರೋನ್‌ ಮೂಲಕ ಬೀಳಿಸಿ, ಅಲ್ಲಿಂದ ಸಹಚರರಿಂದ ರಸ್ತೆ ಮೂಲಕ ಪಂಜಾಬ್‌ಗೆ ಕಳ್ಳಸಾಗಣೆ ಮಾಡುತ್ತಿರುವುದು ವರದಿಯಾಗಿದೆ. ಈ ಡ್ರೋನ್‌ಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, 70 ಕೆಜಿವರೆಗೆ ಪೇಲೋಡ್ ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಡ್ರೋನ್‌ಗಳು ಭಯೋತ್ಪಾದಕರನ್ನೂ ಸುಲಭವಾಗಿ ಹೊತ್ತೊಯ್ಯಬಲ್ಲವು. ಅಲ್ಲದೇ ಸುಮಾರು 60 ಕಿ.ಮೀ.ವರೆಗೂ ಸಂಚರಿಸುವ ಶಕ್ತಿಯನ್ನು ಹೊಂದಿವೆ ಎಂದು ಹೇಳಲಾಗುತ್ತಿದೆ.

ಡ್ರೋನ್‌ನಂತ ಸೌಲಭ್ಯಗಳನ್ನು ಉಗ್ರರು ಬಳಸುತ್ತಿದ್ದಾರೆಂದರೆ, ಖಂಡಿತವಾಗಿಯೂ ಪಾಕಿಸ್ತಾನದ ಬೆಂಬಲ ಇಲ್ಲದೇ ಇದು ಸಾಧ್ಯವಿಲ್ಲ. ಈ ಎಲ್ಲ ಕೃತ್ಯಗಳ ಹಿಂದೆ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ಐ ಕೈವಾಡವಿದೆ. ಡ್ರೋನ್‌ಗಳ ಮೂಲಕ ಉಗ್ರರು ದೇಶದೊಳಗೆ ಬಂದು ಉಗ್ರ ಕೃತ್ಯಗಳನ್ನು ಎಸಗಿ ಮತ್ತೆ ಅದೇ ಡ್ರೋನ್‌ಗಳ ಮೂಲಕ ಪಾಕಿಸ್ತಾನಕ್ಕೆ ವಾಪಸ್‌ ಹೋಗುವ ಸಾಧ್ಯತೆಯೂ ಇದೆ. ಇಷ್ಟೊಂದು ಸಾಮರ್ಥ್ಯದ ಡ್ರೋನ್‌ಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಖಂಡಿತವಾಗಿಯೂ ಪಾಕಿಸ್ತಾನಕ್ಕೆ ಇಲ್ಲ. ಹೀಗಾಗಿ ಅದು ಚೀನಾದ ಗುಪ್ತಚರ ಇಲಾಖೆಯ ಬೆಂಬಲ ಪಡೆದಿರುವ ಸಾಧ್ಯತೆಯೂ ಇಲ್ಲದೇ ಇಲ್ಲ. ಅದೇನೇ ಇದ್ದರೂ ಇದರ ಮಾಸ್ಟರ್‌ ಮೈಂಡ್‌ಗಳು ಪಾಕ್‌ನ ಐಎಸ್‌ಐ ಎಂಬುದು ಖಚಿತ. ಆರ್ಥಿಕವಾಗಿ ದಿವಾಳಿಯೆದ್ದು ಹೋಗಿರುವ ಪಾಕಿಸ್ತಾನಕ್ಕೆ ತನ್ನನ್ನು ಸ್ವಂತ ಶಕ್ತಿಯಿಂದ ಮೇಲೆತ್ತಿಕೊಳ್ಳಲು ಸಾಧ್ಯವೇ ಇಲ್ಲದಾಗಿದೆ. ಅದರ ಬಳಿ ಇರುವ ಸಂಪನ್ಮೂಲ ಮತಾಂಧ ಶಕ್ತಿಗಳ ಕೈಗೆ ಶಸ್ತ್ರಾಸ್ತ್ರ ಕೊಡುವುದಕ್ಕೂ, ತಾಲಿಬಾನಿಗಳನ್ನು ಸಾಕುವುದಕ್ಕೂ ಬಳಕೆಯಾಗಿದೆ. ರಾಜಕೀಯ ಮುಖಂಡರು ಧಾರ್ಮಿಕ ಮುಖಂಡರ ಕೈಗೊಂಬೆಗಳಾಗಿದ್ದಾರೆ. ಸರ್ಕಾರಿ ಆಡಳಿತ ಸೈನ್ಯದ ಇಶಾರೆಯಂತೆ ನಡೆಯುತ್ತಿದೆ. ಹೊಟ್ಟೆಪಾಡಿಗಿಂತಲೂ ಜಿಹಾದ್‌ನ ಯೋಚನೆ ಹೆಚ್ಚಾಗಿ ಆಕ್ರಮಿಸಿಕೊಂಡಿದೆ. ಇಂಥ ದೇಶ ಕಾಶ್ಮೀರದ ಯುವಕರನ್ನು ಮುಜಾಹಿದೀನ್‌ಗಳಾಗಿ ಪರಿವರ್ತಿಸುವುದರಲ್ಲಿ ಆಶ್ಚರ್ಯವಿಲ್ಲ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪತ್ರಕರ್ತರಿಗೆ ಬಹಿಷ್ಕಾರ, ಪ್ರತಿಪಕ್ಷಗಳ ಕೂಟದಿಂದ ಹೊಸದೊಂದು ಹೀನ ಮಾದರಿ

ಜಮ್ಮು- ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದಾಗಿ ಎರಡು ವರ್ಷಗಳಾದವು. ಈ ಎರಡು ವರ್ಷಗಳಲ್ಲಿ ಅಲ್ಲಿನ ಜನಜೀವನ ಸುಧಾರಿಸಿದೆ. ಪ್ರವಾಸೋದ್ಯಮ ಚಿಗುರಿದೆ. ದೇಶೀಯ ಹಾಗೂ ವಿದೇಶೀಯ ಹೊಸ ಹೂಡಿಕೆಗಳು ಬರುತ್ತಿವೆ. ಭಾರತೀಯರು ಇಲ್ಲಿ ಆಸ್ತಿ ಹೊಂದುವಂತಾಗಿದೆ. ಇದು ಸಹಜವಾಗಿಯೇ ಇಲ್ಲಿ ಪ್ರತ್ಯೇಕತಾವಾದವನ್ನು ಬಿತ್ತಲು ದಶಕಗಳಿಂದ ಪ್ರಯತ್ನಿಸುತ್ತಿದ್ದ ಪಾಕಿಸ್ತಾನಕ್ಕೆ ಆದ ಹಿನ್ನಡೆ. ಇದರಿಂದಾಗಿಯೇ ಪಾಕ್‌ ಮತ್ತೆ ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಮುಂದಾಗಿರುವುದು. ದಿಲ್ಲಿಯಲ್ಲಿ ಜಿ20 ಶೃಂಗಸಭೆ ನಡೆದ ಸಂದರ್ಭದಲ್ಲಿ, ಅದನ್ನು ಹಾಳುಗೆಡವಲು ಯತ್ನಿಸಬೇಕು ಎಂದು ಉಗ್ರ ಸಂಘಟನೆ ಕರೆ ನೀಡಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶತಾಯಗತಾಯ ಭಾರತದ ಏಳಿಗೆಯನ್ನು ಹತ್ತಿಕ್ಕುವುದು ಪಾಕಿಸ್ತಾನದ ಕನಸು. ಅದು ಕನಸಾಗಿಯೇ ಉಳಿಯಲಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಭಾರತ ತಕ್ಕ ಎಚ್ಚರಿಕೆಯನ್ನಂತೂ ವಹಿಸಲೇಬೇಕಿದೆ. ನಮ್ಮ ಯೋಧರ ಸಾವಿಗೆ ಕಾರಣವಾದ ಉಗ್ರರನ್ನು ಹೊಸಕಿಹಾಕಿ ತಕ್ಕ ಉತ್ತರ ಕೊಡುವುದಂತೂ ನಮ್ಮ ಸದ್ಯದ ಆದ್ಯತೆಯಾಗಬೇಕಿದೆ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version