ಬುಧವಾರ ಲೋಕಸಭೆಯಲ್ಲಿ ಗಂಭೀರ ಭದ್ರತಾ ಲೋಪ ಘಟಿಸಿದೆ(Security breach in Lok Sabha). ಇಬ್ಬರು ಯುವಕರು ವೀಕ್ಷಕರ ಗ್ಯಾಲರಿಯಿಂದ ಹಾರಿ ಕಲರ್ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಸಿಡಿಸಿದ್ದಾರೆ. ಇದೇ ವೇಳೆಗೆ ಹೊರಗೆ ಕೂಡ ಇಬ್ಬರು ಕಲರ್ ಗ್ಯಾಸ್ ಸಿಡಿಸಿ ಪ್ರತಿಭಟಿಸಿದ್ದಾರೆ. ಇವರು ಯಾರೂ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದವರಲ್ಲ, ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಪ್ರತಿಭಟಿಸುವುದೇ ಇವರ ಉದ್ದೇಶವಾಗಿತ್ತು ಎಂದು ಹೇಳಲಾಗಿದೆ. ಆದರೆ ಇನ್ನಷ್ಟು ಆಂತರಿಕ ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ. ಇವರಲ್ಲಿ ಒಬ್ಬಾತ ಮೈಸೂರಿನವನು, ಮೈಸೂರು ಸಂಸದರ ಕಚೇರಿಯಿಂದ ಲೋಕಸಭೆ ಪ್ರವೇಶಿಸಲು ಪಾಸ್ ಪಡೆದಿದ್ದ ಎಂದು ಗೊತ್ತಾಗಿದೆ. ಈ ಪ್ರಕರಣ ಅನೇಕ ಆತಂಕಕಾರಿ ಪ್ರಶ್ನೆಗಳನ್ನು ಎತ್ತುತ್ತದೆ; ಅವುಗಳಿಗೆ ನಾವು ಮುಖಾಮುಖಿಯಾಗಲೇಬೇಕಿದೆ(Vistara Editorial).
ಸರ್ಕಾರ ಭದ್ರತಾ ಲೋಪ ಎಸಗಿದೆ, ಸಂಸದರಿಗೆ ಪ್ರಾಣಾಪಾಯ ತಂದಿಟ್ಟಿದೆ ಎಂದು ವಿಪಕ್ಷಗಳು ಟೀಕಿಸಿವೆ. ಸರ್ಕಾರವನ್ನು ಎಲ್ಲ ಕಡೆಯೂ ಟೀಕಿಸುವವರು ಇಂಥ ಪ್ರಕರಣ ಸಿಕ್ಕಿದರೆ ಬಿಡಲಾರರು ಎಂಬುದು ನಿಜವಾದರೂ, ವಿಪಕ್ಷಗಳ ಟೀಕೆಯಲ್ಲಿ ಹುರುಳಿದೆ. ಲೋಕಸಭೆ, ರಾಜ್ಯಸಭೆಗಳು ಈ ದೇಶದ ದೇವಾಲಯಗಳಂತೆ. ಅಲ್ಲಿ ದೇಶದ ಎಲ್ಲೆಡೆಯಿಂದ ಆರಿಸಿ ಬಂದ ಜನಪ್ರತಿನಿಧಿಗಳು ಇರುತ್ತಾರೆ. ಇವರ ಜೀವ ಅಮೂಲ್ಯ. ಇಂಥ ಕಡೆ ಭದ್ರತೆ ಎಳ್ಳಿನಿತೂ ಲೋಪವಾಗದಂತೆ ಇರಬೇಕಾದುದು ಅಗತ್ಯ. 543 ಲೋಕಸಭಾ ಸದಸ್ಯರ ಭದ್ರತೆ ಎಂಬುದು ಸಣ್ಣ ಮಾತಲ್ಲ. ಪ್ರಧಾನಮಂತ್ರಿಗಳ ಸೆಕ್ಯುರಿಟಿಗೆ ಯಾವ ಬಗೆಯ ಕಟ್ಟುನಿಟ್ಟನ್ನು ನಮ್ಮ ಭದ್ರತಾ ಏಜೆನ್ಸಿಗಳು ಅನುಸರಿಸುತ್ತವೆಯೋ ಅದನ್ನೇ ಸಂಸದರಿಗೂ ಅನುಸರಿಸುತ್ತವೆ. ಒಳಬರುವ ವೀಕ್ಷಕರಿಗೆ ಮೂರು ಸುತ್ತಿನ ಸೆಕ್ಯುರಿಟಿ ಪರೀಕ್ಷೆ ನಡೆಸಲಾಗುತ್ತದೆ. ಆದರೂ ಇವರು ಕಲರ್ ಗ್ಯಾಸ್ ಒಳಗೆ ಒಯ್ಯಲು ಹೇಗೆ ಸಾಧ್ಯವಾಯಿತು? ಇದು ಭದ್ರತಾ ಲೋಪವಲ್ಲವೇ? ಇದಕ್ಕೆ ಭದ್ರತಾ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ.
ಇಂದು ದುಷ್ಕರ್ಮಿಗಳು ಕಲರ್ ಗ್ಯಾಸ್ ಮಾತ್ರ ಬಳಸಿದ್ದಾರೆ. ನಾಳೆ, ಭದ್ರತೆ ಬಿಗಿ ಮಾಡದಿದ್ದರೆ, ವಿಷಕಾರಿ ಅನಿಲವನ್ನು ಯಾರಾದರೂ ಪ್ರಯೋಗಿಸಲಾರರು ಎಂಬುದಕ್ಕೆ ಆಧಾರವೇನಾದರೂ ಇದೆಯೇ? ಅಥವಾ, ಇದೇ ಭದ್ರತಾ ಲೋಪವನ್ನೇ ಬಳಸಿಕೊಂಡು ನಿಜವಾದ ಉಗ್ರರೇನಾದರೂ ಒಳನುಗ್ಗಿದ್ದರೆ ಏನಾಗುತ್ತಿತ್ತು? ಪಳಗಿದ ಸುಪಾರಿ ಕಿಲ್ಲರ್‌ಗಳಿಗೆ ಕೋಲಾಹಲ ಎಬ್ಬಿಸಲು ಮಷಿನ್‌ಗನ್ನುಗಳೇ ಬೇಕೆಂದೇನೂ ಇಲ್ಲ. ಒಂದು ಪೆನ್ನು ಸಿಕ್ಕರೂ ಸಾಕಾಗುತ್ತದೆ. ಇಂಥ ಅಪಾಯಗಳನ್ನು ವಿಐಪಿಗಳ ಭದ್ರತಾ ಪಡೆಗಳಲ್ಲಿ ಇರುವವರು ಕ್ರಿಯಾಶೀಲವಾಗಿ ಮೊದಲೇ ಯೋಚಿಸಬೇಕಾಗುತ್ತದೆ. ಅನಾಹುತ ಬಂದೊದಗಿದ ಮೇಲೆ ಕೊರಗುವುದಕ್ಕಿಂತಲೂ ಮೊದಲೇ ಯೋಚಿಸುವುದು, ಹೊಸ ಬಗೆಯ ದಾಳಿಗಳ ಸಾಧ್ಯತೆಗಳನ್ನು ಊಹಿಸಿ ಭದ್ರತೆಗಳನ್ನು ಆ ನಿಟ್ಟಿನಲ್ಲಿ ನಿಯೋಜಿಸುವುದು ಅಗತ್ಯವಾಗುತ್ತದೆ. ಅದರ ಕೊರತೆಯಿಂದಲೇ ಈ ದಾಳಿ ನಡೆದಿದೆ.
ಈ ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತವನ್ನು ಹಾಸ್ಯಾಸ್ಪದ ಮಾಡುವಂಥದು. ಭಾರತದ ಸಂಸತ್ತಿನ ಭದ್ರತೆ ಇಷ್ಟೇ ಎಂದು ಖಲಿಸ್ತಾನಿ ಉಗ್ರರು, ಪಾಕ್ ಉಗ್ರರು ಆಡಿಕೊಂಡು ನಗುವಂತಾಗಬಾರದು. ಅಮೆರಿಕದಲ್ಲಿರುವ ಖಲಿಸ್ತಾನ್ ಉಗ್ರ ಸತ್ವಂತ್ ಸಿಂಗ್ ಪನ್ನುನ್ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ʼʼಡಿಸೆಂಬರ್ 13ರಂದು ಭಾರತದ ಸಂಸತ್ತಿನ ಮೇಲೆ ಮತ್ತೊಮ್ಮೆ ದಾಳಿ ನಡೆಸುತ್ತೇವೆʼʼ ಎಂದು ಆತ ಹೇಳಿದ್ದ. ಪಾರ್ಲಿಮೆಂಟ್‌ನ ಮೇಲೆ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ 22 ವರ್ಷಗಳು ಸಂದಿವೆ. ಅದೊಂದು ಕರಾಳ ನೆನಪು. ಇಂದು ಆ ನೆನಪನ್ನು ಈ ದಾಳಿಯಿಂದಾಗಿ ಮರುಕಳಿಸಿಕೊಳ್ಳುವಂತಾಗಿದೆ. ಯಾವ ನೆನಪನ್ನು ಮರೆಯಲು ನಾವು ಯತ್ನಿಸುತ್ತಿರುವೆವೂ ಅದನ್ನು ಈ ದಾಳಿ ಮತ್ತೆ ಕೆದಕಿದೆ. ಖಲಿಸ್ತಾನಿ ಉಗ್ರರಿಗೂ ಈ ದಾಳಿಕೋರರಿಗೂ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸುವುದು ಅಗತ್ಯ. ಇಲ್ಲವಾದರೆ ಈ ದಿನವನ್ನೇ ದುಷ್ಕರ್ಮಿಗಳು ಯಾಕೆ ಆರಿಸಿಕೊಳ್ಳಬೇಕಿತ್ತು. ʼʼನಿರುದ್ಯೋಗದಿಂದ ಬೇಸತ್ತು ಹೀಗೆ ಮಾಡಿದ್ದೇವೆʼʼ ಎಂದಿರುವ ಬಂಧಿತ ಮಹಿಳೆಯ ಮಾತು ನಂಬಲರ್ಹವಲ್ಲ. ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಭಾರತದ ಮಾನ ಮುಕ್ಕಾಗುವಂತೆ ವರ್ತಿಸಿದ ಇವರ ವರ್ತನೆಯೂ ಕ್ಷಮಾರ್ಹವಲ್ಲ. ಇವರಿಗೆ ಸೂಕ್ತ ಶಿಕ್ಷೆ ಆಗುವುದು ಅಗತ್ಯ. ಇದನ್ನು ಪ್ರತಿಭಟನೆಯಲ್ಲ, ಆತಂಕಕಾರಿ ಕೃತ್ಯ ಎಂದೇ ಪರಿಗಣಿಸಬೇಕು.
ನಮ್ಮ ಶಾಸನಸಭೆಗಳು ಹಾಗೂ ಗಣ್ಯರ ಭದ್ರತಾ ವ್ಯವಸ್ಥೆ ಹೇಗಿದೆ ಎಂಬುದನ್ನು ಮರುಪರಿಶೀಲಿಸಲೂ ಈ ಘಟನೆ ನಾಂದಿಯಾಗಲಿ. ಜನಪ್ರತಿನಿಧಿಗಳು ಸದಾ ತಮ್ಮ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದರೆ, ಅವರ ಉದೇಶದ ಬಗ್ಗೆ ಚಿಂತಿಸಲು ಸಾಧ್ಯವಿಲ್ಲ. ಹಾಗೆಯೇ ಲಕ್ಷಾಂತರ ಜನರಿಂದ ಆರಿಸಿ ಬಂದಿರುವ ಇವರ ಬೌದ್ಧಿಕ ಯೋಗದಾನಗಳು ನಮಗೆ ಅವಶ್ಯ. ಅದರಂತೆಯೇ ಭಾರತದ ಶ್ರೀಸಾಮಾನ್ಯರ ರಕ್ಷಣೆಯೂ ಅಗತ್ಯ.
ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಹೆಣ್ಣು ಭ್ರೂಣ ಹತ್ಯೆ ತಡೆ ಕಾರ್ಯಪಡೆ ಶೀಘ್ರ ಜಾರಿಯಾಗಲಿ