Site icon Vistara News

ವಿಸ್ತಾರ ಸಂಪಾದಕೀಯ | ಉತ್ತರಾಖಂಡದ ಜೋಶಿಮಠ ಪಟ್ಟಣ ಕುಸಿತ ನಮಗೆ ಎಚ್ಚರಿಕೆಯ ಗಂಟೆಯಾಗಲಿ

joshimath

ಉತ್ತರಾಖಂಡದ ಪ್ರವಾಸಿ ತಾಣವಾದ ಜೋಶಿಮಠ ಪಟ್ಟಣವನ್ನು ಅಧಿಕೃತವಾಗಿಯೇ ‘ಮುಳುಗುತ್ತಿರುವ ಪಟ್ಟಣ’ ಎಂದು ಘೋಷಿಸಲಾಗಿದೆ. ಈಗಾಗಲೇ ಹಲವು ದೇವಸ್ಥಾನಗಳು, ಮನೆಗಳು ನೆಲಕಚ್ಚಿವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಭೆ ನಡೆಸಿದೆ. ಪಟ್ಟಣದ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುತ್ತಿದೆ. ಇಷ್ಟಾಗಿಯೂ ಇನ್ನೂ ಹಲವರು ಅಲ್ಲಿಯೇ ಇದ್ದು, ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಬಹುಶಃ ಈ ಪರಿಸ್ಥಿತಿಯು ಮುಂದುವರಿದರೆ, ಭೂಮಿ ಬಾಯ್ದೆರೆದು ಇಡೀ ಪಟ್ಟಣವನ್ನು ಆಪೋಷನ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ದುರ್ಘಟನೆ ಸಂಭವಿಸುವ ಮುಂಚೆಯೇ ಅಲ್ಲಿನವರಿಗೆ ಸುರಕ್ಷಿತ ಸೂರು ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ.

ನೈಸರ್ಗಿಕವಾಗಿ ಏನೇ ಕಾರಣಗಳಿದ್ದರೂ ಜೋಶಿಮಠದ ಇಂದಿನ ಸ್ಥಿತಿಗೆ ಮಾನವನ ದುರಾಸೆಯೇ ಕಾರಣ. ನಿಸರ್ಗದ ಮೇಲೆ ನಡೆಯುತ್ತಿರುವ ದೌರ್ಜನ್ಯ ಹೀಗೆಯೇ ಮುಂದುವರಿದರೆ, ದೇಶಾದ್ಯಂತ ಇನ್ನಷ್ಟು ‘ಜೋಶಿಮಠ’ಗಳು ಗೋಚರವಾಗಬಹುದು! ಅತಿ ಆಸೆ, ಅತಿಕ್ರಮಣ, ಅರಣ್ಯ ನಾಶ, ಎಲ್ಲೆಂದರಲ್ಲಿ ದೊಡ್ಡ ಕಟ್ಟಡಗಳನ್ನು ಕಟ್ಟುತ್ತಿರುವುದು, ಬೃಹತ್ ಅಣೆಕಟ್ಟುಗಳ ನಿರ್ಮಾಣ ಸೇರಿದಂತೆ ಪರಿಸರ ಸಮತೋಲನವನ್ನು ನಾವು ತಪ್ಪಿಸುತ್ತಿದ್ದೇವೆ. ಕಾರಣ, ಪ್ರಕೃತಿ ವಿಕೋಪ, ಭೂಕಂಪ, ತಾಪಮಾನ ಏರಿಕೆ ಸೇರಿ ಹಲವು ವೈಪರೀತ್ಯಗಳನ್ನು ಕಾಣುತ್ತಿದ್ದೇವೆ. ಈ ವೈಪರೀತ್ಯದ ಹೊಸ ಸಾಕ್ಷಿಯಾಗಿ ಜೋಶಿಮಠ ಪಟ್ಟಣವು ನಮ್ಮ ಕಣ್ಣ ಮುಂದಿದೆ. ಈಗಲೂ ಎಚ್ಚೆತ್ತುಕೊಳ್ಳದೇ ಹೋದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಖಂಡಿತವಾಗಿಯೂ ಕ್ಷಮಿಸಲಾರದು. ಮುಳುಗುತ್ತಿರುವ ಜೋಶಿಮಠ ಪಟ್ಟಣವು ನಮಗೆ ಎಚ್ಚರಿಕೆ ಗಂಟೆಯಾಗಲಿ.

ಜೋಶಿಮಠ ಪಟ್ಟಣವು ಗಿರಿ ಪ್ರದೇಶವಾದ ಕಾರಣ ಇಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂಬ ಎಚ್ಚರಿಕೆ ಇದ್ದರೂ ಕೆಲವು ದಶಕಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಮಾಡಲಾಗುತ್ತಿದೆ. ಜಲವಿದ್ಯುತ್‌ ಘಟಕಗಳ ನಿರ್ಮಾಣ ಕಾಮಗಾರಿ, ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಬೃಹತ್ ಕಟ್ಟಡಗಳ ನಿರ್ಮಾಣ ಹೆಚ್ಚಿದೆ. ಪ್ರವಾಸಿಧಾಮ ಎಂಬ ಕಾರಣಕ್ಕೆ ಕಂಡಕಂಡಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಪ್ರವಾಸಿಗರ ಸಂಖ್ಯೆಯೂ ಮಿತಿ ಮೀರುತ್ತಲೇ ಇರುತ್ತದೆ. ಇದರಿಂದಾಗಿ ನೀರಿನ ಪಥವೇ ಬದಲಾಗಿ ಹೋಗಿದ್ದರಿಂದ, ಭೂಮಿಯ ತಾಳಿಕೊಳ್ಳುವ ಸಾಮರ್ಥ್ಯ ಕುಸಿಯಿತು. ಅಂತಿಮವಾಗಿ ಪಟ್ಟಣದಲ್ಲಿ ಕಟ್ಟಡಗಳ ಕುಸಿತ, ಮನೆಗಳ ಬಿರುಕು ಸಾಮಾನ್ಯವಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಎದುರಾಗಬಹುದು ಪರಿಸರ ತಜ್ಞರು ಈ ಹಿಂದೆಯೇ ಎಚ್ಚರಿಸಿದ್ದರು. ಹಾಗಿದ್ದೂ, ಈ ಯಾವುದೇ ಚಟುವಟಿಕೆಗಳಿಗೆ ತಡೆ ಬಿದ್ದಿರಲಿಲ್ಲ.

ದೇವಭೂಮಿಯಾಗಿರುವ ಉತ್ತರಾಖಂಡದಲ್ಲಿ ಅಭಿವೃದ್ಧಿಯ ನೆಪದಲ್ಲಿ ಅಣೆಕಟ್ಟುಗಳ , ಹೆದ್ದಾರಿಗಳ ನಿರ್ಮಾಣ, ಗಣಿಗಾರಿಕೆಗಳು ಎಗ್ಗಿಲ್ಲದೇ ಸಾಗುತ್ತಿವೆ. ಇದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎಂಬುದು 2013ರಲ್ಲೇ ನಮಗೆಲ್ಲ ಗೊತ್ತಾಗಿದೆ. ಅಂದು ಮೇಘಸ್ಫೋಟ ಸಂಭವಿಸಿ ನದಿಗಳು ಉಕ್ಕಿ ಹರಿದು ಸಾವಿರಾರು ಜನರು ಮೃತಪಟ್ಟಿದ್ದರು. ಬಹುಶಃ ಜೋಶಿಮಠ ಪಟ್ಟಣ ಮುಳುಗತ್ತಿರುವುದು ಅದರ ಮುಂದುವರಿದ ಭಾಗವೇ ಆಗಿರಬಹುದು ಮತ್ತು ನಿಸರ್ಗವು ಸೂಚ್ಯವಾಗಿ ನಮಗೆ ಎಚ್ಚರಿಕೆಯನ್ನು ನೀಡುತ್ತಿರಬಹುದು. ಈ ಪ್ರಾಕೃತಿಕ ಸಂಕೇತಗಳನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ.

”ಭೂಮಿಯು ಮಾನವನ ಆಸೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ” ಎಂಬ ಮಹಾತ್ಮ ಗಾಂಧಿ ಅವರ ನುಡಿ ಅಕ್ಷರಶಃ ಸತ್ಯ. ನಮ್ಮ ಅಗತ್ಯಗಳನ್ನು ಪೂರೈಸುವ ಶಕ್ತಿ ನಿಸರ್ಗಕ್ಕೆ ಇದೆ. ಆದರೆ, ನಮ್ಮ ದುರಾಸೆಯ ಕಾರಣಕ್ಕೆ ನಿಸರ್ಗದ ನಿಯಮಗಳನ್ನು ಬದಲಿಸುತ್ತಿದ್ದೇವೆ. ಇದರ ಪರಿಣಾಮವು ನಮ್ಮ ಕರ್ನಾಟಕದಲ್ಲೂ ಆಗಿದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದ ಕಾಶ್ಮೀರ ಎನಿಸಿರುವ ಕೊಡಗಿನಲ್ಲಿ ಭಾರಿ ಭೂಕುಸಿತ ಸಂಭವಿಸಿ ಹಲವರು ಮೃತಪಟ್ಟಿದ್ದರು. ಎಲ್ಲೆಂದರಲ್ಲಿ ಅಲ್ಲಿ ಕುಸಿಯುತ್ತಿದ್ದ ಬೆಟ್ಟಗುಡ್ಡಗಳಿಂದಾಗಿ ಊರಿಗೇ ಊರೇ ನಾಮಾವಶೇಷವಾದ ಉದಾಹರಣಗಳೇ ಇವೆ. ಅರಣ್ಯ ಪ್ರದೇಶದಲ್ಲಿ ಮಾನವನ ಅತಿಯಾದ ಹಸ್ತಕ್ಷೇಪವು ಇದಕ್ಕೆ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಕೊಡಗಿನಲ್ಲಿ ಮಾತ್ರವಲ್ಲ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳೂ ಅನಾರೋಗ್ಯಕರ ಪ್ರವಾಸೋದ್ಯಮ ಹಾವಳಿಗೆ ತತ್ತರಿಸುತ್ತಿವೆ. ಪ್ರವಾಸೋದ್ಯಮ ಬೆಳೆಯಬೇಕು; ಪ್ರವಾಸಿಧಾಮಗಳು ಅಭಿವೃದ್ಧಿಗೊಳ್ಳಬೇಕು. ಆದರೆ ಇದಕ್ಕೊಂದು ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಪ್ರವಾಸೋದ್ಯಮ ಬೆಳವಣಿಗೆ ಪರಿಸರಕ್ಕೆ ಮಾರಕವಾಗದೆ ಪೂರಕವಾಗಿರಬೇಕು. ಇಲ್ಲದೇ ಹೋದರೆ ಜೋಶಿಮಠದಲ್ಲಿ ಈಗ ಆಗುತ್ತಿರುವುದು ಉಳಿದ ಪ್ರವಾಸಿಧಾಮಗಳಲ್ಲೂ ಆಗಬಹುದು. ಹಾಗಾಗಿ, ಸರ್ಕಾರಗಳು ಈ ನಿಟ್ಟಿನಲ್ಲಿ ಯೋಚಿಸಿ, ಸ್ಪಷ್ಟವಾದ ನೀತಿಯನ್ನು ರೂಪಿಸಬೇಕು. ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮಕ್ಕಳ ಶಾಲಾ ಪ್ರವಾಸ ಸುರಕ್ಷಿತವಾಗಿರಲಿ

Exit mobile version