Site icon Vistara News

ವಿಸ್ತಾರ ಸಂಪಾದಕೀಯ: ‘ಅಧರ್ಮ’ ಹೇಳಿಕೆಯ ಸ್ಟಾಲಿನ್‌ಗೆ ಸುಪ್ರೀಂ ಚಾಟಿ; ಇನ್ನಾದರೂ ಬುದ್ಧಿ ಬರಲಿ

Supreme Court On Udhayanidhi Stalin

Vistara Editorial: Supreme Court Slams Udhayanidhi Stalin Over Sanatan Dharma; It Shoud Be Caution For Everyone

ಹಣ, ಅಧಿಕಾರ, ಖ್ಯಾತಿಯ ಮದವು ತಲೆಗೇರಿದರೆ ಎಂತಹ ಸಾಧಕನನ್ನೂ ನಡುಬೀದಿಗೆ ತಂದು ನಿಲ್ಲಿಸುತ್ತದೆ. ದುರಹಂಕಾರಕ್ಕೆ ಜನರೂ ಛೀಮಾರಿ ಹಾಕುತ್ತಾರೆ. ನ್ಯಾಯಾಲಯಗಳೂ ಚಾಟಿ ಬೀಸುತ್ತವೆ. ದರ್ಪ, ಸೊಕ್ಕು, ಮದದಲ್ಲಿ ನೀಡಿದ ಒಂದು ಹೇಳಿಕೆಯೂ ಸಮಾಜದ ಎದುರು ತಲೆತಗ್ಗಿಸುವಂತೆ ಮಾಡುತ್ತದೆ. ಇಂತಹ ದರ್ಪ, ದಾರ್ಷ್ಟ್ಯ, ಸೊಕ್ಕಿನಲ್ಲಿ ‘ಸನಾತನ ಧರ್ಮದ (Sanatan Dharma) ನಿರ್ಮೂಲನೆಯಾಗಬೇಕು’ ಎಂಬುದಾಗಿ ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ಪುತ್ರ, ರಾಜ್ಯದ ಸಚಿವ, ನಟನೂ ಆಗಿರುವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರಿಗೆ ಸೋಮವಾರ (ಮಾರ್ಚ್‌ 4) ಸುಪ್ರೀಂ ಕೋರ್ಟ್‌ (Supreme Court) ಛೀಮಾರಿ ಹಾಕಿದೆ. ಒಂದೇ ಒಂದು ಹೇಳಿಕೆ ನೀಡಿ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದ, ಮೈಮೇಲೆ ಎಫ್‌ಐಆರ್‌ಗಳನ್ನೂ ಎಳೆದುಕೊಂಡಿದ್ದ ಉದಯನಿಧಿ ಸ್ಟಾಲಿನ್‌ ಅವರಿಗೆ ಈಗ ಸುಪ್ರೀಂ ಕೋರ್ಟ್‌ ಕೂಡ ಚಾಟಿ ಬೀಸಿದೆ. ಆ ಮೂಲಕ ಉದಯನಿಧಿ ಸ್ಟಾಲಿನ್‌ ಎಸಗಿದ ಪ್ರಮಾದ, ವ್ಯಕ್ತಿತ್ವವು ಸಮಾಜದ ಎದುರು ಮತ್ತೆ ಢಾಳಾಗಿದೆ.

ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುವ ಜತೆಗೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್‌ ಅವರು ಎಲುಬಿಲ್ಲದ ನಾಲಿಗೆ ಹರಿಬಿಟ್ಟಿದ್ದಾರೆ. ಇದಕ್ಕೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುವ ಜತೆಗೆ ಬೆಂಗಳೂರು, ಪಟನಾ, ಉತ್ತರ ಪ್ರದೇಶ ಸೇರಿ ಹಲವೆಡೆ ಎಫ್‌ಐಆರ್‌ಗಳು ದಾಖಲಾಗಿವೆ. ಇದರಿಂದ ತಮಿಳುನಾಡು ಸಚಿವನಿಗೆ ತೊಂದರೆಯಾಗುತ್ತಿದ್ದು, ಎಲ್ಲ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ, ವಾದ-ಪ್ರತಿವಾದ ಆಲಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ. ಆದರೆ, ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಸ್ಟಾಲಿನ್‌ ಅವರಿಗೆ ರಿಲೀಫ್‌ ನೀಡುವ ಬದಲು ಚಾಟಿ ಏಟು ಬೀಸಿದೆ. “ನೀವು ಸಂವಿಧಾನದ 19 (1) (ಎ) ವಿಧಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. 25ನೇ ವಿಧಿ ಅನ್ವಯ ನೀಡಿದ ಧಾರ್ಮಿಕ ಸ್ವಾತಂತ್ರ್ಯಕ್ಕೆ ನೀವು ಚ್ಯುತಿ ತಂದಿದ್ದೀರಿ. ನೀವೇನು ಸಾಮಾನ್ಯ ವ್ಯಕ್ತಿಯಾ? ನಟರಾಗಿದ್ದೀರಿ, ರಾಜ್ಯದ ಸಚಿವರಾಗಿದ್ದೀರಿ. ನಿಮ್ಮ ಹೇಳಿಕೆಯ ಪರಿಣಾಮ ನಿಮಗೆ ಗೊತ್ತಿಲ್ಲವೇ” ಎಂಬುದಾಗಿ ಸುಪ್ರೀಂ ಕೋರ್ಟ್‌ ಕುಟುಕಿದೆ.

ಸುಪ್ರೀಂ ಕೋರ್ಟ್‌ ತಪರಾಕಿ ನೀಡಿರುವುದು ಉದಯನಿಧಿ ಸ್ಟಾಲಿನ್‌ ಅವರಿಗೆ ದೊಡ್ಡ ಹಿನ್ನಡೆಯೇ ಆಗಿದೆ. ಅದರಲ್ಲೂ, ಸನಾತನ ಧರ್ಮದ ನಿರ್ಮೂಲನೆ ಕುರಿತು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್‌ ಅವರು ಬಳಿಕ ಒಂದು ಕ್ಷಮೆಯಾಚಿಸಬಹುದಿತ್ತು. ಕನಿಷ್ಠ ವಿಷಾದವನ್ನಾದರೂ ವ್ಯಕ್ತಪಡಿಸಬಹುದಿತ್ತು. ಬಾಯ್ತಪ್ಪಿನಿಂದ ನಾನು ಹಾಗೆ ಹೇಳಿದೆ ಎಂದಾದರೂ ತಪ್ಪನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ, ವಿವಾದದ ಬಳಿಕ ಉದಯನಿಧಿ ಸ್ಟಾಲಿನ್‌ ಅವರಲ್ಲಿರುವ ‘ದುರಹಂಕಾರಿ’ಯು ಮತ್ತಷ್ಟು ವ್ಯಾಘ್ರನಾಗಿದ್ದ. “ನಾನು ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತೇನೆ. ನಾನು ಸನಾತನ ಧರ್ಮವನ್ನು ಮುಂದೆಯೂ ವಿರೋಧಿಸುತ್ತೇನೆ. ಯಾರು ಏನೇ ಹೇಳಿದರೂ, ನಾನು ಕಾನೂನು ಹೋರಾಟ ಮಾಡುತ್ತೇನೆಯೇ ಹೊರತು, ಹೇಳಿಕೆಯಿಂದ ಹಿಂದಡಿ ಇಡುವುದಿಲ್ಲ” ಎಂದು ದರ್ಪದ ಮಾತುಗಳನ್ನಾಡಿದ್ದರು.

ಇದನ್ನೂ ಓದಿ: Udhayanidhi Stalin: ಸನಾತನ ಧರ್ಮದ ಅವಹೇಳನ; ಉದಯನಿಧಿ ಸ್ಟಾಲಿನ್‌ಗೆ ಸಮನ್ಸ್‌ ನೀಡಿದ ಬೆಂಗಳೂರು ಕೋರ್ಟ್

ಇಷ್ಟೆಲ್ಲ ದರ್ಪದ ಮಾತುಗಳನ್ನಾಡಿದ್ದ ಉದಯನಿಧಿ ಸ್ಟಾಲಿನ್‌ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳಾರತಿ ಮಾಡಿರುವುದು ಈಗ ಕಾನೂನು ಹೋರಾಟದಲ್ಲಿಯೇ ಹಿನ್ನಡೆಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಉದಯನಿಧಿ ಸ್ಟಾಲಿನ್‌ ಮಾತ್ರವಲ್ಲ, ನಮ್ಮ ನಡುವೆ ದಪ್ಪ ಚರ್ಮದ, ಸೈದ್ಧಾಂತಿಕ ವಿರೋಧಕ್ಕಾಗಿ ಏನು ಬೇಕಾದರೂ ಹೇಳುವ, ಬಾಯಿ ತೆರೆದರೆ ವಿವಾದದ ಎಂಜಲನ್ನೇ ಉಗುಳುವ, ಧರ್ಮ, ಜಾತಿ, ಪಂಗಡಗಳ ಮಧ್ಯೆ ತಂದಿಟ್ಟು ತಮಾಷೆ ನೋಡುವ ಕುತ್ಸಿತ ಮನಸ್ಸಿನ ರಾಜಕಾರಣಿಗಳ ಸಂಖ್ಯೆ ದೊಡ್ಡದಿದೆ. ಇಂತಹವರಿಗೆಲ್ಲ ಉದಯನಿಧಿ ಸ್ಟಾಲಿನ್‌ ಪ್ರಕರಣ, ಸುಪ್ರೀಂ ಕೋರ್ಟ್‌ ಮುಟ್ಟಿಸಿದ ಬಿಸಿಯು ಉದಾಹರಣೆಯಾಗಲಿ. ವೈಚಾರಿಕ ಭಿನ್ನಾಭಿಪ್ರಾಯಕ್ಕೂ, ವಿವಾದಕ್ಕೂ ವ್ಯತ್ಯಾಸವಿದೆ ಎಂಬುದು ಖುದ್ದು ಉದಯನಿಧಿ ಸ್ಟಾಲಿನ್‌ ಅವರಿಗೆ ತಿಳಿಯಲಿ. ಆ ಮೂಲಕ ಮೆದುಳಿನಲ್ಲಿ ವಿಚಾರ, ನಾಲಿಗೆಯಲ್ಲಿ ಆಚಾರ ಇದೆ ಎಂಬುದನ್ನು ಆಗಾಗ ಸಾಬೀತುಪಡಿಸಲಿ. ಇಲ್ಲದಿದ್ದರೆ, ಉದಯನಿಧಿ ಸ್ಟಾಲಿನ್‌ ಅವರಂತೆ ಸಮಾಜದ ಎದುರು ವೈಚಾರಿಕವಾಗಿ ಬೆತ್ತಲಾಗಬೇಕಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version