Site icon Vistara News

ವಿಸ್ತಾರ ಸಂಪಾದಕೀಯ: ನಿತಾರಿ ಹಂತಕರ ಖುಲಾಸೆ: ಸಮಾಜ ಯಾವ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕು?

Vistara Editorial, Nithari killers acquitted, Which system should society trust?

ತ್ತರ ಪ್ರದೇಶದ ನಿತಾರಿ ಸರಣಿ ಹತ್ಯಾಕಾಂಡದಲ್ಲಿ ಪ್ರಮುಖ ಆರೋಪಿಗಳೆನಿಸಿದ್ದ ಇಬ್ಬರು ಸಾಕ್ಷ್ಯಾಧಾರದ ಕೊರತೆ ನೆಪದಲ್ಲಿ ಖುಲಾಸೆಯಾಗಿದ್ದಾರೆ. ಈ ಪ್ರಕರಣ ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಹದಿನೈದಕ್ಕೂ ಹೆಚ್ಚು ಮಕ್ಕಳು ಬರ್ಬರವಾಗಿ ಕೊಲೆಯಾಗಿದ್ದರು. ಅವರನ್ನು ಅತ್ಯಾಚಾರ ಮಾಡಲಾಗಿತ್ತು; ಕೊಲೆ ಮಾಡಲಾಗಿತ್ತು; ಹೆಣವನ್ನೂ ಬಿಡದೆ ಅವುಗಳ ಮೇಲೆ ಶವಸಂಭೋಗ ಎಸಗಲಾಗಿತ್ತು. ಆರೋಪಿಗಳು ಶವವನ್ನು ಬೇಯಿಸಿ ಸೇವಿಸಿದ್ದರು ಎಂದು ಕೂಡ ಹೇಳಲಾಗಿತ್ತು. ಶವಗಳನ್ನು ಯಾವ ಭಯವೂ ಇಲ್ಲದೆ ಮನೆಯ ಪಕ್ಕದ ಚರಂಡಿಯಲ್ಲಿ ಎಸೆಯಲಾಗಿತ್ತು. ಅಗೆಯಲು ಹೋದವರಿಗೆ ಹದಿನೈದಕ್ಕೂ ಹೆಚ್ಚು ಮಕ್ಕಳ ತಲೆಬುರುಡೆಗಳು, ಮೂಳೆಗಳು ದೊರೆತಿದ್ದವು. ಅಂದರೆ ಇದನ್ನು ನಡೆಸಿದವರು ನಾಗರಿಕ ಸಮಾಜದ ನಡುವೆ ಇರಲು ಅನರ್ಹರು, ಅಪಾಯಕಾರಿಗಳು ಎಂಬುದಂತೂ ಖಚಿತ. ಇದೀಗ ಈ ಆರೋಪಿಗಳು ನಿರ್ದೋಷಿಗಳು ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿದೆ. ಆರೋಪಿಗಳಾದ ಮೊನಿಂದರ್‌ ಸಿಂಗ್‌ ಪಂಧೇರ್‌ ಹಾಗೂ ಸುರೇಂದ್ರ ಕೋಲಿ ಜೈಲಿನಿಂದಾಚೆ ನಡೆಯುವಂತಾಗಿದೆ. ಈ ಇಡೀ ಖುಲಾಸೆ ಪ್ರಹಸನ ನಮ್ಮಲ್ಲಿ ಆಘಾತ ಮೂಡಿಸುತ್ತದೆ, ಅನೇಕ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

ಈ ಇಬ್ಬರೂ ಆರೋಪಿಗಳು ನಿರ್ದೋಷಿಗಳು ಎಂದಾದರೆ ಈ ಬರ್ಬರ ಕೊಲೆಗಳನ್ನು ಎಸಗಿದವರು ಯಾರು? ಅವರನ್ನು ಯಾಕೆ ಇನ್ನೂ ಹಿಡಿಯಲಾಗಿಲ್ಲ? ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದಾರೆ; ನಂತರ ಸಿಬಿಐ ಕೂಡ ಇದರ ವಿಸ್ತೃತ ತನಿಖೆ ನಡೆಸಿದೆ. ಸಿಬಿಐ ಕೋರ್ಟ್‌ ವಿವರವಾದ ವಿಚಾರಣೆ ನಡೆಸಿದ್ದು, ಇಬ್ಬರಿಗೂ ಮರಣದಂಡನೆಯನ್ನು ಕೂಡ ವಿಧಿಸಿತ್ತು. ರಾಷ್ಟ್ರಪತಿಗಳ ಮುಂದೆ ಇವರ ಕ್ಷಮಾದಾನ ಅರ್ಜಿಯನ್ನೂ ಸಲ್ಲಿಸಲಾಗಿದ್ದು, ಅದು ಕೂಡ ತಿರಸ್ಕೃತಗೊಂಡಿತ್ತು. ಈಗ ಇಬ್ಬರ ಮರಣದಂಡನೆಯೂ ತೆರವಾಗಿದೆ. ಈ ಪ್ರಕರಣ ಬೆಳಕಿಗೆ ಬಂದುದು 2006ರಲ್ಲಿ. ಅಂದಿನಿಂದ ಇಂದಿನವರೆಗೆ ಅವರು ಜೈಲಿನಲ್ಲಿದ್ದಾರೆ. ಇವರಿಬ್ಬರೂ ನಿರಪರಾಧಿಗಳೆಂದಾದರೆ 17 ವರ್ಷ ಇವರು ಜೈಲಿನಲ್ಲಿ ಕಳೆಯಬೇಕಾಗಿ ಬಂದಿರುವುದು ಅನ್ಯಾಯವಲ್ಲವೇ?!

ಇಡೀ ದೇಶದ ಗಮನ ಸೆಳೆದ ಹೈ ಪ್ರೊಫೈಲ್‌ ಪ್ರಕರಣವಾಗಿದ್ದರೂ, ಹತ್ತಾರು ವರ್ಷ ತನಿಖೆ ನಡೆಸಿದ ಬಳಿಕವೂ, ಇಷ್ಟೊಂದು ಮಂದಿಯನ್ನು ಅಮಾನುಷವಾಗಿ ಕೊಂದಿದ್ದು ಯಾರು ಎನ್ನುವುದೇ ಇನ್ನೂ ಪ್ರಶ್ನಾರ್ಥಕವಾಗಿ ಉಳಿದಿರುವುದು ಶೋಚನೀಯ. ಪೊಲೀಸರು ಸಮರ್ಪಕವಾಗಿ ಸಾಕ್ಷ್ಯ ಸಂಗ್ರಹಿಸಿಲ್ಲ ಎಂದು ನ್ಯಾಯಾಲಯ ಹೇಳುತ್ತದೆ; ನ್ಯಾಯಾಲಯ ನಮ್ಮ ಸಾಕ್ಷ್ಯಗಳನ್ನು ಕುಲಂಕಷವಾಗಿ ಪರಿಗಣಿಸುವುದಿಲ್ಲ ಎಂದು ಪೊಲೀಸ್‌ ಇಲಾಖೆ ಹೇಳುತ್ತದೆ. ಈ ಕಾನೂನು ಸಂಘರ್ಷದ ನಡುವೆ ಕ್ರೂರಾತಿಕ್ರೂರ ಹಂತಕರು ನೇಣು ಕುಣಿಕೆಯಿಂದ ಪಾರಾಗುತ್ತಿದ್ದಾರೆ. ನಿರ್ದಿಷ್ಟ ಸಾಕ್ಷ್ಯ ಪರಿಶೀಲಿಸಿ ಕೆಳ ಹಂತದ ಕೋರ್ಟ್‌ ಮರಣ ದಂಡನೆ ವಿಧಿಸುತ್ತದೆ. ಅದೇ ಸಾಕ್ಷ್ಯಗಳನ್ನು ಮೇಲಿನ ಕೋರ್ಟ್‌ ತಳ್ಳಿ ಹಾಕುತ್ತದೆ. ಹೀಗಾದರೆ ಸಮಾಜ ಇಲ್ಲಿನ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡುವುದಾದರೂ ಹೇಗೆ? ಅವೇ ಸಾಕ್ಷಿಗಳು, ಅವೇ ವಾದಮಂಡನೆ, ನ್ಯಾಯಾಧೀಶರ ನಿಲುವುಗಳು ಮಾತ್ರ ಬೇರೆ ಬೇರೆಯಾಗುವುದು ವೈಚಿತ್ರ್ಯ. ಪ್ರಮುಖ ಆರೋಪಿಗೆ ಹನ್ನೆರಡು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ. ಇದೀಗ ಹನ್ನೆರಡರಲ್ಲೂ ಖುಲಾಸೆ! ನ್ಯಾಯ ತೀರ್ಮಾನದಲ್ಲಿ ಇಷ್ಟು ವೈಪರೀತ್ಯ ಹೇಗೆ ಸಾಧ್ಯ?

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹ ಅಮಾನ್ಯ ತೀರ್ಪು ಸ್ವಾಗತಾರ್ಹ, ಸರ್ಕಾರಕ್ಕೂ ಆತುರ ಬೇಡ

ಸದ್ಯ ನ್ಯಾಯಾಂಗದ ಮಾತನ್ನೇ ನಂಬುವುದಾದರೆ, ಸಿಬಿಐ ಸರಿಯಾಗಿ ತನಿಖೆ ನಡೆಸಿಲ್ಲ ಹಾಗೂ ಸಾಕ್ಷಿಗಳನ್ನು ಸಂಗ್ರಹಿಸಿಲ್ಲ. ಹಾಗಿದ್ದರೆ ಇಷ್ಟು ವರ್ಷ ಸಿಬಿಐ ಮಾಡಿದ್ದೇನು? ಪ್ರಕರಣದಲ್ಲಿ ಆರೋಪಿಗಳ ಪಾತ್ರವನ್ನು ಗಟ್ಟಿಗೊಳಿಸಲು ಬೇಕಾದ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಸಿಬಿಐ ವಿಫಲವಾಗಿರುವುದೇಕೆ? ಇದೂ ತನಿಖೆಯಾಗಬೇಕು. ಹತ್ಯಾಕಾಂಡದಲ್ಲಿ ಮೃತರಾದ ಮಕ್ಕಳ ಕುಟುಂಬದವರಿಗೆ ನ್ಯಾಯ ಈಗ ಎಲ್ಲಿದೆ? ಅವರೇಕೆ ಈ ಅನ್ಯಾಯದ ಶಿಕ್ಷೆಯನ್ನು ತಮ್ಮ ಎದೆಯಲ್ಲಿ ಧರಿಸಿಕೊಂಡು ಬದುಕಬೇಕು? ನಮ್ಮ ನ್ಯಾಯಾಂಗ ವ್ಯವಸ್ಥೆ ಹೆಚ್ಚಾಗಿ ʼʼನೂರು ಅಪರಾಧಿಗಳಿಗೆ ಶಿಕ್ಷೆ ತಪ್ಪಿದರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದುʼʼ ಎಂಬ ಸೂತ್ರವನ್ನೇ ಕೇಂದ್ರೀಕರಿಸಿದೆ. ಹೀಗಾಗಿ ತುಂಬಾ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳು ಪಾರಾಗುತ್ತಾರೆ. ಸಂತ್ರಸ್ತರು ಇನ್ನಷ್ಟು ಸಂತ್ರಸ್ತರಾಗುತ್ತಾರೆ. ಹಾಗೆಯೇ ʼವಿಳಂಬ ನ್ಯಾಯದಾನ, ಸಂತ್ರಸ್ತನಿಗೆ ನ್ಯಾಯವನ್ನು ನಿರಾಕರಿಸಿದಂತೆಯೇ ಸರಿʼ ಎಂಬ ಮಾತು ಕೂಡ ಇದೆ. ನಿಥಾರಿ ಹತ್ಯಾಕಾಂಡದಲ್ಲಿ ಸಾಕಷ್ಟು ವಿಳಂಬವಾಗಿದೆ. ಇದೀಗ ಖುಲಾಸೆಯೂ ಆಗಿ, ನ್ಯಾಯ ಮರೀಚಿಕೆಯೇ ಆಗಿದೆ.

ಹೀಗೇ ಆಗುತ್ತಿದ್ದರೆ ದೇಶದ ಜನತೆ ನ್ಯಾಯಾಂಗದಲ್ಲೂ ನಂಬಿಕೆ ಕಳೆದುಕೊಳ್ಳುತ್ತಾನೆ. ನ್ಯಾಯದಾನ ವಿಳಂಬದ ಕಳವಳಕಾರಿ ಚಿತ್ರಣವೂ ಇದೆ. ಕಳೆದ 30 ವರ್ಷಗಳಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 71 ಸಾವಿರಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಸುಮಾರು 1.01 ಲಕ್ಷ ಪ್ರಕರಣಗಳು 30ಕ್ಕೂ ಅಧಿಕ ವರ್ಷಗಳಿಂದ ಕೆಳ ನ್ಯಾಯಾಲಯಗಳಲ್ಲಿ ಹಾಗೇ ಇವೆ. ಸುಪ್ರೀಂ ಕೋರ್ಟ್‌, 25 ಹೈಕೋರ್ಟ್‌ಗಳು ಹಾಗೂ ಇನ್ನಿತರ ಕೆಳ ನ್ಯಾಯಾಲಯಗಳಲ್ಲಿ ಒಟ್ಟಾರೆ 5.02 ಕೋಟಿ ಪ್ರಕರಣಗಳು ಬಾಕಿ ಇವೆ. ಇದು ನಮ್ಮ ದೇಶದ ನ್ಯಾಯದಾನ ವ್ಯವಸ್ಥೆಯ ಒಂದು ದಾರುಣ ಚಿತ್ರ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version