ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆ (Karnataka Railway project) ಯೋಜನೆಗಳಿಗೆ ದಾಖಲೆಯ ಅನುದಾನ ನೀಡಲಾಗಿದೆ. ರಾಜ್ಯದ ಯೋಜನೆಗಳಿಗೆ ಒಟ್ಟು 7561 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನ ಈ ಹಿಂದಿನ ಅನುದಾನಕ್ಕೆ ಹೋಲಿಸಿದರೆ 9 ಪಟ್ಟು ಹೆಚ್ಚು ಇದೆ. ರಾಜ್ಯದಲ್ಲಿ 55 ಹೊಸ ರೈಲು ನಿಲ್ದಾಣಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ನರೇಂದ್ರ ಮೋದಿಯವರ ವಂದೇ ಭಾರತ್ ಮೆಟ್ರೊ ಬೆಂಗಳೂರಿನಲ್ಲೇ ಜಾರಿ ಮಾಡುವ ಗುರಿ ಹೊಂದಲಾಗಿದೆ. ಆದ್ಯತೆ ಮೇರೆಗೆ ರಾಜ್ಯದಲ್ಲಿ 10 ಹೊಸ ಮಾರ್ಗಗಳನ್ನು ಪ್ರಕಟಿಸಲಾಗಿದೆ. ಈ ಎಲ್ಲ ವಿವರಗಳನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡಿದ್ದಾರೆ. ಇದಲ್ಲದೇ ಇನ್ನೂ ಹಲವು ಯೋಜನೆಗಳನ್ನು ಅವರು ಪ್ರಕಟಿಸಿದ್ದಾರೆ. ರೈಲು ನಿಲ್ದಾಣಗಳ ಅಭಿವೃದ್ಧಿ, ಹೊಸ ರೈಲು ಮಾರ್ಗಗಳು, ರೈಲುಗಳ ಹಳೆ ಕೋಚ್‌ಗಳ ಬದಲಾವಣೆ, ಮೆಟ್ರೋ ರೈಲು ಮಾರ್ಗದ ಮೂಲಕ ನೂರು ಕಿಲೋಮೀಟರ್ ಅಂತರದಲ್ಲಿರುವ ಎರಡು ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸುವ ಚಿಂತನೆ ಇದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಆದರೆ ಘೋಷಣೆಯಷ್ಟೇ ಸಾಲದು, ತ್ವರಿತವಾಗಿ ಈ ಯೋಜನೆಗಳು ಜಾರಿಗೆ ಬರಬೇಕು.
ಕರ್ನಾಟಕದ ರೈಲ್ವೆ ವಲಯ ಸಾಕಷ್ಟು ಅಭಿವೃದ್ಧಿ ಹೊಂದಿದ ಒಂದು ವಿಭಾಗ. ಇಲ್ಲಿನ ಪ್ರಯಾಣಿಕ ರೈಲುಗಳು ಹಾಗೂ ಸರಕು ರೈಲುಗಳು ಸಾಕಷ್ಟು ಆದಾಯವನ್ನು ಕೇಂದ್ರಕ್ಕೆ ತಂದುಕೊಡುತ್ತಿವೆ. ಇದಲ್ಲದೇ, ಮುಂದಿನ ಎರಡು ತಿಂಗಳಲ್ಲಿ ಕರ್ನಾಟಕದ ವಿಧಾನಸಭೆಗೆ ಚುನಾವಣೆಯೂ ನಡೆಯಲಿದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಮುತುವರ್ಜಿ ವಹಿಸಿರಬಹುದು. ರೈಲ್ವೆ ಯೋಜನೆಗಳಿಗೂ ಹೆಚ್ಚಿನ ಹಣವನ್ನು ಎತ್ತಿಡಲಾಗಿದೆ. ಅದೇನೇ ಇದ್ದರೂ ರಾಜ್ಯಕ್ಕೆ ಬರುವ ಹೊಸ ಯೋಜನೆಗಳು ಹಾಗೂ ಹಣಕಾಸು ಸಮರ್ಪಕವಾಗಿ ವಿನಿಯೋಗ ಆಗಬೇಕಾದುದು ಅಗತ್ಯ. ಈ ಹಿಂದಿನ ಘೋಷಣೆಗಳು ಏನಾಗಿವೆ ಎಂಬುದನ್ನೂ ಪರಿಶೀಲಿಸಬೇಕು. ಘೋಷಿತ ಹಳೆಯ ಯೋಜನೆಗಳು ಜಾರಿಗೆ ಬರುವಂತೆ ನೋಡಿಕೊಳ್ಳಬೇಕು.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳಲ್ಲೂ ಬದಲಾವಣೆ ಬಯಸುತ್ತಿದ್ದಾರೆ. ಸಾರಿಗೆ ಕ್ಷೇತ್ರದಲ್ಲೂ ಬದಲಾವಣೆಯ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬ್ಲೂಪ್ರಿಂಟ್ ದೇಶಕ್ಕೆ ಮಾದರಿಯಾಗಿದೆ. ಇದೇ ಮಾದರಿಯನ್ನು ದೇಶದ ಇತರ ಕಡೆಗೂ ಬಳಸಿಕೊಳ್ಳಲಾಗುವುದು. ಹಾಗೆಯೇ ರೈಲ್ವೆ ಯೋಜನೆಗಳಿಗೆ ಸಂಬಂಧಿಸಿದಂತೆ ಭೂ ಸ್ವಾಧೀನ ಸೇರಿ ಎಲ್ಲ ಹಂತಗಳಲ್ಲಿ ರಾಜ್ಯ ಸರ್ಕಾರ ಸಾಕಷ್ಟು ನೆರವು ನೀಡುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ರೈಲ್ವೆಯ ಆದಾಯ ಕೇಂದ್ರಕ್ಕೆ ಸೇರಿದ್ದಾದರೂ ಅದು ಬಳಕೆಯ ರೂಪದಲ್ಲಿ ರಾಜ್ಯಗಳಿಗೆ ಗರಿಷ್ಠ ಉಪಕಾರಿಯಾಗಿದೆ. ಈ ಹಣದುಬ್ಬರದ ಕಾಲದಲ್ಲೂ ಕನಿಷ್ಠ ಪ್ರಯಾಣಿಕ ಹಾಗೂ ಸರಕು ಸಾಗಣೆ ಶುಲ್ಕವನ್ನು ಅದು ಹೊಂದಿರುವುದರಿಂದ, ಸಾರ್ವಜನಿಕ ಸೇವೆಯ ಮಾಧ್ಯಮವೂ ಆಗಿದೆ. ಹೀಗಾಗಿ ಕೇಂದ್ರ- ರಾಜ್ಯಗಳೆರಡೂ ಸಮನ್ವಯದಿಂದ ಈ ಇಲಾಖೆಯನ್ನು ನೋಡಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ.
ಹಾಗೆಯೇ ರೈಲುಗಳಲ್ಲಿ ಸ್ಥಳೀಯ ಆಹಾರವನ್ನು ನೀಡಲು ನಿರ್ಧರಿಸಿರುವುದು ಆಯಾ ಪ್ರಾದೇಶಿಕ ಆಹಾರ ಉದ್ಯಮಕ್ಕೆ ಒತ್ತು ನೀಡಲಿದೆ. ಕರ್ನಾಟಕ ಹೇಗೆ ಜಿಎಸ್‌ಟಿ ಸಂಗ್ರಹದಲ್ಲಿ ಮುಂದಿದೆಯೋ ಹಾಗೆಯೇ ರೈಲ್ವೇ ಆದಾಯದಲ್ಲೂ ಮುಂದಿದೆ. ಕಳೆದ ವರ್ಷ ಕರ್ನಾಟಕವನ್ನು ಒಳಗೊಂಡ ನೈರುತ್ಯ ರೈಲ್ವೇ ವಲಯವು 6214 ಕೋಟಿ ರೂ.ಗಳ ವ್ಯವಹಾರ ಮಾಡಿದೆ. ಇಷ್ಟು ಶ್ರೀಮಂತವಾಗಿರುವ ವಲಯವನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳಬೇಕಿರುವುದೂ ಮುಖ್ಯ. ರಾಜ್ಯದ ರೈಲ್ವೇ ಮಾರ್ಗಗಳ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಇನ್ನಷ್ಟು ವೇಗ ಪಡೆದುಕೊಂಡರೆ ಮಾತ್ರ ಕೇಂದ್ರದ ಕನಸಿನಂತೆ ಈ ವರ್ಷ ಪೂರ್ಣಗೊಂಡೀತು. ಇದನ್ನು ಓಡಿಸಲು ತಜ್ಞತೆ ಬೇಕು. ಲೊಕೊಪೈಲಟ್‌ಗಳ ತರಬೇತಿಯಾಗಬೇಕು. ಹಳಿ ದ್ವಿಗುಣ ಕಾಮಗಾರಿಗಳು, ಬ್ರಾಡ್‌ಗೇಜ್ ಕಾಮಗಾರಿಗಳು ಬಾಕಿ ಇವೆ. ಕೆಲವು ಕಡೆ ಹೊಸ ರೈಲುಗಳ ಬೇಡಿಕೆ ಇದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ : ಮತ್ತೊಮ್ಮೆ ಆರ್‌ಎಸ್‌ಎಸ್‌ನ ಐಕ್ಯತಾ ಮಂತ್ರ
ಹಾಗೆಯೇ ನೈರುತ್ಯ ರೈಲ್ವೇ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ದೊರೆಯಬೇಕು. ರೈಲ್ವೆಯ ಡಿ ಗ್ರೂಪ್‌ನ ಹುದ್ದೆಗಳು ಮಾತ್ರ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ನಡೆಯುತ್ತಿವೆ. ಅದೂ ಕಾಟಾಚಾರಕ್ಕೆ ಮಾತ್ರ. ಬಿ ಗ್ರೂಪ್ ಅಧಿಕಾರಿ ಹುದ್ದೆಗಳು ಪರೀಕ್ಷೆ ಇಂದಿಗೂ ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತವಾಗಿವೆ. ರಾಜ್ಯ ವ್ಯಾಪ್ತಿಯ ರೈಲ್ವೆ ನೇಮಕಾತಿ ಮಂಡಳಿ ಬೆಂಗಳೂರಿನಲ್ಲಿ (ಆರ್‌ಆರ್‌ಬಿ) ವಾರ್ಷಿಕ 15ರಿಂದ 20 ಸಾವಿರ ರೈಲ್ವೆ ಹುದ್ದೆಗಳಿಗೆ ನೇಮಕಾತಿಗಳು ನಡೆಯುತ್ತವೆ. ಆದರೆ, ಪರೀಕ್ಷೆಗಳಲ್ಲಿನ ಅವ್ಯವಸ್ಥೆಯಿಂದ ಮತ್ತು ಭಾಷಾ ತಾರತಮ್ಯದಿಂದ ಕನ್ನಡಿಗರು ಹೆಚ್ಚಿನ ಹುದ್ದೆಗಳಿಗೆ ಆಯ್ಕೆಯಾಗುತ್ತಿಲ್ಲ. ಬಹುಪಾಲು ಹುದ್ದೆಗಳು ಉತ್ತರ ಭಾರತೀಯರು, ಹಿಂದಿ ಭಾಷಿಕರ ಪಾಲಾಗುತ್ತಿವೆ. ಇದು ಸರಿಹೋಗಬೇಕು. ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗ ಸಿಗುವಂತಾಗಬೇಕು.