ಕೇಂದ್ರ ಲೋಕ ಸೇವಾ ಆಯೋಗ (UPSC) ನಡೆಸಿದ ನಾಗರಿಕ ಸೇವೆಗಳ ಪರೀಕ್ಷೆಯ (UPSC Results 2023) ಫಲಿತಾಂಶ ಪ್ರಕಟವಾಗಿದೆ. ಅನೇಕ ಸಾಧಕರು ತಮ್ಮ ಸಾಧನೆಯ ವಿಜಯಧ್ವಜಗಳನ್ನು ಹಾರಿಸಿದ್ದಾರೆ. ಉತ್ತರ ಪ್ರದೇಶದ ಆದಿತ್ಯ ಶ್ರೀವಾಸ್ತವ್ ಅವರು ದೇಶದಲ್ಲೇ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಅನಿಮೇಶ್ ಪ್ರಧಾನ್, ಡೊನೂರು ಅನನ್ಯಾ ರೆಡ್ಡಿ ಮುಂತಾದವರು ಎರಡು ಮತ್ತು ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಕರ್ನಾಟಕದಲ್ಲೂ ಈ ಪರೀಕ್ಷೆಯನ್ನು ಗೆದ್ದ ಅನೇಕ ಮಂದಿಯ ಸಾಧನೆಯ ಕತೆಗಳು ಸ್ಫೂರ್ತಿದಾಯಕವಾಗಿವೆ.
ಐಐಟಿ ಕಾನ್ಪುರದಲ್ಲಿ ಎಂ.ಟೆಕ್ ಸ್ನಾತಕೋತ್ತರ ಪದವಿ ಪಡೆದ ಆದಿತ್ಯ ಶ್ರೀವಾಸ್ತವ ಹಣಕಾಸು ಕೊರತೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ 15 ತಿಂಗಳು ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ, ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತ ಇವರು ಎಲೆಕ್ಟ್ರಿಕಲ್ ಎಂಜಿನಿಯರ್ ಉದ್ಯೋಗ ಬಿಟ್ಟು ಐಎಎಸ್‌ಗೆ ಅಧ್ಯಯನ ಮಾಡಲು ಆರಂಭಿಸಿದರು. 2017ರಿಂದಲೂ ಸತತ ಪ್ರಯತ್ನ ನಡೆಸಿ, ಈಗ ಯುಪಿಎಸ್‌ಸಿಯಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ.
ಇದನ್ನೂ ಓದಿ | UPSC Results 2023: ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್ ಆದ ಪೊಲೀಸ್ ಅಧಿಕಾರಿ!
ದೇಶದಲ್ಲಿ 100ನೇ ರ‍್ಯಾಂಕ್ ಪಡೆದ ವಿಜಯಪುರ ಮೂಲದ ವಿಜೇತಾ ಬಿ. ಹೊಸಮನಿ, ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆಗೆ ವಿಜಯಪುರದ ಸೈನಿಕ ಶಾಲೆಯಲ್ಲಿ ಓದಿದ ವಿಜೇತಾ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದು, ಕ್ರಿಮಿನಲ್ ಲಾದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ. 2020ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದು, ಆನ್‌ಲೈನ್ ತರಬೇತಿ ಹಾಗೂ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಿ ಇವರು ಸಾಧನೆ ಮಾಡಿದ್ದಾರೆ. ಇಂಡಿಯನ್ ರೆವೆನ್ಯೂ ಸರ್ವೀಸ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ 2ನೇ ಸ್ಥಾನ ಪಡೆದ ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ್ (101ನೇ ರ‍್ಯಾಂಕ್) ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ. ಇವರ ತಂದೆ ರೈತರು. 939ನೇ ರ‍್ಯಾಂಕ್ ಪಡೆದ ಕೋಲಾರದ ಯುವಕ, ಶಿಕ್ಷಕ ದಂಪತಿ ಪುತ್ರ ಗೌತಮ್ ಮತ್ತೊಂದು ಬಾರಿ ಪರೀಕ್ಷೆ ಬರೆಯುವುದಾಗಿ ಹೇಳಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ಯುಪಿಎಸ್ಸಿಗೆ ಇವರು ತಯಾರಿ ನಡೆಸಿದ್ದರು.
644ನೇ ರ‍್ಯಾಂಕ್ ಪಡೆದ ಬಳ್ಳಾರಿಯ ಶಾಂತಪ್ಪ ಕುರುಬರ್ ಕತೆ ಕುತೂಹಲಕಾರಿಯಾಗಿದೆ. ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದ ಶಾಂತಪ್ಪ, ನಿರಂತರ ಕಷ್ಟದಲ್ಲಿ ಬೆಳೆದಿದ್ದು, ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದವರು. ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಇವರು PSI ಹುದ್ದೆಯಲ್ಲಿದ್ದು, ಕೆಲಸದ ಜೊತೆಜೊತೆಗೇ ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಜೊತೆಗೆ ಕನ್ನಡದಲ್ಲೇ ಪರೀಕ್ಷೆ ಬರೆದು ಪಾಸಾಗಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿರುವ ಶಾಂತಪ್ಪ ಕುರುಬರ್ ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಿದ್ದಾರೆ. ಹಿಂದೊಮ್ಮೆ ಅವರ ತಾಯಿಗೆ ಆದ ಪ್ರಯಾಸದ ಅನುಭವದಿಂದ, ಇನ್ಯಾರಿಗೂ ಇಂಥ ತೊಂದರೆ ಆಗದಿರಲಿ ಎಂದು, ಸಾರ್ವಜನಿಕರಿಗಾಗಿ ಮೊಬೈಲ್ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದವರು ಇವರು.
ಇದನ್ನೂ ಓದಿ | UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ
ಸಾಧಕರ ಇಂಥ ಕತೆಗಳು ಇತರ ವಿದ್ಯಾರ್ಥಿಗಳಿಗೆ, ಮುಂದಿನ ವರ್ಷಗಳಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಮುಂದಾಗುವವರಿಗೆ ಸ್ಫೂರ್ತಿದಾಯಕವಾಗಿವೆ. ಕಷ್ಟಗಳನ್ನು ಹೊಂದಿರುವವರು, ಕಷ್ಟಗಳಲ್ಲಿ ಬೆಳೆದವರು, ಶ್ರೀಮಂತ ಹಿನ್ನೆಲೆಯಿಲ್ಲದವರು ಓದಿ ಪರೀಕ್ಷೆ ಬರೆದು ರ‍್ಯಾಂಕ್‌ಗಳನ್ನು ಪಡೆದಿದ್ದಾರೆ. ಶ್ರೀಮಂತ ಹಿನ್ನೆಲೆಯ, ಇಂಗ್ಲಿಷ್‌ನಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು ಮಾತ್ರ ಇಂಥ ಪರೀಕ್ಷೆಗಳನ್ನು ಬರೆಯಬಹುದು ಎಂಬ ಮಿಥ್ಯೆಯೊಂದು ಬೇರೂರಿದೆ. ಇದನ್ನು ಹೋಗಲಾಡಿಸಲು ಇಂಥ ಫಲಿತಾಂಶಗಳು ನೆರವಾಗುತ್ತವೆ. ದಿನವಿಡೀ ಡ್ಯೂಟಿ ಮಾಡಬೇಕಾದ ಪೊಲೀಸ್ ಒಬ್ಬರು ಯುಪಿಎಸ್‌ಸಿ ಪರೀಕ್ಷೆ ಬರೆದು ರ‍್ಯಾಂಕ್ ಗಳಿಸಬಹುದಾದರೆ, ಇತರರು ಯಾಕೆ ಮಾಡಲು ಸಾಧ್ಯವಿಲ್ಲ? ಹತ್ತು ಸಲ ಪರೀಕ್ಷೆ ಬರೆದು ಹಿನ್ನಡೆ ಕಂಡವರೂ, ಹನ್ನೊಂದನೇ ಸಲ ಪರೀಕ್ಷೆಯಲ್ಲಿ ಸಾಧನೆ ಮಾಡಬಹುದು ಎಂಬುದು ಕೂಡ ಧನಾತ್ಮಕ ಸಂದೇಶ ನೀಡುವಂಥದು. ಇವರ ಸಾಧನೆಗಳು ಭವಿಷ್ಯದ ಸಾಧಕರಿಗೆ ದಾರಿದೀಪವಾಗಲಿ.