ಫಿಲಿಪ್ಪೀನ್ಸ್‌ಗೆ (Philippines) ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳ (BrahMos missiles) ಭೂ ಆವೃತ್ತಿಯ ನಾಲ್ಕನೇ ʼಬ್ಯಾಟರಿ’ಯನ್ನು ಭಾರತ ಕಳುಹಿಸುತ್ತಿದೆ. ಬ್ರಹ್ಮೋಸ್ ಕ್ಷಿಪಣಿಗಳ ಮೂರು ‘ಬ್ಯಾಟರಿ’ಗಳನ್ನು ಈಗಾಗಲೇ ದ್ವೀಪ ರಾಷ್ಟ್ರಕ್ಕೆ ಹಸ್ತಾಂತರಿಸಲಾಗಿದೆ. ಪ್ರತಿ ಬ್ಯಾಟರಿಯೂ ನಾಲ್ಕು ಲಾಂಚರ್‌ಗಳನ್ನು ಒಳಗೊಂಡಿರುತ್ತದೆ. ಪ್ರತಿ ಲಾಂಚರ್‌ನಲ್ಲೂ 290 ಕಿಮೀ ವ್ಯಾಪ್ತಿಯ ಮೂರು ಕ್ಷಿಪಣಿಗಳಿರುತ್ತವೆ. ಈ ಕ್ಷಿಪಣಿ ಸೂಪರ್‌ಸಾನಿಕ್ ವೇಗವನ್ನು ಹೊಂದಿರುತ್ತದೆ. ಇದನ್ನು ಭೂಮಿ ಅಥವಾ ಹಡಗು ಆಧಾರಿತ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ (BMDs) ವ್ಯವಸ್ಥೆಗಳಿಂದಲೂ ಎದುರಿಸುವುದು ತುಂಬಾ ಕಷ್ಟ. 2022ರಲ್ಲಿ ಭಾರತ- ಫಿಲಿಪ್ಪೀನ್ಸ್ ಸಹಿ ಮಾಡಿದ USD 375 ಮಿಲಿಯನ್ ಒಪ್ಪಂದದ ಭಾಗವಿದು. ಸದ್ಯ ಭಾರತದ ಬ್ರಹ್ಮೋಸ್ ದಾಖಲೆ ಮಾರಾಟ ಕಂಡಿದೆ. ಮುಂದಿನ ದಿನಗಳಲ್ಲಿ ಭಾರತವು ಈ ಸೂಪರ್‌ಸಾನಿಕ್ ಕ್ಷಿಪಣಿಗಳ ಹೆಚ್ಚಿನ ಆರ್ಡರ್‌ಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.
ಬ್ರಹ್ಮೋಸ್‌ನ ಫಿಲಿಪ್ಪೀನ್ಸ್ ಒಪ್ಪಂದದ ಮೂಲಕ, 2023-2024ರಲ್ಲಿ ಭಾರತದ ರಕ್ಷಣಾ ರಫ್ತು ₹21083 ಕೋಟಿಗಳನ್ನು ಮುಟ್ಟಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ ಶೇ.32.5ರಷ್ಟು ರಫ್ತು ಬೃಹತ್ ಬೆಳವಣಿಗೆಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಕಾರ, 2026ರ ವೇಳೆಗೆ ರಕ್ಷಣಾ ರಫ್ತನ್ನು 40 ಸಾವಿರ ಕೋಟಿ ರೂ. ದಾಟಿಸುವ ಗುರಿ ಹೊಂದಲಾಗಿದೆ. ಅನೇಕ ಕಾರಣಗಳಿಂದಾಗಿ ಇದೊಂದು ಮೈಲುಗಲ್ಲು. ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ರಫ್ತುಗಳು ಭಾರತದ ಜಿಡಿಪಿ ಬೆಳವಣಿಗೆ, ವಿದೇಶಾಂಗ ನೀತಿಯ ವರ್ಧನೆ ಇತ್ಯಾದಿಗಳಲ್ಲಿ ಗರಿಷ್ಠತೆ ಸಾಧಿಸಲು ಕಾರಣವಾಗುತ್ತಿರುವ ಬೆಳವಣಿಗೆಗಳು. ಈ ಹಿಂದೆ ಪ್ರತಿಯೊಂದು ಶಸ್ತ್ರಕ್ಕೂ ಭಾರತ ವಿದೇಶಗಳನ್ನು ಅವಲಂಬಿಸಿತ್ತು. ಆದರೆ ಈಗ ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧ ನೌಕೆಗಳನ್ನೂ ಭಾರತದಲ್ಲೇ ತಯಾರಿಸಲಾಗುತ್ತಿದೆ. ಪಾಕಿಸ್ತಾನ ಹೊರತುಪಡಿಸಿ ಇತರ ಹಲವು ನೆರೆದೇಶಗಳಿಗೆ ಭಾರತ ಯಥೇಚ್ಛವಾಗಿ ಶಸ್ತ್ರಾಸ್ತ್ರ ರಫ್ತು ಮಾಡುತ್ತಿದೆ. ಮಿಲಿಟರಿ ಸಾಧನಗಳಿಗಾಗಿ ಭಾರತ ಪ್ರತಿವರ್ಷ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿದೆ. ಈ ನಿಟ್ಟಿನಲ್ಲಿ ಈಗಿನ ಶಸ್ತ್ರಾಸ್ತ್ರ ರಫ್ತು ದಾಖಲೆ ದೇಶದ ಪ್ರಗತಿ ಮತ್ತು ಸ್ವಾವಲಂಬನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ
ಈಗಾಗಲೇ ಭಾರತ ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು, ಮಾರಿಷಸ್‌ಗೆ ಹಗುರ ಯುದ್ಧ ವಿಮಾನಗಳನ್ನು, ವಿಯೆಟ್ನಾಂಗೆ ಅತಿವೇಗದ ರಕ್ಷಣಾ ಬೋಟ್‌ಗಳನ್ನು, ಆರ್ಮೇನಿಯಾಕ್ಕೆ ಆಯುಧಶೋಧಕ ರೇಡಾರ್‌ಗಳನ್ನು, ಇಟಲಿ, ಮಾಲ್ದೀವ್ಸ್, ಶ್ರೀಲಂಕಾ, ಮಲೇಷಿಯಾ ಮುಂತಾದ ಹಲವು ದೇಶಗಳಿಗೆ ಪಿನಾಕ ರಾಕೆಟ್ ಲಾಂಚರ್‌ಗಳನ್ನು ಹಾಗೂ ಇತರ ಹಲವು ತಂತ್ರಜ್ಞಾನಗಳನ್ನು ರಫ್ತು ಮಾಡುತ್ತಿದೆ. ರಕ್ಷಣಾ ಸಾಮಗ್ರಿಗಳ ರಫ್ತು ಜತಜತೆಗೇ ನೋಡಬೇಕಾದ ಇನ್ನೊಂದು ಸಂಗತಿ ಎಂದರೆ, ಇಸ್ರೋ ಸಂಸ್ಥೆಯು ಉಡಾಯಿಸುತ್ತಿರುವ ಉಪಗ್ರಹಗಳು. ಸ್ಥಳೀಯ ತಂತ್ರಜ್ಞಾನದ ಉಪಗ್ರಹ ವಾಹಕಗಳನ್ನು (ಎಸ್‌ಎಲ್‌ವಿ) ನಾವು ತಯಾರಿಸಿದ್ದು, ಅವುಗಳ ಮೂಲಕ ಅಕ್ಕಪಕ್ಕದ ದೇಶಗಳ ಉಪಗ್ರಹಗಳನ್ನೂ ಕಕ್ಷೆಗೆ ಉಡಾಯಿಸುವ ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ನಮ್ಮ ದೇಶದ ಇಂಥ ಸಾಧನೆಗೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಎಚ್‌ಎಎಲ್, ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಹತ್ವದ ಕೊಡುಗೆ ನೀಡುತ್ತಿವೆ. ಡಿಆರ್‌ಡಿಒ ಅಭಿವೃದ್ಧಿಪಡಿಸುತ್ತಿರುವ ಡ್ರೋನ್‌ಗಳು ನಮ್ಮ ಗಡಿಯನ್ನು ಕಾಯುತ್ತಿರುವ ಯೋಧರಿಗೆ ಅತ್ಯುತ್ತಮ ಜತೆಗಾರರಾಗಿವೆ.
ರಫ್ತು ಮಾತ್ರವಲ್ಲ, ರಕ್ಷಣಾ ಸಾಮಗ್ರಿಗಳಲ್ಲಿ ಆತ್ಮನಿರ್ಭರತೆ ಕೂಡ ನಮ್ಮಿಂದ ಸಾಧ್ಯವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ತುಮಕೂರಿನ ಗುಬ್ಬಿಯಲ್ಲಿ ಪ್ರಧಾನಿ ಉದ್ಘಾಟಿಸಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕ. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತದೆ. ಇಲ್ಲಿ ಉತ್ಪಾದನೆಗೊಳ್ಳಲಿರುವ ಹಗುರ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್) ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಇದರಿಂದ ಭಾರತದ ವಾಯುಪಡೆ ಹಾಗೂ ವಾಯುಸಾರಿಗೆ ಇನ್ನಷ್ಟು ಸಮೃದ್ಧವಾಗಲಿವೆ. ಇದು ಒಂದು ಉದಾಹರಣೆ ಮಾತ್ರ. ಇನ್ನೊಂದು ಉದಾಹರಣೆ ಎಂದರೆ ಇತ್ತೀಚೆಗೆ ಪ್ರಯೋಗಾರ್ಥ ಉಡಾಯಿಸಲಾದ ಅಣ್ವಸ್ತ್ರ ಸಿಡಿತಲೆಯನ್ನು 5000 ಕಿಲೋಮೀಟರ್ ದೂರ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯ ಅಭಿವೃದ್ಧಿ. ಈ ಕ್ಷಿಪಣಿ ಚೀನಾದ ಉತ್ತರ ತುದಿಯಿಂದ ಹಿಡಿದು ಯುರೋಪಿನ ಬಹುತೇಕ ಭಾಗಗಳಿಗೂ ಗುರಿ ಇಟ್ಟು ದಾಳಿ ಮಾಡುವ ಸಾಮರ್ಥ್ಯ ಹೊಂದಿರುವುದು ಭಾರತದ ರಕ್ಷಣಾ ದೃಷ್ಟಿಯಿಂದ ಮಹತ್ವದ್ದು. ಹಾಗೆಯೇ ಕಳೆದ ತಿಂಗಳು ಪರೀಕ್ಷಿಸಲಾದ ಮಿಷನ್ ದಿವ್ಯಾಸ್ತ್ರ. ಇದು ಏಕಕಾಲಕ್ಕೆ ಹಲವು ಸಿಡಿತಲೆಗಳನ್ನು ಉಡಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ
ಇದೆಲ್ಲದರ ಹಿನ್ನೆಲೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಮತ್ತು ಆತ್ಮ ನಿರ್ಭರ ಭಾರತ ಅಭಿಯಾನ ಫಲ ಕೊಡಲಾರಂಭಿಸಿದೆ ಎನ್ನಬಹುದು. ಆದರೂ ಭಾರತ ತರಿಸಿಕೊಳ್ಳುತ್ತಿರುವ ಶಸ್ತ್ರಾಸ್ತ್ರಗಳ ಪ್ರಮಾಣ ಸಾಕಷ್ಟಿದೆ. ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಭಾರತವೂ ಒಂದು. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಹೆಚ್ಚಿದಷ್ಟು ಆಮದು ಕಡಿಮೆಯಾಗಬಹುದು. ರಫ್ತು ಹೆಚ್ಚಾದಷ್ಟು ನಮ್ಮ ಗಣ್ಯತೆ, ಜಿಡಿಪಿ, ವಿದೇಶಾಂಗ ಸಾಮರ್ಥ್ಯವೂ ಅಧಿಕವಾಗುತ್ತದೆ.