Site icon Vistara News

ವಿಸ್ತಾರ ಸಂಪಾದಕೀಯ : ಮತ್ತೊಮ್ಮೆ ಆರ್‌ಎಸ್‌ಎಸ್‌ನ ಐಕ್ಯತಾ ಮಂತ್ರ

indian people

#image_title

ಭಾರತದಲ್ಲಿ ವಾಸಿಸುವ ಎಲ್ಲರೂ ಭಾರತೀಯರು. ಒತ್ತಡಕ್ಕೆ ಮಣಿದು ಧರ್ಮ ಬಿಟ್ಟಿರುವ ಮತ್ತು ಅನ್ಯ ಧರ್ಮಕ್ಕೆ ಸೇರಿ ದನದ ಮಾಂಸ ತಿನ್ನುತ್ತಿರುವವರಿಗೂ ಹಿಂದು ಧರ್ಮದ ಬಾಗಿಲು ಮುಚ್ಚಿಲ್ಲ. ಅವರು ಈಗಲೂ ಮಾತೃ ಧರ್ಮಕ್ಕೆ ವಾಪಸ್ ಆಗಬಹುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾಗಿರುವ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ. ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದುಗಳು. ಯಾಕೆಂದರೆ, ಅವರ ಪೂರ್ವಿಕರು ಹಿಂದುಗಳಾಗಿದ್ದರು. ಎಲ್ಲರೂ ಒಂದೇ ಡಿಎನ್ಎ ಹೊಂದಿದ್ದಾರೆ ಎಂಬುದು ಅವರ ವಿಶ್ಲೇಷಣೆ. “ನಾವು ಬಲಪಂಥೀಯರೂ ಅಲ್ಲ, ಎಡಪಂಥೀಯರೂ ಅಲ್ಲ. ನಾವು ರಾಷ್ಟ್ರೀಯವಾದಿಗಳು. ಸಂಘವು ಯಾವಾಗಲೂ ದೇಶದ ಹಿತಕ್ಕಾಗಿ ಕೆಲಸ ಮಾಡುತ್ತದೆ’ ಎಂಬುದು ಅವರು ಆರ್‌ಎಸ್‌ಎಸ್‌ ಬಗ್ಗೆ ನೀಡಿರುವ ವ್ಯಾಖ್ಯಾನ.

ದೇಶದಲ್ಲಿ ವ್ಯಾಪಕವಾಗಿ ಕಾರ್ಯಾಚರಿಸುತ್ತಿರುವ ಮತಾಂತರ ಜಾಲದ ಹಿನ್ನೆಲೆಯಲ್ಲಿ ಹೊಸಬಾಳೆ ಅವರ ಹೇಳಿಕೆ ಮಹತ್ವ ಪಡೆದಿದೆ. ಇತ್ತೀಚೆಗೆ ಸರಸಂಘಚಾಲಕ ಮೋಹನ್ ಭಾಗವತ್ ಅವರೂ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಬೆದರಿಕೆ ಇಲ್ಲ. ಅವರು ತುಂಬ ಸುರಕ್ಷಿತವಾಗಿದ್ದಾರೆ. ಅವರು ತಮ್ಮ ನಂಬಿಕೆಗಳನ್ನು, ಆಚಾರ-ವಿಚಾರಗಳನ್ನು ಪಾಲಿಸಲು ಸ್ವತಂತ್ರರಾಗಿದ್ದಾರೆ. ಆದರೆ, ತಮ್ಮದೇ ಸರಿ, ತಾವೇ ಶ್ರೇಷ್ಠ ಎಂಬ ಪ್ರತಿಪಾದನೆಯನ್ನು ಎಲ್ಲರೂ ಬಿಡಬೇಕು ಎಂದಿದ್ದ ಅವರು ಹಿಂದೂ- ಮುಸ್ಲಿಮರ ಸಹಬಾಳ್ವೆ, ಹಿಂದುತ್ವ, ಎಲ್‌ಜಿಬಿಟಿಕ್ಯು ಸಮುದಾಯದ ಖಾಸಗಿತನದ ಗೌರವಿಸುವಿಕೆ ಮುಂತಾದ ವಿಚಾರಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದರು. ಇದೀಗ ನಾವು ದತ್ತಾತ್ರೇಯ ಹೊಸಬಾಳೆ ಹಾಗೂ ಮೋಹನ ಭಾಗವತ್‌ ಅವರ ಹೇಳಿಕೆಗಳನ್ನು ಜೊತೆಯಲ್ಲಿಟ್ಟುಕೊಂಡು ಓದಿಕೊಳ್ಳಬೇಕಿದೆ.

ದೇಶದ ಸಾಮರಸ್ಯ- ಸಹಬಾಳ್ವೆಯ ಬಗ್ಗೆ ಗಾಢ ಚಿಂತನೆ ನಡೆಸಿರುವ ಆರೆಸ್ಸೆಸ್‌ನ ಮಾತುಗಳಲ್ಲಿ ಯಾವುದೇ ಕೃತ್ರಿಮವಿಲ್ಲ. ಅದು ತನ್ನ ನಿಲುವಿನಲ್ಲಿ ಸ್ಪಷ್ಟವಾಗಿದೆ. ಮತಾಂತರದ ವಿರುದ್ಧ ಆರ್‌ಎಸ್‌ಎಸ್ ಇತ್ತೀಚೆಗೆ ವ್ಯಾಪಕ ಅಭಿಯಾನ ನಡೆಸುತ್ತಿದೆ. ಮೋಹನ್ ಭಾಗವತ್ ಮತ್ತು ಹೊಸಬಾಳೆ ಅವರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆಗಳೂ ಇದಕ್ಕೆ ಪೂರಕವಾಗಿಯೇ ಇವೆ. ದೇಶವನ್ನು ಅಸ್ಥಿರಗೊಳಿಸಬಹುದಾದ ಯಾವುದೇ ಬಗೆಯ ಮತಾಂತರ ತಪ್ಪು- ಅದನ್ನು ಕ್ಷಮಿಸಲು ಸಾಧ್ಯವಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಕೂಡ ಈ ಬಗ್ಗೆ ಮಾತನಾಡಿತ್ತು. ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಿದೆ ಎಂದಿತ್ತು. ನಾಗರಿಕರ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು. ಬಲವಂತದ ಮತಾಂತರ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ. ಬಲವಂತದ ಮತಾಂತರ ಅತ್ಯಂತ ಗಂಭೀರ ಸಮಸ್ಯೆ, ಇದು ಕೇವಲ ದೇಶದ ಭದ್ರತೆಗೆ ಸಂಚಕಾರವಲ್ಲ, ಜನರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ಕೂಡ ಧಕ್ಕೆ ಎಂದು ಹೇಳಿತ್ತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಸಮತೋಲಿತ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಭಾರತದಲ್ಲಿ ಶೇ.80ರಷ್ಟು ಹಿಂದೂಗಳಿದ್ದಾರೆ. ನಮ್ಮ ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇಲ್ಲಿ ಯಾರು ಬೇಕಿದ್ದರೂ ತಮ್ಮ ಧರ್ಮವನ್ನು ಆಚರಿಸಬಹುದು, ಸಾರ್ವಜನಿಕವಾಗಿ ಅದರ ಬಗ್ಗೆ ಒಲವು ವ್ಯಕ್ತಪಡಿಸಬಹುದು, ತಮ್ಮ ಧರ್ಮದ ಶ್ರೇಷ್ಠತೆಯ ಬಗ್ಗೆ ಸಾರಿಕೊಳ್ಳಬಹುದು. ಇದ್ಯಾವುದೂ ಅಪರಾಧವಲ್ಲ. ಆದರೆ ಬೆದರಿಕೆಯೊಡ್ಡಿ ಅಥವಾ ಆಮಿಷವೊಡ್ಡಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವುದು ಮಾತ್ರ ಅಪರಾಧ. ಇದು ದೇಶದ ಭದ್ರತೆ, ಸಾರ್ವಭೌಮತೆ, ಸಾಮಾಜಿಕ ಸೌಹಾರ್ದ ಎಲ್ಲದಕ್ಕೂ ಧಕ್ಕೆಯುಂಟುಮಾಡುವಂಥದು. ಆಮಿಷಕ್ಕೊಳಗಾಗಿ ಮತಾಂತರಗೊಂಡವರು, ಭ್ರಮನಿರಸನಗೊಂಡ ಬಳಿಕ ಮಾತೃಧರ್ಮಕ್ಕೆ ಮರಳುವುದಾದರೆ ಒಂದು ಬಾಗಿಲು ಅವರಿಗೆ ತೆರೆದೇ ಇರಬೇಕಾಗುತ್ತದೆ. ಹಾಗೆಯೇ ಹಿಂದೂ ಧರ್ಮವೂ ಬದಲಾಗುತ್ತಿದೆ. ಒಂದೆರಡು ದಶಕಗಳ ಹಿಂದೆ ಇದ್ದಂತೆ ಕೂಡ ಈಗಿಲ್ಲ. ಸಂವಿಧಾನ ನೀಡಿದ ಹಕ್ಕುಗಳು, ಬಿಗಿ ಕಾಯಿದೆಗಳು, ಶಿಕ್ಷಣದಿಂದಾಗಿ ಉಂಟಾಗಿರುವ ಅರಿವು, ತಳವರ್ಗಗಳಲ್ಲಿ ಎದ್ದಿರುವ ಸ್ವಾಭಿಮಾನ- ಇವೆಲ್ಲವೂ ಇಂದು ಹಿಂದು ಧರ್ಮದ ಸಾಮಾಜಿಕ ಅನಿಷ್ಠಗಳನ್ನು ಬಹುತೇಕ ತೊಡೆದುಹಾಕಿವೆ. ಅಳಿದುಳಿದದ್ದು ಸಹ ಕೆಲವೇ ವರ್ಷಗಳಲ್ಲಿ ಇಲ್ಲವಾಗಬಹುದು. ಜಾತಿ ಸಮುದಾಯಗಳು ಇನ್ನಷ್ಟು ಉದಾರವಾಗುವುದೂ ಅಗತ್ಯ. ಈ ಧರ್ಮದಲ್ಲಿ ಈಗಲೂ ಇರುವ ಜಾತಿ ವ್ಯವಸ್ಥೆ, ಮತಾಂತರದ ಆಮಿಷಕ್ಕೆ ಒಳಗಾಗುವುದು ಇತ್ಯಾದಿ ಅನಿಷ್ಟಗಳು ದೂರವಾಗಿ ಏಕತೆ ಮೂಡಿದರೆ ಸಹಜವಾಗಿಯೇ ಅದು ದೇಶದ ಏಕತೆಗೆ ಪೂರಕವಾಗಿರುತ್ತದೆ.

Exit mobile version