Site icon Vistara News

ವಿಸ್ತಾರ ಸಂಪಾದಕೀಯ: ಪತ್ರಕರ್ತರಿಗೆ ಬಹಿಷ್ಕಾರ, ಪ್ರತಿಪಕ್ಷಗಳ ಕೂಟದಿಂದ ಹೊಸದೊಂದು ಹೀನ ಮಾದರಿ

press

ಪ್ರತಿಪಕ್ಷಗಳ ಒಕ್ಕೂಟ ʼಇಂಡಿಯಾ ಬ್ಲಾಕ್‌ʼ ಒಂದು ಆಕ್ಷೇಪಾರ್ಹ ನಿರ್ಧಾರ ತೆಗೆದುಕೊಂಡಿದೆ. ರಿಪಬ್ಲಿಕ್‌ ಸುದ್ದಿ ವಾಹಿನಿಯ ಅರ್ನಬ್‌ ಗೋಸ್ವಾಮಿ ಸೇರಿ 14 ಪತ್ರಕರ್ತರ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ (INDIA Bloc) ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಪ್ರಕಟಣೆ ಹೊರಡಿಸಿದೆ. ಇದರಲ್ಲಿ ಟೈಮ್ಸ್‌ ನೌ, ಆಜ್‌ ತಕ್‌, ಝೀ ನ್ಯೂಸ್‌ ಸೇರಿದಂತೆ ಹಲವು ಪ್ರಮುಖ ವಾಹಿನಿಗಳ ಪತ್ರಕರ್ತರಿದ್ದಾರೆ; ಇವರು ನಡೆಸಿಕೊಡುವ ಟಿವಿ ಶೋಗಳಿವೆ. ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿದ್ದು, ದೇಶದ ಪ್ರಮುಖ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಶೋಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಎಐಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪವನ್‌ ಖೇರಾ ಈ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದೊಂದು ಅನಪೇಕ್ಷಿತ ನಿರ್ಧಾರ ಎನ್ನಬಹುದು. ಹಿಂದೆಂದೂ ಯಾರೂ ಇಂಥದೊಂದು ಬಹಿಷ್ಕಾರ ಹಾಕಿದ ಉದಾಹರಣೆ ಇಲ್ಲ. ಇದೊಂದು ʼಇಂಡಿಯಾ ಬ್ಲಾಕ್‌ʼ ಹಾಕಿಕೊಟ್ಟಿರುವ ಹೊಸದೊಂದು ಹೀನ ಮಾದರಿ!

ವೈಚಿತ್ರ್ಯ ಎಂದರೆ ಈ ಇಂಡಿಯಾ ಬ್ಲಾಕ್‌ನಲ್ಲಿ ಇರುವವರೆಲ್ಲ ವಾಕ್‌ ಸ್ವಾತಂತ್ರ್ಯ- ಪತ್ರಿಕಾ ಸ್ವಾತಂತ್ರ್ಯ- ಮುಕ್ತ ಚರ್ಚೆ- ಸಹಿಷ್ಣುತೆ- ಸೌಹಾರ್ದದ ಬಗ್ಗೆ ಪ್ರತಿಪಾದಿಸುವವರು. ಇವರು ಬಾಯಿ ಬಿಟ್ಟರೆ ಸದಾ ಮುಕ್ತ ಸಂವಾದದ ಮಾತುಗಳು ಕೇಳಿ ಬರುತ್ತವೆ. ಕೇಂದ್ರ ಸರ್ಕಾರ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದೆ ಎಂದು ಇವರು ಪದೇಪದೆ ಆಪಾದಿಸುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದೆಲ್ಲ ಹೇಳಿಕೊಂಡು ತಿರುಗಾಡುತ್ತಾರೆ. ಆದರೆ ಈಗ ದೇಶದ ಪ್ರಮುಖ ಪತ್ರಕರ್ತರನ್ನೇ ಬಹಿಷ್ಕರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದು ಇಂಡಿಯಾ ಬ್ಲಾಕ್‌ನ ನಾಯಕರ ಸಹಿಷ್ಣುತೆ, ಮಾಧ್ಯಮಸ್ನೇಹವೋ? ಮುಕ್ತ ಚರ್ಚೆಯನ್ನು ಪ್ರತಿಪಾದಿಸುವವರು ತಾವು ಹೆಸರಿಸಿರುವ ಈ ಪತ್ರಕರ್ತರ ಪ್ರಶ್ನೆಗಳಿಗೆ ಮುಖಾಮುಖಿಯಾಗುವ ಧೈರ್ಯವನ್ನು ಯಾಕೆ ಮಾಡುವುದಿಲ್ಲ? ಇದು ಇವರ ಆಂತರ್ಯದ ಹಗೆತನ ಮತ್ತು ದ್ವೇಷಪೂರಿತ ಧೋರಣೆ ಅಲ್ಲವೇ? ಈ ಮೂಲಕ ಇವರು ತಮ್ಮನ್ನು ತಾವೇ ಬಯಲುಗೊಳಿಸಿಕೊಂಡಿದ್ದಾರೆ.

ಮಾತೆತ್ತಿದರೆ ಇವರು, ಪ್ರಧಾನಿ ನರೇಂದ್ರ ಮೋದಿ ಎಂದೂ ಮಾಧ್ಯಮ ಗೋಷ್ಠಿ ನಡೆಸುವುದಿಲ್ಲ ಎಂದು ಹೇಳಿಕೊಂಡು ಬರುತ್ತಾರೆ. ಆದರೆ ಮೋದಿಯವರು ಯಾವುದೇ ಮಾಧ್ಯಮವನ್ನು ಬ್ಲಾಕ್‌ ಮಾಡಿದ್ದೇನೆ ಎಂದು ಹೇಳಿಕೊಂಡಿರಲಿಲ್ಲ. ಅವರ ಪಕ್ಷಕ್ಕೆ ಸೇರಿದ ನಾಯಕರು, ವಕ್ತಾರರು ಕೂಡ ಎಡಪಂಥೀಯ ಧೋರಣೆಯ, ಬಿಜೆಪಿ ವಿರೋಧಿ ನಿಲುವಿನ ಪತ್ರಕರ್ತರ ಸಂವಾದಗಳಲ್ಲೂ ಭಾಗವಹಿಸಲು ಇಲ್ಲವೆಂದಿಲ್ಲ. ಅಂಥ ಯಾವುದೇ ನಿರ್ದೇಶನವನ್ನು ಬಿಜೆಪಿ ತನ್ನ ನಾಯಕರಿಗೆ ನೀಡಿಲ್ಲ. ಆದರೆ ಇಂಡಿಯಾ ಬ್ಲಾಕ್‌ ತೆಗೆದುಕೊಂಡಿರುವ ನಿಲುವು ಮಾತ್ರ ಅಪ್ಪಟ ತಾರತಮ್ಯದ, ಭೇದಭಾವದ ನಿಲುವು. ಕೆಲವು ಪತ್ರಕರ್ತರು ಮಾತ್ರ ಖಳನಾಯಕರು ಎಂಬಂತೆ ಬಿಂಬಿಸುವ ಈ ನಡೆ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಮಾಧ್ಯಮಗಳ ಬಗ್ಗೆ ತೆಗೆದುಕೊಂಡು ತುಳಿದುಹಾಕುವ, ದೌರ್ಜನ್ಯದ ನಡೆಗಿಂತಲೂ ಬೇರೆಯಲ್ಲ.

ಇವರು ಈಗ ಪಟ್ಟಿ ಮಾಡಿರುವ ಪತ್ರಕರ್ತರು ಅಬ್ಬಬ್ಬಾ ಎಂದರೆ ಏನು ಮಾಡಬಹುದು? ಇಂಡಿಯಾ ಬ್ಲಾಕ್‌ ಆಗಲೀ ಬಿಜೆಪಿಯಾಗಲೀ ಉತ್ತರಿಸಬೇಕಾದ ಕೆಲವು ಪ್ರಶ್ನೆಗಳನ್ನು ಮುಂದಿಡಬಹುದು. ಅವರನ್ನು ಚರ್ಚೆಗೆಳೆಯಬಹುದು; ಸಂವಾದಗಳಲ್ಲಿ ಇಕ್ಕಟ್ಟಿಗೆ ಸಿಕ್ಕಿಸಬಹುದು. ಪತ್ರಕರ್ತರ ಅಥವಾ ಮಾಧ್ಯಮದ ಕೆಲಸವೇ ಅದು. ಆಳುವ ನಾಯಕರು ಹಿತಕರವಾಗಿ ಉತ್ತರಿಸಿ ಆನಂದದಿಂದ ಎದ್ದು ಹೋಗುವಂತೆ ಮಾಡುವುದು ಪತ್ರಕರ್ತರ ಕೆಲಸವಲ್ಲ. ಈ ಪತ್ರಕರ್ತರನ್ನು ಟಾರ್ಗೆಟ್‌ ಮಾಡಲಾಗಿದೆ ಎಂದರೆ ಇವರು ಇಂಡಿಯಾ ಬ್ಲಾಕ್‌ ನಾಯಕರು ಮುಜುಗರಕ್ಕೊಳಗಾಗುವಂಥ ಪ್ರಶ್ನೆಗಳನ್ನು ಕೇಳುತ್ತಾರೆ; ಅವರ ನೀತಿ ನಿಲುವುಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ ಎಂದೇ ಅರ್ಥವಾಗುತ್ತದೆ. ಅಂಥ ಮುಜುಗರಕ್ಕೊಳಗಾಗುವ ಕೆಲಸ ಇಂಡಿಯಾ ಬ್ಲಾಕ್‌ನವರಿಂದ ಆಗಿದೆ ಎಂದು ಅವರು ತಾವಾಗಿ ಒಪ್ಪಿಕೊಂಡಂತಾಯಿತಲ್ಲವೇ? ಇಂದು ಪ್ರತಿಪಕ್ಷದಲ್ಲಿರುವಾಗಲೇ ಇವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ; ನಾಳೆ ಒಂದು ವೇಳೆ ಇವರು ಅಧಿಕಾರಕ್ಕೆ ಬಂದರೆ, ಏನು ಮಾಡಬಹುದು? ಈ ಪತ್ರಕರ್ತರೊಂದಿಗೆ ಇನ್ನಷ್ಟು ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಕಿರುಕುಳಕ್ಕೆ ಒಳಗಾಗಬಹುದಲ್ಲವೇ? ಇಂದಿರಾ ಗಾಂಧಿ ಅವರ ಕಾಲದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕಾ ಮಾಧ್ಯಮದ ಸ್ವಾತಂತ್ರ್ಯವನ್ನು ಅತಿ ಕ್ರೂರ ರೀತಿಯಲ್ಲಿ ದಮನಿಸಲಾಗಿತ್ತು.

ಇದನ್ನೂ ಓದಿ : INDIA Bloc: 14 ಪತ್ರಕರ್ತರನ್ನು ಬ್ಯಾನ್‌ ಮಾಡಿದ ಇಂಡಿಯಾ ಒಕ್ಕೂಟ; ಇಲ್ಲಿದೆ ಪಟ್ಟಿ

ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡುವುದು, ಸಂವಾದ ಮಾಡುವುದು ರಾಜಕೀಯ ನಾಯಕರ ಆದ್ಯತೆಯಾಗಬೇಕು. ಅದು ಬಿಟ್ಟು, ಅವರನ್ನು ಬಹಿಷ್ಕರಿಸಿದ್ದು ಸರಿಯಾದ ವರ್ತನೆಯಲ್ಲ. ಇದೊಂದು ಬಾಲಿಶ ಕೃತ್ಯ. ಹಾಗೆಯೇ ಉದ್ಧಟತನದ್ದು ಕೂಡ. ಈ ಮೂಲಕ ಇಂಡಿಯಾ ಬ್ಲಾಕ್‌ ತನ್ನ ಅಸಹನೆ, ಅಸಹಿಷ್ಣುತೆಯನ್ನು ಪ್ರದರ್ಶಿಸಿದೆ. ಇದು ಮುಂದುವರಿಯಲು ಬಿಡದಿರುವುದು ಎಲ್ಲ ರೀತಿಯಿಂದಲೂ ಒಳಿತು.

Exit mobile version