Site icon Vistara News

ವಿಸ್ತಾರ ಸಂಪಾದಕೀಯ: ಕಿರಿಕಿರಿ ಕರೆಗಳಿಗೆ ಕಡಿವಾಣ ಅಗತ್ಯ

Vistara Editorial, TRAI Steps to tackle unsolicited commercial calls and SMS

ಸ್ಎಂಎಸ್ (SMS) ಮತ್ತು ವಾಯ್ಸ್ ಕಾಲ್ಸ್ (voice calls) ಮೂಲಕ ಕಳುಹಿಸಲಾಗುವ ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶಗಳಿಗೆ ತಡೆ ಹಾಕಲು ಮುಂದಾಗಿರುವ ಭಾರತೀಯ ಟೆಲಿಕಾಂ ನಿಯಂತ್ರಣಾ ಪ್ರಾಧಿಕಾರ (TRAI), ಎಲ್ಲ ಸೇವಾ ಪೂರೈಕೆದಾರ ಕಂಪನಿಗಳಿಗೆ ಡಿಜಿಟಲ್ ಸಮ್ಮತಿ ಸ್ವಾಧೀನ (Digital Consent Acquisition– DCA) ಸೌಲಭ್ಯವನ್ನು ನಿಯೋಜಿಸಲು ಸೂಚಿಸಿದೆ. ಈ ಮೂಲಕ ಗ್ರಾಹಕರಿಗೆ ಸದಾ ಕಿರಿಕಿರಿ ಮಾಡುವ ಸಂದೇಶಗಳು, ಧ್ವನಿ ಕರೆಗಳನ್ನು ನಿಯಂತ್ರಸಲು ಯೋಜಿಸಲಾಗಿದೆ. ಡಿಸಿಎ ವ್ಯವಸ್ಥೆಯು ಟೆಲಿಕಾಂ ಚಂದಾದಾರರಿಗೆ ವಿವಿಧ ಘಟಕಗಳಿಂದ ವಾಣಿಜ್ಯ ಸಂವಹನಗಳನ್ನು ಸ್ವೀಕರಿಸಲು ಡಿಜಿಟಲ್ ಮೂಲಕ ತಮ್ಮ ಒಪ್ಪಿಗೆಯನ್ನು ನೋಂದಾಯಿಸಲು ಒಂದು ಏಕೀಕೃತ ವೇದಿಕೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಇದು ಜಾರಿಗೆ ಬಂದರೆ, ದೂರವಾಣಿ ಗ್ರಾಹಕರು ಕಿರಿಕಿರಿ ಕರೆಗಳಿಂದ ಪಾರಾಗುವ ನಿಯಂತ್ರಣವನ್ನು ತಾವೇ ಹೊಂದಿದಂತಾಗುತ್ತದೆ(Vistara Editorial).

ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ವಿಮಾ ಕಂಪನಿಗಳು, ವ್ಯಾಪಾರ ಕಂಪನಿಗಳಂಥ ಘಟಕಗಳು ಇಲ್ಲಿ ಪ್ರಧಾನ ಘಟಕಗಳು (ಪಿಇಗಳು) ಅಥವಾ ಕಳುಹಿಸುವವರು ಆಗಿದ್ದು, ಸದ್ಯದ ವ್ಯವಸ್ಥೆಯಲ್ಲಿ ಪಿಇಗಳೇ ಪ್ರತ್ಯೇಕವಾಗಿ ಸಮ್ಮತಿ ಸೌಲಭ್ಯಗಳನ್ನು ನಿರ್ವಹಣೆ ಮಾಡುತ್ತಾರೆ. ಹಾಗಾಗಿ ಸೇವಾ ಪೂರೈಕೆದಾರರಿಗೆ ಸಮ್ಮತಿಗಳ ದೃಢೀಕರಣವನ್ನು ಪರಿಶೀಲಿಸುವುದು ಸವಾಲಾಗಿ ಪರಿಣಮಿಸಿದೆ. ಡಿಜಿಟಲ್ ಸಮ್ಮತಿ ಸ್ವಾಧೀನ ಪ್ರಕ್ರಿಯೆಯು TCCCPR-2018ರಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಗ್ರಾಹಕರು ತಮ್ಮ ಒಪ್ಪಿಗೆಯನ್ನು ಪಡೆಯಲು, ನಿರ್ವಹಿಸಲು ಮತ್ತು ಹಿಂಪಡೆಯಲು ಅವಕಾಶ ನೀಡುತ್ತದೆ. ಈ ಸಮ್ಮತಿಯ ಡೇಟಾವನ್ನು ಎಲ್ಲಾ ಸಂಪೂರ್ಣ ಪರಿಶೀಲನೆಗಾಗಿ TCCCPR-2018 ಅಡಿಯಲ್ಲಿ ಸ್ಥಾಪಿಸಲಾದ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಟೆಕ್ನಾಲಜಿ (DLT) ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ. ಒಪ್ಪಿಗೆ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಾಮಾನ್ಯ ಶಾರ್ಟ್ ಕೋಡ್ 127xxx ಅನ್ನು ಒಪ್ಪಿಗೆ ವಿನಂತಿಗಳಿಗೆ ಬಳಸಲಾಗುತ್ತದೆ. ಈ ಸಂದೇಶವು ಸ್ಪಷ್ಟವಾಗಿ ಉದ್ದೇಶ, ಒಪ್ಪಿಗೆಯ ವ್ಯಾಪ್ತಿ, ಕಳುಹಿಸುವವರು ಮತ್ತು ಒಪ್ಪಿಗೆ ಕೇಳುತ್ತಿರುವ ಬ್ರ್ಯಾಂಡ್ ಹೆಸರಿನ ಮಾಹಿತಿಯನ್ನು ಒಳಗೊಂಡಿರುತ್ತದೆ. ಈ ಸಂದೇಶಗಳಲ್ಲಿ ಲಿಸ್ಟ್ ಮಾಡಲಾದ ಮಾಡಲಾದ ಯುಆರ್‌ಎಲ್‌ಗಳು, ಎಪಿಕೆಗಳು, ಒಟಿಟಿ ಲಿಂಕ್‌ಗಳು ಮತ್ತು ಕರೆ-ಬ್ಯಾಕ್ ಸಂಖ್ಯೆಗಳನ್ನು ಮಾತ್ರ ಅನುಮತಿಸಲಾಗುತ್ತದೆ. ಗ್ರಾಹಕರು ತಮ್ಮ ಸಮ್ಮತಿ ಪಡೆದುಕೊಂಡಾಗ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತಾರೆ, ಅವರ ಸಮ್ಮತಿಯನ್ನು ಹೇಗೆ ಹಿಂತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನೂ ಇದು ಒಳಗೊಂಡಿರುತ್ತದೆ. ಗ್ರಾಹಕರು ತಮ್ಮ ಇಷ್ಟವಿಲ್ಲದಿದ್ದರೆ ನೋಂದಾಯಿಸಲು ನಿರಾಕರಿಸುವ ಎಸ್ಎಂಎಸ್ ಮತ್ತು ಆನ್‌ಲೈನ್ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಪ್ರವೇಶ ಪೂರೈಕೆದಾರರಿಗೆ ಕಡ್ಡಾಯಗೊಳಿಸಲಾಗಿದೆ.

ಇಂದು ಜಾಹೀರಾತು ಕರೆಗಳು ಗ್ರಾಹಕರಿಗೆ ಕಿರುಕುಳ ಎನಿಸುವಷ್ಟು ಹೆಚ್ಚಿವೆ. ಪ್ರತಿದಿನ ಹತ್ತಾರು ಇಂಥ ಕರೆಗಳನ್ನು ಗ್ರಾಹಕನೊಬ್ಬ ಉತ್ತರಿಸಬೇಕಾಗುತ್ತದೆ. ಅವನ ಸಮಯ, ತಾಳ್ಮೆ ಎಲ್ಲವೂ ಇವುಗಳಿಗಾಗಿಯೇ ಮೀಸಲಿಡಬೇಕಾಗುತ್ತದೆ. ಟಿವಿ ಅಥವಾ ಇತರ ಮೀಡಿಯಾಗಳಲ್ಲಿ ಬರುವ ಜಾಹೀರಾತು ಹೀಗಲ್ಲ; ಅವು ಸಮುದಾಯವನ್ನೇ ಉದ್ದೇಶಿಸಿರುತ್ತವೆ. ಆದರೆ ವ್ಯಕ್ತಿ ದೂರವಾಣಿಯಲ್ಲಿ ಮಾತನಾಡುವ ಸಮಯ, ಅವನ ಖಾಸಗಿ ಹಾಗೂ ವೈಯಕ್ತಿಕವಾದುದಾಗಿರುತ್ತದೆ. ಇದನ್ನು ನಿಯಂತ್ರಿಸಲು ಸೂಕ್ತವಾದ ಕಾಯಿದೆ ಇದುವರೆಗೂ ಇರಲಿಲ್ಲ. ಐಟಿ ಕಾಯಿದೆಯ ಕೆಲವು ಅಂಶಗಳನ್ನೇ ಉಲ್ಲೇಖಿಸುವುದಾದರೆ, ವ್ಯಕ್ತಿಯ ಖಾಸಗಿ ಡೇಟಾಗಳನ್ನು ಹಾನಿಕರವಾಗುವಂತೆ ಬಳಸುವುದು ಕಾನೂನುರೀತ್ಯಾ ಅಪರಾಧ. ಇಲ್ಲಿ ವ್ಯಕ್ತಿಯ ಖಾಸಗಿ ಡೇಟಾಗಳನ್ನು ಕಂಪನಿಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದರ ಮೇಲೆ ಗ್ರಾಹಕ ಯಾವ ಕ್ರಮ ಕೈಗೊಳ್ಳಬಹುದು ಎಂಬುದು ನಿಂತಿದೆ. ತನ್ನ ಫೋನ್‌ ನಂಬರ್‌, ತನ್ನ ಹೆಸರು ಮತ್ತಿತರ ಖಾಸಗಿ ಡೇಟಾಗಳು ಜಾಹೀರಾತು ನೀಡುತ್ತಿರುವ ಕಂಪನಿಗಳಿಗೆ ಹೇಗೆ ಸಿಕ್ಕಿತು, ಅದಕ್ಕೆ ತಾನು ಸಮ್ಮತಿ ನೀಡಿದ್ದೇನೆಯೇ ಎಂಬುದು ಗ್ರಾಹಕನಿಗೆ ಸ್ಪಷ್ಟವಾಗಿ ತಿಳಿಯುವಂತೆ ಇರಬೇಕು. ಇಲ್ಲವಾದರೆ ಇದು ಖಾಸಗಿತನದ ಉಲ್ಲಂಘನೆಯೇ ಆಗುತ್ತದೆ. ಇಂಥ ಉಲ್ಲಂಘನೆಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಗ್ರಾಹಕರೂ ನೀಡಬೇಕು. ಕಾನೂನು ಕೂಡ ಇದನ್ನು ಸ್ಪಷ್ಟವಾಗಿ ಸಾರಬೇಕು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸರ್ಕಾರಿ ಪರೀಕ್ಷೆಗಳನ್ನು ಕಳಂಕಮುಕ್ತಗೊಳಿಸಿ

Exit mobile version