ಉನ್ನತ ಶಿಕ್ಷಣ ಪಡೆಯುತ್ತಿರುವ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 2016-17ರ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 17.39 ಲಕ್ಷ ಮುಸ್ಲಿಮ್ ವಿದ್ಯಾರ್ಥಿಗಳು ದಾಖಲಾಗಿದ್ದರು. ಆ ಪ್ರಮಾಣ 2020- 21ರ ಸಾಲಿಗೆ 19.22 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಸಚಿವ ಸುಭಾಶ್ ಸರ್ಕಾರ್ ತಿಳಿಸಿದ್ದಾರೆ. ಮುಸ್ಲಿಂ ಸಮುದಾಯದ ಶಿಕ್ಷಕರ ಸಂಖ್ಯೆ ಕೂಡ 2016-17ರಲ್ಲಿನ 67,215 ರಿಂದ 2020-21ರಲ್ಲಿ 86,314ಕ್ಕೆ ಗಣನೀಯವಾಗಿ ಏರಿಕೆಯಾಗಿದೆ ಎಂದೂ ತಿಳಿಸಿದ್ದಾರೆ. ಇದು 2020-21ರ ಸಾಲಿನ ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆ(AISHE)ಯ ವರದಿಯ ಅಂಕಿ ಅಂಶ. ಇದೊಂದು ಮೆಚ್ಚಲೇಬೇಕಾದ ವಿಚಾರವಾಗಿದೆ.
ಅಲ್ಪಸಂಖ್ಯಾತ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಸರ್ಕಾರವು ಸಾಕಷ್ಟು ಉತ್ತೇಜನ ನೀಡುತ್ತಿರುವುದರಲ್ಲಿ ಸಂಶಯವಿಲ್ಲ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ದೇಶದಾದ್ಯಂತ ಬೌದ್ಧ, ಕ್ರಿಶ್ಚಿಯನ್, ಜೈನ್, ಮುಸ್ಲಿಂ, ಸಿಖ್ ಮತ್ತು ಝರಾಸ್ಟಿಯನ್- ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೂರು ಶೈಕ್ಷಣಿಕ ಸಬಲೀಕರಣ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಮೂಲಕ ಮುಸ್ಲಿಂ ಯುವ ಜನ ಉನ್ನತ ಶಿಕ್ಷಣದತ್ತ ಹೊರಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇತ್ತೀಚೆಗೆ ಜಮ್ಮು- ಕಾಶ್ಮೀರದ ಮೂವರು ಮುಸ್ಲಿಂ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದುದನ್ನೂ ಇಲ್ಲಿ ನೆನೆಯಬಹುದು. ಕಾಶ್ಮೀರದಲ್ಲಿ ಉನ್ನತ ಶಿಕ್ಷಣ ಪಡೆಯುವ, ಉತ್ತಮ ಸರ್ಕಾರಿ ಸೇವೆಗಳಿಗೆ ಸೇರುವ, ಖಾಸಗಿ ಉದ್ಯಮಗಳನ್ನು ತೆರೆಯುವ, ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರುವ ಮುಸ್ಲಿಂ ಯುವಜನತೆಯ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅವಕಾಶ ಪಡೆದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ.
ಇದೊಂದು ಉತ್ತಮ ಬೆಳವಣಿಗೆಯೇ ಆದರೂ, ಆಗಬೇಕಾದ ಕೆಲಸ ಇನ್ನೂ ತುಂಬಾ ಇದೆ. ಸಾಚಾರ್ ವರದಿ ಪ್ರಕಾರ ಈಗಲೂ ಮುಸ್ಲಿಮರ ಸ್ಥಿತಿಗತಿ ಇತರ ಸಮುದಾಯಕ್ಕೆ ಹೋಲಿಸಿದರೆ ಕೆಳ ಮಟ್ಟದಲ್ಲಿದೆ. 2006ರಲ್ಲಿ ಡಾ. ಮನಮೋಹನ್ ಸಿಂಗ್ ಅವರ ಸರ್ಕಾರ ದೇಶದ ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿ ವರದಿ ತಯಾರಿಸಲು ಜಸ್ಟಿಸ್ ಸಾಚಾರ್ ಅವರ ನೇತೃತ್ವದ ಸಮಿತಿಯನ್ನು ನೇಮಕ ಮಾಡಿತು. ದೇಶದಲ್ಲೇ ಅತ್ಯಂತ ಕೆಳಮಟ್ಟದಲ್ಲಿ ಇರುವವರೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಿಂತಲೂ ಮುಸ್ಲಿಮರ ಸ್ಥಿತಿಗತಿ, ಶೈಕ್ಷಣಿಕ ಸನ್ನಿವೇಶ ಕೆಳಮಟ್ಟದಲ್ಲಿದೆ ಎಂದು ಸಾಚಾರ್ ಸಮಿತಿ ವರದಿ ತಿಳಿಸಿತು. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಮುಸ್ಲಿಂ ಸಮಾಜವನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಬಲೀಕರಿಸಲು ಆಗಿನ ಕಾಂಗ್ರೆಸ್ ಸರ್ಕಾರವಾಗಲೀ ನಂತರದ ಸರ್ಕಾರಗಳಾಗಲೀ ಗಂಭೀರ ಪ್ರಯತ್ನ ನಡೆಸಲಿಲ್ಲ. ಕಾಂಗ್ರೆಸ್ ಸೇರಿದಂತೆ ಬಹುತೇಕ ಪಕ್ಷಗಳು ಮುಸ್ಲಿಮರನ್ನು ಮತ ಬ್ಯಾಂಕಾಗಿ ಬಳಸಿಕೊಂಡಷ್ಟು ಅವರ ಶಿಕ್ಷಣ, ಉದ್ಯೋಗ ಸುಧಾರಣೆಗೆ ಶ್ರಮಿಸಿಲ್ಲ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಪರಿಶಿಷ್ಟರ ಕಲ್ಯಾಣದ ಹಣವನ್ನು ಗ್ಯಾರಂಟಿಗೆ ಬಳಸಬೇಡಿ
ಬಡತನ, ಅತೀ ಕಡಿಮೆ ಶಾಲಾ ಪ್ರವೇಶಾತಿ, ಅರ್ಧದಲ್ಲೇ ಶಾಲೆ ಬಿಡುವುದು, ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಣೆ ಮೊದಲಾದ ಪರಿಸ್ಥಿತಿಗಳು ಮುಸ್ಲಿಂ ಮಕ್ಕಳಿಗೆ ಶಿಕ್ಷಣವನ್ನು ಗಗನಕುಸುಮ ಮಾಡಿವೆ. ಮುಸ್ಲಿಂ ಸಮಾಜ ಅನೇಕ ಬಾರಿ ಧಾರ್ಮಿಕ ಶಿಕ್ಷಣಕ್ಕೆ ಒತ್ತು ನೀಡಿ ಲೌಕಿಕ ಶಿಕ್ಷಣದಿಂದ ವಂಚಿತವಾಗಿದೆ. ತುಂಬಾ ಮಕ್ಕಳು ಸಾಮುದಾಯಿಕ ಶಾಲೆ, ಮದ್ರಸಗಳಲ್ಲಿ ಕಲಿಯುವುದಕ್ಕಿಂತ ಸರ್ಕಾರಿ ಶಾಲೆಗಳಲ್ಲಿ ಕಲಿಯಲು ಉತ್ಸುಕರಾಗಿದ್ದರೂ ಪ್ರೋತ್ಸಾಹವಿಲ್ಲ. ಈ ಪರಿಸ್ಥಿತಿ ಸರಿಹೋಗಬೇಕು. ಸರ್ಕಾರ ನೀಡಿರುವ ಒತ್ತಾಸೆಯನ್ನು ಸಮುದಾಯ ಚೆನ್ನಾಗಿ ಬಳಸಿಕೊಳ್ಳಬೇಕು. ಅಲ್ಲಿ ಇಲ್ಲಿ ಮುಸ್ಲಿಂ ಸಮುದಾಯದ ಹಲವರು ವೈಯಕ್ತಿಕ ಪ್ರತಿಭೆಯಿಂದ ಮೇಲೆ ಬಂದರೆ ಸಾಲದು. ಯಾವುದೇ ಸಮುದಾಯ ಶಿಕ್ಷಣ ಪಡೆದಷ್ಟೂ ಸುಧಾರಣೆಯಾಗುತ್ತ ಹೋಗುತ್ತದೆ. ಸಮುದಾಯವೇ ಉನ್ನತ ಶಿಕ್ಷಣದತ್ತ ತೆರೆದುಕೊಂಡರೆ ಅದು ನಿಜಕ್ಕೂ ದೇಶಕ್ಕೆ ಉಜ್ವಲ ಭವಿಷ್ಯಕ್ಕೆ ಕೊಡುಗೆಯಾಗುತ್ತದೆ.