Site icon Vistara News

ವಿಸ್ತಾರ ಸಂಪಾದಕೀಯ | ನಕ್ಸಲ್ ಮುಕ್ತ ಭಾರತ ಸನ್ನಿಹಿತ

Naxal

ಚತ್ತೀಸ್ ಗಢ ಮತ್ತು ತೆಲಂಗಾಣದ ಗಡಿಯಲ್ಲಿರುವ ನಕ್ಸಲರ ಭದ್ರಕೋಟೆಯಲ್ಲೇ ಗುರುವಾರ ಭದ್ರತಾ ಪಡೆಗಳು ದೊಡ್ಡ ಮಟ್ಟದ ಸರ್ಜಿಕಲ್ ಕಾರ್ಯಾಚರಣೆ ನಡೆಸಿವೆ. ನಕ್ಸಲರ ಹಿರಿಯ ಮುಖಂಡರು ಅವಿತಿರುವ ಭದ್ರಕೋಟೆಗೆ ನಡೆಸಿರುವ ದಾಳಿ ಇದಾಗಿದ್ದು, ನಕ್ಸಲ್ ಸಂಪೂರ್ಣ ನಿರ್ಮೂಲನೆ ದೃಷ್ಟಿಯಿಂದ ಇದು ನಿರ್ಣಾಯಕ ದಾಳಿ ಎನ್ನಲಾಗಿದೆ. ಈ ದಾಳಿಯಲ್ಲಿ ಅಳಿದುಳಿದ ನಕ್ಸಲ್ ಸಂಘಟನೆಗೆ ಭಾರಿ ನಷ್ಟವಾಗಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ದೇಶದಲ್ಲಿ 2024ರೊಳಗೆ ಮಾವೋವಾದವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ಮಾವೋವಾದದ ತೀವ್ರತೆ ಗಣನೀಯವಾಗಿ ಕುಂಠಿತವಾಗಿದೆ. 2009ರಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದಲ್ಲಿ 2,258 ನಕ್ಸಲ್‌ ದಾಳಿಗಳು ನಡೆದಿದ್ದವು. 2021ರಲ್ಲಿ ಇವುಗಳ ಸಂಖ್ಯೆ 509ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಮೋದಿ ಸರ್ಕಾರವು ಯುವಕರಿಗೆ ಉದ್ಯೋಗ ನೀಡುವುದು, ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಮುಂದಿನ ದಿನಗಳಲ್ಲಿ ಮಾವೋವಾದವನ್ನು ನಿರ್ಮೂಲನೆ ಮಾಡುವುದು ಗುರಿಯಾಗಿದೆ ಎಂಬುದು ಶಾ ಅವರ ಮಾತು.

ಮಾವೋವಾದಿ ಹೋರಾಟ ಎಂಬುದು ಭಯೋತ್ಪಾದನೆಯ ಇನ್ನೊಂದು ಪರಿ. ಅದು ʼನಕ್ಸಲಿಸಂʼ ಎಂಬ ಆಕರ್ಷಕವಾದ ಹೆಸರನ್ನು ಹೊಂದಿದೆ. ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಎಂಬ ಪಟ್ಟಣದಲ್ಲಿ, ಭೂಮಾಲಿಕರು ಹಾಗೂ ಗೇಣಿ ರೈತರ ನಡುವೆ ಆರಂಭವಾದ ಹಿಂಸಾತ್ಮಕ ಸಂಘರ್ಷದಿಂದ ಈ ಹೆಸರು ಹುಟ್ಟಿಕೊಂಡಿತು. ಇದರ ಹಿನ್ನೆಲೆಯಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷಗಳು, ನಾನಾ ಸಂಘಟನೆಗಳು ಇದ್ದವು. ಆರಂಭದಲ್ಲಿ ದೌರ್ಜನ್ಯಕಾರಿ ಭೂಮಾಲಿಕರ ವಿರುದ್ಧ ಇದ್ದ ಹೋರಾಟ, ಮುಂದೆ ಸರ್ಕಾರದ ವಿರುದ್ಧ ತಿರುಗಿತು. ನಂತರ ಎಲ್ಲ ಶ್ರೀಮಂತರ ವಿರುದ್ಧವೂ ಬೆಳೆಯಿತು. ಎಲ್ಲ ಶ್ರೀಮಂತರೂ ಶೋಷಕರೇ ಆಗಿದ್ದಾರೆ ಎಂಬುದು ನಕ್ಸಲಿಸಂನ ಸಿದ್ಧಾಂತವಾಯಿತು. ನ್ಯಾಯಮಾರ್ಗದಲ್ಲಿ ದುಡಿದೂ ಶ್ರೀಮಂತನಾಗಬಹುದು ಎಂಬ ಸರಳ, ಸಾಂವಿಧಾನಿಕ ಸತ್ಯವನ್ನೂ ಈ ನಕ್ಸಲಿಸಂ ಒಪ್ಪುವುದಿಲ್ಲ. ನ್ಯಾಯಮಾರ್ಗದಲ್ಲಿ ದುಡಿದುಣ್ಣುವ ಬಡವರೇನೋ ಇದನ್ನು ಅಪ್ಪಿಕೊಳ್ಳಲಿಲ್ಲ. ಆದರೆ ಬಡವರ ಹೆಸರಿನಲ್ಲಿ ರಾಜಕೀಯ, ಹಿಂಸೆ ಮಾಡುವವರ ಸಾಧನವಾಯಿತು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ನಕ್ಸಲೀಯರ ಸಮಸ್ಯೆಯು ನಮ್ಮ ದೇಶವು ಹಿಂದೆಂದೂ ಎದುರಿಸದ ಒಂದು ದೊಡ್ಡ ಭದ್ರತಾ ಸವಾಲು ಎಂದು ಕರೆದಿದ್ದರು. ನಕ್ಸಲ್‌ವಾದಿಗಳು ಚೀನಾದ ಮಾವೋನ ಉಗ್ರ ಸಮಾಜವಾದ. ಸಶಸ್ತ್ರ ಬಂಡಾಯದಲ್ಲಿ ನಂಬುಗೆಯುಳ್ಳವರು. ಆದರೆ ಸ್ವತಂತ್ರ ಭಾರತವೊಂದು ಪ್ರಜಾತಂತ್ರ ಗಣರಾಜ್ಯ. ಇಲ್ಲಿ ವ್ಯಕ್ತಿಯ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಪೂರ್ಣ ಮಾನ್ಯತೆಯಿದೆ. ಹೀಗಾಗಿ ನಕ್ಸಲ್ ದಾರಿ ಪ್ರಜಾಪ್ರಭುತ್ವಕ್ಕೆ ವಿರೋಧವಾದುದು. ಅಮಾಯಕರನ್ನು ಕ್ರಾಂತಿಯ ಹೆಸರಲ್ಲಿ ಕೊಲ್ಲುವುದು ತಪ್ಪು. ಆದ್ದರಿಂದ ನಕ್ಸಲರ ವಿರುದ್ಧ ಸತತ ಕಾರ್ಯಾಚರಣೆ ನಡೆದಿದೆ. ದೇಶದ 14 ರಾಜ್ಯಗಳ ಸುಮಾರು 60 ಜಿಲ್ಲೆಗಳಲ್ಲಿ ಇದು ಹರಡಿಕೊಂಡಿದೆ. ಇದನ್ನು ನಿರ್ಮೂಲನೆ ಮಾಡುವುದೇನೂ ಸುಲಭದ ಕೆಲಸವಾಗಿರಲಿಲ್ಲ. ಕೆಲವೊಮ್ಮೆ ಸ್ಥಳೀಯ ಬಡಜನತೆಯ ಸಹಾನುಭೂತಿ ಹೊಂದಿರುತ್ತಿದ್ದ ಇವರು ಕಾಡುಗಳನ್ನು ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದರು. ಗ್ರಾಮೀಣ, ನಗರ ಪ್ರದೇಶಗಳಲ್ಲೂ ನಕ್ಸಲ್‌ಪರ ಹೋರಾಟಗಾರರು, ಮಾತುಗಾರರು, ಬರಹಗಾರರು ಇದ್ದಾರೆ.

ಕೇಂದ್ರ ಸರ್ಕಾರವಂತೂ ಇವರನ್ನು ಮಟ್ಟಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ನಕ್ಸಲ್ ಚಟುವಟಿಕೆಗಳ ಅಂಕಿಸಂಖ್ಯೆ ಗಮನಿಸಿದರೆ ಗೃಹ ಸಚಿವರು ಹೇಳಿದ್ದು ಅತಿಶಯೋಕ್ತಿ ಅಲ್ಲ ಅನಿಸುತ್ತದೆ. ನಕ್ಸಲ್‌ ನಿಗ್ರಹ ಪಡೆಗಳನ್ನು ಸಬಲೀಕರಿಸಲಾಗಿದೆ. ತಾಲೂಕು ಮಟ್ಟದಲ್ಲಿ ಈ ಪಡೆಗಳ ಕೇಂದ್ರ ಸ್ಥಾಪಿಸಲಾಗಿದೆ. ಮಾಹಿತಿದಾರರ ಜಾಲವನ್ನು ಸಂವರ್ಧಿಸಲಾಗಿದೆ. ಸಂಘಟಿತ ದಾಳಿಗಳು ಮೊದಲಿನಂತೆ ಈಗ ನಡೆಯುತ್ತಿಲ್ಲ. ಕರ್ನಾಟಕದಲ್ಲಿ ಜೋರಾಗಿದ್ದ ನಕ್ಸಲಿಸಂ ತೀವ್ರ ಹಾಗೂ ಸಂಘಟಿತ ಪೊಲೀಸ್‌ ಪ್ರಯತ್ನದಿಂದ ಬಹುತೇಕ ಅಳಿದೇಹೋಗಿದೆ. ಅಳಿದುಳಿದ ನಕ್ಸಲರು ತೆಲಂಗಾಣ, ಕೇರಳ ಮುಂತಾದ ಪಕ್ಕದ ರಾಜ್ಯಗಳಿಗೆ ಪರಾರಿಯಾಗಿದ್ದಾರೆ. ಅಲ್ಲಿನ ಸರ್ಕಾರಗಳೂ ಕಠಿಣ ಕಾರ್ಯಾಚರಣೆಗಳಿಗೆ ಇಳಿದಿರುವುದರಿಂದ ಹೆಚ್ಚಿನವರು ಎನ್‌ಕೌಂಟರ್‌ಗಳಲ್ಲಿ ಬಲಿಯಾಗಿದ್ದಾರೆ ಅಥವಾ ಶರಣಾಗಿದ್ದಾರೆ. ಶರಣಾಗಿರುವವರಿಗೆ ಸೂಕ್ತ ಶಿಕ್ಷೆ ಅಥವಾ ಕ್ಷಮಾದಾನವನ್ನು ಸರ್ಕಾರ ನೀಡಿದೆ. ಕಾಡಿನಲ್ಲಿರುವ ಮಾತ್ರವಲ್ಲ, ನಾಡಿನಲ್ಲಿರುವ ನಕ್ಸಲ್‌ಪರರನ್ನೂ ಮಟ್ಟ ಹಾಕಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಧಿಕೃತ ವಿದೇಶಿ ಹಣದ ಪಾವತಿ ವ್ಯವಹಾರವನ್ನು ಮಟ್ಟ ಹಾಕಿರುವದು ಅವುಗಳಲ್ಲಿ ಒಂದು. ನಕ್ಸಲ್‌ ಪೀಡಿತ ಪ್ರದೇಶಗಳಿಗೆ ವಿಶೇಷ ಹಣಕಾಸಿನ ಪ್ಯಾಕೇಜ್‌ಗಳನ್ನು ಘೋಷಿಸಿ ಅವುಗಳನ್ನು ಕಾರ್ಯಗತಗೊಳಿಸಿರುವುದು, ಅಲ್ಲಿನ ಜನತೆಗೆ ತಾವು ಅನ್ಯರಲ್ಲ ಎಂಬ ಭಾವನೆ ಮೂಡದಂತೆ ನೋಡಿಕೊಂಡಿರುವುದು ಮತ್ತೊಂದು ಉತ್ತಮ ಕ್ರಮ. ಕಳೆದ ಐದು ವರ್ಷಗಳಲ್ಲಿ ಇಂಥ ತೀರಾ ಹಿಂದುಳಿದ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ 3000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಇಲ್ಲಿನ ಯುವಜನತೆಗೆ ಉದ್ಯೋಗ ನೀಡುವುದನ್ನು ಆದ್ಯತೆಯಾಗಿಸಿಕೊಂಡಿದೆ.

ಇದೆಲ್ಲದರ ಪರಿಣಾಮವಾಗಿಯೇ ನಕ್ಸಲಿಸಂನಲ್ಲಿ ಭಾರಿ ಇಳಿಕೆ ಕಂಡಿದೆ ಎನ್ನಬಹುದಾಗಿದೆ. ಅಂದರೆ ಇದರಲ್ಲಿ ಕಠಿಣ ಕಾರ್ಯಾಚರಣೆಯ ಜತೆಗೆ ಅಭಿವೃದ್ಧಿ- ಉದ್ಯೋಗ ಕಾರ್ಯಕ್ರಮಗಳೂ ಸೇರಿ ನಕ್ಸಲಿಸಂ ನಿರ್ಮೂಲನೆಯತ್ತ ಭಾರತ ಹೆಜ್ಜೆ ಹಾಕಿದೆ. ಸಾವಿರಾರು ಯುವ ಜನ ನಕ್ಸಲ್ ಸಹವಾಸ ತೊರೆದು ಮುಖ್ಯವಾಹಿನಿಗೆ ಮರಳಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ಭಾರತದ ಮುಖ್ಯವಾಹಿನಿಗೆ ಸೇರಿಕೊಂಡಿದ್ದಾರೆ. ನಕ್ಸಲ್ ಮುಕ್ತ ಭಾರತದ ನಿರ್ಮಾಣ ಕಾರ್ಯ ಇನ್ನಷ್ಟು ಶೀಘ್ರವಾಗಿ ಆಗಲಿ ಎಂದು ಆಶಿಸೋಣ.

ಇದನ್ನೂ ಓದಿ | Naxalism Free Country | 2024ರ ವೇಳೆಗೆ ದೇಶ ನಕ್ಸಲ್‌ಮುಕ್ತ, ಅಮಿತ್‌ ಶಾ ಶಪಥ

Exit mobile version