ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ ಭೀಕರ ದಾಳಿಯ ಪರಿಣಾಮ ಸಾವಿರಾರು ಜನರು ಮೃತಪಟ್ಟಿದ್ದಾರೆ. ಪ್ರತಿಯಾಗಿ ಇಸ್ರೇಲ್ ಕೂಡ ಹಮಾಸ್ ಬಂಡುಕೋರರು ಇರುವ ಗಾಜಾ ಪಟ್ಟಿಯ ಮೇಲೆ ಅಧಿಕೃತವಾಗಿ ಯುದ್ಧವನ್ನು ಆರಂಭಿಸಿದೆ. ಈ ಒಂದು ವಾರದಲ್ಲಿ ಎರಡೂ ಕಡೆ ಭಾರೀ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿವೆ; ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ಕರೆ ತರುವುದಕ್ಕಾಗಿ ಭಾರತ ಸರ್ಕಾರವು, ಅಕ್ಟೋಬರ್ 11ರಿಂದಲೇ ‘ಆಪರೇಷನ್ ಅಜಯ್’ (Operation Ajay) ಆರಂಭಿಸಿದೆ. ಮೂರನೇ ಹಂತದ ಕಾರ್ಯಾಚರಣೆಯಲ್ಲಿ ಕನ್ನಡಿಗರು ಸೇರಿದಂತೆ 197 ಭಾರತೀಯರನ್ನು ಸುರಕ್ಷಿತವಾಗಿ ಶನಿವಾರ ತಡ ರಾತ್ರಿ ಭಾರತಕ್ಕೆ ಕರೆ ತರಲಾಗಿದೆ. ಮೊದಲ ಹಂತದಲ್ಲಿ 212, ಎರಡನೇ ಹಂತದಲ್ಲಿ 235 ಭಾರತೀಯರು ಸ್ವದೇಶಕ್ಕೆ ಬಂದಿದ್ದಾರೆ. ವಿದೇಶಗಳಲ್ಲಿ ವಿಪ್ಲವಗಳು ಸೃಷ್ಟಿಯಾದಾಗ ಭಾರತವು ಎಲ್ಲ ರಾಷ್ಟ್ರಗಳಿಗಿಂತ ಮೊದಲು ತನ್ನ ಪ್ರಜೆಗಳನ್ನು ರಕ್ಷಣೆ ಮಾಡುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಷ್ಟೇ(Vistara Editorial).
ಆಂತರಿಕ ಸಂಘರ್ಷ, ಸೇನಾ ಕಾರ್ಯಾಚರಣೆ, ಯುದ್ಧ, ಭೂಕಂಪ ಇತ್ಯಾದಿ ಬಿಕ್ಕಟ್ಟಿನ ಸಂದರ್ಭ ಬೇರೆ ದೇಶಗಳಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಕೇಂದ್ರ ಸರ್ಕಾರ ಸಾಹಸಿಕ ಕಾರ್ಯಾಚರಣೆ ಮೂಲಕ ಹಲವು ಬಾರಿ ಪಾರು ಮಾಡುತ್ತಾ ಬಂದಿದೆ. ಆಫ್ಘಾನಿಸ್ತಾನ, ಉಕ್ರೇನ್, ಟರ್ಕಿ, ಇಸ್ರೇಲ್ ಮೊದಲಾದವುಗಳನ್ನು ಇತ್ತೀಚಿನ ಉದಾಹರಣೆಯಾಗಿ ಗಮನಿಸಬಹುದು. ಭಾರತ ನಡೆಸಿದ ಇಂಥ ಹಲವು ಕಾರ್ಯಾಚರಣೆಗಳು ಇನ್ನಿತರ ಬೃಹತ್ ದೇಶಗಳಿಂದಲೂ ಸಾಧ್ಯವಾಗಿಲ್ಲ. ಸಂಕಟಪೀಡಿತ ದೇಶಗಳಲ್ಲಿ ಮನೆಯಿಂದ ಹೊರಗಡೆ ಬರಬೇಡಿ ಎಂದು ವಿದೇಶಾಂಗ ಕಚೇರಿ ಸೂಚನೆ ನೀಡಿದ್ದರೂ, ದಿನಸಿ ಮುಂತಾದ ಅಗತ್ಯ ವಸ್ತುಗಳಿಗಾಗಿ ಹೊರಗೆ ಬರಲೇಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಆಗ ನಮ್ಮ ಪ್ರಜೆಗಳು ತೊಂದರೆಗೆ ಸಿಲುಕುವ ಪ್ರಸಂಗಗಳೇ ಹೆಚ್ಚು. ಇಂಥ ಸಂದರ್ಭದಲ್ಲಿ ಆಯಾ ದೇಶಗಳಲ್ಲಿರುವ ಭಾರತದ ದೂತವಾಸ ಕಚೇರಿಗಳು ಭಾರತೀಯ ನಾಗರಿಕರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿರುತ್ತದೆ. ನಾವು ಅನೇಕ ಬಾರಿ ಇಂಥ ಉದಾಹರಣೆಗಳನ್ನು ಕಂಡಿದ್ದೇವೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹಮಾಸ್ ಉಗ್ರರ ಸಮರ್ಥಕರು ಭಯೋತ್ಪಾದಕರಿಗೆ ಸಮಾನರು
ಭಾರತವು 1987ರಿಂದಲೂ ಇಂಥ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಾ ಬಂದಿದೆ. ಶ್ರೀಲಂಕಾದಲ್ಲಿ ನಾಗರಿಕ ಸಂಘರ್ಷ ಶುರುವಾದಾಗ 1987ರ ‘ಆಪರೇಷನ್ ಪೂಮಲೈ’ ಮೂಲಕ ಭಾರತೀಯರನ್ನು ರಕ್ಷಿಸಲಾಗಿತ್ತು. ಬಳಿಕ, ‘ಕುವೈತ್ ಏರ್‌ಲಿಫ್ಟ್’ ನಮ್ಮ ದೇಶದ ಸಾಮರ್ಥ್ಯವನ್ನು ಒರೆಗೆ ಹಚ್ಚಿದ ಕಾರ್ಯಾಚರಣೆ ಎನಿಸಿದೆ. ಕುವೈತ್ ಮೇಲೆ ಇರಾಕ್ ದಂಡೆತ್ತಿ ಬಂದಾಗ, ಕುವೈತ್‌ನಲ್ಲಿದ್ದ 1.70 ಲಕ್ಷ ಭಾರತೀಯರನ್ನು ವಾಪಸ್ ಕರೆತರುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ, ಭಾರತೀಯ ಧೂತವಾಸ ಕಚೇರಿ ಹಾಗೂ ಏರ್‌ಫೋರ್ಸ್ ಮತ್ತು ಸರ್ಕಾರದ ಸಮನ್ವಯದಿಂದಾಗಿ ಎಲ್ಲರನ್ನೂ ಭಾರತಕ್ಕೆ ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡಲಾಗಿತ್ತು. ಆ ಬಳಿಕ, ಇಸ್ರೇಲ್-ಲೆಬನಾನ್ ಸಂಘರ್ಷದ 2006ರ ‘ಆಪರೇಷನ್ ಸುಕೂನ್’ ವೇಳೆ ನೇಪಾಳಿ ಮತ್ತು ಶ್ರೀಲಂಕನ್ ಕೆಲವು ಪ್ರಜೆಗಳು ಸೇರಿದಂತೆ 2,280 ಭಾರತೀಯರನ್ನು ರಕ್ಷಣೆ ಮಾಡಲಾಗಿತ್ತು. 2011ರಲ್ಲಿ ‘ಆಪರೇಷನ್ ಸೇಫ್ ಹೋಮ್ ಕಮಿಂಗ್’ ಮೂಲಕ ಭಾರತದ ನೌಕಾ ಪಡೆ ಮತ್ತು ವಾಯು ಪಡೆಗಳು ಲಿಬಿಯಾದಿಂದ 15,400 ಭಾರತೀಯ ಪ್ರಜೆಗಳನ್ನು ತಾಯ್ನಾಡಿಗೆ ತಂದಿದ್ದವು. 2015ರಲ್ಲಿ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು. ಆಗ ಭಾರತೀಯ ವಾಯುಪಡೆಯು ನೇಪಾಳದಿಂದ 5 ಸಾವಿರ ಭಾರತೀಯರು ಮತ್ತು ಅಮೆರಿಕ, ಇಂಗ್ಲೆಂಡ್, ರಷ್ಯಾ ಮತ್ತು ಜರ್ಮನಿಯ 170 ನಾಗರಿಕರನ್ನು ‘ಆಪರೇಷನ್ ಮೈತ್ರಿ’ ಮೂಲಕ ರಕ್ಷಣೆ ಮಾಡಿತ್ತು. ಇದಾದ ಬಳಿಕ 2015ರ ‘ಆಪರೇಷನ್ ರಾಹತ್’ ಮೂಲಕ ಯೆಮೆನ್‌ನಿಂದ 5000 ಭಾರತೀಯರನ್ನು ಕರೆ ತರಲಾಗಿತ್ತು. 2016ರ ‘ಆಪರೇಷನ್ ಸಂಕಟ ಮೋಚನ್’ ಮೂಲಕ ದಕ್ಷಿಣ ಸುಡಾನ್, 2022 ‘ಆಪರೇಷನ್ ಗಂಗಾ’ ಮೂಲಕ ಉಕ್ರೇನ್‌ನಲ್ಲಿದ್ದ ಭಾರತೀಯರು ಮತ್ತು ವಿದ್ಯಾರ್ಥಿಗಳನ್ನು ವಾಪಸ್ ಕರೆದುಕೊಂಡು ಬರಲಾಗಿತ್ತು. ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದಾಗ 2023ರಲ್ಲಿ ಕೈಗೊಂಡ ‘ಆಪರೇಷನ್ ದೋಸ್ತ್’ ಯಾರೂ ಮರೆಯುವಂತಿಲ್ಲ. 2017ರ ‘ಆಪರೇಷನ್ ಇನ್ಸಾನಿಯತ್’, 2018ರ ‘ಆಪರೇಷನ್ ನಿಸ್ತಾರ್’, 2020 ‘ಆಪರೇಷನ್ ಸಮುದ್ರ ಸೇತು’, ‘ಆಪರೇಷನ್ ವಂದೇ ಭಾರತ್’, 2021 ‘ಆಪರೇಷನ್ ದೇವಿ ಶಕ್ತಿ’ ಮತ್ತು 2023ರ ‘ಆಪರೇಷನ್ ಕಾವೇರಿ’ ಮೂಲಕ ಕ್ರಮವಾಗಿ ಬಾಂಗ್ಲಾದೇಶ, ಯೆಮೆನ್ ಸೊಕೊಟ್ರಾ ದ್ವೀಪ, ಆಫಫಾನಿಸ್ತಾನ, ಸುಡಾನ್ ಮತ್ತು ಕೋವಿಡ್ ಸಾಂಕ್ರಾಮಿಕ ವೇಳೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡ ಭಾರತೀಯರನ್ನು ಯಶಸ್ವಿಯಾಗಿ ಸ್ವದೇಶಕ್ಕೆ ತರಲಾಗಿತ್ತು.
ಇಂದು ಯಾವುದೇ ದೇಶದಲ್ಲಿ ನಡೆಯುವ ಯುದ್ಧಗಳು, ಆಂತರಿಕ ವಿಪ್ಲವಗಳು, ನೈಸರ್ಗಿಕ ವಿಕೋಗಳು ಅಲ್ಲಿಗಷ್ಟೇ ಸೀಮಿತವಾಗುವುದಿಲ್ಲ. ಉಕ್ರೇನ್‌ನಲ್ಲಿ ಉಂಟಾದ ಸಮರದಿಂದ ಎಷ್ಟೊಂದು ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳ ಬದುಕು ದುಃಸ್ವಪ್ನವಾಯಿತು ಎಂದು ಕಂಡಿದ್ದೇವೆ. ಹಾಗೆಯೇ ಬೇರೆ ಬೇರೆ ದೇಶಗಳಿಗೆ, ವ್ಯಾಪಾರ- ಶಿಕ್ಷಣ- ಉದ್ಯೋಗ ನಿಮಿತ್ತವಾಗಿ ಹೋದವರು ಅಲ್ಲಿ ತಮ್ಮದೊಂದು ಜಗತ್ತನ್ನು ಸೃಷ್ಟಿಸಿಕೊಂಡಿರುತ್ತಾರೆ. ಯುದ್ಧದ ಕಾರಣದಿಂದ ಅಥವಾ ಇನ್ನಾವುದೋ ಕಾರಣದಿಂದಾಗಿ ಅಲ್ಲಿ ಚೂರಾಗುವ ಜಗತ್ತನ್ನು ಮರಳಿ ಕಟ್ಟಿಕೊಳ್ಳೂವ ಸವಾಲು ಬೇರೆ; ಮೊದಲು ಅಲ್ಲಿಂದ ಪಾರಾಗಿ ಬದುಕುಳಿದು ಬರುವ ಸವಾಲೇ ಬೇರೆ. ಮಾತೃನೆಲದ ಸಹಾಯವಿಲ್ಲದೆ ಅದು ಸಾಧ್ಯವಾಗದು. ಹಾಗಾಗಿ, ಅಂಥ ಜನರಿಗೆ ತಾಯ್ನಾಡಿನ ಬೆಂಬಲ ಅತ್ಯಗತ್ಯವಾಗಿ ಬೇಕಾಗುತ್ತದೆ. ಜೀವವೊಂದು ಉಳಿದರೆ ಮತ್ತೊಂದು ಹೊಸ ಬದುಕನ್ನು ಕಟ್ಟಿಕೊಳ್ಳಬಹುದು. ಇಂದು ಭಾರತ, ರಕ್ಷಣಾ ಕಾರ್ಯಾಚರಣೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿದೆ. ಆಧುನಿಕ ತಂತ್ರಜ್ಞಾನಗಳು, ವಾಯ, ಜಲ ಮತ್ತು ನೆಲ ಸಾರಿಗೆಯ ಸದ್ಭಳಕೆ ಮತ್ತು ಎಲ್ಲ ರಾಷ್ಟ್ರಗಳೊಂದಿಗೆ ಸ್ನೇಹ ಬೆಸುಗೆಯಿಂದಾಗಿ ಎಂಥದ್ದೇ ಸಂದರ್ಭದಲ್ಲೂ ರಕ್ಷಣಾ ಕಾರ್ಯಾಚರಣೆಯನ್ನು ಭಾರತವು ನೀರು ಕುಡಿದಷ್ಟೇ ಸುಲಭವಾಗಿ ಮಾಡುತ್ತದೆ. ಇದಕ್ಕಾಗಿ ನಮ್ಮ ಸರ್ಕಾರಗಳು ಪಾಲಿಸಿಕೊಂಡ ಬಂದ ನೀತಿಗಳು ಮತ್ತು ದೂರದೃಷ್ಟಿಗೆ ಮೆಚ್ಚುಗೆಯನ್ನು ನೀಡೋಣ.