Site icon Vistara News

ವಿಸ್ತಾರ ಸಂಪಾದಕೀಯ | ಜನತೆಗೆ ತ್ವರಿತ ನ್ಯಾಯ ಮರೀಚಿಕೆಯಾಗದಿರಲಿ

Husband should give maintenance to wife even he beggar: High Court

ವಕೀಲರ ಅಲಭ್ಯತೆಯಿಂದ ದೇಶದಲ್ಲಿ 63 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 14 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾತಿಗಳು ಅಥವಾ ಕಾಗದ ಪತ್ರಗಳು ದೊರೆಯದ್ದರಿಂದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಒಟ್ಟಾರೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಿದೆ. ತೀರ್ಪಿಗೆ ಕಾದೂಕಾದು ವಯಸ್ಸಾಗಿ ಕೊನೆಯುಸಿರೆಳೆಯುವವರ ಸಂಖ್ಯೆಯೂ ಸಾಕಷ್ಟಿರುತ್ತದೆ.

ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸದ ಕಾರಣ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತಿದೆ. ತಹಸೀಲ್ದಾರ್ ಮಟ್ಟದ ಅಧಿಕಾರಿಗಳು ಸೂಕ್ತವಾಗಿ ಕರ್ತವ್ಯ ನಿಭಾಯಿಸಿದರೆ ರೈತರು ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿ ವರ್ಷಗಟ್ಟಲೆ ಕಾಯುವ ಪ್ರಮೇಯವೇ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿದ್ದ ಎನ್ ವಿ ರಮಣ ಅವರು ಇತ್ತೀಚೆಗೆ ಹೇಳಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರೂ ಇತ್ತೀಚೆಗೆ ನ್ಯಾಯದಾನ ವಿಳಂಬ ಸಲ್ಲದು ಎಂಬ ಮಾತನ್ನು ಹೇಳಿದ್ದರು.

ಇದೇ ವರ್ಷ ಮಾರ್ಚ್‌ನಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ 4.7 ಕೋಟಿ ಪ್ರಕರಣಗಳು ವಿಚಾರಣೆಗಾಗಿ ಕಾಯುತ್ತಿವೆ. ಇದರಲ್ಲಿ 70,154 ಕೇಸ್‌ಗಳು ಸುಪ್ರೀಂ ಕೋರ್ಟ್‌ನಲ್ಲೇ ಇವೆ. 58,94,060 ಪ್ರಕರಣಗಳು ವಿವಿಧ ಹೈಕೋರ್ಟ್‌ಗಳಲ್ಲಿವೆ. ಇನ್ನು ಇತರ ಕೋರ್ಟ್‌ಗಳ ಲೆಕ್ಕ ಬೇರೆ. ಇವುಗಳಲ್ಲಿ 1.69 ಲಕ್ಷ ಪ್ರಕರಣಗಳು ಕಳೆದ 30 ವರ್ಷಗಳಿಂದ ಬಾಕಿ ಇವೆ! ಇದು ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ಕಳವಳಕಾರಿ ಚಿತ್ರಣ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ ಸಿ ಆರ್ ಬಿ) ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳ ಪ್ರಕಾರ, ದೇಶದಲ್ಲಿರುವ ಒಟ್ಟು ಕೈದಿಗಳ ಸಂಖ್ಯೆಯಲ್ಲಿ ಶೇ.77ರಷ್ಟು ವಿಚಾರಣಾಧೀನ ಕೈದಿಗಳೇ ಇದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚುತ್ತಲೇ ಇದೆ. ನ್ಯಾಯದಾನದಲ್ಲಿನ ವಿಳಂಬವೇ ಇದಕ್ಕೆ ಕಾರಣ ಎನ್ನುವುದು ಸ್ಪಷ್ಟ. ಜಿಲ್ಲಾ ಕಾರಾಗ್ರಹಗಳಲ್ಲೇ ಅತ್ಯಧಿಕ ಸಂಖ್ಯೆಯ ವಿಚಾರಣಾಧೀನ ಕೈದಿಗಳಿದ್ದಾರೆ.

ಇದಕ್ಕೆ ಅನೇಕ ಕಾರಣಗಳಿರಬಹುದು. ನ್ಯಾಯಮೂರ್ತಿಗಳ- ನ್ಯಾಯವಾದಿಗಳ ಅಲಭ್ಯತೆ, ನ್ಯಾಯಾಂಗ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೊರತೆ, ಮೂಲಸೌಕರ್ಯ ಕೊರತೆ, ಸಾಕ್ಷಿಗಳ ಸ್ವರೂಪ ಹಾಗೂ ಕೊರತೆ, ವಕೀಲರು- ತನಿಖಾ ಸಂಸ್ಥೆಗಳು- ದೂರುದಾರರು- ಸಾಕ್ಷಿಗಳ ನಡುವಿನ ಹೊಂದಾಣಿಕೆಯ ಸಮಸ್ಯೆ, ನಿಯಮಾವಳಿಗಳ ಸಮರ್ಪಕ ಅನ್ವಯದ ಕೊರತೆ ಇತ್ಯಾದಿಗಳೆಲ್ಲಾ ಈ ವಿಳಂಬಕ್ಕೆ ಕಾರಣವಾಗಿವೆ. ಏನೇ ಕಾರಣವಿದ್ದರೂ ಸಂತ್ರಸ್ತರಿಗೆ ಸಕಾಲದಲ್ಲಿ ನ್ಯಾಯ ದೊರೆಯುತ್ತಿಲ್ಲ ಎಂಬುದು ಮಾತ್ರ ನಿಜ.

ʼವಿಳಂಬ ನ್ಯಾಯದಾನವು ಸಂತ್ರಸ್ತನಿಗೆ ನ್ಯಾಯವನ್ನು ನಿರಾಕರಿಸಿದಂತೆಯೇ ಸರಿʼ ಎಂಬ ಮಾತೇ ಇದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಹೆಚ್ಚಾಗಿ ʼʼನೂರು ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದುʼʼ ಎಂಬ ಸೂತ್ರವನ್ನೇ ಕೇಂದ್ರೀಕರಿಸಿದೆ. ಹೀಗಾಗಿ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯ ಅಪರಾಧವನ್ನು ರುಜುವಾತುಪಡಿಸಲು ಸಂತ್ರಸ್ತರ ಕಡೆಯವ ನ್ಯಾಯವಾದಿಗಳು ಹೆಣಗಾಡಿದಷ್ಟು, ತಪ್ಪಿಸಿಕೊಳ್ಳಲು ಆರೋಪಿಯ ಕಡೆಯವರು ಪ್ರಯತ್ನಿಸಬೇಕಿಲ್ಲ!

ಆದರೆ, ನ್ಯಾಯದಾನ ಕೇಳಿ ಕೋರ್ಟಿಗೆ ಹೋದ ವ್ಯಕ್ತಿ ವಯಸ್ಸಾಗಿ ನಿಧನ ಹೊಂದಿದ ಬಳಿಕವೂ ಕೆಲವೊಮ್ಮೆ ನ್ಯಾಯ ಸಿಗುವುದಿಲ್ಲ ಎಂದರೇನರ್ಥ? ಇದು ಪ್ರಜಾಪ್ರಭುತ್ವ ನಡೆಯಬೇಕಾದ ರೀತಿಯಲ್ಲ. ಇಲ್ಲಿ ನಾಲ್ಕೂ ಅಂಗಗಳೂ ಸರಿಯಾಗಿ ಕಾರ್ಯಾಚರಿಸಬೇಕು. ನ್ಯಾಯದಾನ ವಿಳಂಬವಾದಷ್ಟೂ ಸಾಕ್ಷಿಗಳು, ಕಕ್ಷಿದಾರರು ಕೇಸ್‌ನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಕೆಲವು ದಾಖಲೆ ಪತ್ರಗಳು ನಾಶವಾಗಬಹುದು, ಸಾಕ್ಷಿಗಳು ಇಲ್ಲವಾಗಬಹುದು. ಕಾಲದ ಹೊಡೆತಕ್ಕೆ ಸಿಲುಕಿ, ಪ್ರತಿ ತಿಂಗಳೂ ಕೋರ್ಟಿಗೆ ಅಲೆದು ಹೈರಾಣಾಗುವ ಪರಿಸ್ಥಿತಿಯಿಂದ ರೋಸಿಹೋಗಿ ರಾಜಿ ಮಾಡಿಕೊಂಡ ಎಷ್ಟೋ ಪ್ರಕರಣಗಳು ಇವೆ. ಇದು ನ್ಯಾಯ ಬೇಡವೆಂದಲ್ಲ, ಶಿಕ್ಷೆಗಿಂತಲೂ ನಿಷ್ಕರುಣಿಯಾಗಿರುವ ಕಟಕಟೆಯ ಸಹವಾಸ ಬೇಡವೆಂದು. ಜತೆಗೆ, ಭಾರತದಲ್ಲಿ ಜೈಲುಗಳಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಕೈದಿಗಳ ಪ್ರಮಾಣವೂ ಲಕ್ಷಗಳ ಸಂಖ್ಯೆಯಲ್ಲಿದೆ. ಇದರಲ್ಲಿ ವಿಚಾರಣೆ ಸಾಂಗವಾಗಿ ನಡೆದು ಪ್ರಕರಣ ಇತ್ಯರ್ಥವಾಗುವವರೆಗೂ ಆರೋಪಿತನು ಅಪರಾಧಿಯೆಂದು ನಿರ್ಣಯವಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗದೆ ವರ್ಷಗಳ ಕಾಲ ಎಳೆದರೆ ಅನ್ಯಾಯವಾಗಿ ಆರೋಪಿಯ ಆಯುಷ್ಯ ಸರಳುಗಳ ನಡುವೆ ವ್ಯರ್ಥ. ಆತ ಅಪರಾಧಿಯಲ್ಲದೇ ಇದ್ದರೆ, ನಿಜಕ್ಕೂ ಅದು ಅವನ ಮೇಲೆ ಈ ವ್ಯವಸ್ಥೆ ನಡೆಸುವ ಕ್ರೌರ್ಯವೇ ಸರಿ. ಜಾಮೀನಿನ ಮೇಲೆ ಹೊರಗೆ ಬಂದಿದ್ದರೂ, ಆರೋಪವನ್ನು ಹೊತ್ತುಕೊಂಡು ವರ್ಷಗಳ ಕಾಲ ಓಡಾಡುವುದು ಹಿತವಲ್ಲ.

ಇದು ಕ್ರಿಮಿನಲ್‌ ಪ್ರಕರಣಗಳ ವಿಚಾರವಾದರೆ, ಸಿವಿಲ್‌ ಪ್ರಕರಣಗಳೂ ಹೀಗೇ ವಂಚಿತ ಭಾವವನ್ನು ಸಂತ್ರಸ್ತರಲ್ಲೂ, ಅನ್ಯಾಯದ ಸಮರ್ಥನೆಯ ಭಾವವನ್ನು ಅಪರಾಧಿಗಳಲ್ಲೂ ಮೂಡಿಸುತ್ತದೆ. ಇವೆಲ್ಲವನ್ನೂ ಸರಿಪಡಿಸಬೇಕಾದ್ದು ಹೇಗೆ? ನ್ಯಾಯದಾನ ಚುರುಕಾಗಲು ನ್ಯಾಯಮೂರ್ತಿಗಳೂ ಸೇರಿದಂತೆ ಅಗತ್ಯ ಸಿಬ್ಬಂದಿ ಬೇಕು. ಆದರೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಂಗ ನಡುವಿನ ಸಂಘರ್ಷವೂ ನ್ಯಾಯಾಂಗ ಸಿಬ್ಬಂದಿ ನೇಮಕ ವಿಳಂಬಕ್ಕೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸಬೇಕು. ತನಿಖಾ ಸಂಸ್ಥೆಗಳು ಇನ್ನಷ್ಟು ಚುರುಕಾಗಿ ಕೇಸ್‌ ಫೈಲ್‌ ಮಾಡುವುದು ಅಗತ್ಯ. ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಮನ್ವಯ ಸಾಧಿಸಿ ಪ್ರಕರಣಗಳ ತ್ವರಿತ ವಿಚಾರಣೆಗೆ ದಾರಿ ಮಾಡಿ ಕೊಡಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಸಿದ್ದೇಶ್ವರ ಶ್ರೀಗಳು ಪ್ರವಚನ ಮೂಲಕ ನಮ್ಮೊಂದಿಗೆ ಸದಾ ಇರಲಿದ್ದಾರೆ

Exit mobile version