Site icon Vistara News

ವಿಸ್ತಾರ ಸಂಪಾದಕೀಯ: ಸಲಿಂಗ ವಿವಾಹ ಅಮಾನ್ಯ ತೀರ್ಪು ಸ್ವಾಗತಾರ್ಹ, ಸರ್ಕಾರಕ್ಕೂ ಆತುರ ಬೇಡ

Supreme Court verdict on Article 370 and Know about this article

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆಯ (Same Sex Marriage legal) ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪಂಚಸದಸ್ಯ ಸಾಂವಿಧಾನಿಕ ಪೀಠದಲ್ಲಿ 3:2 ಮತಗಳ ತೀರ್ಪು ಬಂದಿದ್ದು, ಹೆಚ್ಚಿನ ನ್ಯಾಯಮೂರ್ತಿಗಳು ಕಾನೂನು ಮಾನ್ಯತೆ ನೀಡುವುದರ ವಿರುದ್ಧವಿದ್ದಾರೆ. ಹೀಗಾಗಿ ತೀರ್ಪು ಸಹ ಸಲಿಂಗ ವಿವಾಹಕ್ಕೆ ಮಾನ್ಯತೆಯನ್ನು ನಿರಾಕರಿಸಿದೆ. ಈ ಬಗ್ಗೆ ವಿಶೇಷ ವಿವಾಹ ಕಾಯಿದೆಯನ್ನು ತಿದ್ದುಪಡಿ ಮಾಡಬಹುದು, ಆದರೆ ಅದನ್ನು ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ ಎಂದು ಕೋರ್ಟ್‌ ಹೇಳಿದೆ. ಇದೇ ವೇಳೆಗೆ ಇತರ ಕೆಲವು ವಿಷಯಗಳನ್ನು ಗಮನಿಸಿ ಕೋರ್ಟ್‌ ಮಾಡಿರುವ ಟಿಪ್ಪಣಿಗಳು ಗಮನಾರ್ಹವಾಗಿವೆ(Vistara Editorial).

ಮದುವೆಯು ಸ್ಥಿರ ಮತ್ತು ಬದಲಾಗದ ವ್ಯವಸ್ಥೆ ಎಂದು ಹೇಳುವುದು ತಪ್ಪು. ಕ್ವಿಯರ್ ಎಂಬುದು ಯುಗಯುಗಾಂತರಗಳಿಂದ ಇರುವ ನೈಸರ್ಗಿಕ ವಿದ್ಯಮಾನ. ಸಲಿಂಗಕಾಮ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಮೇಲ್ವರ್ಗಗಳಿಗೆ ಸೀಮಿತವಾಗಿಲ್ಲ. ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ವ್ಯಕ್ತಿಯ ಜೀವನ ಕ್ರಮವನ್ನು ಆಯ್ಕೆ ಮಾಡುವ ಅವಿಭಾಜ್ಯ ಅಂಗ. ಕ್ವಿಯರ್‌ ವ್ಯಕ್ತಿಗಳ ಮೇಲೆ ತಾರತಮ್ಯ ಮಾಡಲಾಗದು. ವಸ್ತು ಪ್ರಯೋಜನಗಳು ಮತ್ತು ಸೇವೆಗಳನ್ನು ಕ್ವಿಯರ್‌ ದಂಪತಿಗಳಿಗೆ ನಿರಾಕರಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ. ಅವಿವಾಹಿತ ದಂಪತಿಗಳು ತಮ್ಮ ಸಂಬಂಧದ ಬಗ್ಗೆ ಗಂಭೀರವಾಗಿಲ್ಲ ಎಂದು ಭಾವಿಸಲು ಸಾಧ್ಯವಿಲ್ಲ. ಆದ್ದರಿಂದ ವಿಭಿನ್ನ ದಂಪತಿಗಳು ಮಕ್ಕಳನ್ನು ದತ್ತು ಪಡೆಯುವ ಹಕ್ಕನ್ನು ನಿರಾಕರಿಸುವುದು ಅಸಾಂವಿಧಾನಿಕ. ಟ್ರಾನ್ಸ್‌ಜೆಂಡರ್‌ ಪುರುಷನು ಮಹಿಳೆಯನ್ನು ಮದುವೆಯಾಗಬಹುದು, ಮತ್ತು ಟ್ರಾನ್ಸ್‌ಜೆಂಡರ್‌ ಮಹಿಳೆಯು ಪುರುಷನನ್ನು ಮದುವೆಯಾಗಬಹುದು. ಪಡಿತರ ಚೀಟಿಗಳು, ಪಿಂಚಣಿ, ಗ್ರಾಚ್ಯುಟಿ ಮತ್ತು ಉತ್ತರಾಧಿಕಾರ ಹಕ್ಕು ಸೇರಿದಂತೆ ಸಲಿಂಗ ದಂಪತಿಗಳ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರವು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯೊಂದಿಗೆ ಮುಂದುವರಿಯಬೇಕು ಎಂದು ಕೋರ್ಟ್‌ ಸೂಚಿಸಿದೆ.

ತೀರಾ ಇತ್ತೀಚಿನವರೆಗೂ ಭಾರತೀಯ ದಂಡಸಂಹಿತೆಯಲ್ಲಿದ್ದ ಸೆಕ್ಷನ್‌ 377, ಸಲಿಂಗ ಕಾಮವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಿತ್ತು. ಇತ್ತೀಚೆಗೆ ಆ ಕಾನೂನಿನಲ್ಲಿ ತಿದ್ದುಪಡಿಯಾಗಿದ್ದು, ಬಲವಂತವಾದ ಸಲಿಂಗ ಕಾಮ ಮಾತ್ರವೇ ಅಪರಾಧವೆನಿಸಿದೆ; ಸಮ್ಮತಿಯಿಂದ ನಡೆಯುವ ಸಲಿಂಗಕಾಮ ಅಪರಾಧವಾಗಿ ಉಳಿದಿಲ್ಲ. ಈ ಒಂದು ತೀರ್ಪಿಗಾಗಿ ಎಲ್‌ಬಿಟಿ ಸಮುದಾಯಗಳು ಬಲವಾದ ಹೋರಾಟವನ್ನೇ ಹಮ್ಮಿಕೊಂಡಿದ್ದವು. ಇದು ನಿರ್ದಿಷ್ಟ ಸ್ವರೂಪದ ಸಮುದಾಯಕ್ಕೆ ಸಂಬಂಧಿಸಿದ, ಹಾಗೂ ಭಾರತೀಯ ದಂಡ ಸಂಹಿತೆಯ ವ್ಯಾಪ್ತಿಯಲ್ಲಿ ಬರುತ್ತಿದ್ದ ಕಾನೂನಾದ್ದರಿಂದ ಶೀಘ್ರ ಬದಲಾವಣೆ, ತಿದ್ದುಪಡಿ ಸಾಧ್ಯವಾಯಿತು. ಆದರೆ ಸಲಿಂಗ ವಿವಾಹ ಹಾಗಲ್ಲ. ಅದು ಇನ್ನಷ್ಟು ವಿವೇಚನೆ, ಪರಿಶೀಲನೆಯನ್ನು ಬೇಡುತ್ತದೆ.

ನ್ಯಾಯಾಲಯಗಳು ಸಲಿಂಗ ವಿವಾಹದ ಹಕ್ಕನ್ನು ಗುರುತಿಸಿದರೆ ಕಾನೂನನ್ನು ಸಂಪೂರ್ಣ ಪುನಃ ತಿದ್ದಿ ಬರೆಯಬೇಕಾಗುತ್ತದೆ. ಹೊಸ ಸಾಮಾಜಿಕ ಸಂಸ್ಥೆಯನ್ನೇ ರಚನೆ ಮಾಡಿದಂತಾಗುತ್ತದೆ. ಈಗ ನಾವು ಒಪ್ಪಿರುವ ಗಂಡು- ಹೆಣ್ಣಿನ ಮದುವೆ ಎಂಬ ಸಂಸ್ಥೆಯ ಮೇಲೆ ನಮ್ಮ ಇಡೀ ಸಾಮಾಜಿಕ- ಸಾಂಸಾರಿಕ ವ್ಯವಸ್ಥೆ ನಿಂತಿದೆ. ಗಂಡು- ಗಂಡು ಅಥವಾ ಹೆಣ್ಣು- ಹೆಣ್ಣು ಮದುವೆಯಿಂದ ಸೃಷ್ಟಿಯಾಗುವ ಬಿಕ್ಕಟ್ಟುಗಳು ಹಲವಾರು. ಉದಾಹರಣೆಗೆ, ಈ ಮದುವೆಯಲ್ಲಿ ಆಸ್ತಿಯ ಹಂಚಿಕೆ ಹೇಗೆ? ಇಲ್ಲಿ ಸಾಮಾಜಿಕ ಹೊಣೆಗಾರಿಕೆಯ ಸ್ವರೂಪ ಏನು? ಒಂದು ವೇಳೆ ಈ ಜೋಡಿಗೆ ಮಗು ಬೇಕೆಂದಾದರೆ, ಆಗ ಅದನ್ನು ಪಡೆಯುವ, ಸಾಕುವ, ಬೆಳೆಸುವ ಹಕ್ಕು ಮತ್ತು ಹೊಣೆಗಾರಿಕೆಯ ಹಂಚಿಕೆ ಹೇಗೆ? ಡೈವೋರ್ಸ್‌ ಅಗತ್ಯವಾದರೆ ಅದರ ನಿರ್ಣಯ ಹೇಗೆ? ಸಲಿಂಗ ವಿವಾಹದಿಂದ ಸೃಷ್ಟಿಯಾಗಬಹುದಾದ ಇಂಥ ಬಿಕ್ಕಟ್ಟುಗಳು ಮತ್ತೆ ಸುಪ್ರೀಂ ಕೋರ್ಟ್‌ನ ಟೇಬಲ್ಲಿಗೇ ಬಂದು ತಲೆನೋವು ಸೃಷ್ಟಿಸಲಿವೆ. ಇದರಿಂದ ಹಲವು ನೈತಿಕ, ತಾತ್ವಿಕ ಸಮಸ್ಯೆಗಳೂ ಉದ್ಭವಿಸಬಹುದು. ಅವುಗಳತ್ತಲೂ ಗಮನ ಕೊಡಬೇಕಾಗುತ್ತದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಮೈಸೂರು ದಸರಾಗೆ ಕವಿದ ಕಳಂಕ ನಿವಾರಿಸಿ

ಸಲಿಂಗ ವಿವಾಹ ಎಂಬುದೇ ಭಾರತದಂಥ ಸಾಂಪ್ರದಾಯಿಕ ನೆಲದಲ್ಲಿ ಅಸಹಜ ವಿದ್ಯಮಾನ. ಜಗತ್ತಿನಲ್ಲಿ ಸುಮಾರು 200 ದೇಶಗಳಿವೆ. ಸಲಿಂಗ ವಿವಾಹವನ್ನು ಮಾನ್ಯ ಮಾಡಿರುವ ದೇಶಗಳು 30 ಮಾತ್ರ. ಅಂದರೆ ಬಹುಸಂಖ್ಯಾತ ದೇಶಗಳು ಇದರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಮುಂದಾಗಿಲ್ಲ. ಯಾಕೆಂದರೆ ಇದು ತೆರೆಯುವ ಹೊಸ ಸಾಮಾಜಿಕ- ಆರ್ಥಿಕ- ಮಾನಸಿಕ ಬಿಕ್ಕಟ್ಟುಗಳು ಪರಿಹರಿಸುವ ವ್ಯವಸ್ಥೆ ಇನ್ನೂ ಸೃಷ್ಟಿಯಾಗಿಲ್ಲ. ಭಾರತ ಮೊದಲೇ ಸಾಂಪ್ರದಾಯಿಕ ಮನಸ್ಥಿತಿಯ ರಾಷ್ಟ್ರ. ವಿವಾಹ ಎಂಬುದೊಂದು ಸಂಸ್ಕಾರ ಎಂದು ನಂಬಿದವರು ನಾವು. ವಿವಾಹ ಸಂಬಂಧಕ್ಕೆ ಒಳಗಾಗಿ ಜತೆಯಾಗಿ ಬಾಳುವುದು ತಮಗಾಗಿ ಮಾತ್ರವಲ್ಲ, ಕುಟುಂಬಕ್ಕಾಗಿ ಹಾಗೂ ಸ್ವಸ್ಥ ಸಮಾಜಕ್ಕಾಗಿ ಕೂಡ. ವಿವಾಹ ಎಂಬುದು ಹೊಣೆಗಾರಿಕೆಯೇ ದೈಹಿಕ ವಾಂಛೆ ತೀರಿಸಿಕೊಳ್ಳಲು ಇರುವ ಸಾಧನವಲ್ಲ. ಹೀಗಾಗಿ ಈ ಬಗ್ಗೆ ಯಾವುದೇ ಆತುರದ ತೀರ್ಮಾನ ಸಲ್ಲದು. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಅಧ್ಯಯನ, ವಿವೇಚನೆ ನಡೆಯಲಿ. ಕಾನೂನುತಜ್ಞರ, ಸಮಾಜಶಾಸ್ತ್ರಜ್ಞರ ತಜ್ಞತೆ ವಿವೇಕಗಳನ್ನೂ ಬಳಸಿ, ಸಮಾಜಕ್ಕೆ ಹಿತವಾದ ಅಂತಿಮ ತೀರ್ಮಾನಕ್ಕೆ ಸರ್ಕಾರ ಬರುವಂತಾಗಲಿ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version