Site icon Vistara News

ವಿಸ್ತಾರ ಸಂಪಾದಕೀಯ: ‘ಸ್ವಚ್ಛತೆಯೇ ಸೇವೆ’ ಜನಾಂದೋಲನ ನಿರಂತರವಾಗಿರಲಿ

Vistara Editorial, Swachh bharat mission should reach all section

‘ಸ್ವಚ್ಛ ಭಾರತ್ ಅಭಿಯಾನ’ದ ಅಂಗವಾಗಿ, ಮಹಾತ್ಮ ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರವರೆಗೆ ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶವಾಸಿಗಳಿಗೆ ಸ್ವಚ್ಛತೆಯ ಕುರಿತು ಮಹತ್ವವನ್ನು ಸಾರುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ನೆಸ್ ಇನ್‌ಫ್ಲುಯೆನ್ಸರ್ ಜತೆಗೂಡಿ, ಭಾನುವಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಮೂಲಕ ಸ್ವಚ್ಛತೆಯ ಜತೆಗೆ ಫಿಟ್ನೆಸ್ ಮತ್ತು ಆರೋಗ್ಯ ಯೋಗಕ್ಷೇಮವು ಒಂದಕ್ಕೊಂದು ತಳಕು ಹಾಕಿಕೊಂಡಿವೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೂಕ್ಷ್ಮವಾಗಿ ಸಾರಿದರು. ಸ್ವಚ್ಛತೆಯ ವಿಷಯದಲ್ಲಿ ದೇಶದ ಪ್ರಧಾನಿಯಾಗಿ ಮೋದಿ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ; ನಾವೆಲ್ಲರೂ ಆ ಹಾದಿಯಲ್ಲಿ ಸಾಗಬೇಕಿದೆ(Vistara Editorial).

ಭಾರತದಲ್ಲಿ ಮಹಾತ್ಮ ಗಾಂಧಿ ಜಯಂತಿಯನ್ನು ಸ್ವಚ್ಛ ಭಾರತ್ ದಿವಸ್ ಎಂದೂ ಆಚರಿಸಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಸ್ವಚ್ಛ ಭಾರತ್ ಮಿಷನ್-ಅರ್ಬನ್ ಮತ್ತು ಸ್ವಚ್ಛ ಭಾರತ್ ಮಿಷನ್- ಗ್ರಾಮೀಣ ಜಂಟಿಯಾಗಿ 15 ದಿನಗಳ ಕಾಲ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ನಡೆಸುತ್ತದೆ. ಭಾರತೀಯ ಸ್ವಚ್ಛತಾ ಲೀಗ್ 2.0, ಸಫಾಯಿಮಿತ್ರ ಸುರಕ್ಷಾ ಶಿಬಿರ ಮತ್ತು ಸಾಮೂಹಿಕ ಸ್ವಚ್ಛತಾ ಅಭಿಯಾನಗಳಂತಹ ವಿವಿಧ ಚಟುವಟಿಕೆಗಳ ಮೂಲಕ ದೇಶಾದ್ಯಂತ ಕೋಟಿಗಟ್ಟಲೆ ನಾಗರಿಕರ ಭಾಗವಹಿಸುವಿಕೆಯನ್ನು ವಾರ್ಷಿಕವಾಗಿ ಸಜ್ಜುಗೊಳಿಸುವ ಗುರಿಯನ್ನು ಈ ವಿಶೇಷ ಹದಿನೈದು ದಿನಗಳು ಹೊಂದಿರುತ್ತದೆ. ಪ್ರಸಕ್ತ ವರ್ಷವೂ ಈ ಸವಾಲಿನಲ್ಲಿ ಭಾರತವು ಗೆದ್ದಿದ್ದರೆ, ಸಾವಿರಾರು ಜನರು ಸ್ವಚ್ಛತಾ ಹಿ ಸೇವಾ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ, 2014 ಆಗಸ್ಟ್ 15ರಂದು ಕೆಂಪು ಕೋಟೆಯಯಲ್ಲಿ ಸ್ವಚ್ಛ ಭಾರತ್ ಮಿಷನ್ ಘೋಷಣೆ ಮಾಡಿದರು. ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾಗ್ಯೂ, ಸ್ವತಃ ಪ್ರಧಾನಿಯ ಪೊರಕೆಯನ್ನು ಕೈಯಲ್ಲಿ ಹಿಡಿದು, ರಸ್ತೆಯನ್ನು ಸ್ವಚ್ಛ ಮಾಡುವ ಮೂಲಕ, ದೇಶವಾಸಿಗಳಿಗೆ ಸ್ಫೂರ್ತಿಯಾದರು. ಅಂದು ಆರಂಭಿಸಿದ ಈ ಸ್ವಚ್ಛತೆಯ ಸೇವೆ ಇಂದು ಹೆಮ್ಮರವಾಗಿ ಬೆಳೆದಿದೆ. ಕೇಂದ್ರ ಸರ್ಕಾರದ ಮಟ್ಟದಲ್ಲೂ ಸಾಕಷ್ಟು ಈ ನಿಟ್ಟಿನಲ್ಲಿ ಪ್ರಗತಿಯಾಗಿದೆ. ಬಹಳಷ್ಟು ವರ್ಷಗಳ ಕಾಲ ನೈರ್ಮಲ್ಯದ ಕಳಪೆ ಪ್ರದರ್ಶನದ ಹೊರತಾಗಿಯೂ, ಭಾರತವು ಮುಂದಿನ ಐದು ವರ್ಷಗಳಲ್ಲಿ ಬಯಲು ಶೌಚ ಮುಕ್ತ(ಒ.ಡಿ.ಎಫ್) ಗುರಿಯನ್ನು ಸಾಧಿಸಿತು. ಭಾರತದಲ್ಲಿನ ಎಲ್ಲಾ 4,884 ಯುಎಲ್‌ಬಿಗಳು (100%) ಈಗ ಬಯಲು ಶೌಚ ಮುಕ್ತ(ಒಡಿಎಫ್)ವಾಗಿದೆ.

73.62 ಲಕ್ಷ ಶೌಚಾಲಯಗಳನ್ನು (67. 1 ಲಕ್ಷ ವೈಯಕ್ತಿಕ /ಕೌಟುಂಬಿಕ ಗೃಹಗಳಲ್ಲಿನ ಶೌಚಾಲಯಗಳು ಮತ್ತು 6.52 ಲಕ್ಷ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳು) ನಿರ್ಮಿಸುವ ಮೂಲಕ ನಗರಗಳ ಲಕ್ಷಾಂತರ ಬಡವರಿಗೆ ಘನತೆ ಮತ್ತು ಆರೋಗ್ಯವನ್ನು ಒದಗಿಸಲಾಗಿದೆ. ಭಾರತದಲ್ಲಿ 95% ವಾರ್ಡ್‌ಗಳು 100% ಮನೆಯಿಂದ ನೇರವಾಗಿ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. 88% ಕ್ಕಿಂತ ಹೆಚ್ಚು ವಾರ್ಡ್‌ಗಳು ತ್ಯಾಜ್ಯದ ಮೂಲ ಪ್ರತ್ಯೇಕತೆ ವ್ಯವಸ್ಥೆಯನ್ನು ಹೊಂದಿವೆ. ಸರ್ಕಾರಿ ಕಾರ್ಯಕ್ರಮವಾದ ಸ್ವಚ್ಛ ಭಾರತ್ ಮಿಷನ್ ‘ಜನ ಆಂದೋಲನ’ವಾಗಿ ಮಾರ್ಪಾಡುಗೊಂಡು ವಿಸ್ತಾರಗೊಂಡಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ದೇಶವನ್ನು ಬಯಲು ಶೌಚದ ಪಿಡುಗಿನಿಂದ ಮುಕ್ತಗೊಳಿಸಲಾಗಿದೆ. ಇದು ಸ್ವಚ್ಛ ಭಾರತ್ ಅಭಿಯಾನದ ಬಹುದೊಡ್ಡ ಯಶಸ್ಸು ಎದು ಗಂಟಾಘೋಷವಾಗಿ ಹೇಳಬಹುದು. ಅದೇ ರೀತಿ, ಸ್ವಚ್ಛ ಭಾರತ್ ಮಿಷನ್ – ಅರ್ಬನ್ 2.0 (ಎಸ್‌ಬಿಎಂ-ಯು 2.0) ಕೂಡ ಯಶಸ್ಸಿನ ಹಾದಿಯಲ್ಲಿದೆ. 2026ರ ವರೆಗೆ ವಿಸ್ತರಿಸಲಾಗಿದೆ. ಇದು ನಮ್ಮ ಎಲ್ಲಾ ನಗರಗಳನ್ನು ‘ಕಸ ಮುಕ್ತ’ ಮಾಡಲು ಮತ್ತು ಪರಂಪರೆಯ ಕಸಗಳ ಡಂಪ್‌ಸೈಟ್‌ ಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಉಜ್ಜಯಿನಿಯ ಹೀನ ಕೃತ್ಯ; ಒಮ್ಮೆ ಆ ಬಾಲಕಿಯ ಜಾಗದಲ್ಲಿ ನಮ್ಮವರನ್ನು ಕಲ್ಪಿಸಿಕೊಂಡರೆ…

ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಸ್ವಚ್ಛತೆಗೆ ಎಲ್ಲಿಲ್ಲದ ಆದ್ಯತೆಯನ್ನು ನೀಡುತ್ತಿದ್ದರು. ಸ್ವತಃ ಅವರೇ ಸ್ವಚ್ಛತಾ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಆಶ್ರಮದ ಇತರರಿಗೆ ಪ್ರೇರಣೆಯನ್ನು ಒದಗಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ಕೂಡ ಬಾಪೂಜಿಯ ಈ ಆದ್ಯತೆಗೆ ಸಾಂಸ್ಥಿಕ ರೂಪ ನೀಡಿ, ಭಾರತವನ್ನು ಕಸಮುಕ್ತ ರಾಷ್ಟ್ರವಾಗಿ ರೂಪಿಸುವಲ್ಲಿ ಮುಂದಡಿ ಇಡುತ್ತಿದೆ. ಕಳೆದ 9 ವರ್ಷದಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಸಾಕಷ್ಟು ಸಾಧನೆ ಮಾಡಿದ್ದರೂ, ಇನ್ನೂ ಕ್ರಮಿಸಬೇಕಾದ ದಾರಿ ಬಹಳ ದೂರವಿದೆ. ಅಂಕಿ-ಸಂಖ್ಯೆಗಳು ಏನೇ ಹೇಳಲಿ. ಈಗಲೂ ಭಾರತೀಯರ ಮಾನಸಿಕತೆಯಲ್ಲಿ ಸಂಪೂರ್ಣ ಬದಲಾವಣೆಯಾಗಿಲ್ಲ. ಪ್ರಧಾನಿ ಕರೆ ನೀಡಿದರು ಎಂಬ ಕಾರಣಕ್ಕೆ ಅಕ್ಟೋಬರ್ 2ರಂದು ಕೈಯಲ್ಲಿ ಪೊರಕೆ ಹಿಡಿದು, ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರವೇ ಸಿಮೀತವಾದ ಉದಾಹರಣೆಗಳು ಬೇಕಾದಷ್ಟಿವೆ. ನಮ್ಮ ಸುತ್ತಲಿನ ಪರಿಸರವನ್ನು, ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದರಲ್ಲಿ ನಾವು ಇನ್ನೂ ಹಿಂದೆ ಬಿದ್ದಿವೆ. ಈ ಸ್ವಚ್ಛತೆಯ ನಡವಳಿಕೆ ಯಾವುದೇ ನಿಯಮಗಳಿಂದ ಮೂಡವಂಥದ್ದಲ್ಲ. ಅದು ನಮ್ಮೊಳಗಿಂದ, ನಮ್ಮ ಪ್ರಜ್ಞೆಯೊಳಗಿಂದ ಮೂಡಿ ಬರಬೇಕು. ಆಗ ನಾವು ಕಾಲಿಡುವ ಸ್ಥಳವೆಲ್ಲ ಶುಭ್ರವೇ ಆಗಿರುತ್ತದೆ. ಹಾಗಾಗಿ, ಕೇವಲ ಪ್ರಧಾನಿ ಹೇಳಿದರು ಎಂಬ ಕಾರಣಕ್ಕೂ, ಗಾಂಧಿ ಜಯಂತಿ ಎಂಬ ಕಾರಣಕ್ಕೂ ನಾವು ಒಂದು ದಿನ ಸ್ವಚ್ಛತಾ ವೀರರು ಆಗುವುದು ಬೇಡ. ವರ್ಷದ ಎಲ್ಲ ದಿನಗಳನ್ನು ಸ್ವಚ್ಛತಾ ಹಿ ಸೇವೆ ಎಂದು ಭಾವಿಸೋಣ ಮತ್ತು ಅದರಂತೆ ನಡೆದುಕೊಳ್ಳೋಣ.

ಇನ್ನಷ್ಟು ಸಂಪಾದಕೀಯಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version