Site icon Vistara News

ವಿಸ್ತಾರ ಸಂಪಾದಕೀಯ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ, ಸಮೀಕ್ಷೆಯಿಂದ ಸತ್ಯ ಹೊರಬರಲಿ

Mathura

Aurangzeb Demolished Mathura Krishna Janmabhoomi Complex Temple To Build Mosque: ASI

ಥುರಾದ ಶ್ರೀಕೃಷ್ಣ ಜನ್ಮಭೂಮಿ ಮಂದಿರದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿ ಸಂಕೀರ್ಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಅನುಮತಿ ನೀಡಿದೆ. ಈ ಮೂಲಕ ಬಹು ವರ್ಷದ ಹಿಂದೂಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಜಸ್ಟೀಸ್ ಮಯಾಂಕ್ ಕುಮಾರ್ ಜೈನ್ ಮಹತ್ವದ ಆದೇಶ ನೀಡಿ, ಸಮೀಕ್ಷೆ ನಡೆಸಲು ಕಮಿಷನರ್ ತಂಡ ರಚನೆ ಮಾಡಲು ಸೂಚಿಸಿದ್ದಾರೆ. ಭಗವಾನ್ ಕೃಷ್ಣ ಜನಿಸಿದ ಸ್ಥಳದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎನ್ನುವುದು ಹಿಂದೂ ಅರ್ಜಿದಾರರ ವಾದ. ಸಮೀಕ್ಷೆಗೆ ತಾತ್ವಿಕ ಅನುಮತಿ ದೊರೆತಿದ್ದು, ಇದರ ವಿಧಾನಗಳನ್ನು ಡಿಸೆಂಬರ್ 18ರ ವಿಚಾರಣೆಯಲ್ಲಿ ಚರ್ಚಿಸಲಾಗುತ್ತದೆ. ಅಯೋಧ್ಯೆಯಂತೆಯೇ ಇದು ಕೂಡ ವಿವಾದಕ್ಕೆ ತುತ್ತಾಗಿರುವ ತಾಣ. ಇದಕ್ಕೂ ಒಂದು ತಾರ್ಕಿ ಅಂತ್ಯ ದೊರೆಯುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ(Vistara Editorial).

ಭಗವಾನ್ ಶ್ರೀಕೃಷ್ಣ ವಿರಾಜಮಾನ ಸಮಿತಿ ಹಾಗೂ ಇತರ 7 ಮಂದಿ ಮಸೀದಿಯ ಸರ್ವೇ ನಡೆಸುವಂತೆ ಅರ್ಜಿ ಸಲ್ಲಿಸಿದ್ದರು. ಹಿಂದೂ ದೇವಸ್ಥಾನವನ್ನು ಬೀಳಿಸಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಹಿಂದೂ ದೇವಸ್ಥಾನದ ಕುರುಹುಗಳಿವೆ. ಕಮಲದಳದ ಆಕಾರದಲ್ಲಿರುವ ಕಂಬಗಳನ್ನು ನೋಡಿದರೆ ಹಿಂದೂ ದೇವಸ್ಥಾನ ಶೈಲಿ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಈದ್ಗಾ ಮಸೀದಿಯನ್ನು ಸಮೀಕ್ಷೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. 1968ರ ಅಕ್ಟೋಬರ್ 12ರಂದು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥಾನ ಮತ್ತು ಶಾಹಿ ಮಸೀದಿ ಈದ್ಗಾ ಟ್ರಸ್ಟ್ ನಡುವೆ ನಡೆದ ರಾಜಿ ಒಪ್ಪಂದ ಕಾನೂನುಬಾಹಿರ ಎಂದೂ ಮನವಿಯಲ್ಲಿ ಹೇಳಲಾಗಿದೆ. ವಿವಿಧ ಅರ್ಜಿದಾರರು ಮಥುರಾದ ನ್ಯಾಯಾಲಯಗಳಲ್ಲಿ ಕನಿಷ್ಠ ಒಂದು ಡಜನ್ ಪ್ರಕರಣಗಳನ್ನು ದಾಖಲಿಸಿದ್ದಾರೆ. 13.77 ಎಕರೆ ಸಂಕೀರ್ಣದಿಂದ ಮಸೀದಿಯನ್ನು ತೆಗೆದುಹಾಕಬೇಕೆಂದು ಎಲ್ಲ ಅರ್ಜಿಗಳಲ್ಲಿ ಮನವಿ ಸಲ್ಲಿಸಲಾಗಿದೆ.

ದೇವಾಲಯ-ಮಸೀದಿ ವಿವಾದದ ಮೂರನೇ ಪ್ರಕರಣ ಇದಾಗಿದೆ. ಮೊದಲನೆಯದು, ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಕಟ್ಟಲಾಗಿದ್ದ ಬಾಬರಿ ಮಸೀದಿ, ಇಂದು ಭೂತಕಾಲಕ್ಕೆ ಸಂದ ಸಂಗತಿ. ಇಸ್ಲಾಮಿಕ್‌ ಆಡಳಿತಶಾಹಿಯ ಪಳೆಯುಳಿಕೆಯಂತಿದ್ದ ಅದನ್ನು ಕೆಡವಲಾಗಿದೆ. ಆ ಪ್ರದೇಶದಲ್ಲಿ ಭವ್ಯವಾದ ಶ್ರೀರಾಮ ದೇವಾಲಯ ತಲೆಯೆತ್ತುತ್ತಿದೆ. ಎರಡನೆಯದು ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯ ಹಾಗೂ ಅದರ ಪಕ್ಕದ ಜ್ಞಾನವಾಪಿ ಮಸೀದಿಯ ಸಂಕೀರ್ಣ. ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಇತ್ತೀಚೆಗೆ ಕೋರ್ಟ್‌ ಆದೇಶದ ಮೇರೆಗೆ ವಾರಣಾಸಿಯ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಇದೀಗ ಮೂರನೆಯದಾಗಿ ಮಥುರೆಯ ಶ್ರೀಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ ವಿವಾದ. ಇದೀಗ ಶಾಹಿ ಈದ್ಗಾ ಸರ್ವೆಗೆ ಸೂಚಿಸಲಾಗಿದೆ. ಸರ್ವೆ ನಡೆಯಬೇಕಾದುದು ಅಗತ್ಯ. ಯಾಕೆಂದರೆ ಶ್ರೀಕೃಷ್ಣ ಜನ್ಮಸ್ಥಾನವನ್ನು ನಾಶಪಡಿಸಿಯೇ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಲಾಗಿದೆ ಎಂಬುದಕ್ಕೆ ಮೇಲ್ನೋಟದ ಕೆಲವು ಸಾಕ್ಷಿಗಳು ಇರುವುದನ್ನು ಬಿಟ್ಟರೆ, ಆಳ ಹಾಗೂ ಗಾಢವಾದ ಸಾಕ್ಷಿಗಳು ಇಲ್ಲ. ಸಮೀಕ್ಷೆಯಿಂದ ಅದು ಸಿಗಬಹುದು, ಅಥವಾ ಸಿಗದೆಯೂ ಇರಬಹುದು. ಯಾವುದೇ ಫಲಿತಾಂಶ ಬಂದರೂ ಅದು ವಿವಾದಕ್ಕೆ ಒಂದು ತಾರ್ಕಿಕ ಅಂತ್ಯಕ್ಕೆ ಕಾರಣವಾಗುತ್ತದೆ ಎಂಬುದೇ ಸಂತೋಷದ ವಿಷಯ.

ಭಾರತದಲ್ಲಿ ಶ್ರೀಕೃಷ್ಣ ಆರಾಧನೆಗೆ ಸಂಬಂಧಿಸಿ ಸುಮಾರು 2000 ವರ್ಷಗಳ ಹಿನ್ನೆಲೆಯಿದೆ. ಕೃಷ್ಣನ ಉಲ್ಲೇಖಗಳು ಪುರಾತನ ಋಷಿಗಳಾದ ಪತಂಜಲಿ, ಪಾಣಿನಿ ಮುಂತಾದವರ ಕೃತಿಗಳನ್ನು ಕಂಡುಬರುತ್ತವೆ. ಪಾಶ್ಚಿಮಾತ್ಯ ವಿದ್ವಾಂಸರಾದ, ಗ್ರೀಕ್‌ನ ಮೆಗಾಸ್ತನೀಸ್‌ (ಕ್ರಿಸ್ತಪೂರ್ವ 3ನೇ ಶತಮಾನ) ಹಾಗೂ ಅರಿಯನ್‌ (ಕ್ರಿಸ್ತಪೂರ್ವ 2ನೇ ಶತಮಾನ) ಅವರ ಕೃತಿಗಳಲ್ಲೂ ಇವು ಕಂಡುಬರುತ್ತದೆ. ಕುಶಾನ ರಾಜರ ಕಾಲದಲ್ಲಿ ಭಾಗವತ ಪ್ರಸಿದ್ಧವಾಯಿತು. ಹಾಗೂ ಕೃಷ್ಣನ ಜನಪ್ರಿಯತೆ ಹೆಚ್ಚಿತು. ಮಥುರಾ ಹಾಗೂ ಸುತ್ತಮುತ್ತ ಭಾಗತವತದ ಕೃಷ್ಣನ ಜೀವನದ ಘಟನಾವಳಿಗಳು ನಡೆದುದಕ್ಕೆ ಪ್ರಾಕ್ತನ ಸಾಕ್ಷಿಗಳು ದೊರೆಯುತ್ತವೆ. ಮಥುರಾದ ದೇವಸ್ಥಾನದ ಬಗ್ಗೆಯೂ ಉಲ್ಲೇಖಗಳು ಸಿಗುತ್ತವೆ. ಔರಂಗಜೇಬ ಈ ದೇವಸ್ಥಾನವನ್ನು ನಾಶ ಮಾಡಲು ಆದೇಶಿಸುವ ಕೇವಲ 20 ವರ್ಷಗಳ ಮೊದಲು ಜೀನ್‌ ಬ್ಯಾಪ್ಟಿಸ್ಟ್‌ ಟಾವೆರ್ನಿಯರ್‌ ಎಂಬ ಫ್ರೆಂಚ್‌ ವ್ಯಾಪಾರಿ ಮಥುರಾಗೆ ಭೇಟಿ ನೀಡಿ ಮಥುರೆಯ ಭವ್ಯ ದೇವಾಲಯದ ಬಗ್ಗೆ ಬರೆಯುತ್ತಾನೆ. 1670ರಲ್ಲಿ ಔರಂಗಜೇಬ ಇಡೀ ದೇವಸ್ಥಾನದ ನಾಶಕ್ಕೆ ಆಜ್ಞೆ ಮಾಡಿದ. ಇದಕ್ಕೆ ಒಂದು ವರ್ಷ ಮೊದಲು ಅವನು ಕಾಶಿ ವಿಶ್ವನಾಥ ದೇವಾಲಯದ ನಾಶಕ್ಕೆ ಆದೇಶಿಸಿದ್ದ. ದೇವಾಲಯವನ್ನು ನಾಶ ಮಾಡಿ, ಅದು ಇದ್ದಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲು ಆದೇಶಿಸಿದ.

ಇದು ಇತಿಹಾಸ. ಇದನ್ನು ಸಾಬೀತುಪಡಿಸುವ ಸಾಕ್ಷಿಗಳು ಸಿಗಬೇಕಾಗಿದೆ. ಸದ್ಯ ಇರುವ ದೇವಾಲಯ 1940ರ ದಶಕದಲ್ಲಿ ನಿರ್ಮಾಣವಾದದ್ದು. ದೇವಾಲಯ ಹಾಗೂ ಮಸೀದಿಯ ಜಾಗವೆಷ್ಟು ಎಂಬ ಬಗ್ಗೆ 1968ರಲ್ಲಿ ಒಪ್ಪಂದವಾಗಿದೆ. ಈ ಒಪ್ಪಂದದ ನೆಲೆಗಟ್ಟು ಏನು ಎಂಬುದು ಕೂಡ ಸಮೀಕ್ಷೆಯಿಂದ ವಿಮರ್ಶೆಗೆ ಒಳಗಾಗಬಹುದು. ಸಮೀಕ್ಷೆಯಲ್ಲಿ ಮಂದಿರದ ಪರವಾಗಿಯೇ ಫಲಿತಾಂಶ ಬಂದರೂ, ಅದನ್ನು ಇದ್ದಕ್ಕಿದ್ದಂತೆಯೇ ಜಾರಿ ಮಾಡಲೂ ಆಗುವುದಿಲ್ಲ. ಜುಲೈ 11, 1991ರಿಂದ ಜಾರಿಯಲ್ಲಿರುವ ಆರಾಧನಾ ಸ್ಥಳಗಳ ಕಾಯಿದೆ- 1991ರ ಪ್ರಕಾರ, ಯಾವುದೇ ವ್ಯಕ್ತಿ ಯಾವುದೇ ಧಾರ್ಮಿಕ ಪಂಗಡದ ಅಥವಾ ಯಾವುದೇ ವಿಭಾಗದ ಯಾವುದೇ ಪೂಜಾ ಸ್ಥಳವನ್ನು ಅದೇ ಧಾರ್ಮಿಕ ಪಂಗಡದ ಅಥವಾ ಬೇರೆ ಧಾರ್ಮಿಕ ಪಂಗಡದ ಅಥವಾ ಯಾವುದೇ ವಿಭಾಗದ ಅನ್ಯ ಆರಾಧನಾ ಸ್ಥಳವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಆಗಸ್ಟ್ 15, 1947ರಂದು ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಹೇಗಿತ್ತೋ ಅದನ್ನೇ ಮಾನ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಆ ನಂಬಿಕೆಯಲ್ಲಿ ಮುಂದುವರಿಯಬೇಕು ಎಂದು ಕಾಯಿದೆ ಹೇಳುತ್ತದೆ.

ಇಂಥ ಸನ್ನಿವೇಶದಲ್ಲಿ ಸಮೀಕ್ಷೆಯಿಂದ ಏನು ಸಾಧಿತವಾಗಬಹುದು? ಇದೊಂದು ಕುತೂಹಲದ ಸಂಗತಿ. ಏನೇ ಇದ್ದರೂ ಸತ್ಯವಂತೂ ಹೊರಗೆ ಬರುತ್ತದೆ ಎಂಬ ವಿಶ್ವಾಸ ಇರಬಹುದು. ಗೊಂದಲದ ಕತ್ತಲೆಯಲ್ಲಿ ಇರುವುದಕ್ಕಿಂತ, ಕಹಿಯಾದರೂ ಸರಿ ಸತ್ಯವನ್ನು ಶೋಧಿಸಿ ತಿಳಿಯುವುದು ಒಳ್ಳೆಯದು.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಂಸತ್‌ ಭದ್ರತಾ ಲೋಪ ಗಂಭೀರ ವಿಚಾರ, ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಬೇಕಿದೆ

Exit mobile version