Site icon Vistara News

ವಿಸ್ತಾರ ಸಂಪಾದಕೀಯ: ವಿಶ್ವಸಂಸ್ಥೆಯಲ್ಲಿ ಅಭೂತಪೂರ್ವ ಯೋಗ ದಿನ, ಭಾರತಕ್ಕೆ ಹೆಮ್ಮೆ

Yoga Day Event At UN Creates Guinness World Record

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ (Yoga Day 2023) ವಿಶ್ವಸಂಸ್ಥೆಯ (united nations) ಕೇಂದ್ರ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದಲ್ಲಿ ನಡೆದ ಯೋಗ ಕಾರ್ಯಕ್ರಮವು ಜಾಗತಿಕ ಗಮನ ಸೆಳೆದಿದೆ. 180 ದೇಶಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಗಿನ್ನಿಸ್‌ ದಾಖಲೆಯಾಗಿಯೂ ದಾಖಲಾಗಿದೆ. ಮೋದಿ ಅವರು ವಿಶ್ವಸಂಸ್ಥೆಯ ಯೋಗ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ನೇತೃತ್ವ ವಹಿಸುವ ಮೂಲಕ ಇತಿಹಾಸ ಸೃಷ್ಟಿಸಿರುವುದು, ಅವರೇ ಅಲ್ಲಿನ ಅದ್ಧೂರಿ ಯೋಗ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು ಕೂಡ ಗಮನಾರ್ಹ. ಯೋಗ ಎಂದರೆ ಬರೀ ವ್ಯಾಯಾಮ ಪದ್ಧತಿ ಅಲ್ಲ, ಅದೊಂದು ಜೀವನ ವಿಧಾನ. ಯೋಗವು ಜನರನ್ನು ಒಗ್ಗೂಡಿಸುವ ಜತೆಗೆ ಆರೋಗ್ಯವಾಗಿಡುತ್ತದೆ. ಯೋಗವು ಎಲ್ಲರಿಗೂ ಮುಕ್ತವಾಗದೆ. ಯೋಗಕ್ಕೆ ಯಾವುದೇ ಪೇಟೆಂಟ್‌ ಇಲ್ಲ. ಯೋಗ ಎಂದರೆ ಒಗ್ಗಟ್ಟು, ಯೋಗ ಎಂದರೆ ಜೀವನ ಶೈಲಿ, ಯೋಗ ಎಂದರೆ ಆರೋಗ್ಯ, ಯೋಗ ಎಂದರೆ ಶಾಂತಿ ಎಂದು ಯೋಗದ ಮಹತ್ವವನ್ನು ಪ್ರಧಾನಿ ಮೋದಿ ಸಾರಿದ್ದಾರೆ(Vistara Editorial).

ಮೋದಿಯವರ ಈಗಿನ ಅಮೆರಿಕ ಭೇಟಿ ಐತಿಹಾಸಿಕ. ಮೋದಿ ಈ ಹಿಂದೆ ಹಲವು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರೂ ಈ ಬಾರಿಯದು ಅಧಿಕೃತ ಭೇಟಿ. ಇದು ಕೂಡ ಮಹತ್ವದ್ದು. ವಿಶ್ವ ಸಂಸ್ಥೆಯ ವೇದಿಕೆ ಮೂಲಕ ಮೋದಿ ಅವರು ಭಾರತ ಮೂಲದ ಒಂದು ವಿಶಿಷ್ಟ ಆರೋಗ್ಯ ರೂಢಿಯಾದ ಯೋಗದ ಮಹತ್ವವನ್ನು ಇಡೀ ಜಗತ್ತಿಗೆ ಸಾರಿದ್ದಾರೆ. ಈ ಹಿಂದೆ ಅನೇಕ ಸಂತರು, ಯೋಗಿಗಳು ಪಾಶ್ಚಾತ್ಯ ದೇಶಗಳಲ್ಲಿ ಯೋಗವನ್ನು ಜನಪ್ರಿಯಗೊಳಿಸಿದ್ದಾರೆ. ಮೋದಿಯವರು ಈ ಇತಿಹಾಸವನ್ನು ಮುಂದಕ್ಕೆ ಕೊಂಡೊಯ್ದಿದ್ದಾರೆ. ಯೋಗವನ್ನು ಒಂದು ಜೀವನಶೈಲಿಯಾಗಿ ರೂಢಿಸಬೇಕು ಎಂಬ ಪ್ರಯತ್ನಗಳು ಭಾರತದಲ್ಲೇ ಇನ್ನೂ ಪರಿಣಾಮಕಾರಿಯಾಗಿ ಫಲ ಕಂಡಿಲ್ಲ. ಯೋಗದ ಬಗ್ಗೆ ಹಲವು ಜನರಲ್ಲಿ ಅಜ್ಞಾನ, ಅರ್ಧ ಜ್ಞಾನ ಹಾಗೂ ತಪ್ಪು ತಿಳಿವಳಿಕೆಗಳು ಇನ್ನೂ ಇವೆ. ಯೋಗವು ದೇಶದ ಗಡಿ ದಾಟಿ ಹೊರದೇಶಗಳಲ್ಲಿ ಜನಪ್ರಿಯವಾಗುತ್ತಿರುವುದನ್ನು ಕಂಡಾದರೂ ಅದನ್ನು ನಮ್ಮ ನಿತ್ಯ ಹಾಗೂ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಳ್ಳುವ ರೂಢಿ ನಮ್ಮದಾಗಲು ಇಂಥ ಪ್ರಯತ್ನಗಳು ನೆರವಾಗಲಿವೆ.

ಇದೇ ಸಂದರ್ಭದಲ್ಲಿ ಮೋದಿ ಅವರು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ಅವರನ್ನು ಭೇಟಿ ಮಾಡಿ, ಭಾರತದಲ್ಲಿನ ಹೂಡಿಕೆ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಸ್ಕ್‌ ಅವರು, ತಾವು ಮೋದಿ ಫ್ಯಾನ್‌, ಮೋದಿಯವರು ಭಾರತಕ್ಕೆ ಒಳಿತು ಮಾಡಲಿದ್ದಾರೆ ಎಂದು ಹೇಳಿರುವುದು, ಟೆಸ್ಲಾ ಕಂಪನಿಯ ಭಾರತದ ಆಗಮನದ ಬಗ್ಗೆ ಮಾತನಾಡಿರುವುದೂ ಗಮನಾರ್ಹ. ಜತೆಗೆ ಹಲವಾರು ಜನ ಶಿಕ್ಷಣ ತಜ್ಞರು, ಆರೋಗ್ಯ ತಜ್ಞರ ಜತೆ ಉಭಯ ದೇಶಗಳ ಸಹಯೋಗದ ಬಗ್ಗೆ ಮೋದಿ ಸಮಾಲೋಚಿಸಿದ್ದಾರೆ. ʼತಾವು ಭಾರತೀಯರು ಎಂಬ ಬಗ್ಗೆ ಹೆಮ್ಮೆ ಪಡುವಂತೆ ಮೋದಿ ಮಾಡಿದರುʼ ಎಂದು ತಜ್ಞರೊಬ್ಬರು ನುಡಿದಿರುವುದು ದಾಖಲಾಗಿದೆ. ಜನಪ್ರಿಯ ವಿಜ್ಞಾನಿ ನೀಲ್ ಡಿಗ್ರಾಸ್ ಟೈಸನ್, ಗಣಿತಜ್ಞ ನಿಕೋಲಸ್ ನಾಸಿಮ್ ತಾಲೆಬ್, ಅರ್ಥಶಾಸ್ತ್ರಜ್ಞ ಪಾಲ್ ರೋಮರ್, ಹೂಡಿಕೆದಾರ ರೇ ಡಾಮಿಯೊ ಮುಂತಾದವರನ್ನು ಕೂಡ ಮೋದಿ ಭೇಟಿ ಮಾಡಿದ್ದಾರೆ. ರಾಜಕೀಯ ನಾಯಕರ ಜತೆ ಚಿಂತಕರ ಭೇಟಿಗೆ ಕೂಡ ಮೋದಿಯವರು ಮಹತ್ವ ನೀಡಿರುವುದು ಇದರಿಂದ ಗೊತ್ತಾಗುತ್ತದೆ. ರಾಜಕೀಯ ನಾಯಕರಷ್ಟೆ ಮುಖ್ಯವಾಗಿ ಚಿಂತಕರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮುಂತಾದವರು ದ್ವಿಪಕ್ಷೀಯ ಸಂಬಂಧವನ್ನು ಹಾಗೂ ಭವಿಷ್ಯದ ತಲೆಮಾರನ್ನು ಪ್ರಭಾವಿಸುತ್ತಾರೆ. ಆ ನಿಟ್ಟಿನಲ್ಲಿ ಈ ಭೇಟಿಗಳು ಮಹತ್ವ ಪಡೆದಿವೆ. ಅಧ್ಯಕ್ಷರನ್ನು ಕೂಡ ಅವರು ಇಂದು ಭೇಟಿ ಮಾಡಲಿದ್ದಾರೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಜಗತ್ತಿನಲ್ಲಿ ಭಾರತದ ಹಿರಿಮೆ ಸಾರಿದ ಯೋಗ

ಮೋದಿಯವರು ಈ ಭೇಟಿಯಲ್ಲಿ ಉಭಯ ದೇಶಗಳ ಮೂರು ಪ್ರಮುಖ ಅಂಶಗಳನ್ನು ಬೆಸೆದಿರುವುದನ್ನು ಗಮನಿಸಬಹುದು. ಯೋಗದ ಮೂಲಕ ಆಧ್ಯಾತ್ಮಿಕ ಅಂಶ, ದ್ವಿಪಕ್ಷೀಯ ಮಾತುಕತೆಗಳ ಮೂಲಕ ರಾಜನೀತಿಯ ಅಂಶ ಹಾಗೂ ತಜ್ಞರ ಭೇಟಿಯ ಮೂಲಕ ಸೈದ್ಧಾಂತಿಕ- ವೈಚಾರಿಕ ಅಂಶ. ಇವು ಮೂರೂ ಸಮರಸಗೊಂಡು ಬೆರೆತಾಗ ಭವಿಷ್ಯ ಬೆಳಗುತ್ತದೆ. ಮೋದಿಯವರ ಈ ಮುನ್ನೋಟಕ್ಕೆ ಅಮೆರಿಕದ ನಾಯಕರು ಕೈಜೋಡಿಸುತ್ತಾರೆ ಎಂದು ನಿರೀಕ್ಷಿಸೋಣ.

ಇನ್ನಷ್ಟು ವಿಸ್ತಾರ ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version