ರಾಷ್ಟ್ರ ರಾಜಧಾನಿಯಲ್ಲಿರುವ ಭಾರತ ಮಂಟಪದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯು ಮಹತ್ವದ ಘಟ್ಟ ತಲುಪಿದೆ. ಶನಿವಾರ ಹಲವು ಘೋಷಣೆಗಳನ್ನು ವಿವಿಧ ರಾಷ್ಟ್ರ ನಾಯಕರು ಸೇರಿ ಅಂಗೀಕರಿಸಿದ್ದಾರೆ. ಮಧ್ಯಾಹ್ನ ಊಟದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅಧಿವೇಶನ ಉದ್ದೇಶಿಸಿ ಮಾತನಾಡಿ, ಜಿ20 ಶೃಂಗಸಭೆಯ ನಾಯಕರ ನಿರ್ಣಯವನ್ನು ಅಂಗೀಕರಿಸಿದರು. ಇದರ ಜತೆಗೆ ಹಲವು ದ್ವಿಪಕ್ಷೀಯ ಮಾತುಕತೆಗಳೂ ನಡೆದಿವೆ. ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣಕ್ಕೆ ವಿಷಯಕ್ಕೆ ಸಂಬಂಧಿಸಿದಂತೆ ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಕುರಿತು ಗ್ರೂಪ್‌ನ ಎಲ್ಲ ರಾಷ್ಟ್ರಗಳು ಒಂದೇ ಅಭಿಪ್ರಾಯ ಮಂಡಿಸಿವೆ. ನಿರ್ಣಯದ ಹೊತ್ತಿನಲ್ಲಿ ರಷ್ಯಾ ಇದಕ್ಕೆ ಆಕ್ಷೇಪ ಸಲ್ಲಿಸಬಹುದು. ಆದರೆ ಜಾಗತಿಕ ಶಾಂತಿ ನೆಲೆಸಬೇಕು ಎಂಬುದರ ಕುರಿತು ಯಾರಿಗೂ ತಕರಾರು ಇರಲಾರದು. ರಷ್ಯಾದಂಥ ರಾಷ್ಟ್ರವನು ಪಕ್ಕದಲ್ಲಿ ಇಟ್ಟುಕೊಂಡೂ ಈ ನಿರ್ಣಯವನ್ನು ತೆಗೆದುಕೊಳ್ಳುವುದು ಯಾವ ಆತಿಥೇಯ ರಾಷ್ಟ್ರಕ್ಕಾದರೂ ಮುಜುಗರದ ವಿಷಯವೇ. ಆದರೆ ಭಾರತ ಆ ರಿಸ್ಕ್ ಅನ್ನು ತೆಗೆದುಕೊಂಡಿದೆ.
ಒಂದು ದೇಶ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಪರಿಕಲ್ಪನೆಯಡಿ ಜಿ20 ಶೃಂಗ ಸಭೆಯನ್ನು ಆಯೋಜಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ನಾನು ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶ್ಲಾಘಿಸಿದ್ದಾರೆ. ನಿನ್ನೆ ಬ್ರಿಟನ್ ಅಧ್ಯಕ್ಷ ರಿಷಿ ಸುನಕ್ ಕೂಡ ಈ ಮಾತನ್ನು ಹೇಳಿದ್ದರು. ಬಲಿಷ್ಠ ರಾಷ್ಟ್ರಗಳು ಭಾರತದ ಕರ್ತೃತ್ವ ಶಕ್ತಿ, ಸಂಘಟನಾ ಚಾತುರ್ಯ, ಸಂಕಲ್ಪ ಶಕ್ತಿಗಳನ್ನು ಮನಗಂಡಿವೆ ಎಂಬುದಕ್ಕೆ ಇದು ಸಾಕ್ಷಿ. ರಷ್ಯಾ ಹಾಗೂ ಚೀನಾದ ದೇಶಗಳ ಅಧ್ಯಕ್ಷರನ್ನು ಹೊರತುಪಡಿಸಿ ಇತರ ಎಲ್ಲ ದೇಶಗಳ ಮುಖ್ಯಸ್ಥರು ಈ ಸಮಾವೇಶಕ್ಕೆ ಆಗಮಿಸಿದ್ದಾರೆ. ಜಾಗತಿಕ ವಾಣಿಜ್ಯ, ಆರ್ಥಿಕ ವಹಿವಾಟುಗಳು ಯಾವುದೇ ಅಡೆತಡೆ ಇಲ್ಲದಂತೆ ನಡೆಯುವುದು, ಜಾಗತಿಕ ಸಮಸ್ಯೆಗಳು ಸದಸ್ಯ ದೇಶಗಳನ್ನು ಬಾಧಿಸದಂತೆ ಕ್ರಿಯಾಯೋಜನೆಗಳನ್ನು ರೂಪಿಸುವುದು ಈ ಸಮಾವೇಶದ ಉದ್ದೇಶ. ಈ ಗುರಿಯ ಈಡೇರಿಕೆಯಲ್ಲಿ ಭಾರತವಿಂದು ವಹಿಸುತ್ತಿರುವ ಪಾತ್ರ ನಮಗೆ ದೊರೆಯುತ್ತಿರುವ ಮನ್ನಣೆಯಿಂದಾಗಿಯೇ ಸ್ಪಷ್ಟವಿದೆ.
ಜಿ20ಯಲ್ಲಿಂದು ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಬಲಿಷ್ಠ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆಗೆ ಉತ್ತೇಜನ ನೀಡುವುದು, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುವುದು ಇವುಗಳಲ್ಲಿ ಮುಖ್ಯವಾದುದು. ಸಮುದ್ರ ಆರ್ಥಿಕತೆಯಲ್ಲಿ ನವೀನ ಆವಿಷ್ಕಾರಗಳು, ಆಹಾರ ಭದ್ರತೆ ಕುರಿತಾದ ಘೋಷಣೆಗಳು ಅನುಮೋದನೆಗೊಂಡಿವೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲೆ ಪ್ರಗತಿ ಸಾಧಿಸುವುದು ಹಾಗೂ ಅದರ ವೇಗವನ್ನು ಹೆಚ್ಚುಗೊಳಿಸುವುದು ಎಂದಿನಿಂದಲೂ ಭಾರತದ ಗುರಿಯಾಗಿದ್ದು ಸುಸ್ಥಿರ ಇಂಧನ ಬಳಕೆಯನ್ನು ಪ್ರತಿಪಾದಿಸುತ್ತಲೇ ಬಂದಿದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಗಮನ ಹರಿಸಿ ಅದೇ ಬಗೆಯ ಜೀವನಶೈಲಿಯತ್ತ ಗಮನ ಕೊಡುವುದು, ಸುಸ್ಥಿರ, ಕೈಗೆಟಕುವ ರೀತಿಯಲ್ಲಿ ಸುಸ್ಥಿರ ಹಣಕಾಸು ವ್ಯವಸ್ಥೆ ಅನುಷ್ಠಾನಗೊಳಿಸುವುದು, ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು, ಸುಸ್ಥಿರವಾಗಿ ಬಳಸುವುದು ಮತ್ತು ಮರುಸ್ಥಾಪಿಸುವುದು, ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯುವುದು, ಹವಾಮಾನ ಬದಲಾವಣೆ ಮತ್ತು ಪರಿವರ್ತನೆಯ ಹಾದಿಗಳಿಂದ ಉಂಟಾಗುವ ಆರ್ಥಿಕ ಅಪಾಯಗಳನ್ನು ಎದುರಿಸುವುದು ಎಂದಿಗಿಂತ ಹೆಚ್ಚು ಅಗತ್ಯವಾಗಿವೆ.
ವಿಶ್ವದಲ್ಲಿನ ಹಸಿವು ಮತ್ತು ಅಪೌಷ್ಟಿಕತೆಯನ್ನು ನಿವಾರಿಸುವ ಕೆಲಸ ಮಾಡಲು ಎಲ್ಲ ದೇಶಗಳು ಕೈ ಜೋಡಿಸುವುದು, ಆಹಾರ ಮತ್ತು ಅಭದ್ರತೆಯ ಮೇಲೆ ಆರ್ಥಿಕ ಪರಿಣಾಮಗಳ ಬಗ್ಗೆ ಕಾಳಜಿ ವಹಿಸುವುದು,
ಜಾಗತಿಕ ಆರೋಗ್ಯ ಬಲಪಡಿಸುವುದು ಹಾಗೂ ಮಹತ್ತರ ಆರೋಗ್ಯ ವಿಧಾನವನ್ನು ಕಾರ್ಯಗತಗೊಳಿಸುವತ್ತ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ವಿಶ್ವದ ಬೆಳವಣಿಗೆಗಾಗಿ ಉತ್ತಮ ವ್ಯಾಪಾರ ಸಂಬಂಧ ಭವಿಷ್ಯದ ದೃಷ್ಟಿಯಲ್ಲಿ ತಯಾರಿ ನಡೆಸುವುದು, ವಿಶ್ವದೆದುರು ಇದ್ದಕ್ಕಿದ್ದಂತೆ ಎದುರಾಗಬಹುದಾದ ಆರ್ಥಿಕ ಕುಸಿತವನ್ನು ಎದುರಿಸಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳನ್ನು ಸುಧಾರಿಸುವುದು, ಜಾಗತಿಕ ಸಾಲದ ದೋಷಗಳನ್ನು ನಿರ್ವಹಿಸುವುದು, ಆರ್ಥಿಕ ಒಳಗೊಳ್ಳುವಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಕ್ರಿಪ್ಟೋ-ಸ್ವತ್ತುಗಳು, ನೀತಿ ಮತ್ತು ನಿಯಂತ್ರಣದ ಬಗ್ಗೆ ಗಮನ ಹರಿಸುವುದು, ಆಯಾ ದೇಶಗಳ ಸೆಂಟ್ರಲ್ ಬ್ಯಾಂಕ್ ವ್ಯವಸ್ಥೆ, ಡಿಜಿಟಲ್ ಕರೆನ್ಸಿ ಹಾಗೂ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಬೆಳೆಸುವುದು ಮುಖ್ಯವಾದುದು.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಿ20 ಶೃಂಗಸಭೆ ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿಸಲಿದೆ
ಭಯೋತ್ಪಾದನೆ ಮತ್ತು ಮನಿ ಲಾಂಡರಿಂಗ್ ಅನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕಾರ್ಯ ಸನ್ನದ್ಧರಾಗುವುದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ಜವಾಬ್ದಾರಿಯುತವಾಗಿ ಎಲ್ಲರೂ ಬಳಸಿಕೊಳ್ಳುವಂತೆ ಮಾಡುವುದು, ತಾಂತ್ರಿಕ ರೂಪಾಂತರ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಬಳಕೆ ಮಾಡುವುದು, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಭದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ವಿಶ್ವಾಸವನ್ನ ನಿರ್ಮಾಣ ಮಾಡುವುದು ಇಂದು ಅನಿವಾರ್ಯ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು, ಸಾಗರ ಆಧಾರಿತ ಆರ್ಥಿಕತೆಯನ್ನು ಬಳಸಿಕೊಳ್ಳುವುದು ಮತ್ತು ಸಂರಕ್ಷಿಸುವುದು, ಮುಂದೆ ನಗರಗಳಾಗಿ ಬೆಳೆಯುವ ಪ್ರದೇಶಗಳಿಗೆ ಹಣಕಾಸು ಒದಗಿಸುವುದು, ವಿಪತ್ತು ಅಪಾಯವನ್ನು ಕಡಿಮೆ ಮಾಡುವುದು ಮತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯವನ್ನು ನಿರ್ಮಿಸುವುದು ಇವೆಲ್ಲವೂ ನಿರ್ಣಯಗಳಾಗಿ ಬಂದಿವೆ.
ಸಮಾವೇಶದ ಮುಖ್ಯ ಥೀಮ್ ಆಗಿರುವ ʼಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼದ ಗುರಿಯನ್ನು ಸಾಧಿಸಲು ಹಲವು ನಿಟ್ಟಿನಿಂದ ದುಡಿಯಬೇಕಿದೆ. ಅದಕ್ಕೆ ಈ ಎಲ್ಲ ಗುರಿಗಳು, ಆಶಯಗಳು, ಘೋಷಣೆಗಳು ಒಟ್ಟಂದದಲ್ಲಿ ಕಾರ್ಯರೂಪಕ್ಕೆ ಬರಬೇಕಿವೆ. ಇದರ ಕ್ರಿಯಾಯೋಜನೆಗಳನ್ನು ಜಾರಿಗೆ ತರುವುದಕ್ಕೂ ಸೂಕ್ತ ವರ್ಕಿಂಗ್ ಗ್ರೂಪ್‌ಗಳ ಮೇಲೆ ಎಲ್ಲ ದೇಶಗಳೂ ಗಮನ ಹರಿಸುವಂತಾಗಲಿ.