ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ (DK Suresh) ನೀಡಿರುವ ಒಂದು ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ವಿವಾದದ ಕಿಡಿ ಹಚ್ಚಿದೆ. ಈ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡುವಾಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್ ಅನ್ನು ಸುರೇಶ್ ಖಂಡಿಸಿದ್ದರು. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ (South India) ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೇಂದ್ರ ಸರ್ಕಾರ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್ ಹೇಳಿದ್ದರು. ಈ ಮಾತಿನಲ್ಲಿ ಎಷ್ಟು ಸತ್ಯವಿದೆ, ಎಷ್ಟು ಖಂಡನೀಯವಾದುದು ಎಂಬುದು ವಿಚಾರಾರ್ಹ(Vistara Editorial).
ಡಿ ಕೆ ಸುರೇಶ್ ಮಾತಿನಲ್ಲಿ ಕೆಲವಷ್ಟು ಸತ್ಯವಿದೆ. ಅದೇನೆಂದರೆ, ದಕ್ಷಿಣದ ರಾಜ್ಯಗಳು ದೇಶದ ತೆರಿಗೆ ಸಂಗ್ರಹದಲ್ಲಿ ಬಹುಪಾಲನ್ನು ನೀಡುತ್ತಿರುವುದು ನಿಜ. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಗುಜರಾತ್, ದಿಲ್ಲಿ ಈ ಐದು ರಾಜ್ಯಗಳೇ ದೇಶದ ನೇರ ತೆರಿಗೆಯ 75 ಶೇಕಡದಷ್ಟು ಭಾಗವನ್ನು ನೀಡುತ್ತಿವೆ. ಹೀಗಾಗಿ ದೇಶದ ಅಭಿವೃದ್ಧಿಗೆ ಕರ್ನಾಟಕದ ದೊಡ್ಡ ಕೊಡುಗೆ ಇರುವುದು ನಿಜ. ಆದರೆ ಕರ್ನಾಟಕದಲ್ಲಿ ದೊರೆಯುವ ತೆರಿಗೆಯ ಎಲ್ಲ ಭಾಗವನ್ನು ಕರ್ನಾಟಕಕ್ಕೇ ವಿನಿಯೋಗಿಸಬೇಕು ಎಂಬುದೂ ಸಾಧುವಲ್ಲ. ಇದನ್ನೇ ಇನ್ನೊಂದು ರೀತಿಯಿಂದ ನೋಡುವುದಾದರೆ, ಕರ್ನಾಟಕದಲ್ಲಿ, ರಾಜ್ಯದ ಒಟ್ಟು ತೆರಿಗೆಯ 60 ಶೇಕಡಕ್ಕಿಂತಲೂ ಹೆಚ್ಚು ಭಾಗವನ್ನು ಬೆಂಗಳೂರೊಂದೇ ನೀಡುತ್ತಿದೆ. ಹಾಗೆಂದು ಅಷ್ಟೂ ತೆರಿಗೆ ಸಂಗ್ರಹವನ್ನು ಬೆಂಗಳೂರಿಗಾಗಿಯೇ ವಿನಿಯೋಗಿಸಬೇಕು ಎಂದರೆ ಹೇಗಿರುತ್ತದೆ? ಹಾಗೇ ಇದೂ ಕೂಡ. ರಾಜ್ಯಕ್ಕೆ ಸಲ್ಲಬೇಕಾದ ನ್ಯಾಯಪರ ಪಾಲನ್ನು ನಾವು ಕೇಳೋಣ. ಆದರೆ ಅಭಿವೃದ್ಧಿ ಹೊಂದಿಲ್ಲದ ರಾಜ್ಯಗಳ ಕಡೆಗೂ ನಮ್ಮ ಸಾಹೋದರ್ಯ, ಸಹಬಾಳ್ವೆಯ ಸ್ಪಂದನ ಇರಬೇಕು.
ಇನ್ನು ಸಂಸದರು ಎತ್ತಿದ ಪ್ರತ್ಯೇಕ ರಾಜ್ಯದ ಮಾತು. ದಕ್ಷಿಣ ಭಾರತವು ಉತ್ತರ ಭಾರತದಿಂದ ಹಲವು ರೀತಿಯಲ್ಲಿ ಅನ್ಯಾಯಕ್ಕೆ ಒಳಗಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ, ಕೇಂದ್ರದಲ್ಲಿ ದಕ್ಷಿಣದಿಂದ ರಾಜಕೀಯ ಪ್ರಾತಿನಿಧ್ಯ ಅತ್ಯಲ್ಪ. ಸಾಕಷ್ಟು ಸಂಸದರನ್ನು ಕೇಂದ್ರಕ್ಕೆ ಕಳಿಸಿದರೂ, ಇಂದಿಗೂ ಅತ್ಯುನ್ನತ ಹುದ್ದೆಗಳಲ್ಲಿ ಹಾಗೂ ನೀತಿ ನಿರೂಪಣೆಯಲ್ಲಿ ಹಿಂದಿ ಬೆಲ್ಟ್‌ನ ರಾಜ್ಯಗಳೇ ಪಾರಮ್ಯ ಸಾಧಿಸಿವೆ. ಮುಂದೊಂದು ದಿನ ಇದೂ ಸರಿಹೋಗಬಹುದು.
ಹಾಗೆಂದು ದಕ್ಷಿಣ ಭಾರತ ಪ್ರತ್ಯೇಕ ದೇಶವಾಗಲಿ ಎಂದು ಹಾರೈಸುವುದು ಸರಿಯಾಗಲಾರದು. ನಮ್ಮ ಸಂವಿಧಾನವನ್ನು ರಚಿಸಿದವರಿಗೆ ದಕ್ಷಿಣ ಭಾರತ- ಉತ್ತರ ಭಾರತ ಎಂಬ ಭೇದವಿರಲಿಲ್ಲ. ಎಲ್ಲ ರಾಜ್ಯಗಳು ಸೇರಿದ ಒಕ್ಕೂಟ ವ್ಯವಸ್ಥೆಯೇ ಭಾರತ. ಈ ಗಣತಂತ್ರ ವ್ಯವಸ್ಥೆಯಲ್ಲಿ ಒಕ್ಕೂಟ ಸರ್ಕಾರವು ರಾಜ್ಯಗಳ ಹಿತವನ್ನು ನೋಡಿಕೊಳ್ಳಬೇಕು; ಹಾಗೆಯೇ ರಾಜ್ಯಗಳು ಸಮಗ್ರ ದೇಶದ ಹಿತವನ್ನು ಗಮನಿಸಿಕೊಂಡೇ ತಮ್ಮ ನೀತಿ ನಿರೂಪಣೆಗಳನ್ನು ಮಾಡಿಕೊಳ್ಳಬೇಕು. ಕಾಯಿದೆಗಳನ್ನು ಮಾಡಿಕೊಳ್ಳಬಹುದಾದ ವಿಷಯಗಳಲ್ಲಿ ಕೇಂದ್ರ ಪಟ್ಟಿ- ರಾಜ್ಯ ಪಟ್ಟಿ ಎಂಬ ಪ್ರತ್ಯೇಕತೆ ಇರುವಂತೆ, ಕೇಂದ್ರ ರಾಜ್ಯಗಳೆರಡೂ ಹಂಚಿಕೊಳ್ಳಬಹುದಾದ ಸಮವರ್ತಿ ಪಟ್ಟಿ ಕೂಡ ಇದೆ. ಹೀಗೆ ಭಾರತದ ಒಕ್ಕೂಟ ವ್ಯವಸ್ಥೆಯೆಂಬುದು ಬಲು ವಿಶಿಷ್ಟವಾದ, ಮಾದರಿಯಾದ ಒಂದು ವ್ಯವಸ್ಥೆ. ಇಲ್ಲಿ ಆಗಾಗ ಪ್ರತ್ಯೇಕತೆಯ ಕೂಗುಗಳು ಕೇಳಿಬಂದಿದ್ದರೂ ಅದು ಸಂಸ್ಕೃತಿಯ ಭಿನ್ನತೆಯಿಂದ ಅಲ್ಲ. ಆಡಳಿತದಲ್ಲಿ- ಅಭಿವೃದ್ಧಿಯಲ್ಲಿ ಆಗಿರುವ ಅಸಮಾನತೆಯ, ಅನ್ಯಾಯ ಅರಿವಿನಿಂದ ಮಾತ್ರ. ಒಟ್ಟಾರೆ ಭಾರತದ ಮೌಲ್ಯವ್ಯವಸ್ಥೆ, ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಹಾಗೂ ಆದರ್ಶಗಳು ಒಂದೇ ಆಗಿವೆ.
ಹೀಗಾಗಿ, ಇಡೀ ಭಾರತ ಅಭಿವೃದ್ಧಿಯಾಗಬೇಕು, ಕರ್ನಾಟಕವೂ ಆಗಬೇಕು ಎಂಬುದು ನಮ್ಮ ಮಂತ್ರವಾಗಿರಬೇಕು. ಕರ್ನಾಟಕ ಮಾತ್ರ ಏಳಿಗೆಯಾಗಬೇಕು ಎನ್ನುವುದಲ್ಲ. ನಮ್ಮ ಕಾರ್ಯತತ್ಪರತೆ, ಪ್ರಾಮಾಣಿಕತೆ, ಏಕತೆಯು ರಾಷ್ಟ್ರ ಹಾಗೂ ಜಗತ್ತಿನ ಏಳಿಗೆಗೆ ಕಾರಣವಾಗಬೇಕು ಎನ್ನವ ಆಶಯದ ನಾಡು ನಮ್ಮದು. ಕರ್ನಾಟಕದಲ್ಲಿ ಯಾವುದೇ ಕಾಲದಲ್ಲಿ ಪ್ರತ್ಯೇಕತಾವಾದಕ್ಕೆ, ಉಪರಾಷ್ಟ್ರೀಯತೆಗೆ ಬೆಂಬಲ ಸಿಕ್ಕಿಲ್ಲ. ಪ್ರಾದೇಶಿಕವಾದದ ಹೆಸರಿನಲ್ಲಿ ವೈವಿಧ್ಯತೆಯನ್ನು ಕಡೆಗಣಿಸುವ, ಸಂವಿಧಾನದ ಹೆಸರು ಹೇಳಿಕೊಂಡೇ ಸಂವಿಧಾನದ ಮೌಲ್ಯಗಳಿಗೆ ತಿಲಾಂಜಲಿ ಇಡುವ ಹೆಜ್ಜೆಗಳು ಪ್ರತ್ಯೇಕತಾವಾದದ್ದಾಗಿವೆ. ಇನ್ನೊಂದೆಡೆ ಜಾತಿ, ಮತ, ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕಾರ್ಯವೂ ನಡೆದಿದೆ. ಇಂಥ ಕಾರ್ಯಗಳು ಆಗಬಾರದು. ಸಂಸದರಂತೂ ಇಂಥ ಮಾತುಗಳನ್ನು ಆಡುವುದು ತಕ್ಕುದಲ್ಲ.
ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಚುನಾವಣೆಯ ಹೊಸ್ತಿಲಲ್ಲಿ ಸ್ಥಿತಪ್ರಜ್ಞ ಬಜೆಟ್