ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಲೋಕಾರ್ಪಣೆ ಮಾಡಿದ್ದಾರೆ. ಜತೆಗೆ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹವನ್ನೂ ಉದ್ಘಾಟಿಸಿದ್ದಾರೆ. ರಕ್ಷಣೆ ಹಾಗೂ ಇಂಧನಗಳು ಬೆಳೆಯುತ್ತಿರುವ ಭಾರತಕ್ಕೆ ಅತ್ಯಗತ್ಯವಾದ ಎರಡು ಸಂಗತಿಗಳು. ಈ ಎರಡೂ ವಲಯಗಳಲ್ಲಿ ಸ್ವಾವಲಂಬನೆ, ವರ್ಧನೆಗೆ ಒತ್ತು ನೀಡುವ ಸಂಗತಿಗಳು ನಮ್ಮಲ್ಲಿ ನಡೆಯುತ್ತಿರುವ ಸ್ವಾಗತಾರ್ಹ ವಿಚಾರ. ರಕ್ಷಣೆ ಹಾಗೂ ಇಂಧನ ಕ್ಷೇತ್ರಗಳ ಆತ್ಮನಿರ್ಭರತೆಗೆ ಮೋದಿ ಮತ್ತಷ್ಟು ಶಕ್ತಿ ತುಂಬಿದ್ದಾರೆ.
ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಗುಬ್ಬಿಯ ಫ್ಯಾಕ್ಟರಿಯಲ್ಲಿ 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್‌ಗಳು ನಿರ್ಮಾಣವಾಗಲಿವೆ. ಇಲ್ಲಿ ಉತ್ಪಾದನೆಗೊಳ್ಳಲಿರುವ ಹಗುರ ಹೆಲಿಕಾಪ್ಟರ್‌ಗಳು (ಎಲ್‌ಯುಎಚ್) ದೇಶದ ಮಿಲಿಟರಿ ಮತ್ತು ನಾಗರಿಕ ಅಗತ್ಯಗಳನ್ನು ಪೂರೈಸಲಿವೆ. ಜಾಗತಿಕ ಗುಣಮಟ್ಟಗಳಿಗೆ ಅನುಗುಣವಾಗಿ ನಿರ್ಮಿತವಾಗುತ್ತಿರುವ ಎಲ್‌ಯುಎಚ್, ನಮ್ಮ ದೇಶದ ಹೆಮ್ಮೆಯ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ತಯಾರಾದ ಸ್ಥಳೀಯ ತಂತ್ರಜ್ಞಾನದ ಈ ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ, ಗಾಳಿಯ ಸಾಂದ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಕಾರ್ಯಾಚರಿಸಬಲ್ಲದು. ಭಾರತೀಯ ವಾಯುಪಡೆಗೆ ಅತ್ಯಂತ ಅಗತ್ಯವಾಗಿದ್ದ 394 ಲೈಟ್ ಹೆಲಿಕಾಪ್ಟರ್‌ಗಳನ್ನು ಇದು ಪೂರೈಸಲಿದೆ. 600ಕ್ಕೂ ಹೆಚ್ಚು ಎಲ್‌ಯುಎಚ್‌ಗಳು ನಾಗರಿಕ ಬಳಕೆಗೆ ದೊರೆಯಲಿವೆ. ವಾಯುಪಡೆ ಹಾಗೂ ವಾಯುಸಾರಿಗೆ ಬಲಿಷ್ಠವಾಗಬೇಕಾದುದು ಮುಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇದು ಸ್ವಾವಲಂಬನೆಗೆ ನೆರವಾಗಲಿದೆ.
ಗುಬ್ಬಿಯ ಹೆಲಿಕಾಪ್ಟರ್ ಘಟಕದಿಂದ ನೇರವಾಗಿ 4,000 ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಿರಾರು ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗಲಿವೆ. ಹೀಗೆ ಉದ್ಯೋಗ ಸೃಷ್ಟಿಯಾಗುವುದರಿಂದ ಪೂರಕ ಸೇವೆಗಳಾದ ಸಾರಿಗೆ, ಆತಿಥ್ಯ, ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳೂ ಬೆಳೆದು ಸುತ್ತಮುತ್ತಲಿನ ಪ್ರದೇಶಗಳೂ ಅಭಿವೃದ್ಧಿಯಾಗಲಿವೆ. ಎಚ್‌ಎಎಲ್ ಎಂಬುದೇ ನಮ್ಮ ದೇಶದ, ರಾಜ್ಯದ ಹೆಮ್ಮೆಯ ಗರಿ. ಅದು ಇದುವರೆಗೂ ನಮ್ಮ ದೇಶದ ರಕ್ಷಣೆಯ ಕಾರ್ಯಕ್ಕೆ ಪೂರಕವಾದ ಕೊಡುಗೆ ಕೊಟ್ಟಿದೆ; ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ. ಇಂದು ದೇಶದಲ್ಲಿ ಎಚ್‌ಎಎಲ್‌ನ 20 ಉತ್ಪಾದನಾ ಘಟಕಗಳೂ, 8 ಸಂಶೋಧನಾ ಹಾಗೂ ಅಭಿವೃದ್ಧಿ ಘಟಕಗಳೂ ಕಾರ್ಯಾಚರಿಸುತ್ತಿವೆ. ಸುಖೋಯ್ ಯುದ್ಧವಿಮಾನಗಳಿಂದ ಹಿಡಿದು ಗಗನಯಾನಿಗಳ ಪರಿಕರಗಳವರೆಗೆ ಅದರ ಉತ್ಪಾದನೆಯ ವ್ಯಾಪ್ತಿ ಹಬ್ಬಿದೆ. ಸ್ವಾವಲಂಬಿ ತಂತ್ರಜ್ಞಾನ ಹಾಗೂ ಉತ್ಪನ್ನಗಳ ಮೂಲಕ ದೇಶ ತಲೆಯೆತ್ತಿ ನಿಲ್ಲುವಂತೆ ಮಾಡಿದೆ.
ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆ, ಅತ್ಯುತ್ತಮ ಮಾನವ ಸಂಪನ್ಮೂಲ ಹಾಗೂ ಅತ್ಯಂತ ವೇಗದ ಬೆಳವಣಿಗೆಯು, ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ದರಲ್ಲಿ, ಕರ್ನಾಟಕದಲ್ಲಿ 15,000 ಮೆಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸಲಾಗುತ್ತಿದೆ. ರಾಜ್ಯದ ಶೇ. 50 ರಷ್ಟು ಇಂಧನವನ್ನು ನವೀಕರಿಸಬಹುದಾದ ಇಂಧನದ ಮೂಲಕ ಕರ್ನಾಟಕ ಉತ್ಪಾದಿಸುತ್ತಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ನಡೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಗ್ರೀನ್ ಹೈಡ್ರೊಜನ್ ವಿದ್ಯುತ್ ಉತ್ಪಾದನೆಗೆ 3 ಲಕ್ಷ ಕೋಟಿ ರೂ. ಬಂಡವಾಳ ಬಂದಿದ್ದು, ಅದರಲ್ಲಿ 2 ಲಕ್ಷ ಕೋಟಿ ರೂ. ನವೀಕರಿಸಬಹುದಾದ ಇಂಧನ ಉತ್ಪಾದನೆ ಕ್ಷೇತ್ರಕ್ಕೆ ಪ್ರಸ್ತಾವಿಸಲಾಗಿದೆ. ವಿದ್ಯುತ್ ಚಾಲಿತ ವಾಹನಗಳ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿಯೇ ನಂ.1 ಆಗುವ ಗುರಿಯಿದೆ. ಬಯೋ ಇಂಧನವಾದ ಎಥೆನಾಲ್ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪ್ರಧಾನಿ ಮೋದಿ 2046ರೊಳಗೆ ಮಾಲಿನ್ಯ ರಹಿತ ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದಾರೆ ಎಂದು ತಿಳಿಸಿದರು. ಅದು ದೊಡ್ಡ ಸವಾಲು ಹಾಗೂ ಅವಕಾಶ ಕೂಡ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚೀನಾ ನಂಟಿನ ಬೆಟ್ಟಿಂಗ್, ಸಾಲದ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಸೂಕ್ತ
ಮುಂದಿನ ದಿನಗಳಲ್ಲಿ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆ, ನವನವೀನತೆಯ ಆವಿಷ್ಕಾರ ಮಾಡದೆ ನಿರ್ವಾಹವಿಲ್ಲ. ಯಾಕೆಂದರೆ ಪ್ರತಿ ಮನೆಗೂ ಇಂಧನ ಅವಶ್ಯಕತೆ ಹೆಚ್ಚುತ್ತಲೇ ಸಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಅನೇಕ ಹೊಸ ನಗರಗಳ ನಿರ್ಮಾಣ ಆಗುತ್ತಿದ್ದು, ಮುಂದಿನ ದಶಕದಲ್ಲಿ ಭಾರತದಲ್ಲಿ ವಿಶ್ವದಲ್ಲೆ ಅತಿ ಹೆಚ್ಚು ಇಂಧನ ಬೇಡಿಕೆ ಇರಬಹುದು. ಅದಕ್ಕೆ ಅನುಗುಣವಾಗಿ ಹೂಡಿಕೆ ಮತ್ತು ಸಹಭಾಗಿತ್ವದ ಅವಕಾಶಗಳು ಕೂಡ ಹೆಚ್ಚಬೇಕು. ಆತ್ಮನಿರ್ಭರತೆಯನ್ನು ಹೆಚ್ಚಿಸುವಂಥ ದೇಸಿ ಉತ್ಪಾದನೆ, ಹಂಚಿಕೆಯಲ್ಲಿ ಸರಳತೆ, ಜೈವಿಕ ಇಂಧನ, ಎಥೆನಾಲ್‌ನಂತಹ ಪರ್ಯಾಯ ಇಂಧನ ಮೂಲಗಳ ಹೆಚ್ಚಳ, ವಿದ್ಯುತ್ ವಾಹನಗಳ ಹೆಚ್ಚಳ ಹಾಗೂ ಪೆಟ್ರೋಲ್ ಇಂಧನದ ಅವಲಂಬನೆ ಇಳಿಕೆ ಇವೆಲ್ಲ ಆಶಯಕ್ಕೆ ತಕ್ಕಂತೆ ಆದಾಗ ಭಾರತ ಇಂಧನ ವಿಚಾರದಲ್ಲಿ ವಿಶ್ವಕ್ಕೇ ಮಾದರಿಯಾಗಬಲ್ಲದು.