Site icon Vistara News

ವಿಸ್ತಾರ ಸಂಪಾದಕೀಯ: ಜ್ಞಾನವಾಪಿ ಮಸೀದಿ ತಗಾದೆಗೆ ಅಂತಿಮ ತೆರೆ ಯಾವಾಗ?

Vistara Editorial, Gyanvapi mosque case must be end shortly

ವಾರಾಣಸಿಯ ವಿಶ್ವನಾಥ ದೇಗುಲದ ಸನಿಹ ಇರುವ ಜ್ಞಾನವಾಪಿ ಮಸೀದಿ (Gyanvapi Mosque) ಆವರಣದಲ್ಲಿ ಹಿಂದೂಗಳು ಪೂಜೆ ಮಾಡಬಹುದು ಎಂದು ವಾರಾಣಸಿ ಜಿಲ್ಲಾ ಕೋರ್ಟ್​ ಆದೇಶ ನೀಡಿದೆ. ಈ ಪ್ರಕರಣ ಮಸೀದಿ ಆವರಣದಲ್ಲಿರುವ ಸೋಮನಾಥ ವ್ಯಾಸ್ ನೆಲಮಾಳಿಗೆಗೆ ಸಂಬಂಧಿಸಿದ್ದಾಗಿದೆ. ಸೋಮನಾಥ್​ ಅವರ ಕುಟುಂಬವು 1993ರವರೆಗೆ ಇಲ್ಲಿ ಪೂಜೆ ಸಲ್ಲಿಸುತ್ತಿತ್ತು. ಉತ್ತರ ಪ್ರದೇಶ ಸರ್ಕಾರದ ಆದೇಶದ ನಂತರ ನೆಲಮಾಳಿಗೆಯಲ್ಲಿ ಪೂಜೆ ನಿಲ್ಲಿಸಲಾಗಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಮಸೀದಿ ಆವರಣದಲ್ಲಿ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ಸಮಯದಲ್ಲಿ ನೆಲಮಾಳಿಗೆಯನ್ನು ಸ್ವಚ್ಛಗೊಳಿಸಲಾಗಿದೆ. ಜನವರಿ 17ರಂದು ವ್ಯಾಸ್ ಅವರ ನೆಲಮಾಳಿಗೆಯನ್ನು ಜಿಲ್ಲಾಡಳಿತ ಸ್ವಾಧೀನಪಡಿಸಿಕೊಂಡಿತ್ತು. ಇದೀಗ ಕೋರ್ಟ್​ ಆದೇಶ ಹಿಂದೂಗಳ ಪರ ಬಂದಿದೆ. ಏಳು ದಿನಗಳಲ್ಲಿ ಪೂಜೆ ಪ್ರಾರಂಭವಾಗಲಿದೆ. ಪ್ರತಿಯೊಬ್ಬರಿಗೂ ಪೂಜೆ ಮಾಡುವ ಹಕ್ಕಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಅಂಜುಮನ್ ಇಂತೆಜಾಮಿಯಾ ಮಸ್ಜಿದ್​ ಸಮಿತಿ ಈ ಆದೇಶವನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ(Vistara Editorial).

ಕಾಶಿಯ ವಿಶ್ವನಾಥ ದೇವಾಲಯ- ಜ್ಞಾನವಾಪಿ ಮಸೀದಿಯ ತಗಾದೆ ಇಂದು ನಿನ್ನೆಯದಲ್ಲ. ಕಾಶಿ ವಿಶ್ವನಾಥ ದೇವಾಲಯವನ್ನು ಮಹಾರಾಜ ವಿಕ್ರಮಾದಿತ್ಯ ಸುಮಾರು 2,050 ವರ್ಷಗಳ ಹಿಂದೆ ನಿರ್ಮಿಸಿದ ಎಂದು ನಂಬಲಾಗುತ್ತದೆ. ವಿಶ್ವನಾಥ ದೇವಾಲಯ ಇತಿಹಾಸದಲ್ಲಿ ಹಲವಾರು ಬಾರಿ ಕೆಡವಲ್ಪಟ್ಟಿದೆ ಮತ್ತು ಪುನರ್ನಿರ್ಮಾಣಗೊಂಡಿದೆ. ಇತಿಹಾಸಕಾರರ ಪ್ರಕಾರ, 1669ರಲ್ಲಿ ಔರಂಗಜೇಬ್ ಈ ಸ್ಥಳದಲ್ಲಿ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ. ಈಗ ಇರುವ ವಿಶ್ವನಾಥ ದೇವಾಲಯವನ್ನು 18ನೇ ಶತಮಾನದಲ್ಲಿ ಮಾಳವ ಸಾಮ್ರಾಜ್ಯದ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಮರುನಿರ್ಮಾಣ ಮಾಡಿದರು. ಆಗ ಮಸೀದಿ ಪಕ್ಕದಲ್ಲೇ ಇತ್ತು. ಮಸೀದಿಯನ್ನು ಅವರು ಕೆಡವಲಿಲ್ಲ. ಹೀಗಾಗಿ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಸ್ಥಾನದೊಂದಿಗೆ ಗಡಿ ಗೋಡೆಯನ್ನು ಹಂಚಿಕೊಂಡಿದೆ. ಆದರೆ ಅವುಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳು ವಿವಿಧ ದಿಕ್ಕುಗಳಲ್ಲಿವೆ.

ಹಿಂದೂ ಪರವಾದ ಫಿರ್ಯಾದಿ ಪ್ರಕಾರ, ಜ್ಞಾನವಾಪಿ ಮಸೀದಿಯು ದೇವಾಲಯದ ಪ್ರಮುಖ ಭಾಗವೇ ಆಗಿದೆ. ಕೋರ್ಟ್‌ಗಳಲ್ಲಿ ಇದಕ್ಕೆ ಸಂಬಂಧಿಸಿದ ಹಲವು ಅರ್ಜಿಗಳಿವೆ. ಒಂದು, ಇಂದು ಪೂಜೆಗೆ ಅವಕಾಶ ನೀಡಲಾಗಿರುವ ನೆಲಮಾಳಿಗೆಯ ಕುರಿತ ಅರ್ಜಿ. ಇದಕ್ಕೂ ಮೊದಲು ಮಸೀದಿ ಪಶ್ಚಿಮ ಭಾಗದ ಗೋಡೆಯಲ್ಲಿರುವ ಶೃಂಗಾರ ಗೌರಿ ಮೂರ್ತಿಯ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಐವರು ಮಹಿಳೆಯರು ಕೋರ್ಟ್ ಮೊರೆ ಹೋಗಿದ್ದರು. ಆ ಪ್ರಕರಣವು ಇನ್ನೂ ಚಾಲ್ತಿಯಲ್ಲಿದೆ. ಇನ್ನು ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಪೂಜಾಮಂದಿರವನ್ನು ಮರುಸ್ಥಾಪಿಸಲು ಕೋರಿರುವ ಅರ್ಜಿಯ ವಿಚಾರಣೆಗೆ ಅಲಹಾಬಾದ್‌ ಹೈಕೋರ್ಟ್ ಅಸ್ತು ಎಂದಿದೆ. ಈ ಅರ್ಜಿಯ ವಿಚಾರಣೆಯನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಮುಸ್ಲಿಮರ ಐದು ಅರ್ಜಿಗಳನ್ನು ವಜಾ ಮಾಡಿದೆ. ಹೀಗೆ ಹಲವು ಪ್ರಕರಣಗಳು ವಿವಿಧ ಹಂತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿವೆ.

ಇನ್ನೊಂದು ಕಡೆ 2023ರ ಡಿಸೆಂಬರ್‌ ತಿಂಗಳಲ್ಲಿ ಎಎಸ್‌ಐ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ತಾನು ಕೈಗೊಂಡ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪ್ರಾಚೀನ ಕಾಲದ ಹಿಂದೂ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಲು ಸಮೀಕ್ಷೆ ಕೈಗೊಳ್ಳುವಂತೆ ನ್ಯಾಯಾಲಯವು ಎಎಸ್‌ಐ ಆದೇಶಿಸಿತ್ತು. ವರದಿಯಲ್ಲಿ, ಹಿಂದೂ ದೇವಾಲಯದ ಅವಶೇಷಗಳು ಮಸೀದಿ ಆವರಣದಲ್ಲಿ ಲಭ್ಯವಾಗಿವೆ ಎಂದು ವರದಿ ತಿಳಿಸಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾರೆ. ಈ ಕುರಿತು ಮುಂದಿನ ಹಂತದಲ್ಲಿ ನ್ಯಾಯಾಲಯ ಏನು ಹೇಳುತ್ತದೋ ತಿಳಿಯದು.

ಇದರ ನಡುವೆ, 1991ರ ಪೂಜಾ ಸ್ಥಳಗಳ ಕಾಯಿದೆಯ ಪ್ರಶ್ನೆಯೂ ಇದೆ. ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಸಮಿತಿ ಮತ್ತು ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ನ ಪ್ರಾಥಮಿಕ ವಾದವೆಂದರೆ, 1991ರ ಪೂಜಾ ಸ್ಥಳಗಳ ಕಾಯಿದೆ (ವಿಶೇಷ ನಿಬಂಧನೆಗಳು) ಪ್ರಕಾರ ಈ ಮೊಕದ್ದಮೆಗಳನ್ನು ವಿಚಾರಣೆಗೆ ಎತ್ತಿಕೊಳ್ಳಬಾರದು. ಈ ಕಾಯಿದೆ 1947ರ ಆಗಸ್ಟ್ 15ರಂದು ಧಾರ್ಮಿಕ ಸ್ಥಳಗಳು ಹೇಗಿದ್ದವೋ ಆ ಸ್ವರೂಪವನ್ನು ಬದಲಾಯಿಸುವುದನ್ನು ನಿರ್ಬಂಧಿಸುತ್ತದೆ. ಅದು ಇಲ್ಲಿ ಅನ್ವಯವಾಗುತ್ತದೆಯೇ ಇಲ್ಲವೇ ಎಂಬ ಪ್ರಮುಖ ಪ್ರಶ್ನೆಯನ್ನು ಇನ್ನೂ ಕೋರ್ಟ್‌ಗಳು ನಿರ್ಧರಿಸಬೇಕಿದೆ. ಇದೊಂದು ಜಟಿಲ ಪ್ರಶ್ನೆ. ಈ ಪ್ರಶ್ನೆಯ ಉತ್ತರದ ಮೇಲೆ ಪ್ರಕರಣ ಮುಂದೆ ಏನಾಗುತ್ತದೆ ಎಂಬುದು ನಿರ್ಧಾರವಾಗಲಿದೆ.

ಅದೆಲ್ಲಾ ಏನೇ ಇದ್ದರೂ, ದೇಶದಲ್ಲಿ ಹಿಂದೂ- ಮುಸ್ಲಿಂ ಸಹಬಾಳ್ವೆಗೆ ಈ ವಿವಾದ ಬೇಗ ಇತ್ಯರ್ಥವಾಗುವುದು ಅಗತ್ಯ. 500 ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿಯ ಮಂದಿರವನ್ನು ಹಾಳುಗೆಡವಿದ ಬಾಬರನ ಕೃತ್ಯ ದೇಶದ ಸಾಮರಸ್ಯಕ್ಕೆ ಯಾವ ಪ್ರಮಾಣದ ಧಕ್ಕೆ ತಂದಿತು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಕಾಶಿಯೂ ಅಂಥದೇ ಇನ್ನೊಂದು ವಿವಾದ ಆಗುವುದು ಬೇಕಿಲ್ಲ. ಹಿಂದೂ- ಮುಸ್ಲಿಂ ಎರಡೂ ಕಡೆಯವರು ಒಂದೆಡೆ ಕುಳಿತು ವಿವಾದವನ್ನು ಸಾಮರಸ್ಯದಿಂದ ಇತ್ಯರ್ಥಪಡಿಸುವುದು ಸಾಧ್ಯವಾದರೆ ಒಳಿತು. ʼಬಾಬರಿ ಮಸೀದಿಯ ಸ್ಥಳವನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಿದ್ದರೆ ಅದೊಂದು ಮಾದರಿ ಆಗುತ್ತಿತ್ತುʼ ಎಂದು ಪ್ರಾಜ್ಞರು ಹಿಂದೆ ಹೇಳಿದ್ದುಂಟು. ಅದು ಆಗಲಿಲ್ಲ; ಕಾಶಿಯ ವಿಚಾರದಲ್ಲಾದರೂ ಈ ವಿವೇಕ ಕೆಲಸ ಮಾಡುತ್ತದೆಯೋ; ಅಥವಾ ಕೋರ್ಟುಗಳು ತಮ್ಮದೇ ಆದ ಕ್ರಮ ತೆಗೆದುಕೊಳ್ಳುತ್ತವೆಯೋ ನೋಡಬೇಕಿದೆ.

ಈ ಸುದ್ದಿಯನ್ನೂ ಓಧಿ: ವಿಸ್ತಾರ ಸಂಪಾದಕೀಯ: ಹೃದ್ರೋಗಿಗಳಿಗೆ ಡಾ. ಸಿ.ಎನ್. ಮಂಜುನಾಥ್ ಸೇವೆ ಅವಿಸ್ಮರಣೀಯ

Exit mobile version