ಇಡೀ ದೇಶದ ಗಮನವನ್ನು ತನ್ನ ಕಡೆ ಸೆಳೆದಿದ್ದು, ಉಸಿರಾಟ ಬಿಗಿಹಿಡಿಯುವಂತೆ ಮಾಡಿದ್ದ ಉತ್ತರಕಾಶಿ ಸುರಂಗ ರಕ್ಷಣಾ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse) ಜಿಲ್ಲೆಯಲ್ಲಿ ಕುಸಿದ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ಹೊರ ತರಲಾಗಿದೆ(Uttarkashi Tunnel Rescue). ಮಂಗಳವಾರ ರಾತ್ರಿ ಎಂಟು ಗಂಟೆಗೆ ಒಬ್ಬೊಬ್ಬರಾಗಿ ಸುರಂಗದೊಳಗಿಂದ ಕಾರ್ಮಿಕರನ್ನು ಹೊರ ಕರೆ ತರಲಾಯಿತು. ಅಂತಿಮ ಹಂತದ ಕಾರ್ಯಾಚರಣೆ ಆರಂಭವಾದ ಅರ್ಧ ಗಂಟೆಯಲ್ಲಿ ಎಲ್ಲ 41 ಕಾರ್ಮಿಕರು ಸುರಂಗದ ಅವಶೇಷಗಳಿಂದ ಹೊರ ಬಂದಿದ್ದಾರೆ. ಆದರೆ ಇದರ ಹಿಂದೆ ಸತತ 17 ದಿನಗಳ ಹೋರಾಟವಿತ್ತು ಎಂಬುದನ್ನು ಮರೆಯುವಂತಿಲ್ಲ. ಕಾರ್ಮಿಕರು ಸುರಕ್ಷಿತವಾಗಿ ಹೊರಬರಲಿ ಎಂದು ಶತಕೋಟಿ ಭಾರತೀಯರು ಮಾಡಿದ ಪ್ರಾರ್ಥನೆಯೂ ಯಶಸ್ವಿಯಾಗಿದೆ. ಸದ್ಯ ತಿಳಿದುಬಂದಿರುವಂತೆ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಸುರಕ್ಷಿತವಾಗಿ ಹಾಗೂ ಆರೋಗ್ಯವಾಗಿದ್ದಾರೆ(Vistara Editorial).
ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸಿಬ್ಬಂದಿ, ಪೊಲೀಸರು, ನುರಿತ ರಕ್ಷಣಾ ಸಿಬ್ಬಂದಿ, ವಿದೇಶಿ ತಂಡಗಳು, ಅತ್ಯಾಧುನಿಕ ಯಂತ್ರಗಳು, ಡ್ರಿಲ್ಲಿಂಗ್ ಮಷೀನ್‌ಗಳನ್ನು ಬಳಸಿ ಸತತವಾಗಿ ಕಾರ್ಯಾಚರಣೆ ಕೈಗೊಂಡರೂ ಹಲವು ಅಡೆತಡೆಗಳು ಎದುರಾದವು. ಆದರೆ, ಇದೆಲ್ಲವನ್ನೂ ಮೀರಿ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ. ಸದ್ಯಕ್ಕೆ 41 ಹಾಸಿಗೆಗಳು ಇರುವ ತಾತ್ಕಾಲಿಕ ಪ್ರತ್ಯೇಕ ಆಸ್ಪತ್ರೆಯಲ್ಲಿ ಕಾರ್ಮಿಕರು ದೈಹಿಕ ಹಾಗೂ ಮಾನಸಿಕ ಸುದೃಢತೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. 17 ದಿನಗಳ ಕಾಲ ಅವರು ಎಂಥ ಪರಿಸ್ಥಿತಿಯಲ್ಲಿ ಇದ್ದರು ಎಂಬುದನ್ನು ನಾವು ಸ್ವಲ್ಪ ಊಹಿಸಿಕೊಂಡರೂ ಸಾಕು, ಅವರು ಎಂಥ ಅಗ್ನಿಪರೀಕ್ಷೆಯನ್ನು ಗೆದ್ದು ಬಂದರು ಎಂಬುದು ಅರ್ಥವಾಗುತ್ತದೆ. 17 ದಿನ ಕಾಲ ಸೂರ್ಯನ ಬೆಳಕಿಲ್ಲದ ಕತ್ತಲಿನ ಗೂಡು. ಆರೋಗ್ಯಕರ ಗಾಳಿಯಿಲ್ಲ. ಸರಿಯಾದ ಊಟ ತಿಂಡಿಗಳಿಲ್ಲ. ಪಾರಾಗಿ ಹೊರಗೆ ಬರುತ್ತೇವೋ ಇಲ್ಲವೋ ಎಂಬ ಆತಂಕ. ಕುಟುಂಬಸ್ಥರ ಜೊತೆಗೆ ಸಂಪರ್ಕವಿಲ್ಲ. ಒಂದೊಂದು ದಿನ ಕಳೆದಂತೆಯೂ ಬದುಕುಳಿಯುವ ಸಾಧ್ಯತೆ ಕ್ಷೀಣಿಸುತ್ತ ಹೋಗುತ್ತದೆ. ಇಂಥ ಇಕ್ಕಟ್ಟಾದ ಸುರಂಗಗಳಲ್ಲಿ, ಎಲ್ಲ ಸರಿಯಾಗಿದ್ದಾಗಲೂ, ಕ್ಲಸ್ಟ್ರೋಫೋಬಿಯಾ ಎಂಬ ಉಸಿರುಗಟ್ಟುವ ಭಯ ಕಾಡುತ್ತದೆ. ಇಂಥ ಸನ್ನಿವೇಶದಲ್ಲಿ ಮಾನಸಿಕ ಸ್ಥೈರ್ಯ ಉಳಿಸಿಕೊಂಡು ಹೊರಬಂದ ಕಾರ್ಮಿಕರನ್ನು ಮೊದಲು ಶ್ಲಾಘಿಸಬೇಕು. ಕ್ಷಿಪ್ರವಾಗಿ ಕಾರ್ಮಿಕರಿದ್ದ ಸ್ಥಳವನ್ನು ಗುರುತಿಸಿದ್ದು, ಅವರ ಜತೆ ಸಂಪರ್ಕ ಸಾಧಿಸಿದ ಕಾರಣ ಅವರಿಗೆ ಆಹಾರ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಯಿತು. ಅವರಿಗೆ ಧೈರ್ಯ ತುಂಬಿ, ಯೋಗ ಮಾಡಲು ಸಲಹೆ ಕೊಟ್ಟು, ಒತ್ತಡ ನಿರೋಧಕ ಮಾತ್ರೆಗಳನ್ನು ಪೂರೈಸಿ 17 ದಿನವೂ ಅವರು ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳಲಾಯಿತು. ಇದು ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ.
ಇನ್ನು ರಕ್ಷಣಾ ಕಾರ್ಯಾಚರಣೆ ನಡೆಸಿದವರು, ಅದನ್ನು ಯೋಜಿಸಿದವರು, ಅದಕ್ಕೆ ಸೂಕ್ತ ಶಕ್ತಿ ತುಂಬಿದವರನ್ನೂ ಶ್ಲಾಘಿಸಬೇಕು. 56 ಮೀಟರ್ ಗಳಷ್ಟು ದೂರಕ್ಕೆ ಕುಸಿದ ಬೆಟ್ಟದ ಅವಶೇಷಗಳ ನಡುವೆ ಡ್ರಿಲಿಂಗ್ ಮಾಡಿ, ಕಾರ್ಮಿಕರು ಸುರಕ್ಷಿತವಾಗಿರುವಂತೆ ನೋಡಿಕೊಂಡು ಅವರನ್ನು ತಲುಪುವುದು, ಹೊರತರುವುದು ಭಗೀರಥ ಪ್ರಯತ್ನವೇ ಆಗಿತ್ತು. ಕೆಲಸದ ನಡುವೆ ಎರಡೆರಡು ಯಂತ್ರಗಳು ಕೂಡ ಕೈಕೊಟ್ಟವು. ಮಧ್ಯೆ ಬಂಡೆಗಳು, ಉಕ್ಕಿನ ಸರಳುಗಳು ತಡೆಯಾದವು. ಅಡ್ಡವಾಗಿ ಕೊರೆಯುವ, ಮೇಲಿನಿಂದ ಕೊರೆಯುವ, ಹೀಗೆ ಎಲ್ಲ ಬಗೆಯ ಯತ್ನಗಳೂ ನಡೆದವು. ಅಂತಿಮವಾಗಿ ರಕ್ಷಣಾ ಸಂಸ್ಥೆಗಳು ರೂಪಿಸಿದ ‘ರ‍್ಯಾಟ್ ಹೋಲ್’ ಮೈನಿಂಗ್‌ನಿಂದ ಕಾರ್ಮಿಕರನ್ನು ತಲುಪಲು ಸಾಧ್ಯವಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಧಾಮಿ, ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲು ವಿದೇಶದಿಂದ ನುರಿತ ತಜ್ಞರನ್ನು ಕರೆಯಿಸಿ, ಕಾಲಕಾಲಕ್ಕೆ ಕಾರ್ಯಾಚರಣೆಯ ಮೇಲೆ ನಿಗಾ ಇಡುತ್ತ ನಾಯಕತ್ವ ತೋರಿದರು. ಇಂಟರ್‌ನ್ಯಾಷನಲ್ ಟನೆಲಿಂಗ್ ಅಂಡರ್‌ಗ್ರೌಂಡ್ ಸ್ಪೇಸ್ ಪ್ರೊಫೆಸರ್ ಸಂಸ್ಥೆಯ ಅಧ್ಯಕ್ಷ ಅರ್ನಾಲ್ಡ್ ಡಿಕ್ಸ್ ಅವರ ತಂಡವನ್ನು ಕರೆಸಲಾಯಿತು. ಅಮೆರಿಕದಲ್ಲಿ ತಯಾರಾದ ಯಂತ್ರಗಳು, ಡ್ರಿಲ್ಲಿಂಗ್ ಮಷೀನ್‌ಗಳು, ಪುಶ್ ಇನ್ ಪೈಪ್‌ಗಳು ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಯಿತು. ಇವೆಲ್ಲವೂ ಸೇರಿ ಜೀವರಕ್ಷಣೆ ಸಾಧ್ಯವಾಗಿದೆ. ಎಲ್ಲರಿಗೂ ನಮ್ಮ ಮೆಚ್ಚುಗೆ ಸಲ್ಲಬೇಕು.
ಈ ಇಡೀ ಪ್ರಕರಣ ನಮ್ಮ ಗಮನವನ್ನು ಇನ್ನೊಂದು ಕಡೆ ಸೆಳೆಯಬೇಕು: ಅದೇನೆಂದರೆ, ಸುರಂಗ ಹಾಗೂ ಗಣಿ ಕಾರ್ಮಿಕರ ಸುರಕ್ಷತೆ ಮತ್ತು ಅವರಿಗೆ ನೀಡಲಾಗುವ ಸೌಲಭ್ಯಗಳ ಕಡೆಗೆ. ಅವರಿಗೆ ಸೂಕ್ತ ಸುರಕ್ಷತಾ ಸಾಧನಗಳನ್ನು ಕೊಡಲಾಗುತ್ತಿದೆಯೇ ದಿನದ ಬಹುಭಾಗ ಅನಾರೋಗ್ಯಕರವಾದ ರೀತಿಯಲ್ಲಿ ಕೆಲಸ ಮಾಡುತ್ತಿರಬೇಕಾದ ಇವರ ಆರೋಗ್ಯಸೇವೆಯ ಕಡೆಗೆ ಸರ್ಕಾರ, ಉದ್ಯೋಗದಾತರು ಗಮನ ಕೊಟ್ಟಿದ್ದಾರೆಯೇ? ಭಾರತೀಯ ಮಾನಕಗಳಲ್ಲಿ (ಇಂಡಿಯನ್ ಸ್ಟ್ಯಾಂಡರ್ಡ್ಸ್) ನೀಡಲಾಗಿರುವ ಕೆಲಸದ ಹಾಗೂ ಸುರಕ್ಷತೆಯ ಮಾನದಂಡಗಳನ್ನು ಇವರ ಉದ್ಯೋಗದ ಸ್ಥಳದಲ್ಲಿ ಅನುಸರಿಸಲಾಗುತ್ತಿದೆಯೇ? ಇದೇ ರೀತಿಯಲ್ಲಿ, ಇದಕ್ಕಿಂತಲೂ ಆತಂಕಕರವಾದ ಸನ್ನಿವೇಶವಿರುವ ಗಣಿಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರ ಪರಿಸ್ಥಿತಿ ಹೇಗಿದೆ? ಇವುಗಳನ್ನೆಲ್ಲ ಪರಿಶೀಲಿಸಬೇಕಿದೆ.
ಸದ್ಯ ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ನಡೆದಿರುವ ಕುಸಿತ, ಇಂಥ ಸುರಂಗ ಕಾರ್ಯಾಚರಣೆಯಲ್ಲಿ ಸಾಮಾನ್ಯ ಇರಬಹುದು; ಅಥವಾ ಅಸಾಮಾನ್ಯವೇ ಇರಬಹುದು. ಸಡಿಲವಾದ, ಮೆದುವಾದ ಮಣ್ಣಿನ ರಚನೆಯನ್ನು ಸರಿಯಾಗಿ ಗಮನಿಸದೆ ಕಾಮಗಾರಿ ನಡೆಸಿದ ಕಾರಣ ಹೀಗಾಗಿದೆಯೇ ಅಥವಾ ದಿಡೀರ್ ಎಂದು ಬಂದ ಮಳೆಯ ಕಾರಣ ಹೀಗಾಗಿದೆಯೇ ಎಂಬುದು ತಿಳಿದುಬಂದಿಲ್ಲ. ಅದೇನೇ ಇದ್ದರೂ, ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದುದಕ್ಕಾಗಿ ಸುರಂಗ ಕಾಮಗಾರಿ ನಡೆಸುತ್ತಿರುವ ಕಂಪನಿಯ ಕ್ರಮ ಕೈಗೊಳ್ಳಬೇಕಾಗಿದೆ. ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್ ಸುರಂಗದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದೆ. ಜತೆಗೆ ಅಧಿಕಾರಿಗಳೂ ಇದರಲ್ಲಿ ಪಾಲುದಾರರಾಗುತ್ತಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆದು ಕ್ರಮಗಳಾಗಲಿ. ಇದೇ ವೇಳೆಗೆ ದೇಶದಲ್ಲಿ ನಡೆಯುತ್ತಿರುವ ಇತರ ಸುರಂಗ ಕಾಮಗಾರಿಗಳ ಸುರಕ್ಷತಾ ಪರೀಕ್ಷೆಯೂ ಅಗತ್ಯವಾಗಿ ನಡೆಯಬೇಕಿದೆ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜನತಾ ದರ್ಶನದ ಗೋಳು, ಅಧಿಕಾರಿಗಳ ಹೊಣೆಗೇಡಿತನದ ಫಲ